ಮಾನಸಿಕ ಆರೋಗ್ಯ ಹದಗೆಡದಂತೆ ನೋಡಿಕೊಳ್ಳೋದು ಹೇಗೆ?

ಮಾನಸಿಕ ಆರೋಗ್ಯ ಹದಗೆಡದಂತೆ ನೋಡಿಕೊಳ್ಳೋದು ಹೇಗೆ?

LK   ¦    Aug 08, 2019 03:21:29 PM (IST)
ಮಾನಸಿಕ ಆರೋಗ್ಯ ಹದಗೆಡದಂತೆ ನೋಡಿಕೊಳ್ಳೋದು ಹೇಗೆ?

ಆರೋಗ್ಯ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ. ಅದು ಮಾನಸಿಕವಾಗಿಯೂ ಇರಬೇಕು. ಇಲ್ಲದೆ ಹೋದರೆ ತೊಂದರೆ ತಪ್ಪಿದಲ್ಲ. ದೈಹಿಕ ಆರೋಗ್ಯ ಹದಗೆಟ್ಟರೆ ಅದರಿಂದ ಕೇವಲ ನಮಗೆ ಮಾತ್ರ ತೊಂದರೆಯಾಗುತ್ತದೆ. ಆದರೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಅದರಿಂದ ಹತ್ತಾರು ಸಮಸ್ಯೆಗಳನ್ನು ನಾವು ಮತ್ತು ನಮ್ಮ ಸುತ್ತಮುತ್ತಲಿನವರು ಎದುರಿಸಬೇಕಾಗುತ್ತದೆ.

ಇವತ್ತಿನ ಆಹಾರ ಪದಾರ್ಥಗಳು ಆರೋಗ್ಯಕ್ಕಿಂತ ಅನಾರೋಗ್ಯವನ್ನೇ ಹೆಚ್ಚಿಸುತ್ತಿದ್ದರೆ, ಕೆಲಸ ಕಾರ್ಯಗಳ ಒತ್ತಡಗಳು ಮಾನಸಿಕವಾಗಿ ಜರ್ಝರಿತರಾಗುವಂತೆ ಮಾಡುತ್ತಿವೆ. ಒಟ್ಟಿನಲ್ಲಿ ಬಹಳಷ್ಟು ಜನರು ತಮಗೆ ಗೊತ್ತಿಲ್ಲದಂತೆ ದೈಹಿಕ ಮತ್ತು ಮಾನಸಿಕ ಎರಡು ಆರೋಗ್ಯವನ್ನು ಕಳೆದುಕೊಳ್ಳುತ್ತಿರುವುದು ಸುಳ್ಳೇನಲ್ಲ.

ಇದಕ್ಕೆ ಮುಖ್ಯ ಕಾರಣ ನಮ್ಮ ಲೈಫ್ ಸ್ಟೈಲ್ ಎಂದರೂ ತಪ್ಪಾಗಲ್ಲ. ಆಧುನಿಕತೆಯ ಭರದಲ್ಲಿ ನಾವು ನಾಗಾಲೋಟದಲ್ಲಿ ಓಡುತ್ತಿದ್ದೇವೆ. ನಮಗೆ ಸಾಕು ಎಂಬ ತೃಪ್ತಿಯಿಲ್ಲ. ನೆಮ್ಮದಿಯೂ ಬೇಕಾಗಿಲ್ಲ. ಏನಾದರೊಂದು ಮಾಡಬೇಕು. ಅದರಿಂದ ಒಂದಷ್ಟು ಹಣವನ್ನು ಸಂಪಾದಿಸಬೇಕು. ಎಲ್ಲರಂತೆ ನಾನು ಕೂಡ ಬಂಗಲೆ ಕಟ್ಟಿಸಬೇಕು, ಮನೆ ಮುಂದೆ ವಾಹಗಳನ್ನು ನಿಲ್ಲಿಸಬೇಕು, ನಾನು ಯಾರಿಗೂ ಕಡಿಮೆಯಾಗಿರಬಾರದು ಎಂಬ ತೋರಿಕೆಯ ಸಿರಿತನದ ಚಕ್ರವ್ಯೂಹದಲ್ಲಿ ಸಿಲುಕಿ ತಮಗೆ ಸಹಿಸಿಕೊಳ್ಳಲಾರದ ಭಾರಗಳನ್ನು ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಹಿರಿಯ ಮಾತನ್ನು ಬದಿಗೊತ್ತಿ ಹೊರುತ್ತಿದ್ದೇವೆ.

