ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಬಹುಮುಖ್ಯ!

ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಬಹುಮುಖ್ಯ!

LK   ¦    Oct 10, 2020 04:41:57 PM (IST)
ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಬಹುಮುಖ್ಯ!

ನಾವೆಷ್ಟೇ ದೈಹಿಕವಾಗಿ ಆರೋಗ್ಯವಾಗಿದ್ದರೂ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಅದರ ಪರಿಣಾಮವನ್ನು ದೇಹ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಹಲವು ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತದೆ.

ಇಷ್ಟಕ್ಕೂ ಮಾನಸಿಕ ಆರೋಗ್ಯ ಎಂದರೇನು ಎಂಬ ಪ್ರಶ್ನೆ ಹೆಚ್ಚಿನವರನ್ನು ಕಾಡದಿರದು. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ. ಮಾನಸಿಕ ಆರೋಗ್ಯವಿಲ್ಲದಿದ್ದರೆ ಆತನಿಗೆ ಏನಿದ್ದರೂ ಅದನ್ನು ನೆಮ್ಮದಿಯಾಗಿ, ಸುಖವಾಗಿ ಆತ ಅನುಭವಿಸಲಾರ.

ಇವತ್ತಿನ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಹೆಚ್ಚಿನವರು ಮಾನಸಿಕ ಆರೋಗ್ಯದ ಕೊರತೆಯಿಂದ ಬಳಲುತ್ತಿದ್ದೇವೆ. ಇದಕ್ಕೆ ಕಾರಣ ಬದಲಾಗಿರುವ ನಮ್ಮ ಬದುಕಿನ ಶೈಲಿ. ದೈಹಿಕ ಒತ್ತಡಕ್ಕಿಂತ ಹೆಚ್ಚಾದ ಮಾನಸಿಕ ಒತ್ತಡವೂ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾದರೆ ನಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಒಂದಷ್ಟು ಸಲಹೆಗಳು ಇಲ್ಲಿವೆ.

ದುಡಿಮೆಯ ಹೊರತಾಗಿಯೂ ವ್ಯಾಯಾಮಕ್ಕೆ ಒಂದಷ್ಟು ಸಮಯವನ್ನು ಮೀಸಲಿಡುವುದು ಬಹುಮುಖ್ಯವಾಗಿದೆ. ನಾವು ಖುಷಿಯಾಗಿ ನೆಮ್ಮದಿಯಾಗಿ ಇರಬೇಕಾದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹುಮುಖ್ಯವಾಗಿರುತ್ತದೆ. ದುಡಿಮೆಯ ಕ್ಷೇತ್ರಗಳಲ್ಲಿ ಕೆಲವು ಮಾನಸಿಕವಾಗಿ ಕಿರಿಕಿರಿ ತರುವ ಮತ್ತು ಒತ್ತಡದ ಕೆಲಸಗಳಾಗಿವೆ. ಇಂತಹ ಕ್ಷೇತ್ರಗಳಲ್ಲಿ ದುಡಿಯುವವರು ತಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕು. ಕೋಪ, ಆಕ್ರೋಶ, ಸೇರಿದಂತೆ ಉದ್ವೇಗಕ್ಕೊಳಗಾಗದೆ ಎಲ್ಲವನ್ನು ಸಮಾಧಾನವಾಗಿ, ಸಮಚಿತ್ತದಿಂದ ಎದುರಿಸುವ ಮಾನಸಿಕ ಧೈರ್ಯವನ್ನು ಬೆಳೆಸಿಕೊಳ್ಳಬೇಕು.

ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮೊದಲಿಗೆ ದೇಹವನ್ನು ದಂಡಿಸಬೇಕು. ಅಂದರೆ ವ್ಯಾಯಾಮ ಮಾಡುವುದು, ವಾಕಿಂಗ್ ಮಾಡುವುದು, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದು, ಹೆಂಡತಿ ಮಕ್ಕಳೊಂದಿಗೆ ದೇವಸ್ಥಾನ ಅಥವಾ ಯಾವುದಾದರೂ ಪ್ರವಾಸಿ ತಾಣಗಳಿಗೆ ತೆರಳುವುದು, ಸಾರ್ವಜನಿಕ ಕಾರ್ಯಕ್ರಮಗಳು, ಬಂಧುಬಳಗದವರೊಂದಿಗೆ ಸೇರಿ ಒಂದಷ್ಟು ಸಮಯ ಕಳೆಯುವುದು, ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಚೆನ್ನಾಗಿ ನಿದ್ದೆ ಮಾಡುವುದು ಹೀಗೆ ತಮ್ಮ ಬಿಡುವಿನ ಸಮಯವನ್ನು ಕಳೆಯಬೇಕು.

ಒಂದಷ್ಟು ಸಮಯವನ್ನು ಧ್ಯಾನ, ದೇವರ ದರ್ಶನ ಹೀಗೆ ಪ್ರಶಾಂತ ವಾತಾವರಣದಲ್ಲಿ ಕಳೆಯಬೇಕು. ವೈದ್ಯರ ಬಳಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯದ ಸಮಸ್ಯೆಗಳು ಕಂಡು ಬಂದರೆ ಚಿಕಿತ್ಸೆ ಪಡೆದುಕೊಳ್ಳಬೇಕು.

ಬೇರೆಯವರ ವೈಯಕ್ತಿಕ ವಿಚಾರಗಳ ಬಗ್ಗೆ ಆಸ್ಥೆ ವಹಿಸದೆ ತಮ್ಮ ಪಾಡಿಗೆ ತಾವು ಇರುವುದನ್ನು ಕಲಿಯಬೇಕು. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು. ಹೀಗೆ ಒಂದಷ್ಟು ವಿಚಾರಗಳಲ್ಲಿ ನಾವು ಎಚ್ಚರಿಕೆಯಿಂದ ಇದ್ದರೆ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.