ಕೊರೋನಾ ವೈರಸ್ ಸೋಂಕು: ಭಯಭೇಡ ಜಾಗೃತಿ ಅಗತ್ಯ

ಕೊರೋನಾ ವೈರಸ್ ಸೋಂಕು: ಭಯಭೇಡ ಜಾಗೃತಿ ಅಗತ್ಯ

YK   ¦    Mar 07, 2020 10:35:17 AM (IST)
ಕೊರೋನಾ ವೈರಸ್ ಸೋಂಕು: ಭಯಭೇಡ ಜಾಗೃತಿ ಅಗತ್ಯ

ಬೀದರ್: ಪಕ್ಕದ ರಾಜ್ಯ ತೆಲಂಗಾಣಾದಲ್ಲಿ ಕೊರೋನಾ ವೈರಸ್ ಸೋಂಕು (ಕೋವಿಡ್ 19) ದೃಢಪಟ್ಟಿದ್ದು, ಜಿಲ್ಲೆಯ ಸಾರ್ವಜನಿಕರು ಪಕ್ಕದ ರಾಜ್ಯದೊಂದಿಗೆ ನಿಕಟ ಸಂಚಾರ ಹೊಂದಿದ್ದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಡೆಗಟ್ಟಲು ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿ.ಜಿ.ರೆಡ್ಡಿ ಅವರು ತಿಳಿಸಿದ್ದಾರೆ.

ಯಾರು ಸಂಶಯಾಸ್ಪದ ಕೊರೋನಾ ಸೋಂಕು ಹೊಂದಿರುವವರು?: ಯಾವುದೇ ವ್ಯಕ್ತಿ ನೆಗಡಿ, ಕೆಮ್ಮು, ಜ್ವರ, ಗಂಟಲು ಕೆರೆತ ಅಥವಾ ನೋವು ಹಾಗೂ ಶ್ವಾಸಕೋಶದ ಸೋಂಕಿನ ಲಕ್ಷಣಗಳನ್ನು ಹೊಂದಿರಬೇಕು ಮತ್ತು ಇದರೊಂದಿಗೆ ಕಡ್ಡಾಯವಾಗಿ ಆ ವ್ಯಕ್ತಿ ಈಗಾಗಲೇ ಕೊರೋನಾ ಸೋಂಕು ದೃಢಪಟ್ಟಿರುವ ವ್ಯಕ್ತಿಯ ಸಂಪರ್ಕ ಹೊಂದಿದ್ದರೆ ಅಥವಾ ಆ ವ್ಯಕ್ತಿ ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿರುವ ಪ್ರದೇಶ (ಜಿಲ್ಲೆ/ರಾಜ್ಯ/ರಾಷ್ಟ್ರಗಳಿಗೆ) ಈ ಲಕ್ಷಣಗಳು ಕಾಣಿಸಿಕೊಳ್ಳುವ ಹದಿನಾಲ್ಕು ದಿನಗಳ ಒಳಗೆ ಭೇಟಿ ನೀಡಿದ್ದರೆ. ಅಂತಹ ವ್ಯಕ್ತಿಗಳನ್ನು ಸಂಶಯಾಸ್ಪದ ಕೊರೋನಾ ಸೋಂಕು ಹೊಂದಿರಬಹುದೆಂದು ಶಂಕಿಸಲಾಗುತ್ತಿದೆ.

ಶಂಕಿತ ವ್ಯಕ್ತಿಗಳ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರು/ ಪುಣೆ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗುವುದು.

ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಪಕ್ಕದಲ್ಲಿರುವ ವ್ಯಕ್ತಿಗೆ ತುಂತುರು ಹನಿಗಳ ಮೂಲಕ ಹರಡುತ್ತದೆ. ಆದುದ್ದರಿಂದ ಕೆಮ್ಮು, ನೆಗಡಿ ಹೊಂದಿರುವ ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಮೂಗು ಹಾಗೂ ಬಾಯಿಯನ್ನು ಮುಚ್ಚಿಕೊಳ್ಳಲು ಮಾಸ್ಕ್‍ಗಳನ್ನು ಬಳಸಬೇಕು. ಈ ತರಹದ ಲಕ್ಷಣಗಳನ್ನು ಹೊಂದಿರದ ವ್ಯಕ್ತಿಗಳು ಮಾಸ್ಕಗಳನ್ನು ಬಳಸುವ ಅವಶ್ಯಕತೆ ಇರುವುದಿಲ್ಲ. ಎಲ್ಲಾ ಸಾರ್ವಜನಿಕರು ಸೋಂಕು ತಗಲದಂತೆ ಮುಂಜಾಗೃತಾ ಕ್ರಮಗಳಾಗಿ ಈ ಕೆಳಗಿನ ಕ್ರಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್‍ನಿಂದ ಮೂರು ಹಾಗೂ ಬಾಯಿಯನ್ನು ಮುಚ್ಚಿಕೊಳ್ಳುವುದು ಮತ್ತು ಅದನ್ನು ಸಮಪರ್ಕವಾಗಿ ವಿಲೆವಾರಿ ಅಥವಾ ನಾಶ ಪಡಿಸಬೇಕು. ಆಗಾಗ ಕೈಗಳನ್ನು ಶೇ.70ಕ್ಕಿಂತ ಹೆಚ್ಚು ಅಲ್ಕೋಹಾಲ್ ಇರುವ ಹ್ಯಾಂಡ್‍ವಾಶ್‍ಗಳಿಂದ ತೊಳೆಯಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಬೇಕು. ಜನನಿಬಿಡ ಪ್ರದೇಶದಿಂದ ದೂರವಿರಬೇಕು. ಸೋಂಕು ಇರುವ ವ್ಯಕ್ತಿಯ ಅತಿ ಸಮೀಪ ಹೋಗಬಾರದು. ಹಸ್ತಲಾಘವ, ತಬ್ಬಿಕೊಳ್ಳುವುದು ಅಥವಾ ಚುಂಬನ ಮಾಡಬಾರದು. ಕಣ್ಣು, ಮೂಗು ಹಾಗೂ ಬಾಯಿಯನ್ನು ಪದೇ ಪದೇ ಮುಟ್ಟಿಕೊಳ್ಳಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಸಾಮಾನ್ಯವಾಗಿ ಮುಟ್ಟುವ ವಸ್ತುಗಳನ್ನು ಮುಟ್ಟಬಾರದು ಎಂದು ತಿಳಿಸಿದ್ದಾರೆ.

ಸೋಂಕು ತಡೆಗೆ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳು: ಜಿಲ್ಲೆಯಲ್ಲಿ ಸರ್ವೇಕ್ಷಣಾ ಚಟುವಟಿಕೆಗಳನ್ನು ಬಲಗೊಳಿಸಲಾಗಿದೆ. ಬೆಂಗಳೂರು, ಹೈದ್ರಾಬಾದ ಹಾಗೂ ಇತರೆ ಸೋಂಕು ದೃಢಪಟ್ಟಿರುವ ರಾಜ್ಯ ಹಾಗೂ ರಾಷ್ಟ್ರಗಳಿಂದ ಬರುವ ವ್ಯಕ್ತಿಗಳನ್ನು ಏರ್‍ಪೋರ್ಟ್, ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ.

ಸಂಶಯಾಸ್ಪದ ವ್ಯಕ್ತಿಗಳ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಲಾಯಕ್ಕೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸಂಶಯಾಸ್ಪದ ಪ್ರಕರಣಗಳಿಗಾಗಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ ಹಾಗೂ ಚಿಕಿತ್ಸಾ ಸೌಲಭ್ಯವನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸದರಿ ಸೋಂಕು ತಡೆಗಟ್ಟುವ ಕುರಿತು ಸಭೆ ನಡೆಸಲಾಗಿದೆ. ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಸದರಿ ಸೋಂಕು ಕುರಿತು ಮಾಹಿತಿ ನೀಡಲಾಗಿದೆ ಮತ್ತು ಈ ಸಿಬ್ಬಂದಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ಲಕ್ಕಾ ಕೃಷ್ಣಾರೆಡ್ಡಿ ಅವರು ತಿಳಿಸಿದ್ದಾರೆ.