ಹಣ್ಣು-ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

ಹಣ್ಣು-ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

LK   ¦    Mar 30, 2020 02:03:05 PM (IST)
ಹಣ್ಣು-ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

ಸಾಮಾನ್ಯವಾಗಿ ಬೇಸಿಗೆಯಲ್ಲಿಯೇ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವುದು. ಆದರೆ ಈ ಬಾರಿ ಕಾಣಿಸಿಕೊಂಡಿರುವ ಕೊರೊನೋ ಸೋಂಕು ಇಡೀ ಜಗತ್ತನ್ನೇ ಕಂಗಾಲಾಗುವಂತೆ ಮಾಡಿದೆ.

ಸದ್ಯ ನಾವೆಲ್ಲರೂ ಕೊರೊನಾ ಭೀತಿಯಲ್ಲಿದ್ದು ಆ ರೋಗದಿಂದ ತಪ್ಪಿಸಿಕೊಳ್ಳಲು ಬೇಕಾದ ಸರ್ಕಸ್‍ನ್ನು ಮಾಡುತ್ತಿದ್ದೇವೆ. ಆದರೆ ಕೊರೊನಾ ಭೀತಿಯಲ್ಲಿರುವ ನಾವು ಸಾಮಾನ್ಯವಾಗಿ ಕಾಡುವ ರೋಗದತ್ತಲೂ ಹೆಚ್ಚಿನ ನಿಗಾವಹಿಸಲೇ ಬೇಕಾಗಿದೆ.

ಬೇಸಿಗೆಯಲ್ಲಿ ಹವಾಮಾನ ಬದಲಾಗಿ ಉಷ್ಣಾಂಶ ಹೆಚ್ಚುತ್ತಿದ್ದಂತೆಯೇ ಆರೋಗ್ಯದಲ್ಲಿ ಬದಲಾವಣೆಗಳಾಗುತ್ತಿರುತ್ತವೆ. ಇದಕ್ಕೆ ಕಾರಣಗಳನ್ನು ಹುಡುಕಿ ನಾವು ಸೇವಿಸುವ ಪದಾರ್ಥಗಳಲ್ಲಿಯೇ ಅವುಗಳಿಗೆ ಪರಿಹಾರವನ್ನು ಕಂಡು ಕೊಳ್ಳವುದು ಹಿಂದಿನ ಕಾಲದಿಂದಲೂ ನಡೆದು ಬಂದಿದೆ.

ಹೀಗಾಗಿ ಬೇಸಿಗೆಯಲ್ಲಿ ನಾವೆಲ್ಲರೂ ಮಾಂಸಾಹಾರವನ್ನು ಆದಷ್ಟು ಕಡಿಮೆ ಮಾಡಿ ಸಸ್ಯಹಾರದತ್ತ ಹೆಚ್ಚಿನ ಗಮನನೀಡಬೇಕಾಗುತ್ತದೆ. ಮೇಲಿಂದ ಮೇಲೆ ದಾಳಿ ಮಾಡುವ ರೋಗಗಳನ್ನು ತಡೆಯಬೇಕಾದರೆ ದೈಹಿಕವಾಗಿ ನಾವು ಸಮರ್ಥರಿರಬೇಕು. ಉತ್ತಮ ಆರೋಗ್ಯ ದೊರೆಯಬೇಕಾದರೆ ನಾವು  ಹೆಚ್ಚಾಗಿ ಹಣ್ಣು-ತರಕಾರಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಇವು ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತವೆ.  ಇದರಲ್ಲಿರುವ ಲವಣಗಳು, ವಿಟಮಿನ್‍ಗಳಂತಹ ಪೌಷ್ಠಿಕ ಪದಾರ್ಥಗಳು ಶರೀರಕ್ಕೆ ಪೋಷಕ ಶಕ್ತಿಯನ್ನು ನೀಡುತ್ತವೆ. ನಮ್ಮ ಆಹಾರದೊಂದಿಗೆ ಕನಿಷ್ಠ ಒಂದು ರೀತಿಯ ಹಣ್ಣನ್ನಾದರೂ ಸೇವಿಸುವುದು ಒಳ್ಳೆಯದು. ಕೆಲವು ಹಣ್ಣುಗಳನ್ನು ನಿಯಮಬದ್ಧವಾಗಿ ಸೇವಿಸುತ್ತಾ ಬಂದರೆ ಮಧುಮೇಹ, ಬೊಜ್ಜು, ಎದೆನೋವು ಮತ್ತಿತರ  ಕಾಯಿಲೆಗಳು ದೂರವಾಗುವುವು. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ  ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ. ಏಕೆಂದರೆ ಈ ಹಣ್ಣು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಹೇರಳವಾದ ಲವಣಗಳು ಹಾಗೂ ವಿಟಮಿನ್‍ಗಳಿವೆ. ಅಷ್ಟೇ ಅಲ್ಲ ದ್ರವ ಪದಾರ್ಥವೂ ಇದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್‍ಗಳು ಜೀರ್ಣಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯವನ್ನು ವೃದ್ಧಿಸುವ ಪೌಷ್ಠಿಕಾಂಶಗಳು ಹಣ್ಣು, ತರಕಾರಿಯಲ್ಲಿವೆ. ಇವು ಶರೀರದೊಳಗೆ ಸೇರಿರುವ ವಿಷಪದಾರ್ಥಗಳನ್ನು ಹೊರ ಹಾಕುತ್ತವೆ. ತಾಜಾ ಸೊಪ್ಪು, ಹಸಿಬಟಾಣಿ, ಆಲೂಗೆಡ್ಡೆ, ಟೊಮೇಟೋದೊಂದಿಗೆ ಕೂಡಿದ ಸಲಾಡ್ ಶರೀರಕ್ಕೆ ಆರೋಗ್ಯ  ನೀಡುತ್ತದೆ.

 

ಬೇಸಿಗೆಯ ಸಮಯದಲ್ಲಿ ಹೆಚ್ಚು ಖಾರ, ಮಸಾಲೆ ಪದಾರ್ಥಗಳನ್ನು ಸೇವಿಸಬಾರದು ಅದರಲ್ಲೂ ಮಲಬದ್ಧತೆ ಇನ್ನಿತರ ತೊಂದರೆಗಳಿಂದ ಬಳಲುವವರು ನಾರು ಅಂಶ ಹೊಂದಿರುವ ಸೊಪ್ಪು ತರಕಾರಿಗಳನ್ನು ಸೇವಿಸುವುದು ಬಹು ಮುಖ್ಯವಾಗಿದೆ.

ಹಣ್ಣುಗಳನ್ನು ನೇರವಾಗಿ ಅಥವಾ ಜ್ಯೂಸ್, ಮಿಲ್ಕ್ ಶೇಕ್ ಮಾಡಿಯೂ ಸೇವಿಸಬಹುದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ತರಕಾರಿಗಳನ್ನು ಸೇವಿಸುತ್ತಾ ಬಂದರೆ ನಮ್ಮ ಆರೋಗ್ಯದಲ್ಲಿ ಒಂದಷ್ಟು ಬದಲಾವಣೆ ಕಾಣಲು ಸಾಧ್ಯವಿದೆ. ಆದರೆ ಒಂದು ನೆನಪಿರಲಿ ನೀವು ಹೊರಗಿನಿಂದ ತರುವ ಹಣ್ಣು ತರಕಾರಿಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ಬಳಿಕ ಉಪಯೋಗಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು.