ಕ್ರಾನಿಕ್ ಡಯರಿಯಾ ಕಾಡುವ ಮುನ್ನ ಎಚ್ಚರವಾಗಿರಿ

ಕ್ರಾನಿಕ್ ಡಯರಿಯಾ ಕಾಡುವ ಮುನ್ನ ಎಚ್ಚರವಾಗಿರಿ

LK   ¦    May 20, 2019 02:18:44 PM (IST)
ಕ್ರಾನಿಕ್ ಡಯರಿಯಾ ಕಾಡುವ ಮುನ್ನ ಎಚ್ಚರವಾಗಿರಿ

ಬೇಸಿಗೆಯ ದಿನಗಳಲ್ಲಿ ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪ ಏರು ಪೇರಾದರೂ ಭೇದಿ ನಮ್ಮನ್ನು ಕಾಡುತ್ತದೆ. ಅದರಲ್ಲಿಯೂ ಮಕ್ಕಳಲ್ಲಿ ಬೇಗ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪೋಷಕರು ಎಷ್ಟು ಎಚ್ಚರವಾಗಿರುತ್ತಾರೆಯೋ ಅಷ್ಟು ಒಳ್ಳೆಯದು.

ಭೇದಿಯಲ್ಲಿ ಒಂದು ವೇಳೆ ಕ್ರಾನಿಕ್ ಡಯರಿಯಾ ಕಾಣಿಸಿದರೆ ಕಷ್ಟ. ಅದು ಬಂದರೆ ಹೆಚ್ಚು ತೊಂದರೆ ಪಡಬೇಕಾಗುತ್ತದೆ. ಆದ್ದರಿಂದ ನಾವು ಬೇಸಿಗೆಯ ದಿನಗಳಲ್ಲಿ ಆಹಾರ ಸೇವನೆ, ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚು ಆದ್ಯತೆಯನ್ನು ನೀಡಬೇಕಾಗುತ್ತದೆ.

ಸಾಮಾನ್ಯವಾಗಿ ಭೇದಿ ಕೆಲವು ದಿನಗಳ ಕಾಲ ಕಾಣಿಸಿಕೊಂಡು ವಾಸಿಯಾಗಬಹುದು. ಆದರೆ ಕೆಲವೊಮ್ಮೆ ತಿಂಗಳಾನುಗಟ್ಟಲೆ ಭೇದಿಯು ನಿಯಂತ್ರಣಕ್ಕೆ ಬಾರದೆ ನಮಗೆ ತೊಂದರೆ ಕೊಡಬಹುದು. ಇದನ್ನು ಕ್ರಾನಿಕ್ ಡಯರಿಯಾ ಎಂದು ಕರೆಯಲಾಗುತ್ತದೆ. ಇದು ಹೇಗೆಂದರೆ ಒಮ್ಮೆ ಶುರುವಾಗುವ ಭೇದಿ ತಿಂಗಳವರೆಗೂ ಕಾಣಿಸಿಕೊಳ್ಳಬಹುದು. ಸೇವಿಸಿದ ಆಹಾರವೆಲ್ಲವೂ ಭೇದಿಯಾಗಿ ಹೊರಹೋಗಬಹುದು. ಕ್ರಾನಿಕ್ ಡಯರಿಯಾ ಕಾಣಿಸಲು ಸೀಲಿಯಕ್ ಕಾರಣವಂತೆ. ಸೀಲಿಯಕ್ ಕಾಯಿಲೆಯಿಂದ ಬಳಲುವವರು ಗೋಧಿ ಮತ್ತು ಇನ್ನಿತರೆ ಧವನ ಧಾನ್ಯಗಳಲ್ಲಿರುವ ಗ್ಲೊಟೆನ್ ಎಂಬ ನೈಸರ್ಗಿಕ ಪ್ರೋಟಿನ್‍ನ ಅಲರ್ಜಿ ಹೊಂದಿರುತ್ತಾರೆ.

ಈ ಅಲರ್ಜಿ ಹೊಂದಿರುವ ಪರಿಣಾಮ ಕರಳುಗಳ ಒಳ ಅಂಚು ನಾಶಗೊಳ್ಳುತ್ತದೆಯಲ್ಲದೆ, ಅತಿ ಕಡಿಮೆ ಪ್ರಮಾಣದಲ್ಲಿ ಆಹಾರವು ರಕ್ತವನ್ನು ಸೇರುತ್ತದೆ. ಹೀಗಾಗಿ ಉಳಿಯುವ ಆಹಾರವು ಮಲವಾಗಿ ಹೊರಹೋಗುತ್ತದೆ. ಈ ರೀತಿಯ ಮಲವು ಮೆದುವಾಗಿ ಪರಿವರ್ತನೆಗೊಂಡು ಮಾಮೂಲಿಗಿಂತ ಹೆಚ್ಚು ಬಾರಿ ಪದೇ ಪದೇ ಹೊರಹೋಗುತ್ತದೆ. ಇದು ಎಲ್ಲರಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೂ ಪ್ರತಿ ಐನೂರಕ್ಕೊಬ್ಬ ಈ ಭೇದಿಯಿಂದ ನರಳುತ್ತಾನೆ ಎನ್ನಲಾಗಿದೆ.

