ಕಾಡಬಹುದು ಶ್ವಾಸಕೋಶದ ಅಧಿಕ ರಕ್ತದೊತ್ತಡ ಸಮಸ್ಯೆ!

ಕಾಡಬಹುದು ಶ್ವಾಸಕೋಶದ ಅಧಿಕ ರಕ್ತದೊತ್ತಡ ಸಮಸ್ಯೆ!

LK   ¦    Sep 16, 2020 10:24:23 AM (IST)
ಕಾಡಬಹುದು ಶ್ವಾಸಕೋಶದ ಅಧಿಕ ರಕ್ತದೊತ್ತಡ ಸಮಸ್ಯೆ!

ಮನುಷ್ಯ ಸದಾ ಒಂದಲ್ಲ ಒಂದು ರೀತಿಯ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಲೇ ಇರುತ್ತಾನೆ. ಅದರಲ್ಲೂ ರಕ್ತದೊತ್ತಡದ ಸಮಸ್ಯೆ ಇತ್ತೀಚೆಗೆ ತೀರಾ ಸಾಮಾನ್ಯ ಎಂಬಂತಾಗಿದ್ದು ಈ ಪೈಕಿ ಶ್ವಾಸಕೋಶದ ಅಧಿಕ ರಕ್ತದೊತ್ತಡ ಮನುಷ್ಯನನ್ನು ಕಾಡುತ್ತಿದ್ದು, ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವುದರೊಂದಿಗೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ.

ಶ್ವಾಸಕೋಶದ ಅಧಿಕ ರಕ್ತದೊತ್ತಡದ ಬಗ್ಗೆ  ತಜ್ಞರಾದ ಡಾ. ಆರ್. ಲಕ್ಷ್ಮೀನರಸಿಂಹನ್ ಅವರು ತಮ್ಮದೇ ಆದ ಹಲವು ಸಲಹೆಗಳನ್ನು ನೀಡಿದ್ದಾರೆ ಅದು ಹೀಗಿದೆ.

ಶ್ವಾಸಕೋಶದ ಅಪಧಮನಿಗಳು ಮತ್ತು ಹೃದಯದ ಬಲಭಾಗದ ಮೇಲೆ ಪರಿಣಾಮ ಬೀರುವ ಒಂದು ಬಗೆಯೇ ಅಧಿಕರಕ್ತದೊತ್ತಡ. ಇದರಿಂದಾಗಿ ಈ ಅಪದಮನಿಗಳ ರಕ್ತದೊತ್ತಡ ಸಾಮಾನ್ಯಕ್ಕಿಂತ ಹೆಚ್ಚಾಗುತ್ತದೆ ಮತ್ತು ಇದು ಹೃದಯದ ಬಲಕೋಣೆಯ ಮೇಲಿನ ಒತ್ತಡ ಹೆಚ್ಚಿಸುತ್ತದೆ. ದೊಡ್ಡದಾಗುವ ಬಲಕೋಣೆ ನಿಧಾನವಾಗಿ ಕ್ಷೀಣವಾಗುತ್ತದೆ ಮತ್ತು ಶ್ವಾಸಕೋಶಗಳಿಗೆ ರಕ್ತ ಪಂಪ್ ಮಾಡುವ ಸಾಮಥ್ರ್ಯ ಕುಸಿದು ಬಲಹೃದಯದ ವೈಫಲ್ಯಕ್ಕೆ ಕಾರಣವಾಗಬಹುದು. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಇದು ವಯಸ್ಕರಲ್ಲಿ ಅತ್ಯಂತ ಸಾಮಾನ್ಯ ಮತ್ತು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕೆ ಸ್ವಲ್ಪ ತಯಾರಿಬೇಕಾಗಿರುವುದು ಅಗತ್ಯವಾಗಿದೆ.

