ಬದಲಾಗುವ ವಾತಾವರಣಕ್ಕೆ ತಕ್ಕಂತೆ ತಯಾರಿ ಬೇಕು!

ಬದಲಾಗುವ ವಾತಾವರಣಕ್ಕೆ ತಕ್ಕಂತೆ ತಯಾರಿ ಬೇಕು!

LK   ¦    Nov 12, 2020 02:03:38 PM (IST)
ಬದಲಾಗುವ ವಾತಾವರಣಕ್ಕೆ ತಕ್ಕಂತೆ ತಯಾರಿ ಬೇಕು!

ಈಗ ಎಲ್ಲರೂ ಕೊರೋನಾದ ಭಯದಲ್ಲಿರುವುದರಿಂದ ಬೇರೆ ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಕೆಲವು ಕಾಯಿಲೆಗಳು ವಾತಾವರಣ ಬದಲಾದಾಗಲೆಲ್ಲ ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ನಾವು ಒಂದಷ್ಟು ಎಚ್ಚರಿಕೆ ವಹಿಸದೆ ಹೋದರೆ ನಮ್ಮ ಮೇಲೆಯೇ ದಾಳಿ ಮಾಡಿಬಿಡುತ್ತವೆ.

ಇವತ್ತಿನ ಪರಿಸ್ಥಿತಿ ಹೇಗಿದೆ ಎಂದರೆ ಮುಂಜಾನೆ, ಸಂಜೆ ಮೈಕೊರೆಯುವ ಚಳಿ, ಮಧ್ಯಾಹ್ನವಾಗುತ್ತಿದ್ದಂತೆಯೇ ನೆತ್ತಿಸುಡುವ ಬಿಸಿಲು ಇದರ ನಡುವೆ ಮಳೆಯೂ ಸುರಿಯುತ್ತಿದೆ. ಇಂತಹ ವಾತಾವರಣದಲ್ಲಿ ಬೆಳಿಗ್ಗೆ ಚಳಿಗೆ ಹಾಸಿಗೆ ಬಿಟ್ಟು ಏಳೋಕೆ ಮನಸ್ಸಾಗಲ್ಲ. ಮಧ್ಯಾಹ್ನ ಮೈಸುಡುವ ಬಿಸಿಲಿಗೆ ಸಂಚರಿಸೋದು ಹಿಂಸೆ. ಆದರೂ ನಾವು ಸುಮ್ಮನಿರೋಕೆ ಆಗಲ್ಲ. ತಮ್ಮ ದೈನಂದಿನ ಕೆಲಸವನ್ನು ಎಲ್ಲ ಸಮಯಗಳಲ್ಲಿಯೂ ಮಾಡಲೇ ಬೇಕಾಗುತ್ತದೆ.

ವಾತಾವರಣ ಬದಲಾದಾಗ ಅದಕ್ಕೆ ತಕ್ಕಂತೆ ನಾವು ಕೂಡ ತಯಾರಿ ಆಗಲೇ ಬೇಕು ಅದು ಅನಿವಾರ್ಯವೂ ಹೌದು. ಚಳಿಗಾಲದಲ್ಲಿ ನಾವು ಎಚ್ಚರದಿಂದ ಇಲ್ಲದೆ ಹೋದರೆ ಮೈಕೈ ಬಿರುಕು ಬಿಡುವುದು, ತ್ವಚೆ ಗಡಸಾಗುವುದು, ಇಬ್ಬನಿಯಲ್ಲಿ ಓಡಾಡುವುದರಿಂದ ಶೀತ, ನೆಗಡಿ, ಕೆಮ್ಮು ಹೀಗೆ ಕೆಲವೊಂದು ಆರೋಗ್ಯದ ಸಮಸ್ಯೆಗಳು ಕಾಣಿಸಬಹುದು. ಆದರೆ ಒಂದಷ್ಟು ಎಚ್ಚರಿಕೆಯ ಕ್ರಮಗಳನ್ನು ವಹಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಇಬ್ಬನಿಗೆ ವಾಕಿಂಗ್ ಮಾಡುವವರು ಟೋಪಿ, ಮಪ್ಲರ್ ಬಳಸುವುದು, ಕಿವಿಗೆ ಹತ್ತಿಹಾಕಿಕೊಳ್ಳುವುದು, ಮೈತುಂಬಾ ಬಟ್ಟೆ ಹಾಕಿ ಶರೀರವನ್ನು ಬೆಚ್ಚಗಿಟ್ಟುಕೊಂಡರೆ ಶೀತವಾಗದಂತೆ ತಡೆಯಬಹುದು. ಇನ್ನು ಕೈಕಾಲುಗಳಲ್ಲಿ ಬಿರುಕು ಕಾಣಿಸದಂತೆ ಮಾಡಲು ಚೆನ್ನಾಗಿ ಕೈಕಾಲು ತೊಳೆದು ಮಾರುಕಟ್ಟೆಯಲ್ಲಿ ದೊರೆಯುವ ಕ್ರೀಮ್‍ಗಳನ್ನು ಬಳಸುವುದು ಹೀಗೆ ಮಾಡಬೇಕಾಗುತ್ತದೆ.

