ತಾಜಾ ಕೊತ್ತಂಬರಿ ಸೊಪ್ಪು ಬಳಸಿ ಆರೋಗ್ಯ ವೃದ್ಧಿಸಿ

ತಾಜಾ ಕೊತ್ತಂಬರಿ ಸೊಪ್ಪು ಬಳಸಿ ಆರೋಗ್ಯ ವೃದ್ಧಿಸಿ

LK   ¦    Sep 17, 2020 02:06:31 PM (IST)
ತಾಜಾ ಕೊತ್ತಂಬರಿ ಸೊಪ್ಪು ಬಳಸಿ ಆರೋಗ್ಯ ವೃದ್ಧಿಸಿ

ನಾವು ದಿನನಿತ್ಯ ತಯಾರಿಸುವ ಆಹಾರ ಪದಾರ್ಥಗಳಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸುತ್ತಲೇ ಇರುತ್ತೇವೆ. ಅದರಲ್ಲೂ ಮಾಂಸಹಾರಿ ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪಿನ ಮಹತ್ವ ತುಸು ಹೆಚ್ಚೇ ಎನ್ನಬೇಕು.

ಕೊತ್ತಂಬರಿ ಸೊಪ್ಪಿಗೆ ಆಗಾಗ್ಗೆ ಬೆಲೆಗಳು ಹೆಚ್ಚಾಗುವುದು ಮತ್ತು ಕುಗ್ಗುವುದು ಮಾಮೂಲಿ. ಬೆಲೆ ಹೆಚ್ಚಾದಾಗ ಹೆಚ್ಚಿನವರು ಗೊಣಗುತ್ತಾರೆ. ಆದರೆ ಕೊತ್ತಂಬರಿ ಸೊಪ್ಪನ್ನು ಮನಸ್ಸು ಮಾಡಿದರೆ ಇರುವ ಜಾಗದಲ್ಲಿ ಯಾರೂ ಬೇಕಾದರು ಬೆಳೆಯಬಹುದಲ್ಲದೆ, ಮನೆಯ ಉಪಯೋಗಕ್ಕೂ ಬಳಸಿಕೊಳ್ಳಲು ಸಾಧ್ಯವಿದೆ.

ಕೊತ್ತಂಬರಿ ಸೊಪ್ಪನ್ನು ಬೆಳೆಯಲು ಎಕರೆ ಗಟ್ಟಲೆ ಜಾಗ ಬೇಕಾಗಿಲ್ಲ. ಮನೆಯಲ್ಲಿರುವ ಹೂ ಕುಂಡಗಳಲ್ಲಿ ಕೊತ್ತಂಬರಿಯನ್ನು ಉದುರಿಸಿದರೆ ಸಾಕು ಅದು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತದೆ. ಮನೆಯ ಹಿತ್ತಲಲ್ಲಿ, ಟೆರೇಸ್ ಮೇಲೆ ಕೂಡ ಒಂದಷ್ಟು ಮಣ್ಣು ಗೊಬ್ಬರನ್ನು ಮಿಶ್ರ ಮಾಡಿ ಅದರಲ್ಲಿ ಕೊತ್ತಂಬರಿ ಬೀಜವನ್ನು ಬಿತ್ತಿದರೆ ತಮ್ಮ ಖರ್ಚಿಗೆ ಸಾಕಾಗುಷ್ಟು ಸೊಪ್ಪನ್ನು ಪಡೆಯಲು ಸಾಧ್ಯವಿದೆ. ಆದರೆ ಹಲವು ಕಾರಣಗಳಿಗೆ ಇದನ್ನು ಬೆಳೆಯುವ ಪ್ರಯತ್ನ ಮಾಡದೆ ಬೆಲೆ ಹೆಚ್ಚಾಯಿತೆಂದು ಗೋಗರೆಯುವವರೇ ಜಾಸ್ತಿ.

ನಾವು ದಿನನಿತ್ಯದ ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಏಕೆ ಬಳಸಬೇಕು ಅದರಿಂದ ಏನು ಪ್ರಯೋಜನ ಎಂಬುದನ್ನು ನೋಡುವುದಾದರೆ ಈ ಸೊಪ್ಪಿನಲ್ಲಿ ಹಲವು ಔಷಧೀಯ ಗುಣಗಳಿರುವುದನ್ನು ನಾವು ಕಾಣಬಹುದಾಗಿದೆ. ಇದು ಮನುಷ್ಯನ ಆರೋಗ್ಯವನ್ನು ಕಾಪಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ಎ ಅಂಶವಿದೆ. ಜತೆಗೆ ಮೆಗ್ನ್ಪಿಷೀಯಂ, ಪೆÇಟಾಸಿಯಂ ಕ್ಯಾಲ್ಸಿಯಮ್ ನಂಥ ಖನಿಜಾಂಶಗಳನ್ನು ಹೊಂದಿರುವುದರಿಂದ ಆರೋಗ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ.

ಈ ಸೊಪ್ಪನ್ನು ಅಡುಗೆಗೆ ಮಾತ್ರ ಬಳಸುವುದಲ್ಲದೆ, ಜಜ್ಜಿ ಅದರ ರಸವನ್ನು ನೀರಿನಲ್ಲಿ ಸೇರಿಸಿ ನಿಯಮಿತವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದಲ್ಲದೆ, ಜೀರ್ಣಕ್ರಿಯೆಗೆ, ಬೊಜ್ಜು ಕರಗಿಸುವಲ್ಲಿ ಅತೀ ಪಿತ್ತ, ಅಲರ್ಜಿ, ಕೆಲವು ಚರ್ಮದ ಕಾಯಿಲೆ ಹೀಗೆ ನಮ್ಮನ್ನು ಕಾಡುವ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಗುಣ ಇದರಲ್ಲಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗಿದೆ.

ಕೊತ್ತಂಬರಿ ಸೊಪ್ಪಿನ ಮಹತ್ವ ಅರಿತವರು ಅದನ್ನು ನಿತ್ಯದ ಆಹಾರ ಬಳಕೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅದರಲ್ಲೂ ತಾವೇ ತಾಜಾ ಸೊಪ್ಪನ್ನು ಬೆಳೆಸಿ ಬಳಸುವುದು ಇನ್ನಷ್ಟು ಒಳ್ಳೆಯದಾಗಿದೆ.