ಹಿಂದಿನ ಕಾಲದವರ ಜೀವನ ಕ್ರಮಗಳು ಹೀಗಿರಲಿಲ್ಲ. ಅವರ ಪರಿಮಿತಿಯಲ್ಲಿಯೇ ನಡೆಸುತ್ತಿದ್ದರು. ಸಾಲ ಮಾಡದೆ ಬದುಕುವುದನ್ನು ರೂಢಿಸಿಕೊಂಡಿದ್ದರು. ಸಾಲ ಇಲ್ಲದವರೇ ಶ್ರೀಮಂತರು ಎಂಬ ನಂಬಿಕೆ ಹೊಂದಿದ್ದರು. ಹೀಗಾಗಿ ಬೇರೆಯವರು ಹೇಗಿದ್ದಾರೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಅವರ ಬಗ್ಗೆ ಅಸೂಯೆ ಪಡದೆ ತಮ್ಮದೇ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ಈಗ ಹಾಗಿಲ್ಲ. ಪಕ್ಕದವನಿಗಿಂತ ತಾನು ಕಡಿಮೆಯಿಲ್ಲದ ಜೀವನ ನಡೆಸಬೇಕೆಂಬ ಹುಚ್ಚುತನ ಸಾಲಗಾರನಾಗಿ ಮಾಡುತ್ತಿದೆ. ಆಡಂಬರದ ಬದುಕು ಎಲ್ಲೋ ಒಂದು ಕಡೆ ಮಾನಸಿಕ ನೆಮ್ಮದಿಯನ್ನು ಕೊಂದು ಹಾಕುತ್ತಿದೆ. ಇಲ್ಲಿ ನಾವೇ ಸಮಸ್ಯೆಗಳನ್ನು ಎಳೆದುಕೊಂಡು ಅದರಿಂದ ಹೊರಬರಲಾರದೆ ತೊಳಲಾಡುತ್ತಿದ್ದೇವೆ.

ನಮ್ಮ ಕೆಲಸಗಳು ಅಷ್ಟೆ. ಅವು ತಿಂಗಳಾಂತ್ಯಕ್ಕೆ ಸಂಬಳ ಕೊಡಬಹುದು ಆದರೆ ಭದ್ರತೆ ನೀಡಲಾರವು. ನಮ್ಮ ಕೌಶಲ, ಪ್ರತಿಭೆ, ಶ್ರಮ ಎಲ್ಲವನ್ನೂ ಅಲ್ಲಿ ಧಾರೆ ಎರೆಯಲೇ ಬೇಕು ಹಾಗಿದ್ದರೆ ಮಾತ್ರ ಐದಂಕಿ ಸಂಬಳಕೊಡುವ ಸಂಸ್ಥೆ ನಮ್ಮನ್ನು ಉಳಿಸಿಕೊಳ್ಳುತ್ತದೆ. ಹಾಗಾಗಿ ಪ್ರತಿಕ್ಷಣವೂ ಹೋರಾಡುತ್ತಾ ಕೆಲಸ ಮಾಡಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. ಕೆಲವೊಮ್ಮೆ ನಮ್ಮ ಕೆಲಸದ ಒತ್ತಡ ದೇಹದ ಮೇಲೆ ಬಿದ್ದರೆ ಅದಕ್ಕೆ ವಿಶ್ರಾಂತಿ ಪಡೆದುಕೊಂಡು ಮುಂದುವರೆಸಬಹುದು ಆದರೆ ಮನಸ್ಸಿನ ಮೇಲೆ ಬಿದ್ದರೆ ಅದಕ್ಕೆ ವಿಶ್ರಾಂತಿ ನೀಡಿದರೂ ಪ್ರಯೋಜನವಾಗಲಾರದು.

ನಾವು ಮಾಡುವ ಕೆಲಸಗಳು ಮಾನಸಿಕವಾಗಿ ಹೊರೆ ಎನಿಸಿಕೊಂಡಿದ್ದೇ ಆದರೆ ಅದರಿಂದ ಅಪಾಯವೇ ಜಾಸ್ತಿ. ಕೆಲಸಗಳು ಇಷ್ಟಪಟ್ಟು ಮಾಡುವಂತಿರಬೇಕು. ಅವು ಹೊರೆಯಾಗಿ ಕಾಣುತ್ತಾ ಹೋದಂತೆ ಅದರ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ. ಜತೆಗೆ ನಮಗೆ ಗೊತ್ತಿಲ್ಲದಂತೆ ಅದರ ಮೇಲೆ ದ್ವೇಷ ಬೆಳೆಯುತ್ತಾ ಹೋಗುತ್ತದೆ. ಇದರ ಪರಿಣಾಮ ಮಾನಸಿಕ ಆರೋಗ್ಯ ಹದಗೆಟ್ಟು ಹೆಂಡತಿ, ಮಕ್ಕಳು ಸಹದ್ಯೋಗಿಗಳ ಮೇಲೆ ಸಿಡುಕುತ್ತೇವೆ. ಅನಾವಶ್ಯಕ ಕೋಪ ಮಾಡಿಕೊಳ್ಳುತ್ತೇವೆ.

