ಮನುಷ್ಯನ ಆರೋಗ್ಯ ವೃದ್ಧಿಸುವ ನುಗ್ಗೆ

ಮನುಷ್ಯನ ಆರೋಗ್ಯ ವೃದ್ಧಿಸುವ ನುಗ್ಗೆ

LK   ¦    Jul 24, 2018 02:30:08 PM (IST)
ಮನುಷ್ಯನ ಆರೋಗ್ಯ ವೃದ್ಧಿಸುವ ನುಗ್ಗೆ

ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ನುಗ್ಗೆ ಪ್ರಮುಖ ಪಾತ್ರ ವಹಿಸುತ್ತದೆ. ತರಕಾರಿಯಾಗಿ ಬಳಕೆಯಾಗುವ ನುಗ್ಗೆಯಲ್ಲಿ ಆರೋಗ್ಯಕ್ಕೆ ಪೋಷಕ ಶಕ್ತಿ ನೀಡುವ ಎಲ್ಲ ಗುಣಗಳಿರುವುದನ್ನು ನಾವು ಕಾಣಬಹುದಾಗಿದೆ.

ಬಹಳ ಹಿಂದಿನ ಕಾಲದಿಂದಲೂ ಕಾಯಿ ಮತ್ತು ಸೊಪ್ಪು ತರಕಾರಿಯಾಗಿ ಬಳಕೆಯಾಗುತ್ತಾ ಬಂದಿದ್ದು, ಆರೋಗ್ಯಕ್ಕೆ ಹಿತಕಾರಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಎ ಮತ್ತು ಬಿ ಜೀವಸತ್ವಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದಾಗಿ ಆರೋಗ್ಯಕಾರಿ ಬೆಳವಣಿಗೆ ಅನುಕೂಲವಾಗಿದೆ. ಅದರಲ್ಲೂ ಮಕ್ಕಳ ಬೆಳವಣಿಗೆಗೆ ಪೋಷಕಕಾರಿಯಾಗಿದೆ ಎಂದು ಹೇಳಲಾಗಿದೆ.

ಇನ್ನು ನುಗ್ಗೆ ಸೊಪ್ಪಿನಲ್ಲಿ ಎ ಮತ್ತು ಬಿ ಅನ್ನಾಂಗ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಪಲ್ಯ, ಸಾರು ಮಾಡಿ ತಿನ್ನುವ ಮೂಲಕ ಅಥವಾ ಎಳೆಯ ಸೊಪ್ಪನ್ನು ಚೆನ್ನಾಗಿ ತೊಳೆದು ಕುದಿಯುವ ನೀರಿನಲ್ಲಿ ಹಾಕಿ ಬೇಯಿಸಿ ಬಳಿಕ ರಸವನ್ನು ಕುಡಿಯ ಬಹುದಾಗಿದ್ದು ಹೀಗೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಎರಡು ಚಮಚ ನುಗ್ಗೆ ರಸಕ್ಕೆ ಅಷ್ಟೇ ಹಾಲನ್ನು ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಗರ್ಭಿಣಿ ಸ್ತ್ರೀಯರು ನುಗ್ಗೆಯನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವುದರಿಂದ ಅಗತ್ಯವಿರುವ ಸುಣ್ಣದ ಅಂಶ ಶರೀರಕ್ಕೆ ಸೇರುತ್ತದೆ.

ಶರೀರದ ಶಕ್ತಿ ನೀಡಲು ಅವಶ್ಯಕವಾದ ಸಸಾರಜನಕ, ಅಮಿನೋ ಆಮ್ಲ ನುಗ್ಗೆಯಲ್ಲಿದೆ. ನಮ್ಮಲ್ಲಿ ಕಾಣಿಸಿಕೊಳ್ಳುವ ನರ ದೌರ್ಬಲ್ಯ ಹೋಗಲಾಡಿಸಲು ಮತ್ತು ಶ್ವಾಸಕೋಸದ ಸಮಸ್ಯೆಗಳನ್ನು ನಿವಾರಿಸಲು ಕರಿಮೆಣಸಿನ ಪುಡಿ, ನಿಂಬೆರಸವನ್ನು ಅರ್ಧ ಲೋಟ ನುಗ್ಗೆ ರಸಕ್ಕೆ ಸೇರಿಸಿ ಕುಡಿಯಬಹುದಾಗಿದೆ.

ಸೊಪ್ಪಿನ ರಸ ಸೇವಿಸುವುದರಿಂದ ಮಧುಮೇಹ, ರಕ್ತಹೀನತೆಯ ನಿಯಂತ್ರಣವಲ್ಲದೆ ಕಾಮಾಲೆ ಮತ್ತು ಜಂತು ಹುಳು ನಿವಾರಣೆ ಸಾಧ್ಯವಾಗುತ್ತದೆ.

ಹೆಣ್ಣು ಮಕ್ಕಳು ಕೂದಲು ಸೊಂಪಾಗಿ ಬೆಳೆಯಬೇಕೆಂದು ಆಸೆ ಪಡುತ್ತಾರೆ. ಇದನ್ನು ಈಡೇರಿಸಿಕೊಳ್ಳಲು ನುಗ್ಗೆ ಸೊಪ್ಪಿನಿಂದ ಸಾಧ್ಯವಿದೆ. ಅದು ಹೇಗೆಂದರೆ ನುಗ್ಗೆ ಸೊಪ್ಪನ್ನು ಅರೆದು ಕೊಬ್ಬರಿ ಎಣ್ಣೆಗೆ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡಬೇಕು. ಇದರಿಂದ ತಲೆಯ ಹೊಟ್ಟು ಕೂಡ ಕಡಿಮೆಯಾಗಲಿದೆ.

ಇನ್ನು ನುಗ್ಗೆರಸ ಮತ್ತು ನಿಂಬೆರಸವನ್ನು ಸೇರಿಸಿ ಮುಖಕ್ಕೆ ಹಚ್ಚುತ್ತಾ ಬಂದರೆ ಕಾಂತಿ ಮೂಡಲು ಸಾಧ್ಯವಾಗುತ್ತದೆ. ಇಡ್ಲಿ, ದೋಸೆ, ಚಪಾತಿಯನ್ನು ನುಗ್ಗೆ ಸೊಪ್ಪು ಸೇರಿಸಿ ಮಾಡಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ. ಇದರೊಂದಿಗೆ ಇದು ಲೈಂಗಿಕ ಶಕ್ತಿಯ ಉತ್ತೇಜನಕಾರಿಯಾಗಿಯೂ ಕೆಲಸ ಮಾಡುವ ಗುಣ ಹೊಂದಿದೆ.

ಒಟ್ಟಾರೆ ನುಗ್ಗೆಯ ಕಾಯಿ, ಸೊಪ್ಪು, ಹೂ ಎಲ್ಲವೂ ತರಕಾರಿಯಾಗಿ ಉಪಯೋಗಿಸಲು ಸಾಧ್ಯವಾಗುವುದರಿಂದ ಇದನ್ನು ಜಾಗದ ಅನುಕೂಲವಿದ್ದರೆ ಮನೆಯ ಹಿತ್ತಲಲ್ಲಿ ನೆಟ್ಟು ಬೆಳೆಸಿದರೆ ಅನುಕೂಲವನ್ನು ಕಾಣಬಹುದಾಗಿದೆ.