ಮಧುಮೇಹಕ್ಕೆ ಯಾವ ಆಹಾರ ಸೇವಿಸಬೇಕು?

ಮಧುಮೇಹಕ್ಕೆ ಯಾವ ಆಹಾರ ಸೇವಿಸಬೇಕು?

LK   ¦    Jun 04, 2019 04:51:25 PM (IST)
ಮಧುಮೇಹಕ್ಕೆ ಯಾವ ಆಹಾರ ಸೇವಿಸಬೇಕು?

ಮಧುಮೇಹ ಒಮ್ಮೆ ತಗುಲಿಕೊಂಡಿತೆಂದರೆ ಮತ್ತೆ ಅದನ್ನು ಸಂಪೂರ್ಣ ಗುಣಪಡಿಸುವುದು ಅಸಾಧ್ಯ. ಬದಲಿಗೆ ನಿಯಂತ್ರಿಸಬಹುದಷ್ಟೆ. ಹಾಗಾದರೆ ನಿಯಂತ್ರಿಸಬೇಕಾದರೆ ಏನು ಮಾಡಬೇಕು ಎಂಬ ಪ್ರಶ್ನೆಯೂ ನಮ್ಮಲ್ಲಿ ಮೂಡದಿರದು. ಇದಕ್ಕಾಗಿಯೇ ತಜ್ಞ ವೈದ್ಯರು ಜೀವನ ಕ್ರಮದಲ್ಲಿ ಪಾಲಿಸಬೇಕಾದ ಶಿಸ್ತು, ಸೇವಿಸುವ ಆಹಾರಗಳ ಬಗ್ಗೆ ವಹಿಸಬೇಕಾದ ಒಂದಷ್ಟು ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡಿದ್ದಾರೆ.

ಇವತ್ತು ಚಿಕ್ಕ ವಯಸ್ಸಿಗೆ ಬಹಳಷ್ಟು ಜನ ಮಧುಮೇಹ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ದುಶ್ಚಟ, ಶಿಸ್ತಿಲ್ಲದ ಜೀವನ, ಆಹಾರ ಸೇವನೆಯಲ್ಲಿ ಹಿಡಿತ ಇಲ್ಲದಿರುವುದು ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಮಧುಮೇಹ ಬಹುಬೇಗ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಿಸಿಕೊಂಡು ಒಂದಷ್ಟು ದಿನ ಆರೋಗ್ಯವನ್ನು ಉಳಿಸಿಕೊಂಡು ಬದುಕನ್ನು ಕಂಡುಕೊಳ್ಳಬೇಕಾದರೆ ನಾವು ವೈದ್ಯರು ನೀಡುವ ಸಲಹೆಗಳನ್ನು ತಪ್ಪದೆ ಪಾಲಿಸಲೇ ಬೇಕಾಗಿದೆ.

ಮಧುಮೇಹದಿಂದ ಬಳಲುವವರು ಯಾವ ಆಹಾರ ಸೇವಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಯಾವ ಆಹಾರ ಸೇವಿಸಬಾರದು ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಕೇಕ್, ಫೇಸ್ಟ್ರಿ, ಸಿಹಿ ಬಿಸ್ಕೆಟ್, ಸಕ್ಕರೆ, ಐಸ್‍ಕ್ರೀಂ, ಕ್ಯಾಂಡಿ, ಚಾಕಲೇಟ್, ಜೇನುತುಪ್ಪ, ಗ್ಲೂಕೋಸ್, ಬೆಲ್ಲ, ಡ್ರೈಫ್ರೂಟ್ಸ್, ತಂಪುಪಾನೀಯ ಮತ್ತು ಸಿಹಿಯುಕ್ತ ಜ್ಯೂಸ್‍ಗಳು, ಹಾರ್ಲಿಕ್ಸ್, ಬೂಸ್ಟ್, ಮಾಲ್ಟ್ ಮೊದಲಾದವುಗಳು.

ಇನ್ನು ಹಣ್ಣುಗಳಲ್ಲಿ ಪಚ್ಚಬಾಳೆ, ಸಪೋಟಾ, ಹಲಸಿನಹಣ್ಣು, ಮಾವಿನಹಣ್ಣು, ಕಿತ್ತಳೆ, ತರಕಾರಿಗಳಲ್ಲಿ ಆಲೂಗೆಡ್ಡೆ, ಸಿಹಿಗೆಣಸು, ಮರಗೆಣಸು, ಸಿಹಿಕುಂಬಳ, ಬೇಯಿಸಿದ ಕ್ಯಾರೆಟ್, ಬೀಟ್‍ರೂಟ್, ಕೊಬ್ಬಿನಂಶವಿರುವ ತುಪ್ಪ, ಬೆಣ್ಣೆ, ವನಸ್ಪತಿ, ಡಾಲ್ಡಾ, ಕೊಬ್ಬರಿ ಎಣ್ಣೆ, ಚೀಸ್, ಪನ್ನೀರು, ಗಿಣ್ಣು ಕೋವಾ ಇವುಗಳನ್ನೆಲ್ಲ ತ್ಯಜಿಸುವುದೇ ಒಳ್ಳೆಯದು.