ಇನ್ನು ಶ್ವಾಸಕೋಶದ ಅಧಿಕ ರಕ್ತದೊತ್ತಡದ ಲಕ್ಷಣಗಳನ್ನು ಗಮನಿಸಿದ್ದೇ ಆದರೆ, ಆರಂಭದಲ್ಲಿ ಅಧಿಕ ರಕ್ತದೊತ್ತಡದ ಯಾವುದೇ ಲಕ್ಷಣಗಳು ಇರದೇ ಇರಬಹುದು. ಆದರೆ ನಂತರ ಉಸಿರಾಟದ ತೊಂದರೆ ಮೊದಲ ಲಕ್ಷಣವಾಗಿ ಅನುಭವಕ್ಕೆ ಬರಬಹುದು. ಶ್ವಾಸಕೋಶದ ಅಧಿಕ ರಕ್ತದೊತ್ತಡದ ಎಷ್ಟೋಮಂದಿಗೆ,  ವಿಶೇಷವಾಗಿ ರೋಗ ಲಘುವಾಗಿದ್ದರೆ ಅಥವಾ ಮೊದಲ ಹಂತದಲ್ಲಿದ್ದರೆ ಯಾವುದೇ ಲಕ್ಷಣಗಳು ಇಲ್ಲದಿರಬಹುದು. ರೋಗ ಉಲ್ಬಣಿಸಿದಂತೆ ಇನ್ನೊಂದಷ್ಟು ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅವು ಯಾವುವು ಎಂದರೆ? ಉಸಿರುಗಟ್ಟುವಿಕೆ, ಆಯಾಸ, ಎದೆನೋವು, ಬಿರುಸಾಗುವ ಎದೆಬಡಿತ, ಹೊಟ್ಟೆಯ ಬಲಮೇಲ್ಬಾಗದಲ್ಲಿ ನೋವು ಮತ್ತು ಕಡಿಮೆಯಾಗುವ ಹಸಿವು. ಇದು ಆರಂಭದ ಲಕ್ಷಣಗಾಗಿದ್ದು, ನಂತರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವು ತಲೆ ಹಗುರವಾಗುವ ಭಾವನೆ, ದೈಹಿಕ ಚಟುವಟಿಕೆಯ ವೇಳೆ,  ಬಲಹೀನತೆ, ಮೊಣಕಾಲುಗಳಲ್ಲಿ ಬಾವು ಮತ್ತು ತುಟಿ ಮತ್ತು ಚರ್ಮ ಬಿಳುಚಿಕೊಳ್ಳುವಿಕೆಯಾಗಿದೆ.

ಇನ್ನು ಇದಕ್ಕೆ ಕಾರಣಗಳೇನು ಎಂಬುದಕ್ಕೂ ಡಾ. ಆರ್. ಲಕ್ಷ್ಮೀನರಸಿಂಹನ್ ಮಾಹಿತಿ ನೀಡಿದ್ದಾರೆ. ಅದೇನೆಂದರೆ, ಶ್ವಾಸಕೋಶದ ಅಧಿಕ ರಕ್ತದೊತ್ತಡಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚುವುದು ಪ್ರತಿ ಬಾರಿಯೂ ಸುಲಭವಲ್ಲ. ಇದಕ್ಕೆ ಕಾರಣಗಳು ಹಲವು ಇದ್ದು, ಆದರೆ ಅತ್ಯಂತ ಸಾಮಾನ್ಯ ಕಾರಣಗಳೆಂದರೆ ಶ್ವಾಸಕೋಶದ ಅಪಧಮನಿಗಳಿಗೆ, ಹೃದಯದಿಂದ ಶ್ವಾಸಕೋಶಕ್ಕೆ ರಕ್ತಸಾಗಿಸುವ ರಕ್ತನಾಳಗಳಲ್ಲಿ ಬದಲಾವಣೆ.   ಕೆಲವೊಮ್ಮೆ ಶ್ವಾಸಕೋಶಗಳಲ್ಲಿ ಅಧಿಕ ರಕ್ತದೊತ್ತಡಕ್ಕೆ ಕಾರಣಗಳನ್ನು ಪತ್ತೆಹಚ್ಚುವುದು ಕಷ್ಟ. ರಕ್ತಹೆಪ್ಪುಗಟ್ಟಿ ಹೃದಯಸ್ತಂಭನ, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಹೆಚ್‍ಐವಿ, ಕಾನೂನು ಬಾಹಿರ ಡ್ರಗ್ಸ್ ಬಳಕೆ, ಯಕೃತ್‍ನ ಕಾಯಿಲೆ, ಜನ್ಮಜಾತ ಹೃದಯದ ಸಮಸ್ಯೆ ಕೂಡ ಶ್ವಾಸಕೋಶಗಳಲ್ಲಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗ ಬಹುದಾಗಿದೆ.

