ದೇಹಕ್ಕೆ ಶಕ್ತಿ ನೀಡುವ ಆಹಾರ ಪದಾರ್ಥ ಕೂವೆ!

ದೇಹಕ್ಕೆ ಶಕ್ತಿ ನೀಡುವ ಆಹಾರ ಪದಾರ್ಥ ಕೂವೆ!

LK   ¦    Jan 25, 2021 01:14:56 PM (IST)
ದೇಹಕ್ಕೆ ಶಕ್ತಿ ನೀಡುವ ಆಹಾರ ಪದಾರ್ಥ ಕೂವೆ!

ಇತ್ತೀಚೆಗಿನ ಹೆಚ್ಚಿನ ಜನರಿಗೆ ಕೂವೆಯ ಬಗ್ಗೆ ತಿಳಿದಿಲ್ಲ ಎನ್ನಬಹುದು. ಹಿಂದಿನ ಕಾಲದಲ್ಲಿ ಕೂವೆ ಕೂಡ ಜನರ ಹೊಟ್ಟೆ ತಣಿಸುವ ಮತ್ತು ದೇಹಕ್ಕೆ ಬೇಕಾದ ವಿಟಮಿನ್ ಒದಗಿಸುವ ಪ್ರಮುಖ ಆಹಾರ ಪದಾರ್ಥವಾಗಿತ್ತು.

ಮಲೆನಾಡುಗಳಲ್ಲಿ ತಮ್ಮ ಮನೆಯ ಹಿತ್ತಲಲ್ಲಿ ಇದನ್ನು ಬೆಳೆಸುತ್ತಿದ್ದರಲ್ಲದೆ ಗೆಡ್ಡೆಯನ್ನು ಬೇಯಿಸಿ ತಿನ್ನುತ್ತಿದ್ದರು. ಸಿಹಿ ಗುಣದ ಇದು ಹಲವರಿಗೆ ಇಷ್ಟದ ತಿನಿಸಾಗಿತ್ತು. ಇವತ್ತಿಗೂ ಬಹಳಷ್ಟು ಮನೆಗಳ ಹಿತ್ತಲಲ್ಲಿ ಕಾಣಸಿಗುತ್ತದೆ.

ಹಿಂದೆ ಅನಾರೋಗ್ಯದ ಸಂದರ್ಭ ಕೂವೆಯನ್ನು ಔಷಧಿಯಾಗಿಯೂ, ಆಹಾರವಾಗಿಯೂ ನೀಡುತ್ತಿದ್ದರು. ಗೆಡ್ಡೆಗಳು ರುಚಿಯಾಗಿರುವುದರಿಂದ ಅದನ್ನು ತೊಳೆದು ನೀರಿನಲ್ಲಿ ಬೇಯಿಸಿ ತಿನ್ನುತ್ತಿದ್ದರು. ಇದು ಇತರೆ ಗೆಡ್ಡೆ ಗೆಣಸುಗಳಂತೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರಲಿಲ್ಲ. ಇದಕ್ಕೆ ಇದರಲ್ಲಿ  ಹಲವು ರೀತಿಯ ಔಷಧಿ ಗುಣಗಳೇ ಕಾರಣವಾಗಿದೆ.

ಇನ್ನು ಇದರಲ್ಲಿ ಏನೇನು ಪೌಷ್ಠಿಕಾಂಶಗಳಿವೆ ಎನ್ನುವುದನ್ನು ನೋಡುವುದಾದರೆ ಪಿಷ್ಠ, ಸಕ್ಕರೆ, ಮೇದಸ್ಸು, ಲವಣಗಳು ಸಾಕಷ್ಟು ಪ್ರಮಾಣದಲ್ಲಿದೆ. ಆಮಶಂಕೆ, ಉರಿಮೂತ್ರ, ಗೆನೋರಿಯಾ(ಶುಕ್ಲದೋಷ), ವಿಷಮ ಶೀತಜ್ವರ, ಅಲ್ಸರೇಶನ್, ಮೂಲವ್ಯಾಧಿ, ಜಠರಾಮ್ಲ ಮುಂತಾದ ಕಾಯಿಲೆಯಿಂದ ಬಳಲುವವರು ಬಾರ್ಲಿ ನೀರಿನಂತೆಯೇ ಇದನ್ನು ಸೇವಿಸಬಹುದು. ಅಥವಾ ಗಂಜಿ ಮಾಡಿ ಅದಕ್ಕೆ ಹಾಲು, ಸಕ್ಕರೆ, ಸೇರಿಸಿ ಊಟದ ಸಮಯದಲ್ಲಿ ರೋಗಿಗೂ ನೀಡಬಹುದಾಗಿದೆ.