ಸಂಸ್ಕರಿಸಿದ ರಿಫೈನ್ಡ್ ಅಥವಾ ಮೈದಾದಿಂದ ತಯಾರಿಸಿದ ಬಿಸ್ಕೆಟ್, ಬ್ರೆಡ್, ನಾನ್, ರೋಟಿ, ನೂಡಲ್ಸ್ ಮೊದಲಾದವುಗಳನ್ನು ದೂರವಿಡಿ. ಉಪ್ಪಿನ ಸೇವನೆ ಕಡಿಮೆ ಮಾಡಿ, ಧೂಮಪಾನ, ಮದ್ಯಪಾನಕ್ಕೆ ಇತಿಶ್ರೀ ಹಾಡಿಬಿಡಿ.

ಇನ್ನು ಹೆಚ್ಚು ಅಲ್ಲದೆ ಸಾಧಾರಣ ಪ್ರಮಾಣದಲ್ಲಿ ಸೇವಿಸಬಹುದಾದ ಆಹಾರಗಳಿದ್ದು ಅವುಗಳೆಂದರೆ ತೆಂಗಿನಕಾಯಿ, ಕಡಲೆಬೀಜ, ಬಾದಾಮಿ, ಗೋಡಂಬಿ, ಧಾನ್ಯಗಳಲ್ಲಿ ಅಕ್ಕಿ, ರಾಗಿ, ಗೋಧಿ ಇವುಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಹಾಲಿನ ಪದಾರ್ಥಗಳನ್ನು ಕೂಡ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ದಿನಕ್ಕೊಂದರಂತೆ ಚಿಕ್ಕದಾದ ಮೋಸಂಬಿ, ಸೇಬು, ಸೀಬೆ, ಏಲಕ್ಕಿಬಾಳೆ, ಮರಸೇಬು, ಅನಾಸಸ್ ಚೂರು 1, ಚಕ್ಕೊತ 2ತೊಳೆ, ಪರಂಗಿಹಣ್ಣು 2 ಚೂರು, ಕಲ್ಲಂಗಡಿ 2 ಚೂರು, 5 ರಿಂದ 10 ದ್ರಾಕ್ಷಿ, 8 ರಿಂದ 10 ನೇರಳೆ, 4 ರಿಂದ 6 ನೆಲ್ಲಿಕಾಯಿಯನ್ನು ಸೇವಿಸಬಹುದು.

ಮೊಟ್ಟೆ(ಬಿಳಿಯಭಾಗ ಮಾತ್ರ), ಮೀನು, ಚರ್ಮ ತೆಗೆದ ಕೋಳಿ ಮಾಂಸ, ಹಸಿ ಅವರೆಕಾಯಿ, ತೊಗರಿಕಾಯಿ, ಬಾಳೆಕಾಯಿ, ಬಾಳೆದಿಂಡು, ಚಪ್ಪರದವರೆಯನ್ನು ಅಲ್ಪ ಪ್ರಮಾಣದಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದಾಗಿದೆ.

ತಿಳಿಸಾರು, ತೆಳುವಾದ ಮಜ್ಜಿಗೆ, ಟೊಮ್ಯಾಟೋ ಜ್ಯೂಸ್, ನಿಂಬೆ ಜ್ಯೂಸ್(ಸಕ್ಕರೆ ರಹಿತ), ತರಕಾರಿ ಸೂಪ್ಸ್, ಸೋಡಾ, ಬಾರ್ಲಿ ನೀರು, ತರಕಾರಿ, ಸೊಪ್ಪು, ಮೊಳಕೆ ಕಟ್ಟಿದ ಕಾಳುಗಳು, ಹೆಚ್ಚಿನ ನಾರಿನಾಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಬಹುದಾಗಿದೆ.

ಉಪವಾಸ ಮತ್ತು ಭೂರೀ ಬೋಜನ ಮಾಡಬಾರದು, ಸ್ವಲ್ಪ, ಸ್ವಲ್ಪ ಆಹಾರವನ್ನು ಹೆಚ್ಚು ಸಲ ಸೇವಿಸಬೇಕು. ಮಧುಮೇಹ ಕಾಯಿಲೆ ಇರುವವರಲ್ಲಿ ಅತಿಯಾದ ಬೆವರು, ತಲೆಸುತ್ತುವುದು, ಕಣ್ಣುಮಂಜಾಗುವುದು, ಅತಿಯಾದ ಹಸಿವು, ತೀವ್ರ ಎದೆಬಡಿತ, ಪ್ರಜ್ಞೆ ತಪ್ಪುವುದು ಕಂಡು ಬಂದರೆ ಇದು ಸಕ್ಕರೆ ಪ್ರಮಾಣ ಸಹಜ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂದು ತಿಳಿದು ಕೊಳ್ಳಬೇಕು. ಇಂತಹ ಸಂದರ್ಭ ಒಂದು ಲೋಟ ನೀರಿಗೆ 4ರಿಂದ 5 ಚಮಚ ಸಕ್ಕರೆ ಅಥವಾ ಗ್ಲೂಕೋಸ್ ಮಿಶ್ರ ಮಾಡಿ ಸೇವಿಸಬೇಕು. ಮಧುಮೇಹ ಇರುವವರು ಆಹಾರಕ್ರಮಗಳತ್ತ ಮುತುವರ್ಜಿ ವಹಿಸಿದರೆ ಖಂಡಿತಾ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.