ದೇಹಕ್ಕೆ ಪೋಷಕ ಶಕ್ತಿ ನೀಡುವ ಅನಾನಸ್

ದೇಹಕ್ಕೆ ಪೋಷಕ ಶಕ್ತಿ ನೀಡುವ ಅನಾನಸ್

LK   ¦    Sep 01, 2020 05:19:19 PM (IST)
ದೇಹಕ್ಕೆ ಪೋಷಕ ಶಕ್ತಿ ನೀಡುವ ಅನಾನಸ್

ಕೊರೋನಾ ಸೋಂಕು ಕಾಡುತ್ತಿರುವ ಈ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಅಗತ್ಯವಾಗಿದೆ. ಅದರಲ್ಲಿಯೂ ಹಣ್ಣುಗಳ ಸೇವನೆಯನ್ನು ಹೆಚ್ಚು ಮಾಡಿ ದೇಹದಲ್ಲಿ ಆರೋಗ್ಯ ವರ್ಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಇವತ್ತಿನ ಅಗತ್ಯವಾಗಿದೆ.

ಹಣ್ಣುಗಳ ಪೈಕಿ ಅನಾನಸ್ ಸೇವಿಸುವುದು ಇನ್ನೂ ಉತ್ತಮವಾಗಿದ್ದು, ಇದನ್ನು ಏಕೆ ಸೇವಿಸಬೇಕು ಎನ್ನುವುದನ್ನು ನೋಡುವುದಾದರೆ ಆರೋಗ್ಯವನ್ನು ವೃದ್ಧಿ ಮಾಡುವ ಗುಣಗಳಿರುವುದನ್ನು ಕಾಣಬಹುದಾಗಿದೆ. ಅನಾನಸ್ ಹೆಚ್ಚು ತೇವಾಂಶ ಹೊಂದಿದ್ದು, ಬಹಳಷ್ಟು ಪೋಷಕಾಂಶಗಳು ಇದರಲ್ಲಿದ್ದು ದೇಹಕ್ಕೆ ಪೋಷಕ ಶಕ್ತಿ ನೀಡುತ್ತದೆ.

ಇನ್ನು ನೂರು ಗ್ರಾಂ ಅನಾನಸ್ ಹಣ್ಣಿನಲ್ಲಿ ಏನೆಲ್ಲ ಆರೋಗ್ಯಕಾರಿ ಗುಣವಿದೆ ಎಂಬುದನ್ನು ನೋಡುವುದಾದರೆ 87.8 ಗ್ರಾಂ ತೇವಾಂಶವಿದೆಯಂತೆ. ಅಲ್ಲದೆ, ಸಸಾರಜನಕ 0.4 ಗ್ರಾಂ, ಮೇದಸ್ಸು 0.1 ಗ್ರಾಂ, ಖನಿಜಾಂಶ 0.4, ಕಾರ್ಬೋಹೈಡ್ರೇಟ್ 19.8 ಗ್ರಾಂ, ಕ್ಯಾಲ್ಸಿಯಂ 20 ಮಿ.ಗ್ರಾಂ, ಕಬ್ಬಿಣ 1.2 ಮಿ.ಗ್ರಾಂ, ರೋಬೋಪ್ಲಾವಿನ್ 0.12ಮಿ.ಗ್ರಾಂ, ಪಾಸ್ಪರಸ್ 9.0ಮಿ.ಗ್ರಾಂ, ಥಿಯಾಮಿನ್ 0.2ಮಿ.ಗ್ರಾಂ, ನಿಯಾಸಿನ್ 0.1 ಮಿ.ಗ್ರಾಂ ಮತ್ತು ಸಿ ಜೀವಸತ್ವ 39 ಮಿ.ಗ್ರಾಂ ಇದೆ ಎನ್ನಲಾಗಿದೆ.

ಅನಾನಸ್ ಯಾವುದೆಲ್ಲ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂಬುದನ್ನು ನೋಡುವುದಾದರೆ ಉರಿಮೂತ್ರದಿಂದ ಬಳಲುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಉರಿಮೂತ್ರದ ಸಮಸ್ಯೆ ಮತ್ತು ಸಮರ್ಪಕವಾಗಿ ಮೂತ್ರ ವಿಸರ್ಜನೆಯಾಗದ ಸಮಸ್ಯೆಯಿಂದ ಬಳಲುವವರು ಹಣ್ಣನ್ನು ಸೇವಿಸುತ್ತಾ ಬಂದರೆ ಸಮಸ್ಯೆಗೆ ಪರಿಹಾರ ಸಿಗಲಿದೆ.