ಹಾಗಾದರೆ ಶ್ವಾಸಕೋಶದ ಅಧಿಕ ರಕ್ತದೊತ್ತಡವನ್ನು ತಡೆಯಲು ಸಾಧ್ಯವಿಲ್ಲವೆ ಎಂಬ ಪ್ರಶ್ನೆಯೂ ಕಾಡಬಹುದು. ಇನ್ನು ಎಲ್ಲ  ಬಗೆಯ ಶ್ವಾಸಕೋಶದ ಅಧಿಕರಕ್ತದೊತ್ತಡಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅಧಿಕರಕ್ತದೊತ್ತಡ, ಹೃದಯರೋಗ, ಯಕೃತ್ ಸಮಸ್ಯೆ, ಮತ್ತು ಹೊಗೆಸೊಪ್ಪಿನ ಬಳಕೆಯಿಂದ ಬರಬಹುದಾದ ದೀರ್ಘಕಾಲಿಕ ಶ್ವಾಸಕೋಶದ ಕಾಯಿಲೆ ಸೇರಿದಂತೆ ರೋಗಕ್ಕೆ ಕಾರಣವಾಗುವ ಇತರ ಪರಿಸ್ಥಿತಿಗಳನ್ನು ತಡೆಯಲು ಸಾಧ್ಯವಿದೆ ಎನ್ನಲಾಗಿದೆ. ಶಾಸಕೋಶದ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಎಂಬುದಿಲ್ಲ,  ಆದರೆ ಚಿಕಿತ್ಸೆಯಿಂದ ಲಕ್ಷಣಗಳಲ್ಲಿ ಸುಧಾರಣೆ ತರಬಹುದು. ಮತ್ತು ರೋಗ ವೇಗವಾಗಿ ಉಲ್ಬಣಗೊಳ್ಳುವುದನ್ನು ನಿಧಾನಗೊಳಿಸಬಹುದು.

ಶ್ವಾಸಕೋಶದ ಅಧಿಕ ರಕ್ತದೊತ್ತಡಕ್ಕೆ ಕಾರಣವೇನು ಎಂಬುದರ ಮೇಲೆ ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಶ್ವಾಸಕೋಶದ ಅಧಿಕ ರಕ್ತದೊತ್ತಡ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಹೀಗಾಗಿ ಚಿಕಿತ್ಸೆಯೂ ಪ್ರತಿಯೊಬ್ಬನಿಗೂ ಭಿನ್ನವಾಗಿರುತ್ತದೆ. ಶಾಸಕೋಶದ ಅಧಿಕ ರಕ್ತದೊತ್ತಡಕ್ಕೆ ಕಾರಣತಿಳಿದಿದ್ದರೆ ಅದಕ್ಕೆ ಚಿಕಿತ್ಸೆ ನೀಡುವ ಮೂಲಕ ಸ್ಥಿತಿಯನ್ನು ಸುಧಾರಿಸಬಹುದು. ಉದಾಹರಣೆಗೆ, ಶ್ವಾಸಕೋಶದ ಕಾಯಿಲೆಯಿಂದಾಗಿದ್ದರೆ, ಆಕ್ಸಿಜನ್  ಥೆರಪಿ ಮೂಲಕ ರಕ್ತದಲ್ಲಿರುವ ಆಮ್ಲಜನಕ ಪ್ರಮಾಣವನ್ನು ಏರಿಸಬಹುದು ಅಥವಾ ಶ್ವಾಸಕೋಶದ ರಕ್ತದ ಹೆಪ್ಪುಗಟ್ಟುವಿಕೆಯಿಂದಾಗಿದ್ದರೆ ರಕ್ತದಹೆಪ್ಪುಗಟ್ಟುವಿಕೆ ಉಲ್ಬಣವಾಗದಂತೆ ರಕ್ತವನ್ನು ತೆಳುವಾಗಿಸುವ ಔಷಧಗಳನ್ನು ಸೇವಿಸಬೇಕಾಗುತ್ತದೆ. ಜತೆಗೆ ವೈದ್ಯರ ಸಲಹೆ ಮೇರೆಗೆ ವ್ಯಾಯಾಮ ಮತ್ತು ಆಹಾರ ಸೇವನೆಯಲ್ಲಿ ಒಂದಷ್ಟು ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.