ಬಿಸಿಲಿನ ತಾಪಕ್ಕೆ ಸುಸ್ತು, ನೀರಡಿಕೆ, ತಲೆಸುತ್ತು ಮೊದಲಾದವುಗಳು ಬಾಧಿಸುವುದು ಸಾಮಾನ್ಯವಾಗಿದ್ದು, ತಲೆನೋವು ಕಾಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಬಿಸಿಲಿಗೆ ಹೋಗುವಾಗ ಆದಷ್ಟು ತೆಳು ಬಣ್ಣದ ಸಡಿಲವಾದ ಹತ್ತಿಯ ಬಟ್ಟೆ ಧರಿಸಬೇಕು. ಕೈಗೆಟಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಆಗಾಗ್ಗೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ ಪಾನಕ ಸೇವಿಸಬೇಕು. ಕಾಫಿ ಟೀ ಸೇವನೆ ಕಡಿಮೆ ಮಾಡಬೇಕು. ಕಾರ್ಬೋನೇಟೆಡ್ ಪಾನೀಯಗಳನ್ನು ತ್ಯಜಿಸಬೇಕು. ನೀರು, ಮಜ್ಜಿಗೆ, ಎಳನೀರು ಕುಡಿಯಬೇಕು. ಬೆಚ್ಚಗಿನ ಮಸಾಲೆರಹಿತ ಶುದ್ದ ಆಹಾರ ಸೇವಿಸಬೇಕು. ಗಾಳಿಯಾಡುವಂತಹ ಪಾದರಕ್ಷೆ ಧರಿಸಬೇಕು.

ಹೆಚ್ಚು ಉಷ್ಣಾಂಶ ಇರುವ ಬೇಸಿಗೆ ಸಂದರ್ಭದಲ್ಲಿ ವ್ಯಕ್ತಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಹಣೆ, ಕತ್ತು, ಪಾದ, ತೊಡೆಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. (ತಂಪಾದ ಅಥವಾ ಐಸ್ ನೀರನ್ನು ಒರೆಸಲು ಬಳಸಬಾರದು) ಉಪ್ಪು, ಸಕ್ಕರೆ ಬೆರೆತ ನೀರನ್ನು ಕುಡಿಸಬೇಕು. ಬಳಿಕ ವೈದ್ಯರ ಬಳಿಗೆ ಕರೆದೊಯ್ಯಬೇಕು.

ಬಿಸಿಲಿನ ಆಘಾತಕ್ಕೊಳಗಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆಯಾಗಿ  ಮೊದಲಿಗೆ ಬಟ್ಟೆ, ಪಾದರಕ್ಷೆ ಸಡಿಲಿಸಿ ತೆಗೆಯಬೇಕು. ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸಬೇಕು. ತಂಪಾದ ನೆರಳಿನ ಜಾಗಕ್ಕೆ ಸ್ಥಳಾಂತರಿಸಿ ಗಾಳಿ ಬೀಸಬೇಕು. ದೇಹವನ್ನು ಅತಿಯಾಗಿ ತಕ್ಷಣವೇ ತಂಪು ಮಾಡಬಾರದು. ಯಾವುದೇ ಔಷಧ ನೀಡಬಾರದು. ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುದ್ಧವಾದ ನೀರನ್ನು ಸ್ಪಲ್ಪ ಸ್ವಲ್ಪವಾಗಿ ನೀಡಬೇಕು.

ಬಸ್‍ನಲ್ಲಿ ಪ್ರಯಾಣ ಮಾಡುವವರು ಅಗತ್ಯವಾಗಿ ತಮ್ಮೊಂದಿಗೆ ಕುಡಿಯುವ ನೀರನ್ನು ಕೊಂಡೊಯ್ಯುವುದು ಒಳ್ಳೆಯದು. ಬಿಸಿಲಿನಲ್ಲಿ ಮಕ್ಕಳು. ವಯಸ್ಸಾದವರು ನಡೆಯುವಾಗ ಕಪ್ಪು ಬಣ್ಣವಲ್ಲದ ಛತ್ರಿ ಬಳಸುವುದು ಒಳ್ಳೆಯದು. ಸಿಕ್ಕ ಸಿಕ್ಕಲ್ಲಿ ಆಹಾರ ಪದಾರ್ಥಗಳನ್ನು ಸೇವಿಸದೆ ಶುಚಿತ್ವಕ್ಕೆ ಒತ್ತು ನೀಡಬೇಕು. ಮನೆಗೆ ಸರಬರಾಜಾಗಾಗುವ ನೀರನ್ನು ನೇರವಾಗಿ ಉಪಯೋಗಿಸದೆ ಕುದಿಸಿ ಆರಿಸಿ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಸೇವನೆ ಮಾಡುವುದು ಅನುಕೂಲ. ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಏನು ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದೋ ಅದನ್ನು ಮಾಡಿಕೊಳ್ಳಬೇಕು ಅದು ಜಾಣತನವೂ ಹೌದು.