ದೇಹಕ್ಕೆ ಸರಿಯಾದ ಜೀವಸತ್ವ ದೊರೆಯದೆ ವಸಡಿನ ರಕ್ತಸ್ರಾವದಿಂದ ಬಳಲುವವರಿಗೂ ಇದು ಪ್ರಯೋಜನಕಾರಿಯಾಗಿದೆ. ಯಕೃತ್ ತೊಂದರೆ, ಅಜೀರ್ಣದ ಸಮಸ್ಯೆಯನ್ನು ಅನುಭವಿಸುವವರು ಅನಾನಸ್ ಹಣ್ಣಿಸ ರಸದೊಂದಿಗೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸಬೇಕು.

ಕಾಮಾಲೆ ರೋಗವನ್ನು ದೂರ ಮಾಡಬೇಕಾದರೆ ಅನಾನಸ್ ಹಣ್ಣನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಅದನ್ನು ಜೇನುತುಪ್ಪದಲ್ಲಿ ವಾರಗಳ ಕಾಲ ನೆನೆಸಿಟ್ಟು ದಿನಕ್ಕೆರಡು ಬಾರಿ ಸೇವಿಸಬಹುದಾಗಿದೆ. ಸಿಗರೇಟ್ ಸೇವಿಸುವುದರಿಂದಾಗುವ ತೊಂದರೆಗಳನ್ನು ಸರಿಪಡಿಸಲು ಅನಾನಸ್ ಹಣ್ಣು ಸಹಕಾರಿಯಾಗಿದೆ. ಅಷ್ಟೇ ಅಲ್ಲ ಗಂಟಲು ರೋಗಗಳಿಗೂ ಉತ್ತಮ ಔಷಧಿಯಾಗಿದೆ. ರಕ್ತ ಹೀನತೆ, ಹೊಟ್ಟೆತೊಳೆಸುವಿಕೆ, ತಲೆಸುತ್ತು ಮುಂತಾದ ಸಮಸ್ಯೆಗಳಿಗೂ ಇದು ರಾಮಬಾಣವಾಗಿದೆ.
ಹಣ್ಣಿನ ರಸವನ್ನು ಲೇಪನ ಮಾಡುವುದರಿಂದ ಕಜ್ಜಿತುರಿಕೆಯಂತಹ ಚರ್ಮರೋಗವು ನಿಯಂತ್ರಕ್ಕೆ ಬರಲಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅನಾನಸ್ ಆರೋಗ್ಯದ ದೃಷ್ಠಿಯಿಂದ ಉತ್ತಮವಾಗಿದ್ದು, ಪ್ರತಿನಿತ್ಯ ಸೇವಿಸುವುದರಿಂದ ಒಂದಷ್ಟು ಆರೋಗ್ಯವನ್ನು ಹೊಂದಲು ಸಾಧ್ಯವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಣ್ಣುಗಳು ಮನುಷ್ಯನ ಆರೋಗ್ಯದ ದೃಷ್ಠಿಯಿಂದ ಉಪಯೋಗಕಾರಿ ಹೀಗಾಗಿ ಬಾಯಿ ರುಚಿಗೆ ಬೇರೆ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲಿಗೆ ವಿವಿಧ ಹಣ್ಣುಗಳನ್ನು ಸೇವಿಸಿ ಆರೋಗ್ಯ ವೃದ್ಧಿ ಮಾಡಿಕೊಳ್ಳುವುದು ಉತ್ತಮ. ದೇಹಕ್ಕೆ ಒಗ್ಗುವ ಮತ್ತು ಅದರಲ್ಲಿರುವ ಆರೋಗ್ಯಕಾರಿ ಗುಣಗಳನ್ನು ತಿಳಿದುಕೊಂಡು ಹಣ್ಣುಗಳನ್ನು ಸೇವಿಸಬೇಕಾಗುತ್ತದೆ. ದೇಹಕ್ಕೆ ಉಷ್ಣ ಹೆಚ್ಚಾದಾಗ ಉಷ್ಣ ಗುಣದ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಈ ಸಂದರ್ಭ ತಂಪು ಗುಣದ ಹಣ್ಣನ್ನು ಸೇವಿಸಬೇಕಾಗುತ್ತದೆ.