ನಮ್ಮಲ್ಲೇ ಇದೆ ತಲೆ ನೋವಿಗೆ ಚಿಕಿತ್ಸೆ!

ನಮ್ಮಲ್ಲೇ ಇದೆ ತಲೆ ನೋವಿಗೆ ಚಿಕಿತ್ಸೆ!

LK   ¦    Jul 11, 2018 03:22:09 PM (IST)
ನಮ್ಮಲ್ಲೇ ಇದೆ ತಲೆ ನೋವಿಗೆ ಚಿಕಿತ್ಸೆ!

ಕೆಲವರು ಮಾತು ಮಾತಿಗೂ ತಲೆಬಿಸಿಯಾಗುತ್ತೆ ಎನ್ನುತ್ತಾರೆ. ತಲೆಬಿಸಿ ಎನ್ನುವುದು ಜ್ವರ ಬಂದಾಗ ಆಗುವ ಬೆಚ್ಚಗೆ ಅಲ್ಲ. ಅದು ಒಂದು ರೀತಿಯಲ್ಲಿ ಏನು ಮಾಡಬೇಕೆಂದು ತೋಚದ ಸ್ಥಿತಿ. ಕೆಲವು ಅನಗತ್ಯ ವಿಚಾರಗಳನ್ನು ಮೈಗೆ ಎಳೆದುಕೊಂಡಾಗ, ಯಾವುದೋ ವಿಚಾರದ ಬಗ್ಗೆ ಹೆಚ್ಚು ಹೆಚ್ಚಾಗಿ ಯೋಚಿಸಿದಾಗಲೂ ತಲೆಬಿಸಿಯಾದ ಅನುಭವವಾಗುತ್ತದೆ. ಇದರಿಂದ ತೊಂದರೆಯೇ ಜಾಸ್ತಿ. ಆದ್ದರಿಂದ ಮನಸ್ಸಿಗೆ ಹೆಚ್ಚಿನ ಒತ್ತಡ ನೀಡಬಾರದು. ಆದಷ್ಟು ಪ್ರಶಾಂತವಾಗಿರುವಂತೆ ನೋಡಿಕೊಳ್ಳಬೇಕು. ನಮಗೆ ಖುಷಿ ಕೊಡುವ ವಿಚಾರಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು.

ಮೇಲ್ನೋಟಕ್ಕೆ ಕಾಣುವ ಮನುಷ್ಯನ ದೇಹ ಮನಸ್ಸಿನ ಗುಲಾಮ ಎಂದರೆ ತಪ್ಪಾಗಲಾರದು. ಮನಸ್ಸು ಹೇಳಿದಂತೆ ಕೇಳುವ ದೇಹ ಒಳ್ಳೆಯದು ಮತ್ತು ಕೆಟ್ಟದು ಎರಡಕ್ಕೂ ಸಾಕ್ಷಿಯಾಗುತ್ತದೆ.

ಒಬ್ಬ ವ್ಯಕ್ತಿಯನ್ನು ನಾವು ದೇಹದಿಂದ ಗುರುತಿಸುತ್ತೇವೆ. ಅವನಲ್ಲಿರುವ ಎಲ್ಲ ಗುಣಗಳಿಗೆ ದೇಹ ಸಾಕ್ಷಿಯಾಗುತ್ತದೆ. ನಮಗೆ ಒಬ್ಬ ವ್ಯಕ್ತಿಯ ಮನಸ್ಸಾಗಲೀ, ಆತನ ಗುಣವಾಗಲೀ ತಕ್ಷಣಕ್ಕೆ ಕಾಣುವುದಿಲ್ಲ. ಮೇಲ್ನೋಟಕ್ಕೆ ಕಾಣುವುದು ದೇಹ ಮಾತ್ರ. ಆ ದೇಹದ ಮುಖಚರ್ಯೆ, ರೂಪ, ಆಕಾರ, ಬಣ್ಣದಿಂದ ವ್ಯಕಿಯನ್ನು ಗುರುತಿಸುತ್ತೇವೆ, ನೆನಪಿಟ್ಟುಕೊಳ್ಳುತ್ತೇವೆ.

ಒಬ್ಬ ವ್ಯಕ್ತಿಯ ಒಡನಾಟದಲ್ಲಿದ್ದಾಗ ಮಾತ್ರ ನಮಗೆ ಆತನ ಗುಣ ತಿಳಿಯುತ್ತದೆ. ಇಷ್ಟಕ್ಕೂ ನಾವು ದೇಹವನ್ನು ನೋಡಿ ಯಾವತ್ತೂ ಒಬ್ಬ ವ್ಯಕ್ತಿಯೊಂದಿಗೆ ಗೆಳೆತನ ಮಾಡುವುದಿಲ್ಲ. ಪರಿಚಯವಾದ ಬಳಿಕ ಆತನಲ್ಲಿರುವ ಗುಣ ನೋಡುತ್ತೇವೆ. ನಮಗೆ ಇಷ್ಟವಾದರೆ ಮಾತ್ರ ಸಂಬಂಧ ಮುಂದುವರೆಸುತ್ತೇವೆ. ಇಷ್ಟಕ್ಕೂ ಈ ಜಗತ್ತಿನಲ್ಲಿ ಎಲ್ಲರೂ ಎಲ್ಲರಿಗೆ ಇಷ್ಟವಾಗುವುದಿಲ್ಲ.