ಮನೋಶಾಸ್ತ್ರಜ್ಞರು ಹೇಳುವಂತೆ ಒಬ್ಬ ಮನುಷ್ಯನಿಗೆ ಕೆಲವೊಮ್ಮೆ ಎಲ್ಲ ವಿಚಾರಗಳನ್ನು ತಲೆಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲವಂತೆ. ಮೆದುಳಿನಲ್ಲಿ ಶೇಖರಣೆಯಾಗುವ ಅಸಂಖ್ಯ ವಿಷಯಗಳನ್ನು ಮೆದುಳು ಹೊರ ಹಾಕಲು ಸದಾ ಯತ್ನಿಸುತ್ತದೆ. ಮರೆವು ಎನ್ನುವುದು ಒಂದು ರೀತಿಯ ಮೆದುಳಿನ ಡಿಫೆನ್ಸಿವ್ ಮೆಕಾನಿಸಮ್‍ನಂತೆ. ಇಲ್ಲಿ ಮರೆವು ಚಿಕ್ಕ ಚಿಕ್ಕ ವಿಷಯಗಳಿಗಾಗಿಯೇ ಆಗುತ್ತಿದ್ದರೂ ಅದು ತರುವ ಆವೇಶ, ಉದ್ರೇಕ, ಭಯ ನಮ್ಮ ಮೇಲೆ ಪರಿಣಾಮ ಬೀರುತ್ತದೆ.

ಒತ್ತಡದಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು ಮರೆಯುತ್ತೇವೆ. ಹೊಟ್ಟೆ ಹಸಿವಿನ ಮೂಲಕ ನೆನಪಿಸಿದರೂ ಕೆಲಸದ ಒತ್ತಡದಲ್ಲಿ ಅದನ್ನು ಮತ್ತೆ ಮಾಡಿದರಾಯಿತೆಂದು ಮುಂದೂಡುತ್ತೇವೆ. ನೂರೆಂಟು ವ್ಯವಹಾರಗಳಿಂದ ಯೋಚನೆಗಳೇ ಜಾಸ್ತಿಯಾಗಿ ನಿದ್ದೆ ಕಡಿಮೆಯಾಗುತ್ತದೆ. ಇದರಿಂದ ಕ್ರಿಯಾಶೀಲತೆ ಸತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸದಾ ಸುಸ್ತು ಕಾಡುತ್ತದೆ.

ಹಾಗಾದರೆ ಒತ್ತಡದ ಬದುಕಿನಲ್ಲಿ ನಾವು ಮಾಡಿಕೊಂಡಿರುವ ಯಡವಟ್ಟುಗಳಿಗೆ ಪರಿಹಾರ ಇಲ್ಲವೆ? ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಮೂಡುವುದು ಸಹಜ ಅದಕ್ಕೆ ಮನಶಾಸ್ತ್ರಜ್ಞರು ಒಂದಷ್ಟು ಸಲಹೆಗಳನ್ನು ನಮ್ಮ ಮುಂದಿಡುತ್ತಾರೆ.

ಸಾಮಾನ್ಯವಾಗಿ ಒತ್ತಡ ಉಂಟು ಮಾಡುವ ಕಾರಣಗಳಲ್ಲಿ ಹೆಚ್ಚಿನವು ಜೀವನ ಶೈಲಿಗೆ ಸಂಬಂಧಿಸಿದ್ದಾಗಿರುವುದರಿಂದ ನಾವು ಮಾಡುವ ಕೆಲಸದಲ್ಲಿ ನಮಗೆ ಆನಂದ ಸಿಗುತ್ತಿದೆಯೇ ಎಂದು ಯೋಚಿಸಬೇಕು. ಏಕೆಂದರೆ ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಅನಿವಾರ್ಯ ಪರಿಸ್ಥಿತಿಯಿಂದ ಮಾಡಲೇ ಬೇಕಾಗುತ್ತದೆ. ಮೊದಲು ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಇದರಿಂದ ಮಾಡುವ ಕೆಲಸದಲ್ಲಿ ಸ್ವಲ್ಪ ಆನಂದ ಸಿಕ್ಕಿದರೂ ಅದು ಸಾಕಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ. ನಮಗೆಂದೇ ಒಂದಷ್ಟು ಸಮಯವನ್ನು ಕಾಯ್ದಿರಿಸಿಕೊಳೋಣ. ಆ ಸಂದರ್ಭದಲ್ಲಿ ಕೆಲಸದ ಬಗ್ಗೆ ಯೋಚಿಸೋಣ ಆಗ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಏನಾದರೊಂದು ಪರಿಹಾರ ನಮ್ಮಲ್ಲೇ ಸಿಗುವ ಸಾಧ್ಯತೆಯಿರುತ್ತದೆ.