ಕ್ರಾನಿಕ್ ಡಯರಿಯಾ ಬರಲು ಮತ್ತೊಂದು ಕಾರಣವೂ ಇದೆಯಂತೆ ಅದೇನೆಂದರೆ, ಅಲ್ಸರೇಟಿವ್ ಕೊಲೈಟಿಸ್. ದೊಡ್ಡಕರುಳಿನಲ್ಲಿ ಅಲ್ಸರ್ ಉಂಟಾದಾಗಲೂ ಈ ರೀತಿಯಾಗಬಹುದೆಂದು ಹೇಳಲಾಗಿದೆ. ಇನ್ನು ಕೆಲವೊಮ್ಮೆ ಭೇದಿಯೊಂದಿಗೆ ವಾಂತಿಯೂ ಆರಂಭವಾದರೆ ಶರೀರದಲ್ಲಿರುವ ನೀರೆಲ್ಲವೂ ಹೊರ ಹೋಗಿ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ ದೇಹದಲ್ಲಿ ನೀರಿನಾಂಶ ಆರದಂತೆ ನೋಡಿಕೊಳ್ಳಬೇಕಾಗುತ್ತದೆ.

ಹೀಗಾಗಿ ಸ್ವಲ್ಪ ಉಪ್ಪು ಬೆರೆಸಿದ ನೀರನ್ನು ಆಗಾಗ್ಗೆ ಕೊಡಬೇಕಾಗುತ್ತದೆ. ಜತೆಗೆ ತಿಳಿ ಮಜ್ಜಿಗೆ, ಎಳನೀರು, ಉಪ್ಪು ಬೆರೆಸಿದ ಅಕ್ಕಿಯ ಗಂಜಿ, ಅಲ್ಪ ಪ್ರಮಾಣದಲ್ಲಿ ಬೆರೆಸಿದ ಉಪ್ಪು, ಸಕ್ಕರೆಯ ನಿಂಬು ಪಾನೀಯ ಅಥವಾ ಚೆಳುವಾದ ಚಹವನ್ನು ನೀಡಬೇಕಾಗುತ್ತದೆ. ಇನ್ನು ಒಂದು ಲೀಟರ್ ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿ ಅದಕ್ಕೆ ಸಕ್ಕರೆ ಬೆರೆಸಿ ಪಾನೀಯ ತಯಾರು ಮಾಡಿಕೊಂಡು ಕುಡಿಸಬೇಕು. ಅಥವಾ ಅಕ್ಕಿಯನ್ನು ಚೆನ್ನಾಗಿ ಹುರಿದು ಪುಡಿಮಾಡಿ ಅದಕ್ಕೆ ಚಿಟಿಕೆ ಉಪ್ಪು ಬೆರೆಸಿ ಚೆನ್ನಾಗಿ ಕುದಿಸುವ ಮೂಲಕ ತೆಳುವಾದ ಗಂಜಿಯನ್ನು ತಯಾರು ಮಾಡಿಟ್ಟುಕೊಂಡು ಅದನ್ನು ಆಗಾಗ್ಗೆ ಕುಡಿಸುವುದರಿಂದಲೂ ನಿತ್ರಾಣರಾಗುವುದನ್ನು ತಪ್ಪಿಸಬಹುದಾಗಿದೆ.

ದೊಡ್ಡವರಿಗಿಂತಲೂ ಮಕ್ಕಳ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಬೇಕಾಗುತ್ತದೆ. ಕಾಯಿಲೆಗಳು ಯಾವುದೇ ಇರಲಿ ಅದು ಬಂದ ಬಳಿಕ ಅದನ್ನು ವಾಸಿ ಮಾಡಲು ಪರದಾಡುವುದಕ್ಕಿಂತಲೂ ಬಾರದಂತೆ ನೋಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಹಾಗಾದರೆ ನಾವೇನು ಮಾಡಬಹುದು ಎಂಬ ಪ್ರಶ್ನೆಗೆ ಒಂದಷ್ಟು ಮುಂಜಾಗ್ರತಾ ಕ್ರಮಗಳು ಇಲ್ಲಿವೆ.

ಮಕ್ಕಳ ತಾಯಂದಿರು ಆಹಾರ ಅಥವಾ ಪಾನೀಯ ತಯಾರಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಮಗುವನ್ನು ಎತ್ತಿಕೊಳ್ಳುವಾಗ ಕೂಡ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೈಯ್ಯನ್ನು ಚೆನ್ನಾಗಿ ಸಾಬೂನಿನಿಂದ ತೊಳೆದಿರಬೇಕು. ಮಲ ವಿಸರ್ಜನೆ ಬಳಿಕ ಉಡುಪುಗಳನ್ನು ಬದಲಾಯಿಸುವಾಗ ಕೈಗಳನ್ನು ಚೆನ್ನಾಗಿ ತೊಳೆಯುವುದನ್ನು ಮರೆಯಬಾರದು. ಬಿಸಿಯಾಗಿದ್ದಾಗಲೇ ಆಹಾರ ಸೇವಿಸಬೇಕು, ಮಾರುಕಟ್ಟೆಯಲ್ಲಿ ತೆರೆದಿಟ್ಟು ಮಾರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಬಯಲಿನಲ್ಲಿ ಶೌಚಮಾಡದೆ ಶೌಚಾಲಯವನ್ನು ಬಳಸಬೇಕು. ಜತೆಗೆ ಸ್ವಚ್ಛಮಾಡಬೇಕು.

ಒಟ್ಟಾರೆ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡುವುದರೊಂದಿಗೆ ಒಂದಷ್ಟು ಎಚ್ಚರಿಕೆ ವಹಿಸಿದರೆ ಭೇದಿಯಿಂದ ಬಳಲುವುದನ್ನು ತಪ್ಪಿಸಲು ಸಾಧ್ಯವಿದೆ.