ಹಲವರ ಸಂಪರ್ಕದಲ್ಲಿದ್ದರೂ ಸಂಬಂಧವನ್ನು ಮಾತ್ರ ಆಯ್ದ ಕೆಲವರೊಂದಿಗೆ ಮಾತ್ರ ಮುಂದುವರೆಸುತ್ತೇವೆ. ನಮ್ಮ ದೇಹ ಹೇಗೆಯೇ ಇರಲಿ. ಅದನ್ನು ಮನಸ್ಸು ನಿಯಂತ್ರಿಸುತ್ತದೆ. ಅದು ಹೇಗೆ ಬೇಕೋ ಹಾಗೆ ಆಡಿಸುತ್ತದೆ.

ಶಿರ, ಮುಂಡ, ಕೈಕಾಲು, ಕಣ್ಣು, ಕಿವಿ, ಮೂಗು, ಚರ್ಮ, ನಾಲಿಗೆ, ರಕ್ತ ಮಾಂಸವನ್ನು ಹೊಂದಿರುವ ದೇಹವನ್ನು ಕಾಪಾಡಲು ನಾವು ಕಾಳಜಿ ವಹಿಸುತ್ತೇವೆ. ದೇಹದ ಯಾವುದೇ ಭಾಗಕ್ಕೆ ತೊಂದರೆಯಾದರೂ ಇಡೀ ದೇಹ ಕಂಪಿಸುತ್ತದೆ.

ಬಹಳಷ್ಟು ಸಾರಿ ದೇಹಕ್ಕಾಗಿರುವ ನೋವನ್ನು ಚಿಕಿತ್ಸೆ ಮೂಲಕ ಗುಣಪಡಿಸಿಕೊಳ್ಳಬಹುದು. ಆದರೆ ಮನಸ್ಸಿನ ಮೇಲಾಗುವ ನೋವಿಗೆ ಚಿಕಿತ್ಸೆ ನೀಡಿದರೆ ಅದು ಶಮನವಾಗುವುದಿಲ್ಲ. ಅದಕ್ಕೆ ನಾವೇ ಚಿಕಿತ್ಸೆ ನೀಡಿಕೊಳ್ಳಬೇಕು. ಮನಸ್ಸು ಮತ್ತು ದೇಹ ಎರಡೂ ಆರೋಗ್ಯಕರವಾಗಿರಬೇಕು. ಮನಸ್ಸಿನ ಮೇಲೆ ಆಗುವ ಒತ್ತಡ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೋ ಹಾಗೆಯೇ ದೇಹದ ಮೇಲಿನ ಆಗುವ ನೋವುಗಳು ಕೂಡ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಇಷ್ಟಕ್ಕೂ ಮನಸ್ಸು ಕಣ್ಣಿಗೆ ಕಾಣುವಂತಹದಲ್ಲ. ದೇಹದ ಮೇಲೆ ಇಂತಹದ್ದೇ ಜಾಗದಲ್ಲಿದೆ ಎಂದು ಗುರುತಿಸಲೂ ಸಾಧ್ಯವಿಲ್ಲ. ಅದು ಅದ್ಭುತ ಶಕ್ತಿಯ ಇಡೀ ಶರೀರವನ್ನು ಆವರಿಸುವ ಸಂವೇದನೆಯಾಗಿದೆ. ಮನ್ ಧಾತುವಿನಿಂದ ಮನಸ್ಸು. ಮನ್ ಎಂದರೆ ಚಿಂತಿಸು, ಯೋಚಿಸು, ತರ್ಕಿಸು ಎಂಬಂತಹ ಅರ್ಥವನ್ನು ನೀಡುತ್ತದೆ. ಇಷ್ಟಕ್ಕೂ ಮನಸ್ಸು ಒಂದೆಡೆ ನಿಲ್ಲುವಂತದಲ್ಲ. ಅದು ಸದಾ ಸಂಚಲನದಲ್ಲಿರುತ್ತದೆ. ಅದು ಕೆಟ್ಟದರತ್ತವೂ ಹರಿಯಬಹುದು. ಇಂಥ ಸಂದರ್ಭ ಅದಕ್ಕೆ ಗುಲಾಮನಾಗಿ ಮುನ್ನಡೆದಾಗ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಆಧ್ಯಾತ್ಮಿಕ ಚಿಂತಕರು ಮನಸ್ಸಿಗೆ ಲಗಾಮು ಹಾಕಿ ಹಿಡಿದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