ಬೇಸಿಗೆಯಲ್ಲಿ ಆರೋಗ್ಯವಾಗಿರಲು ಏನೇನು ಮಾಡಬೇಕು ಗೊತ್ತಾ?

ಬೇಸಿಗೆಯಲ್ಲಿ ಆರೋಗ್ಯವಾಗಿರಲು ಏನೇನು ಮಾಡಬೇಕು ಗೊತ್ತಾ?

LK   ¦    Mar 15, 2019 02:32:08 PM (IST)
ಬೇಸಿಗೆಯಲ್ಲಿ ಆರೋಗ್ಯವಾಗಿರಲು ಏನೇನು ಮಾಡಬೇಕು ಗೊತ್ತಾ?

ಬೇಸಿಗೆಯ ಕಾವು ನಿಧಾನವಾಗಿ ಏರುತ್ತಾ ಹೋಗುತ್ತಿದೆ. ನೆತ್ತಿ ಸುಡುವ ಬಿಸಿಲಿಗೆ ಹೆದರಿ ಮನೆಯೊಳಗೆ ಕೂರುವಂತಿಲ್ಲ. ಪ್ರತಿಯೊಬ್ಬರೂ ದೈನಂದಿನ ಕೆಲಸವನ್ನು ಮನೆಯಿಂದ ಹೊರಗೆ ಹೋಗಿ ಮಾಡಲೇ ಬೇಕಾಗುತ್ತದೆ. ಅದರಲ್ಲೂ ಬಿಸಿಲಲ್ಲೇ ನಿಂತು ಕೆಲಸ ಮಾಡುವವರು, ಒಂದಷ್ಟು ಎಚ್ಚರಿಕೆ ಮತ್ತು ಮಾರ್ಗೋಪಾಯಗಳನ್ನು ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ.

ಇನ್ನು ಬೇಸಿಗೆಯ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ತೀವ್ರಗತಿಯಲ್ಲಿ ಹರಡುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಮತ್ತು ಸುತ್ತಮುತ್ತಲಿನ ಸ್ವಚ್ಛತೆಯತ್ತಲೂ ನಿಗಾ ವಹಿಸಬೇಕಿದೆ. ಬೇಸಿಗೆಯಲ್ಲಿ ಕಂಡು ಬರುವ ಆರೋಗ್ಯದ ಸಮಸ್ಯೆ ಮತ್ತು ಸಾಂಕ್ರಾಮಿಕ ರೋಗಗಳ ಕುರಿತಂತೆ ಆಯಾಯ ಜಿಲ್ಲೆಯ ಆರೋಗ್ಯಾಧಿಕಾರಿಗಳು ಬೇಸಿಗೆ ಕಾಲದಲ್ಲಿ ಧರಿಸಬೇಕಾದ ವಸ್ತ್ರ, ಆಹಾರ ಸೇವನೆ, ಇನ್ನಿತರ ಆರೋಗ್ಯಪೂರಕ ಸಲಹೆ ಸೂಚನೆಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದು, ಇದನ್ನು ಪಾಲಿಸಿದ್ದೇ ಆದರೆ ಒಂದಷ್ಟು ತೊಂದರೆಗಳನ್ನು ನಾವೇ ತಡೆಗಟ್ಟಲು ಸಾಧ್ಯವಿದೆ.

ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಬೇಕು. ಕೈಗೆಟುಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಆಗಿಂದಾಗ್ಗೆ ನಿಧಾನವಾಗಿ ಧಾರಾಳಾವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಬೇಕು. ಹಣ್ಣಿನ ರಸ, ಪಾನಕಗಳನ್ನು ಸೇವಿಸಬೇಕು. (ಕಾರ್ಬೊನೇಟೆಡ್ ಪಾನೀಯಗಳನ್ನು ವರ್ಜಿಸಿ ಕಾಫಿ, ಟೀ ಇತ್ಯಾದಿ ಆದಷ್ಟೂ ಕಡಿಮೆ ಕುಡಿಯಬೇಕು). ಹತ್ತಿಯ ನುಣುಪಾದ ಬಟ್ಟೆ, ಟಿಶ್ಯೂ ಕರವಸ್ತ್ರದಿಂದ ಬೆವರನ್ನು ಒರೆಸಬೇಕು. ನೀರು ಮಜ್ಜಿಗೆ, ಎಳನೀರು ಕುಡಿಯಬಹುದು. ಬೆಚ್ಚಗಿನ, ಮಸಾಲೆ ರಹಿತ, ಶುದ್ದ ಸಾತ್ವಿಕ ಆಹಾರ ಸೇವಿಸಬೇಕು. ಗಾಳಿಯಾಡುವಂತಿರುವ ಪಾದರಕ್ಷೆ ಧರಿಸಬೇಕು.

