ಪ್ರವಾಹ ಬಳಿಕ ಹರಡುವ ರೋಗದತ್ತ ಎಚ್ಚರವಾಗಿರಿ...

ಪ್ರವಾಹ ಬಳಿಕ ಹರಡುವ ರೋಗದತ್ತ ಎಚ್ಚರವಾಗಿರಿ...

LK   ¦    Aug 16, 2019 06:03:09 PM (IST)
ಪ್ರವಾಹ ಬಳಿಕ ಹರಡುವ ರೋಗದತ್ತ ಎಚ್ಚರವಾಗಿರಿ...

ಪ್ರವಾಹದ ಬಳಿಕ ಎಷ್ಟೇ ಎಚ್ಚರವಾಗಿದ್ದರೂ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅಗತ್ಯವಾಗಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು

ಕುಡಿಯುವ ನೀರು ಕಲುಷಿತವಾದರೆ ಅನೇಕ ರೋಗಗಳು ಹರಡುತ್ತವೆ. ಅತಿಸಾರ(ವಾಂತಿ-ಬೇಧಿ), ಟೈಫಾಯ್ಡ್, ಕಾಮಾಲೆ (ಜಾಂಡೀಸ್), ಕಾಲರ, ಪೊಲಿಯೋ, ರಕ್ತಬೇಧಿ, ಚರ್ಮರೋಗ, ಆಮಶಂಕೆ, ಜಂತುಹುಳು ಇತ್ಯಾದಿ. ಕುಡಿಯುವ ನೀರಿನಲ್ಲಿ ಕೈ ಅದ್ದಬಾರದು. ಕುಡಿಯುವ ನೀರಿನ ಪಾತ್ರೆಗಳನ್ನು ಮುಚ್ಚಿಡಬೇಕು. ಕುಡಿಯುವ ನೀರಿನ ಸರಬರಾಜು ಪೈಪ್‍ಗಳು ಒಡೆದು ಕೊಳಕು ನೀರು ಸೇರದಂತೆ ಎಚ್ಚರವಹಿಸಬೇಕು. ಅವಶ್ಯಕತೆಗೆ ಅನುಗುಣವಾಗಿ ಸ್ಥಳೀಯರಿಂದ, ಸಂಸ್ಥೆಗಳಿಂದ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದು. ತುರ್ತು ನೀರು ಸರಬರಾಜು ಮಾಡುವುದು ಪರವಾನಿಗೆ ಪಡೆದ ಸಂಸ್ಥೆಗಳಿಂದ ಕುಡಿಯುವ ನೀರಿನ ಸಂರಕ್ಷಿಸಿದ ಬಾಟಲ್‍ಗಳು, ಟ್ಯಾಂಕರ್‍ ಗಳ ನೀರಿನ ಸರಬರಾಜು ಅಥವಾ ನೇರವಾಗಿ ಉಪಯೋಗಿಸಲು ಕುಡಿಯಲು ಯೋಗ್ಯವುಳ್ಳ ನೀರಿನ ವ್ಯವಸ್ಥೆ ಮಾಡುವುದು. ನೀರಿನ ಶೇಖರಣೆಯು ಕಲುಷಿತಗೊಳ್ಳದಂತೆ ನೋಡಿಕೊಳ್ಳುವುದು, ಶುದ್ಧೀಕರಣ ಮಾಡುವುದು ಅಗತ್ಯವಾಗಿದೆ.

ಶುದ್ಧ ಕುಡಿಯುವ ನೀರಿನ ಕೊರತೆಯುಂಟಾದಾಗ ಶುದ್ಧ ಕುಡಿಯುವ ನೀರಿನ ಸರಬರಾಜಿಗಾಗಿ ನೀರನ್ನು ಕುದಿಸಿ, ಆರಿಸಿ ಉಪಯೋಗಿಸುವುದು ಹಾಗೂ ಆಹಾರ ತಯಾರಿಕೆಯಲ್ಲೂ ಸಹ ಕುದಿಸಿದ ನೀರು ಉಪಯೋಗಿಸಬೇಕು. ನೀರು ಕುದಿಸುವಾಗ ಗುಳ್ಳೆಗಳು ಬಂದನಂತರ ಕನಿಷ್ಟ 20 ನಿಮಿಷ ಹಾಗೆಯೇ ಕುದಿಸಬೇಕು. ನಂತರ ತಣ್ಣಗಾದಾಗ ಉಪಯೋಗಿಸಬೇಕು.

ಕಾಲರಾ, ಶ್ವಾಸಕೋಶ ಸೋಂಕು, ವಿಷಮ ಶೀತ ಜ್ವರ, ಆಹಾರ ವಿಷಪೂರಿತವಾಗುವುದು, ವಾಂತಿ-ಬೇಧಿ, ಹೆಪಟೈಟಿಸ್, ಇಲಿ ಜ್ವರ. ಖಾಯಿಲೆಗಳು ಬಾರದಂತೆ ತಡೆಯುವ ಮುಂಜಾಗೃತೆ ಕ್ರಮ ಮಾಡಿ: ಶೌಚಾಲಯದಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡುವುದು, ಊಟಕ್ಕೆ ಮೊದಲು, ಶೌಚದ ನಂತರ ಕೈಗಳನ್ನು ಸೋಪಿನಿಂದ ತೊಳೆಯುವುದು. ಕುದಿಸಿ ಆರಿಸಿದ ಶುದ್ಧವಾದ ನೀರನ್ನು ಅಥವಾ ಬಾಟಲಿ ನೀರನ್ನು ಕುಡಿಯುವುದು. ಆಹಾರವನ್ನು ಬಿಸಿ-ಬಿಸಿಯಾಗಿಯೇ ಸೇವಿಸುವುದು. ಸೀನುವಾಗ, ಕೆಮ್ಮುವಾಗ ಮೂಗು ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು. ತಯಾರಿಸಿದ ಆಹಾರವನ್ನು ನೊಣ, ಜಿರಳೆ, ಇಲಿ ಹೆಗ್ಗಣ ಮುಂತಾದವುಗಳು ಕೆಡಿಸದಂತೆ ಸಂರಕ್ಷಿಸುವುದು. ವಾಂತಿ-ಬೇದಿಯಾದ ತಕ್ಷಣ ಪುನರ್ಜಲೀಕರಣ ದ್ರಾವಣ ಕುಡಿಸುವುದು, ವೈದ್ಯರಿಂದ ಚಿಕಿತ್ಸೆ ಪಡೆಯುವುದು. ಮುಚ್ಚಿಟ್ಟ ಆಹಾರ ಪದಾರ್ಥ ಬಳಸುವುದು ಒಳ್ಳೆಯದು.

ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯ ಖಾಯಿಲೆಗಳು ಬಾರದಂತೆ ತಡೆಯುವುದು. ಸೊಳ್ಳೆ ಉತ್ಪತ್ತಿ ತಾಣ ಇಲ್ಲದಂತೆ ಮಾಡಬೇಕು. ಮನೆಯ ಸುತ್ತಮುತ್ತ ಹೂವಿನಕುಂಡ ಹೊರಾಂಗಣದಲ್ಲಿ ಮಳೆಯ ನೀರು ನಿಲ್ಲದಂತೆ ಗುಂಡಿಗಳನ್ನು ಮಣ್ಣಿನಿಂದ ಮುಚ್ಚುವುದು. ವಾರದಲ್ಲಿ ಎರಡು ಬಾರಿ ಮನೆಯ ನೀರು ಶೇಖರಣಾ ತೊಟ್ಟಿಗಳು, ಹೂವಿನ ಕುಂಡ, ಡ್ರಮ್‍ಗಳು, ಏರ್‍ ಕೂಲರ್‍ ಗಳು ಹಳೆಯ ಟೈರ್, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸುವುದು. ಸೂಕ್ತ ವಿಲೇವಾರಿ ಮಾಡುವುದು. ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವುದು. ಮಲಗುವಾಗ ಸೊಳ್ಳೆ ಪರದೆ ಒಳಗೆ ನಿದ್ದೆ ಮಾಡುವುದು. ಶಿಶು, ಮಕ್ಕಳು, ತಾಯಂದಿರು, ವೃದ್ಧರು ಹಾಗೂ ಎಲ್ಲರೂ ಮೈ ತುಂಬ ಬಟ್ಟೆ ದರಿಸುವುದು. ಜ್ಚರ ಬಂದ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡುವುದು. ನೀರು ಖಾಲಿ ಮಾಡಲಾಗದ ಹೊಂಡಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡಬೇಕು

ಪ್ರಕೃತಿ ವಿಕೋಪವಾಗಿ, ಪ್ರವಾಹವಾಗಿ ವಾರದ ನಂತರ ಸಾಂಕ್ರಾಮಿಕ ರೋಗಗಳು ಸ್ಫೋಟಗೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಸೊಳ್ಳೆಗಳಿಂದ ಡೆಂಗ್ಯು, ಚಿಕನ್‍ಗುನ್ಯ, ಮಲೇರಿಯಾ, ಮೆದುಳು ಜ್ವರಗಳಂತಹ ರೋಗಗಳು ಹರಡಬಹುದು. ಕ್ರಿಮಿಕೀಟಗಳಿಂದ ಅತಿಸಾರ, ಟೈಫಾಯ್ಡ್, ಕಾಮಾಲೆ, ಕಾಲರ, ಪೋಲಿಯೊ, ರಕ್ತಬೇದಿ, ಚರ್ಮರೋಗ, ಆಮಶಂಕೆ ರೋಗಗಳು ಹರಡುವ ಸಂಭವ ಹೆಚ್ಚಾಗಿರುತ್ತದೆ. ಸಾರ್ವಜನಿಕರಿಗೆ ಈ ರೋಗಗಳಿಂದ ರಕ್ಷಣೆ ಪಡೆಯುವ ಬಗ್ಗೆ ಮಾಹಿತಿ ನೀಡುವುದು.

ನಿಯಂತ್ರಣ ಕ್ರಮ ಸೊಳ್ಳೆಗಳಿಂದ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ನೋಡಿಕೊಳ್ಳುವುದು. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದು. ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು. ಸ್ವಯಂ ರಕ್ಷಣೆ ಪಡೆಯುವುದು. ಜೈವಿಕ ಮತ್ತು ರಾಸಾಯನಿಕ ನಿಯಂತ್ರಣ, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸಮುದಾಯದವರನ್ನು ನಿಯಂತ್ರಣ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಇತರೆ ಇಲಾಖೆಗಳ ಕ್ರಮವಹಿಸುವುದು. ನಿಯಂತ್ರಣ ಕ್ರಮಕ್ಕೆ ಬೇಕಾಗಿರುವಂತ ಅವಶ್ಯಕ ಸಾಮಾಗ್ರಿಗಳ ವ್ಯವಸ್ಥೆ ಕಲ್ಪಿಸುವುದು. ಈ ಕಾರ್ಯಕ್ರಮದಲ್ಲಿ ಅನುಕರಣೆ, ಮೇಲ್ವಿಚಾರಣೆ, ಪರಿಶೀಲನೆ, ಮೌಲ್ಯಮಾಪನ ನಿರಂತರವಾಗಿರಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.