ಕೂದಲಿಗೆ ಮೊಸರು ಬಳಸುವುದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?

ಕೂದಲಿಗೆ ಮೊಸರು ಬಳಸುವುದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?

LK   ¦    Jul 17, 2018 04:57:06 PM (IST)
ಕೂದಲಿಗೆ ಮೊಸರು ಬಳಸುವುದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?

ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮೊಸರು ಸಹಕಾರಿಯಾಗಿದ್ದು ಇದನ್ನು ಕೂದಲು ಕಾಪಾಡಿಕೊಳ್ಳಲು ಸೊಂಪಾಗಿ ಬೆಳಸಲು ಉಪಯೋಗಿಸಬಹುದಾಗಿದೆ. ಬಹಳಷ್ಟು ಮಂದಿ ಮೊಸರನ್ನು ಕೂದಲಿಗೆ ಬಳಸಲು ಹಿಂಜರಿಯುತ್ತಾರೆ. ಆದರೆ ಇದರಿಂದ ಹಲವು ಉಪಯೋಗವಿದೆ ಎಂಬುದು ಬಳಸಿದವರಿಗಷ್ಟೆ ಗೊತ್ತಾಗುತ್ತದೆ.

ಇದರಲ್ಲಿ ಲ್ಯಾಕ್ಟಿಕ್ ಮತ್ತು ಸಿಟ್ರಿಕ್ ಆಮ್ಲಗಳು ಅಧಿಕವಾಗಿರುತ್ತವೆ. ಹೀಗಾಗಿ ಅರ್ಧಬಟ್ಟಲು ಮೊಸರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕಲಸಿ 5 ನಿಮಿಷ ಬಿಟ್ಟು ತಲೆ ಮತ್ತು ಕೂದಲಿನ ಬುಡಕ್ಕೆ ಲೇಪಿಸಿ 10 ರಿಂದ 15 ನಿಮಿಷಗಳ ನಂತರ ಶ್ಯಾಂಪುವಿನಿಂದ ತೊಳೆದರೆ ತಲೆಹೊಟ್ಟು ನಿವಾರಣೆಯಾಗುತ್ತದೆ. ಜತೆಗೆ ತಲೆ ಉರಿಯೂತವನ್ನು ತಡೆಗಟ್ಟುತ್ತದೆ.

ಒಂದು ಬಟ್ಟಲು ಮೊಸರಿಗೆ ಎರಡು ಚಮಚದಷ್ಟು ಬಾದಾಮಿ ಎಣ್ಣೆ ಹಾಗೂ ಒಂದು ಮೊಟ್ಟೆಯೊಳಗಿರುವ ಬಿಳಿಯ ಲೋಳೆಯನ್ನು ಹಾಕಿ ಚೆನ್ನಾಗಿ ಕಲಸಿ ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಂಡು ಸುಮಾರು 30 ನಿಮಿಷಗಳ ನಂತರ ಉತ್ತಮ ಗುಣಮಟ್ಟದ ಶ್ಯಾಂಪೂವಿನಿಂದ ಶುಚಿಗೊಳಿಸುವುದರಿಂದ ಕೂದಲಿನ ಬುಡವನ್ನು ಗಟ್ಟಿಗೊಳಿಸುವುದಲ್ಲದೇ, ಕೂದಲು ಸೊಂಪಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ.

ಇನ್ನು ಕಹಿ ಬೇವಿನ ಸೊಪ್ಪನ್ನು ಅರೆದು ಮೊಸರಿನ ಜೊತೆ ಮಿಶ್ರಣ ಮಾಡಿ ತಲೆಕೂದಲಿಗೆ ಹಚ್ಚಿ ಎರಡು ತಾಸಿನ ನಂತರ ಉಗುರು ಬೆಚ್ಚಗಿನ ಬಿಸಿ ನೀರಿನಲ್ಲಿ ತೊಳೆಯುತ್ತಾ ಬಂದರೆ ಕೂದಲಿನ ಹೊಳಪು ಹೆಚ್ಚುತ್ತದೆ.

ಈರುಳ್ಳಿ ರಸವನ್ನು ಮೊಸರಿನ ಜೊತೆ ಬೆರಸಿ ತಲೆಗೆ ಲೇಪಿಸಿಕೊಂಡು ಒಂದು ಗಂಟೆಯ ನಂತರ ತಲೆ ಕೂದಲನ್ನು ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

ಮೆಂತ್ಯಕಾಳುಗಳನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಮೊಸರಿನ ಜೊತೆ ಮಿಶ್ರಣ ಮಾಡಿ ಅರ್ಧ ಗಂಟೆಯವರೆಗೆ ನೆನೆಯಲು ಬಿಟ್ಟು ನಂತರ ಕೂದಲಿಗೆ ಹಚ್ಚಿ 20 ನಿಮಿಷಗಳ ತರುವಾಯ ತೊಳೆದರೆ ಕೂದಲು ಊದುರುವುದು ನಿಲ್ಲುತ್ತದೆ. ಬಿಳಿ ಅಥವಾ ಕೆಂಪು ದಾಸವಾಳ ಸೊಪ್ಪಿನ ಎಲೆಗಳು, ಕರಿಬೇವಿನ ಎಲೆಗಳು ಹಾಗೂ ರಾತ್ರಿ ನೆನೆಸಿಟ್ಟ ಮೆಂತ್ಯಕಾಳುಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ಒಂದು ಬಟ್ಟಲು ಮೊಸರಿನ ಜೊತೆ ಮಿಶ್ರಣ ಮಾಡಿ ಕೂದಲಿನ ಬುಡ ಹಾಗೂ ಕೂದಲಿಗೆ ಲೇಪಿಸಿ ಸುಮಾರು 2 ಗಂಟೆಗಳ ತರುವಾಯ ಉತ್ತಮ ಶ್ಯಾಂಪುವಿನಿಂದ ತೊಳೆದರೆ ಕೂದಲಿಗೆ ಹೊಳಪು ಬರುತ್ತದೆ. ಬಾಳೆಹಣ್ಣನ್ನು ಮೊಸರಿಗೆ ಹಾಕಿ ಮಿಶ್ರಮಾಡಿ 10 ನಿಮಿಷ ಬಿಟ್ಟು ತಲೆಗೆ ಹಚ್ಚಿಕೊಂಡು 15 ನಿಮಿಷಗಳ ತರುವಾಯ ಹದವಾದ ಬಿಸಿ ನೀರಿನಿಂದ ತಲೆಯನ್ನು ತೊಳೆದರೆ ಕೂದಲ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಕೂದಲು ಒಣಗಿನಂತೆ ಕಾಣುತ್ತಾ ಅಸಹ್ಯ ಮೂಡಿಸುತ್ತಿದ್ದರೆ ಮೊಸರಿನ ಜೊತೆ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು 10 ನಿಮಿಷಗಳ ಕಾಲ ಮಸಾಜ್ ಮಾಡಿ 30 ರಿಂದ 40 ನಿಮಿಷ ಬಿಟ್ಟು ಸ್ನಾನ ಮಾಡಿದರೆ ಹೊಳಪು ಬರಲು ಸಾಧ್ಯವಿದೆ ಇದನ್ನು ಆಗಾಗ್ಗೆ ಮಾಡುತ್ತಾ ಬಂದರೆ ಕೂದಲು ಮೃದುವಾಗಿ ಹೊಳೆಯುತ್ತದೆ