ಏಲಕ್ಕಿಯೊಂದಿಗೆ ಮಿಶ್ರ ಮಾಡಿದ ಕೂವೆಯ ಪಾನೀಯ ಸೇವಿಸುವುದರಿಂದ ಹೊಟ್ಟೆಯನ್ನು ತಂಪಾಗಿಸುವುದಲ್ಲದೆ, ಆಹಾರದಂತೆಯೂ ವರ್ತಿಸುವುದು. ದೇಹದ ಉಷ್ಣತೆಯನ್ನು ಶಮನಗೊಳಿಸುವುದು. ಗೋಡಂಬಿ, ಏಲಕ್ಕಿ, ದ್ರಾಕ್ಷಿ ಹಾಕಿ ತಯಾರಿಸಿದ ಹಲ್ವಾ ಬಹಳ ರುಚಿಯಾಗಿರುತ್ತದೆ. ಇದನ್ನು ಮಕ್ಕಳಿಂದ ಮುದಕರವರೆಗೂ ಸೇವಿಸಬಹುದು. ಗೆಡ್ಡೆಯಿಂದ ಹಿಟ್ಟನ್ನು ಬೇರ್ಪಡಿಸುವ ಸಂದರ್ಭ ಉಳಿಯುವ ಜಿಗುಟನ್ನು ಗೊಬ್ಬರವಾಗಿಯೂ ಉಪಯೋಗಿಸಬಹುದು.

ಇನ್ನು ಕೂವೆ ಬಗ್ಗೆ ಹೇಳಬೇಕೆಂದರೆ ಇದು ಮಲೆನಾಡಿನ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಾಗಿದ್ದು, ಇದನ್ನು ಆಂಗ್ಲ ಭಾಷೆಯಲ್ಲಿ ಕರಕ್ಯೂಮ್ ಸ್ಟಾರ್ಚ್ ಅಥವಾ ಆರಾರೂಟ್ ಎಂದು ಕರೆಯುತ್ತಾರೆ. ಗಿಡಗಳು ಅರಶಿನ  ಗಿಡದಂತಿದ್ದರೆ, ಗೆಡ್ಡೆಗಳು ಶುಂಠಿಯನ್ನು ಹೋಲುತ್ತವೆ.

ಕೂವೆಯನ್ನು ಮುಖ್ಯ ಬೆಳೆಯಾಗಿ ಬೆಳೆಯದಿದ್ದರೂ ಹಳ್ಳಿ ಪ್ರದೇಶದಲ್ಲಿ ಇತರ ಬೆಳೆಗಳ ನಡುವೆ ಮಿಶ್ರ ಬೆಳೆಯಾಗಿ ಬೆಳೆಯುವುದು ಕಂಡು ಬರುತ್ತದೆ. ಹಿಮಾಲಯ ಹಾಗೂ ಕರಾವಳಿ ಪ್ರದೇಶಗಳಲ್ಲಿ ಕೂವೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ.

ಹೆಚ್ಚು ಮಳೆ ಬೀಳುವ, ಉಷ್ಣತೆಯನ್ನೊಳಗೊಂಡ ಜೌಗು ಮಿಶ್ರಿತ ಮಣ್ಣಿನಲ್ಲಿ ಕೂವೆಯು ಚೆನ್ನಾಗಿ ಬೆಳೆಯುತ್ತದೆ. ನಾಟಿಗೆ  ಮೊದಲು ಗೆಡ್ಡೆಗಳ ಮೇಲೆ ಮೂಡಿ ಬರುವ ಮೊಳಕೆ ಕಣ್ಣುಗಳನ್ನು ಬೇರ್ಪಡಿಸಿಕೊಂಡು ಅವುಗಳನ್ನು ನೀರಿನಾಂಶವಿರುವ ಮಣ್ಣಿನಲ್ಲಿ ಊರಿ ಸಸಿ ತಯಾರಿಸಿಕೊಳ್ಳಬೇಕು. ಆ ನಂತರ 15ರಿಂದ20 ಅಡಿಗಳ ಸಾಲುಗಳನ್ನು ಮಾಡಿ ಅದಕ್ಕೆ ಗೊಬ್ಬರ ಹಾಕಿ ಮಣ್ಣು ಸೇರಿಸಬೇಕು.  ಗಿಡವು ಚೆನ್ನಾಗಿ ಬೆಳೆದು 2-3 ತಿಂಗಳಲ್ಲಿ ಹೂವು ಬಿಡುತ್ತದೆ. ನಂತರ ಮಳೆ ದೂರವಾಗುತ್ತಿದ್ದಂತೆಯೇ ಗಿಡದ ಎಲೆಗಳು ಒಣಗಿ ಹೋಗುವುದು. ಈ ಸಂದರ್ಭದಲ್ಲಿ ಗಿಡವನ್ನು ಕಿತ್ತು ಗೆಡ್ಡೆಗಳನ್ನು ಬೇರ್ಪಡಿಸಬೇಕು. ಸಾಮಾನ್ಯವಾಗಿ ಈ ಕೆಲಸಗಳನ್ನು ಜನವರಿ ತಿಂಗಳಲ್ಲಿಯೇ ಮಾಡಬೇಕಾಗುತ್ತದೆ.