ಕೆಲವು ಸಮಸ್ಯೆಗಳನ್ನು ಆತ್ಮೀಯರೊಂದಿಗೆ ಹೇಳಿಕೊಳ್ಳುವ ಮೂಲಕ ಅವರಿಂದಲೂ ಸಲಹೆ ಪಡೆಯಬಹುದು. ಆದರೆ ಆಗಲೂ ಎಚ್ಚರವಾಗಿರಬೇಕು. ತೀರಾ ವೈಯಕ್ತಿಕ ವಿಚಾರವಾದರೆ ಕೇಳುವ ವ್ಯಕ್ತಿ ನಂಬಿಕಸ್ಥನಾಗಿರಬೇಕು. ಇಲ್ಲದೆ ಹೋದರೆ ಸಮಸ್ಯೆ ಹೇಳಿ ಮತ್ತಷ್ಟು ಸಮಸ್ಯೆ ಮೈಮೇಲೆ ಎಳೆದುಕೊಳ್ಳುವ ಸನ್ನಿವೇಶ ಸೃಷ್ಠಿಯಾಗಬಹುದು. ಚರ್ಚಿಸುವಾಗ, ಅಥವಾ ಮಾತನಾಡುವಾಗ ತೀರಾ ಖಾಸಗಿ ವಿಚಾರಗಳು ನಮ್ಮ ಬಳಿಯೇ ಇರಲಿ. ಕೆಲವೊಮ್ಮೆ ಹೇಳಿ ಹಗುರವಾದರೂ ಅದು ಬೇರೆಯದ್ದೇ ಪರಿಣಾಮ ಬೀರಬಹುದು.

ಏನೇನೋ ಮಾತನಾಡಿ ಮನನೋಯಿಸುವ ಅಥವಾ ವಿವಾದಕ್ಕೆ ಗುರಿಯಾಗದಂತೆ ನೋಡಿಕೊಳ್ಳುವ ಜಾಣ್ಮೆ ನಮ್ಮಲಿರಬೇಕು. ಗಾಳಿ ಸುದ್ದಿಯನ್ನು ನಿಜವೆಂಬಂತೆ ಮಾತನಾಡುವುದನ್ನು ಬಿಟ್ಟು ಬಿಡಬೇಕು.

ಅವತ್ತಿನ ಕೆಲಸವನ್ನು ಅವತ್ತೆ ಮಾಡಿದರೆ ಒಳ್ಳೆಯದು. ಮುಂದೂಡಿದರೆ ಎಲ್ಲವನ್ನೂ ಒಟ್ಟಿಗೆ ಮುಗಿಸಬೇಕಾದ ಅನಿವಾರ್ಯತೆಯಿಂದ ಒತ್ತಡ ಹೆಚ್ಚಾಗುತ್ತದೆ. ಯಾವುದೇ ಕೆಲಸ ಮಾಡಬೇಕಾದರೂ ಅದಕ್ಕೊಂದು ಪೂರ್ವಭಾವಿ ಸಿದ್ಧತೆಯಿದ್ದು ಅವರಂತೆ ಮಾಡಿದರೆ ಒಳ್ಳೆಯಾಗುತ್ತದೆ. ಮೋಜು ಮಸ್ತಿ, ಪಾರ್ಟಿಗಳಿಂದ ದೂರವಿದ್ದರೆ ಉತ್ತಮ. ಮದ್ಯ, ಧೂಮಪಾನ, ತಂಬಾಕು ಸೇವನೆಯಂತಹ ದುಶ್ಚಟಗಳು ತಕ್ಷಣಕ್ಕೆ ರಿಲ್ಯಾಕ್ಸ್ ನೀಡಿದರೂ ಅವುಗಳಿಂದ ಒಳ್ಳೆಯದಾಗಲ್ಲ ಎಂಬುದನ್ನು ಸದಾ ನೆನಪಿಟ್ಟುಕೊಳ್ಳಬೇಕು. ನಮ್ಮ ಒತ್ತಡವನ್ನು ಬೇರೆಯವರ ಮೇಲೆ ಹೇರಿ ಕಡಿಮೆ ಮಾಡಿಕೊಳ್ಳುತ್ತೇವೆ ಎನ್ನುವುದು ಒಳ್ಳೆಯದಲ್ಲ. ಅದನ್ನು ಎಂದಿಗೂ ಮಾಡಬಾರದು.