ನಗರದ ಕೆಟ್ಟ ಗಾಳಿಯ ಹಿಂದಿದೆ ಪೀಣ್ಯದ ಕೈಗಾರಿಕೆಗಳು

ನಗರದ ಕೆಟ್ಟ ಗಾಳಿಯ ಹಿಂದಿದೆ ಪೀಣ್ಯದ ಕೈಗಾರಿಕೆಗಳು

Kapil Kajal   ¦    Jul 09, 2020 11:40:21 AM (IST)
ನಗರದ ಕೆಟ್ಟ ಗಾಳಿಯ ಹಿಂದಿದೆ ಪೀಣ್ಯದ ಕೈಗಾರಿಕೆಗಳು

ಬೆಂಗಳೂರು: 1970ರ ದಶಕದ ಆರಂಭದಲ್ಲಿ ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮವು ಸ್ಥಾಪಿಸಿದ ಪೀಣ್ಯದ ಕೈಗಾರಿಕಾ ಪ್ರದೇಶವು ಆಗ್ನೇಯ ಏಷ್ಯಾದ ಅತ್ಯಂತ ಹಳೆಯ ಮತ್ತು ದೊಡ್ಡದಾದ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದೆ. ಕೈಗಾರಿಕೆಗಳ ಹೆಚ್ಚಳದಿಂದಾಗಿ ಈ ಪ್ರದೇಶವು ಅತಿಹೆಚ್ಚು ವಾಯುಮಾಲಿನ್ಯಕ್ಕೆ ಗುರಿಯಾಗುತ್ತಿದೆ.

2000ಕ್ಕೂ ಅಧಿಕ ಕೈಗಾರಿಕೆಗಳಿರುವ ಪೀಣ್ಯವನ್ನು ತೀವ್ರವಾಗಿ ಕಲುಷಿತಗೊಂಡ ಪ್ರದೇಶವೆಂದು ಘೋಷಿಸಲಾಗಿದೆ. ಸಮಗ್ರ ಪರಿಸರ ಮಾಲಿನ್ಯ ಸೂಚ್ಯಂಕ (ಸಿಇಪಿಐ)ಯಲ್ಲಿ 32ನೇ ಸ್ಥಾನ ಪಡೆದಿರುವ ಈ ಪ್ರದೇಶದ ಒಟ್ಟು ಸೂಚ್ಯಂಕವು 65.11 (50 ರಿಂದ 70 ಅಂದರೆ ತೀವ್ರವಾಗಿ ಕಲುಷಿತಗೊಂಡಿದೆ ಎಂದರ್ಥ) ವಾಯುಮಾಲಿನ್ಯದ ಸೂಚ್ಯಂಕವು 56 ಆಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ)ಯ ಪ್ರಕಾರ ಪೀಣ್ಯದ 2,101 ಕೈಗಾರಿಕೆಗಳ ಪೈಕಿ 334 ಕೈಗಾರಿಕೆಗಳು ಕೆಂಪು ವಿಭಾಗದಲ್ಲಿರುವುದಾಗಿದೆ. ಅದರರ್ಥ ಆ ಕೈಗಾರಿಕೆಗಳು ಅತಿಹೆಚ್ಚು ಮಾಲಿನ್ಯವನ್ನುಂಟು ಮಾಡುತ್ತದೆ ಎಂದಾಗಿದೆ. 473 ಕೈಗಾರಿಕೆಗಳು ಕಿತ್ತಳೆ ವರ್ಗದಲ್ಲಿವೆ. ಹೆಚ್ಚಿನ ಮಾಲಿನ್ಯಕಾರಕ ಕೈಗಾರಿಕೆಗಳೆಂದರೆ ಇಂಜಿನಿಯರಿಂಗ್, ಸರ್ಫೇಸ್ ಟ್ರೀಟ್‍ಮೆಂಟ್, ಸ್ಪ್ರೇ ಪೈಂಟಿಂಗ್, ಔಷಧ ತಯಾರಕ ಕಂಪೆನಿಗಳು, ಸರ್ವೀಸ್ ಸ್ಟೇಶನ್, ಎಲೆಕ್ಟ್ರೋಪ್ಲೇಟಿಂಗ್, ಗಾರ್ಮೆಂಟ್ ವಾಷಿಂಗ್, ಡೈಯಿಂಗ್ ಮತ್ತು ಪ್ರಿಂಟಿಂಗ್ ಉದ್ಯಮಗಳು.

