ಹೋಳಿಹಬ್ಬ : ನೀರು ಮಿಶ್ರಿತ ಬಣ್ಣ ಬೇಡ: ಆರೋಗ್ಯ ಇಲಾಖೆ ಸಲಹೆ

ಹೋಳಿಹಬ್ಬ : ನೀರು ಮಿಶ್ರಿತ ಬಣ್ಣ ಬೇಡ: ಆರೋಗ್ಯ ಇಲಾಖೆ ಸಲಹೆ

YK   ¦    Mar 10, 2020 11:21:13 AM (IST)
ಹೋಳಿಹಬ್ಬ : ನೀರು ಮಿಶ್ರಿತ ಬಣ್ಣ ಬೇಡ: ಆರೋಗ್ಯ ಇಲಾಖೆ ಸಲಹೆ

ಧಾರವಾಡ: ಹೋಳಿ ಹಬ್ಬ ಇರುವ ಪ್ರಯುಕ್ತ ಸಾರ್ವಜನಿಕ ನೀರು ಮಿಶ್ರಿತ ಬಣ್ಣವನ್ನು ಬಳಸದೇ ಒಣ ಬಣ್ಣವನ್ನು ಒಂದು ಬೊಟ್ಟು ಇಡುವ ಮೂಲಕ ಆಚರಿಸಬೇಕು. ಹಾಗೂ ಅತಿಯಾದ ರಾಸಾಯನಿಕ ಯುಕ್ತ ಬಣ್ಣಗಳನ್ನು ಬಳಸಬಾರದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದಿನಕರ ಸಾರ್ವಜನಿಕರಿಗೆ ಆರೋಗ್ಯ ಸಲಹೆ ನೀಡಿದ್ದಾರೆ.

ಕೊರೊನಾ ವೈರಸ್ ಭಯಬೇಡ, ಎಚ್ಚರವಿರಲಿ: ವೈರಸ್ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆ ಉಂಟು ಮಾಡುತ್ತದೆ. ಈ ವೈರಸ್ ಮೊದಲ ಬಾರಿಗೆ ಚೀನಾದ ವುಹಾನ್‍ನಲ್ಲಿ ಪತ್ತೆಯಾಗಿದೆ.
ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೀತಿ: ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ, ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕದಲ್ಲಿರುವಾಗ, ಸೋಂಕಿತ ವ್ಯಕ್ತಿಯು ಹಸ್ತ ಲಾಘವ ಮತ್ತು ಮುಟ್ಟುವಾಗ, ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ, ಸ್ವಚ್ಚಗೊಳಿಸದ / ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ರೋಗ ಹರಡುತ್ತದೆ.

ರೋಗ ಲಕ್ಷಣಗಳು: ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ, ಬೇಧಿ.
ಈ ರೋಗಕ್ಕೆ ಯಾವುದೇ ನಿಖರವಾದ ಚಿಕಿತ್ಸೆ ಇರುವುದಿಲ್ಲ , ರೋಗದ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆನೀಡಲಾಗುತ್ತದೆ. ಯಾವುದೇ ಲಸಿಕೆ ಲಭ್ಯವಿಲ್ಲ.

ಮುಂಜಾಗ್ರತ ಕ್ರಮಗಳು: ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು, ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ ಬಳಸುವುದು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು.

ವಿಶೇಷವಾಗಿ ಆಗಾಗ್ಗೆ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್, ಕೈವಸ್ತ್ರ ಉಪಯೋಗಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು. ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸುವುದು.

ಅಸುರಕ್ಷಿತವಲ್ಲದ ಕಾಡುಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬಾರದು. ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯ ವಾಣಿ 104 ಕ್ಕೆ ಕರೆಮಾಡಬಹುದು ಅಥವಾ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.