ಗೆಡ್ಡೆಗಳನ್ನು ಗಿಡದಿಂದ ಬೇರ್ಪಡಿಸುವ ಸಂದರ್ಭ ಗೆಡ್ಡೆಗಳಲ್ಲಿರುವ ಮೊಳಕೆ ಕಣ್ಣುಗಳನ್ನು ಒಂದೆಡೆ ರಾಶಿ ಹಾಕಿಟ್ಟುಕೊಂಡಿದ್ದೇ ಆದರೆ ಮುಂದಿನ ವರ್ಷಕ್ಕೆ ಅವುಗಳಿಂದ ಸಸಿ ತಯಾರಿಸಲು ಅನುಕೂಲವಾಗುವುದು. ಗೆಡ್ಡೆಗಳನ್ನು ಪ್ರತಿವರ್ಷ ಕೀಳುವ ಅಗತ್ಯವಿಲ್ಲ. ಬೇಸಿಗೆಯಲ್ಲಿ ಗಿಡ ಒಣಗಿದರೂ ಗೆಡ್ಡೆಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಮಳೆ ಬಿದ್ದೊಡನೆಯೇ ಮತ್ತೆ ಗೆಡ್ಡೆಯಿಂದ ಮೊಳಕೆಯೊಡೆದು ಚಿಗುರಿ ಬಲಿಷ್ಠವಾಗಿ ಬೆಳೆಯುವುದು. ಎರಡು ವರ್ಷಗಳ ಕಾಲದ ಗೆಡ್ಡೆಗಳಲ್ಲಿ ಆಹಾರವು ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾಗುವುದರಿಂದ ಇದನ್ನು ಉಪಯೋಗಿಸುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು.

ಎರಡು ರೀತಿಯ ಪದ್ಧತಿಯನ್ನು ಅನುಸರಿಸುವುದರ ಮೂಲಕ ಕೂವೆ ಗೆಡ್ಡೆಯಿಂದ ಹಿಟ್ಟನ್ನು ಪಡೆಯಬಹುದು. ಬಲಿತ ಕೂವೆಗೆಡ್ಡೆಗಳನ್ನು ತೊಳೆದು ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ ಆ ನಂತರ ಈ ಚೂರುಗಳನ್ನು ರುಬ್ಬಿ ತೆಗೆದು ಮಿಶ್ರಣವನ್ನು ನೀರಿನಲ್ಲಿ ಬೆರೆಸಿ ಬಟ್ಟೆಯಲ್ಲಿ ಹಾಕಿ ಸೋಸಬೇಕು. ಸೋಸಿ ಉಳಿದ ಜಿಗುಟನ್ನು ಚೆನ್ನಾಗಿ ಹಿಂಡಿ ಹಿಟ್ಟಿನ ದ್ರಾವಣವನ್ನು ಹಲವು ಗಂಟೆಗಳ ಕಾಲ ಇಡಬೇಕು. ಹೀಗೆ ಇಟ್ಟಾಗ ಅಡಿಯಲ್ಲಿ ಹಿಟ್ಟು ನಿಲ್ಲುತ್ತದೆ. ಹಿಟ್ಟಿನ ಮೇಲೆ ನಿಂತ ತಿಳಿ ನೀರನ್ನು ಬಸಿದು ತೆಗೆದು ಈ ಹಿಟ್ಟಿನ  ಮಿಶ್ರಣಕ್ಕೆ ಮತ್ತೆ ಮೂರ್ನಾಲ್ಕು ಬಾರಿ ಹೊಸ ನೀರನ್ನು ಹಾಕಿ ಬಸಿಯುವುದರ ಮೂಲಕ ಕಲ್ಮಶಗಳು ಸಂಪೂರ್ಣವಾಗಿ ಹೋದ ಬಳಿಕ ಹಿಟ್ಟನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಡಬ್ಬಿಯಲ್ಲಿ ತುಂಬಿಸಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಹೆಚ್ಚಿನವರು ಗೆಡ್ಡೆಯನ್ನು ಬೇಯಿಸಿ ಸೇವಿಸುತ್ತಾರೆ.