ಒಂದು ವೇಳೆ ಬಿಸಿಲಿನ ಝಳಕ್ಕೆ ಸಿಲುಕಿ ವ್ಯಕ್ತಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡ ಬಡಿಸಿದಲ್ಲಿ ಕೂಡಲೇ ಅವರನ್ನು ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿ, ಕೆಳಗೆ ಮಲಗಿಸಿ, ಕಾಲುಗಳನ್ನು ಮೇಲಕ್ಕೆತ್ತಿ ಅವರ ಹಣೆ, ಕತ್ತು, ಪಾದ ತೊಡೆಯ ಸಂದುಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. (ತಂಪಾದ ಅಥವಾ ಐಸ್ ನೀರಿನಿಂದ ಒರೆಸಬಾರದು) ಅವರಿಗೆ ನಿಧಾನವಾಗಿ ಸ್ವಲ್ಪ ಸಕ್ಕರೆ, ಉಪ್ಪು ಬೆರೆತ ನೀರನ್ನು ಕುಡಿಸಬೇಕು. ಆಘಾತಕ್ಕೊಳಗಾದ ವ್ಯಕ್ತಿಯ ಬಟ್ಟೆ, ಪಾದರಕ್ಷೆಗಳನ್ನು ಸಡಿಲಿಸಿ ತೆಗೆಯಬೇಕು. ತಂಪಾದ ನೆರಳಿರುವ ಜಾಗಕ್ಕೆ ಸ್ಥಳಾಂತರಿಸಿ ಗಾಳಿ ಬೀಸಬೇಕು. ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸುವುದು. ಯಾವುದೇ ಔಷಧ ನೀಡಬಾರದು. ದೇಹವನ್ನು ಅತಿಯಾಗಿ ತಕ್ಷಣ ತಂಪು ಮಾಡಬಾರದು. ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುಧ್ಧವಾದ ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇವಿಸಲು ನೀಡಬೇಕು.

ಇನ್ನು ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳಾದ ಜಾಂಡೀಸ್, ಪೋಲಿಯೋ, ಕಾಲರಾ, ಕರುಳುಬೇನೆ, ವಿಷಮ ಶೀತ ಜ್ವರ, ಆಮಶಂಕೆ, ಇಲಿಜ್ವರ, ಇತರೆ ಸೂಕ್ಷ್ಮಜೀವಿಗಳಿಂದ ಹರಡುವ ವಾಂತಿ-ಭೇದಿ ಪ್ರಕರಣಗಳು ಕಲುಷಿತ ನೀರು ಹಾಗೂ ಕಲುಷಿತ ಆಹಾರ ಸೇವನೆ ಮೂಲಕ ಹರಡುವ ಸಾಧ್ಯತೆ ಹೆಚ್ಚಿರುವ ಕಾರಣ ಈ ರೋಗವು ಹರಡದಂತೆ ಮುನ್ನಚ್ಚರಿಕೆ ವಹಿಸುವುದು ಅಗತ್ಯವಾಗಿರುತ್ತದೆ.

ಪ್ರತಿಯೊಬ್ಬರೂ ಕುದಿಸಿ, ಆರಿಸಿದ ನೀರನ್ನು ಕುಡಿಯಲು ಉಪಯೋಗಿಸಬೇಕು. ಬಿಸಿಯಾದ ಆಹಾರ ಪದಾರ್ಥಗಳನ್ನು ಉಪಯೋಗಿಸಬೇಕು. ಆಹಾರ ಪದಾರ್ಥಗಳನ್ನು ಮುಚ್ಚಿಡಬೇಕು. ರಸ್ತೆ ಬದಿಗಳಲ್ಲಿ, ಹೋಟೆಲ್‍ಗಳಲ್ಲಿ, ತೆರೆದಿಟ್ಟು ಮಾರುವ ಹಣ್ಣು ಹಂಪಲು ಹಾಗೂ ಆಹಾರ ಪದಾರ್ಥಗಳನ್ನು ಉಪಯೋಗಿಸಬಾರದು. ಹೋಟೆಲ್‍ಗಳಲ್ಲಿ ಕುಡಿಯಲು ಬಿಸಿ ನೀರನ್ನು ಕೇಳಿ ಪಡೆಯಬೇಕು. ಊಟಕ್ಕೆ ಮುಂಚಿತವಾಗಿ ಕೈಗಳನ್ನು ಶುಚಿಗೊಳಿಸಬೇಕು. ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡದೆ ಶೌಚಾಲಯವನ್ನು ಬಳಸಬೇಕು. ಮಲ ವಿಸರ್ಜನೆ ನಂತರ ಕೈಗಳನ್ನು ಸೋಪಿನಿಂದ ತೊಳೆಯಬೇಕು. ವಾಂತಿಭೇದಿ ಕಾಣಿಸಿಕೊಂಡರೆ ಅತಿಯಾಗಿ ನೀರು ಸೇವಿಸಬೇಕು ಅಥವಾ ಓಆರ್‍ಎಸ್ ಪಾನಕ ಸೇವಿಸಬೇಕು. ಮನೆಯ ಒಳಗೆ, ಹೊರಗಡೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಜ್ವರ, ಕಾಮಾಲೆ, ವಾಂತಿಭೇದಿ, ರಕ್ತದೊಂದಿಗೆ ಭೇದಿ ಆಗುವುದು, ಹೊಟ್ಟೆನೋವು ಮತ್ತು ಭೇದಿ ರೋಗಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಕಾಣುವುದು ಒಳ್ಳೆಯದು.