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಅವರ ಪ್ರಕಾರ ನಗರದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯು ಹೆಚ್ಚುತ್ತಲೇ ಇದೆ. ಮಾಲಿನ್ಯಕಾರಕ ಕೈಗಾರಿಕೆಗಳು ಹೆಚ್ಚಾಗಿ ಪೀಣ್ಯ ಭಾಗದಲ್ಲಿರುವುದರಿಂದ ಇದು ನಗರದ ಅತ್ಯಂತ ಹೆಚ್ಚು ಕಲುಷಿತ ಪ್ರದೇಶವೆನಿಸಿದೆ.

ಪೀಣ್ಯದಲ್ಲಿನ ಕೈಗಾರಿಕಾ ಪ್ರದೇಶದಿಂದುಂಟಾಗುವ ಮಾಲಿನ್ಯದಿಂದಾಗಿ ಇಡೀ ನಗರದ ಮಾಲಿನ್ಯದ ಮಟ್ಟವು ಏರಿಕೆಯಾಗಿದ್ದು, ಇದು ಕೇವಲ ಪಿಎಂ ಮಟ್ಟದ ಕಣಗಳಿಂದಷ್ಟೇ ಮಾಲಿನ್ಯವುಂಟು ಮಾಡುತ್ತಿಲ್ಲ, ಬದಲಾಗಿ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಭಾರವಾದ ಲೋಹಗಳಿಂದಲೂ ವಾತಾವರಣ ಕಲುಷಿತಗೊಂಡಿದೆ.

ಈ ಕೈಗಾರಿಕಾ ವಲಯದಲ್ಲಿ ವಾತಾವರಣದಲ್ಲಿ ಪಿಎಂ ಕಣಗಳು, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್, ಅಮೋನಿಯಾ ಮತ್ತು ಸೀಸವು ವಾಯುಗುಣಮಟ್ಟವನ್ನು ಕಡಿಮೆಗೊಳಿಸುವಲ್ಲಿ ನಿರತವಾಗಿದೆ.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಅರ್ಬನ್ ಇಕೋ ಪಾರ್ಕ್ ಹಾಗೂ ಸ್ವಾನ್ ಸಿಲ್ಕ್ ಪ್ರೈವೇಟ್ ಲಿಮಿಟೆಡ್‍ಗಳಲ್ಲಿ ರಾಷ್ಟ್ರೀಯ ವಾಯು ನಿಗಾವಣೆ ಕಾರ್ಯಕ್ರಮದಡಿಯಲ್ಲಿ ಕೆಎಸ್‍ಪಿಸಿಬಿಯವರಿಂದ ನಿಗಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 2015 ರಿಂದ 2018ರ ಆಂಬಿಯೆಂಟ್ ಏರ್ ಕ್ವಾಲಿಟಿ ಫಲಿತಾಂಶಗಳ ಈ ಪ್ರದೇಶದಲ್ಲಿನ ಹೆಚ್ಚಿನ ವಾಯುಮಾಲಿನ್ಯವನ್ನು ತೋರಿಸುತ್ತದೆ.

 (ದತ್ತಾಂಶ : ಕೆಎಸ್ ಪಿಸಿಬಿ)

ಅರ್ಬನ್ ಇಕೋಪಾರ್ಕ್ ನಲ್ಲಿ ನೈಟ್ರೋಜನ್ ಡೈಆಕ್ಸೈಡ್ ಮತ್ತು ಪಿಎಂ ಕಣಗಳ ಸಾಂದ್ರತೆಯು ಮಿತಿಗಿಂತ ಹೆಚ್ಚಾಗಿದ್ದು, ಸಲ್ಫರ್ ಡೈಆಕ್ಸೈಡ್, ಸೀಸ ಮತ್ತು ಮಿಥೇನ್ ಇರುವಿಕೆ ಕಂಡುಬಂದಿದೆ. ಸ್ವಾನ್ ಸಿಲ್ಕ್ ಪ್ರೈವೇಟ್ ಲಿಮಿಟೆಡ್‍ನಲ್ಲಿಯೂ ಇದೇ ರೀತಿಯ ದತ್ತಾಂಶಗಳು ಸಿಗುತ್ತವೆ.

