ಅಸ್ತಮಾ ನಿಯಂತ್ರಣಕ್ಕೆ ಒಂದಷ್ಟು ಸಲಹೆಗಳು..

ಅಸ್ತಮಾ ನಿಯಂತ್ರಣಕ್ಕೆ ಒಂದಷ್ಟು ಸಲಹೆಗಳು..

LK   ¦    Jun 02, 2020 03:07:23 PM (IST)
ಅಸ್ತಮಾ ನಿಯಂತ್ರಣಕ್ಕೆ ಒಂದಷ್ಟು ಸಲಹೆಗಳು..

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಶೀತ, ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಸಹಜ. ಆದರೆ ಈ ಬಾರಿ ಅದ್ಯಾವುದು ಕಾಣಿಸಿಕೊಂಡರೂ ಮಾಮೂಲಿ ಕಾಯಿಲೆ ಎಂದು ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಈಗಾಗಲೇ ಕೊರೋನಾ ಇನ್ನಿಲ್ಲದಂತೆ ಕಾಡುತ್ತಿದ್ದು ಅದಕ್ಕೆ ಬಲಿಯಾಗುತ್ತಲೇ ಇದ್ದಾರೆ.

ಹೀಗಿರುವಾಗ ನಾವು ಎಚ್ಚರಿಕೆಯಿಂದ ಇದ್ದು ರೋಗ ಬರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡದೊಂದು ಸವಾಲ್ ಆಗಿದೆ. ಮಳೆಗಾಲದಲ್ಲಿ ಕಂಡು ಬರುವ ರೋಗಗಳನ್ನು ನಿಯಂತ್ರಿಸುವತ್ತ ಹೆಚ್ಚಿನ ಗಮನಹರಿಸುವುದು ಅನಿವಾರ್ಯವಾಗಿದೆ. ಶೀತ ಜ್ವರ ಕೆಮ್ಮು ಜೊತೆ ಅಸ್ತಮಾವು ಭಯ ಹುಟ್ಟಿಸುತ್ತಿದೆ.

ಅಸ್ತಮಾ ಇರುವರಿಗೆ ಕೊರೊನಾ ಬಹುಬೇಗ ತಗಲುತ್ತದೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಅಸ್ತಮಾ ಇದ್ದವರು ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಈ ಸಮಯದಲ್ಲಿ ವೈದ್ಯರು ನೀಡಿದ ಸಲಹೆಗಳನ್ನು ಪಾಲಿಸುವುದು ಅಷ್ಟೇ ಮುಖ್ಯವಾಗಿದೆ.

ವೈದ್ಯರು ನೀಡಿದ ಸೂಚನೆಯಂತೆಯೇ ಔಷಧಿಯನ್ನು ತೆಗೆದುಕೊಳ್ಳಬೇಕು. ಮನೆಯಿಂದ ಹೊರಗೆ ಹೋಗುವಾಗ ವೈದ್ಯರು ನೀಡುವ ತ್ವರಿತ ಶಮನ ನೀಡುವ ಔಷಧಿ ಮತ್ತು ಇನ್ನೇಲರ್‍ಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಹೊಗೆ, ಧೂಳಿನಿಂದ ಆದಷ್ಟು ದೂರ ಇರುವಂತೆ ನೋಡಿಕೊಳ್ಳಬೇಕು.

ಮಲಗುವ ಕೋಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಜತೆಗೆ ಒಂದಷ್ಟು ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಬೂಷ್ಟ್ ಮತ್ತು ಧೂಳು ರಗ್ಗುಗೆ ಹಿಡಿಯುವುದರಿಂದ ಅದನ್ನು ದೂರವಿಟ್ಟು, ಸ್ವಚ್ಛವಾಗಿರುವ ಹೊದಿಕೆಗಳನ್ನು ಬಳಸಬೇಕು.

ಮಲಗುವ ಕೋಣೆಯಲ್ಲಿರುವ ಮಂಚದ ಹಾಸಿಗೆ, ದಿಂಬು, ಕುರ್ಚಿ, ಇನ್ನಿತರ ಪೀಠೋಪಕರಣಗಳಲ್ಲಿ ಧೂಳುಗಳು ಶೇಖರಣೆಯಾಗುತ್ತವೆ. ಹೀಗಾಗಿ ಇವುಗಳನ್ನು ನಿತ್ಯ ಸ್ವಚ್ಛಗೊಳಿಸಬೇಕು. ಬೆಕ್ಕು, ನಾಯಿಗಳನ್ನು ಜತೆಯಲ್ಲಿ ಮಲಗಿಸಿಕೊಳ್ಳುವುದು ಒಳ್ಳೆಯದಲ್ಲ. ಮಲಗುವ ಕೋಣೆಯಲ್ಲಿ ಧೂಮಪಾನ ಇನ್ನಿತರ ಹೊಗೆ ಬರದಂತೆ ನೋಡಿಕೊಳ್ಳಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ತೊಳೆಯಬೇಕು.

ಮನೆಯಲ್ಲಿ ಕಸ ಗುಡಿಸುವುದು, ವ್ಯಾಕ್ಯೂಮ್ ಮಾಡುವುದು, ಧೂಳು ತೆಗೆಯುವುದು, ಪೇಯಿಂಟ್ ಮಾಡುವುದು, ಕೀಟಗಳಿಗೆ ಸ್ಪ್ರೇ ಮಾಡುವುದು, ಇನ್ನಿತರ ತೀಕ್ಷ್ಣ ಕಾರಕ ಆಹಾರ ಪದಾರ್ಥಗಳನ್ನು ಬೇಯಿಸುವುದು, ಒಗ್ಗರಣೆ ಹಾಕುವುದು ಮೊದಲಾದವುಗಳನ್ನು ಅಸ್ತಮಾ ಪೀಡಿತರು ಮಾಡಬಾರದು, ಪೀಡಿತರು ಮನೆಯಲ್ಲಿದ್ದಾಗಲೂ  ಮಾಡಬಾರದು.

ಮೂರು ಬಾರಿ ಲಘು ಆಹಾರ ಸೇವಿಸುವುದು, ಸದಾ ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ಧೂಮಪಾನ, ಅತಿಯಾದ ಆಹಾರಸೇವನೆ ಮಾಡಬಾರದು. ಅಲರ್ಜಿ ಉಂಟು ಮಾಡುವ ಆಹಾರಗಳಿಂದ ದೂರವಿರಬೇಕು. ಹಾಲಿನ ಉತ್ಪನ್ನಗಳು, ಚಾಕೋಲೆಟ್, ರಿಫೈನ್ಡ್ ವೈಟ್ ಫ್ಲೋರ್, ಬ್ರೆಡ್, ಕೇಕ್, ಸಕ್ಕರೆ ಮುಂತಾದ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು.

ಹೆಣ್ಣು ಮಕ್ಕಳು ಸ್ನಾನದ ಬಳಿಕ ತೇವಯುಕ್ತ ಕೂದಲನ್ನು ಚೆನ್ನಾಗಿ ಟವೆಲ್‍ನಿಂದ ಒರೆಸಿ ತೇವ ತೆಗೆಯಬೇಕು. ಕೂದಲಿನಲ್ಲಿ ತೇವದ ಅಂಶ ನಿಲ್ಲದಂತೆ ನೋಡಿಕೊಳ್ಳುವ ಮೂಲಕ ದೇಹ ಸದಾ ಬೆಚ್ಚಗಿರುವಂತೆ ನೋಡಿಕೊಳ್ಳಬೇಕು.