 (ದತ್ತಾಂಶ : ಕೆಎಸ್ ಪಿಸಿಬಿ)

ಡಬ್ಲ್ಯೂಹೆಚ್ಒ ಪ್ರಕಾರ ಪಿಎಂ ಮಟ್ಟದ ಸಣ್ಣ ಕಣಗಳು ವಾಯುಮಾಲಿನ್ಯವನ್ನು ಸೂಚಿಸುತ್ತದೆ. ಇದು ಇತರೆಲ್ಲಾ ಮಾಲಿನ್ಯಕಾರಕಗಳಿಗಿಂತಲೂ ಹೆಚ್ಚು ಜನರನ್ನು ಬಾಧಿಸುತ್ತದೆ. ಸಲ್ಫೇಟ್, ನೈಟ್ರೇಟ್, ಅಮೋನಿಯಾ, ಸೋಡಿಯಂ ಕ್ಲೋರೈಡ್, ಬ್ಲ್ಯಾಕ್ ಕಾರ್ಬನ್, ಖನಿಜಗಳು ಧೂಳು ಮತ್ತು ನೀರನ್ನು ಒಳಗೊಂಡಿದೆ.

10 ಮೈಕ್ರಾನ್ ಅಥವಾ ಅದಕ್ಕಿಂತಲೂ ಕಡಿಮೆ ವ್ಯಾಸವನ್ನು ಹೊಂದಿರುವ ಕಣಗಳು ಶ್ವಾಸಕೋಶದೊಳಗೆ ತೂರಿಕೊಂಡು ಆಳಕ್ಕೆ ಪ್ರವೇಶಿಸಬಹುದಾದರೂ, ಅದಕ್ಕಿಂತಲೂ ಗಂಭೀರವೆನಿಸಬಹುದಾದ ಅಪಾಯಕಾರಿಯಾದವೆಂದರೆ ಪಿಎಂ2.5 ಮತ್ತು ಅದಕ್ಕಿಂತಲೂ ಕಡಿಮೆ ವ್ಯಾಸದ ಕಣಗಳು. ಪಿಎಂ2.5 ಶ್ವಾಸಕೋಶದ ತಡೆಗೋಡೆಗೆ ನುಗ್ಗಿ ರಕ್ತ ವ್ಯವಸ್ಥೆಯನ್ನು ಪ್ರವೇಶಿಸಬಹುದು ಮತ್ತು ಈ ಕಣಗಳನ್ನು ದೀರ್ಘಕಾಲದವರೆಗೆ ಉಸಿರಾಡುವುದರಿಂದ ಹೃದಯ ಮತ್ತು ಉಸಿರಾಟದ ಕಾಯಿಲೆಗಳು ಮತ್ತು ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವ ಅಪಾಯವಿದೆ ಎಂದು ಡಬ್ಲ್ಯೂಹೆಚ್ ಒ ಹೇಳುತ್ತದೆ.

ಬೆಂಗಳೂರಿನ ಸೆಂಟರ್ ಫಾರ್ ಸಯನ್ಸ್ ಸ್ಪಿರಿಚ್ಯುಆಲಿಟಿಯ ಶ್ವಾಸಕೋಶಶಾಸ್ತ್ರಜ್ಞ ಡಾ. ಶಶಿಧರ ಗಂಗಯ್ಯ ಅವರು ಹೇಳುವಂತೆ `ಪೀಣ್ಯ ಕೈಗಾರಿಕಾ ಪ್ರದೇಶವು ಭಾರ ಮತ್ತು ಬೃಹತ್ ಗಾತ್ರದ ಕೈಗಾರಿಕಾ ಲೋಹಗಳ ಉತ್ಪಾದನೆಯ ಕೇಂದ್ರವಾಗಿದ್ದು, ಇದು ಯಾವುದೇ ವ್ಯಕ್ತಿಯ, ವಿಶೇಷವಾಗಿ ಮಕ್ಕಳ ಅನುವಂಶಿಕ ಬೆಳವಣಿಗೆಯನ್ನು ತಡೆಯುತ್ತದೆ.

ಕೆಎಸ್‍ಪಿಸಿಬಿಯ ಕ್ರಿಯಾಯೋಜನೆಯಲ್ಲಿ ಸೂಚಿಸದಂತೆ ಪೀಣ್ಯದಲ್ಲಿನ ಅನೇಕ ಬಣ್ಣದ ಕಾರ್ಖಾನೆಗಳ ಪೈಕಿ ಸ್ಪ್ರೇ ಪೈಂಟಿಂಗ್ ಕೈಗಾರಿಕೆಗಳು ನೀರು ಆಧಾರಿತ ಪೈಂಟಿಂಗ್ ಘಟಕಗಳಾಗಿ ಬದಲಾದವು. ಇದರಿಂದ ಆವಿಯಾಗಿ ವಾತಾವರಣ ಸೇರುವ ಅನೇಕ ರಾಸಾಯನಿಕಗಳಿಗೆ ತಡೆ ಬಿದ್ದಿದೆ. ಇನ್ನು ಕೆಲವು ಕೈಗಾರಿಕೆಗಳಂತೂ ಇಂಡಕ್ಷನ್ ಹೀಟ್ ಟ್ರೀಟ್‍ಮೆಂಟ್ ವ್ಯವಸ್ಥೆಯನ್ನು ಆರಂಭಿಸಿದ್ದು, ಇವು ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಹೆಚ್ಚು ಪರಿಸರ ಪ್ರಿಯ ವ್ಯವಸ್ಥೆಗಳಾಗಿವೆ.

ಇದಲ್ಲದೆ, ಮೆಟಲ್ ಕೋಟಿಂಗ್ ಘಟಕಗಳು ಫಿಸಿಕಲ್ ವೇಪರ್ ಡಿಪೊಸಿಶನ್ (ಪಿವಿಡಿ)ಗೆ ಬದಲಾಗಿವೆ. ಇವು ವಿಷಕಾರಿ ಹೊಗೆಯನ್ನು ಉತ್ಪಾದಿಸುವುದಿಲ್ಲ. ಸರ್ಫೇಸ್ ಟ್ರೀಟ್‍ಮೆಂಟ್ ಘಟಕಗಳು ಸ್ಕ್ರಬ್ಬರ್‍ಗಳನ್ನು ಮರಬಳಕೆಯ ಸೌಲಭ್ಯದೊಂದಿಗೆ ಉಪಯೋಗಿಸುತ್ತಿದ್ದು, ಇದರಿಂದಾಗಿ ಆಮ್ಲ ಹೊರಸೂಸುವಿಕೆಯ ಪ್ರಮಾಣ ತೀರಾ ಇಳಿಕೆಯಾಗಿದೆ. ಇದರ ಜೊತೆಗೆ ಹೆಚ್ಚಿನ ಕೈಗಾರಿಕೆಗಳೂ ತಮ್ಮ ಉತ್ಪಾದನಾ ಪ್ರದೇಶದಲ್ಲಿ ಎಕ್ಸಾಸ್ಟ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿವೆ ಎಂದು ಕೆಎಸ್‍ಪಿಸಿಬಿ ಮಾಹಿತಿ ನೀಡುತ್ತದೆ.

ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾದ ಆಡಳಿತ ಸಮಿತಿ ಸದಸ್ಯ ಡಾ. ಎಲ್ಲಪ್ಪ ರೆಡ್ಡಿ ಅವರು ಹೇಳುವಂತೆ `ಪರಿಸರ ಮಾಲಿನ್ಯಕಾರಕ ಕೈಗಾರಿಕಾ ಘಟಕಗಳು ಕಡಿಮೆ ಗಂಧಕದ ಅಂಶವಿರುವ ಶುದ್ಧ ಇಂಧನಗಳನ್ನು ಬಳಸುವಂತಾಗಬೇಕು. ಇನ್ನು ಕೆಂಪು ವಲಯದಲ್ಲಿರುವ ಕೈಗಾರಿಕಾ ಘಟಕಗಳನ್ನು ಒಂದೋ ಮುಚ್ಚಬೇಕು ಇಲ್ಲವೇ ನಗರದಿಂದ ಹೊರಗೆ ಸ್ಥಳಾಂತರಿಸಬೇಕು’.