ನಿಮ್ಮನ್ನು ಕಾಡುವ ಜ್ವರ ನಿಫಾ ಆಗಿರಬಹುದು.. ಎಚ್ಚರವಾಗಿರಿ!

ನಿಮ್ಮನ್ನು ಕಾಡುವ ಜ್ವರ ನಿಫಾ ಆಗಿರಬಹುದು.. ಎಚ್ಚರವಾಗಿರಿ!

LK   ¦    Jun 06, 2019 06:00:30 PM (IST)
ನಿಮ್ಮನ್ನು ಕಾಡುವ ಜ್ವರ ನಿಫಾ ಆಗಿರಬಹುದು.. ಎಚ್ಚರವಾಗಿರಿ!

ಇದೀಗ ನಿಫಾ ಜ್ವರ ಕೇರಳದಲ್ಲಿ ಕಾಣಿಸಿಕೊಂಡಿದ್ದು, ಕರ್ನಾಟಕದತ್ತ ಹರಡುವ ಭಯ ಇದೀಗ ಆರಂಭವಾಗಿದ್ದು, ಎಲ್ಲರೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಸಾಮಾನ್ಯವಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಜ್ವರಗಳು ಕಾಣಿಸಿಕೊಳ್ಳುತ್ತಿದ್ದವು. ಆಗ ಗುಳಿಗೆ ಸೇವಿಸಿ ವಾಸಿ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಹಾಗಿಲ್ಲ. ನಮ್ಮನ್ನು ಕಾಡುತ್ತಿರುವ ಜ್ವರ ಏನು ಬೇಕಾದರೂ ಆಗಿರಬಹುದು. ಗುಳಿಗೆಯಲ್ಲಿ ವಾಸಿಯಾಗುತ್ತದೆ ಎಂಬ ನಂಬಿಕೆಯೂ ಇಲ್ಲದಾಗಿದೆ. ಕಳೆದ ಕೆಲವು ವರ್ಷಗಳಿಂದ ಹಲವಾರು ರೀತಿಯ ಜ್ವರಗಳು ಕಾಣಿಸಿಕೊಳ್ಳುತ್ತಿದ್ದು, ಅದರತ್ತ ಉದಾಸೀನ ತೋರಿದರೆ ಜೀವಕ್ಕೆ ಆಪತ್ತಾಗುವ ಸಾಧ್ಯತೆ ಹೆಚ್ಚಿದೆ.

ಈಗ ಎಲ್ಲರನ್ನು ನಿಫಾ ಜ್ವರ ಹೆದರಿಸುತ್ತಿದ್ದು, ಕೇರಳದಲ್ಲಿ ಜನ ಈ ಜ್ವರದಿಂದ ಕಂಗಾಲಾಗಿದ್ದಾರೆ. ಹೀಗಾಗಿ ಈ ಜ್ವರದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗುತ್ತಿದೆ. ಇಷ್ಟಕ್ಕೂ ನಿಫಾ ಜ್ವರ ಅಂತಿಂಥ ಜ್ವರವಲ್ಲ ಅದು ಜೀವಕ್ಕೆ ಆಪತ್ತು ತರುವ ಜ್ವರವಾಗಿದೆ. ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದರೆ ಒಂದಷ್ಟು ಮಾಹಿತಿ ಲಭ್ಯವಾಗುತ್ತದೆ.

ನಿಫಾ ಜ್ವರವು ಮೆದುಳು ಮತ್ತು ಹೃದಯವನ್ನು ಘಾಸಿಗೊಳಿಸಿ ಜೀವಕ್ಕೆ ಕುತ್ತು ತರುವ ಅಪಾಯಕಾರಿ ವೈರಸ್. ಸೋಂಕು ಆಗಿದ್ದು, ಮಲೇಷ್ಯಾದ ನಿಫಾ ಎಂಬಲ್ಲಿ 1998ರಲ್ಲಿ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಂಡಿದ್ದರಿಂದ ಅದಕ್ಕೆ ನಿಫಾ ಎಂಬ ಹೆಸರು ಬಂದಿದೆ. 2011ರಲ್ಲಿ ಬಾಂಗ್ಲಾದೇಶದಲ್ಲೂ ಈ ಸೋಂಕು ಹರಡಿತ್ತು. ಪ್ರಸ್ತುತ ಈ ವೈರಸ್ ಸೋಂಕು ಮಲೇಷ್ಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾ ದೇಶಗಳಲ್ಲಿ ಹರಡಿದೆ. ನೆರೆಯ ರಾಜ್ಯ ಕೇರಳದಲ್ಲಿ ಈ ಸೋಂಕು ಹರಡಿದ್ದು, ರಾಜ್ಯದಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಜ್ವರ, ತಲೆನೋವು, ಮೈಕೈನೋವು, ವಾಂತಿ, ನಡುಕ, ನಿದ್ರಾಲಸ್ಯ, ತೊದಲುವಿಕೆ, ಪ್ರಜ್ಞಾಹೀನತೆ. ಸೋಂಕಿಗೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಲಭ್ಯವಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆ ಹಾಗೂ ಸೂಕ್ತ ನಿರ್ವಹಣೆಯಿಂದ ಸೋಂಕನ್ನು ಗುಣಪಡಿಸಬಹುದು.

ಹಂದಿ, ಕುದುರೆ, ನಾಯಿ ಮತ್ತು ಬೆಕ್ಕುಗಳಂತಹ ಸೋಂಕಿತ ಜಾನುವಾರಗಳು ಮಧ್ಯಂತರ ಮೂಲಗಳಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿಡಬೇಕು. ಶಂಕಿತ ಪ್ರಕರಣಗಳನ್ನು ಪ್ರತ್ಯೇಕವಾಗಿಡತಕ್ಕದ್ದು, ರೋಗಿಗಳು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಸಾಬೂನು ನೀರು ಬಳಸಿ ಶುಚಿಗೊಳಿಸಬೇಕು. ಹಸ್ತಲಾಘವ ಕೊಡವುದನ್ನು ತಪ್ಪಿಸಿ ಹಾಗೂ ಸೋಂಕಿತ ಜನರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು.

ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಗ್ಲೌಸ್ ತಪ್ಪದೇ ಬಳಸುವುದು, ಎಲ್ಲಾ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ, ಸುಲಿದು ಮತ್ತು ಬೇಯಿಸಿ ತಿನ್ನುವುದು, ಪ್ಲೂ ರೀತಿಯ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು.. ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬಾರದು. ಬಾವಲಿಗಳು ಅತಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರಾ ಕುಡಿಯಬಾರದು. ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳುವುದು, ರೋಗಿಯ ಶರೀರದ ಸ್ರಾವದೊಂದಿಗೆ(ಜೊಲ್ಲು, ಬೇವರು ಮಾತ್ರ) ಸಂಪರ್ಕ ತಪ್ಪಿಸಬೇಕು. ಹೀಗೆ ಮಾಡುವುದರಿಂದ ನಿಫಾದಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ.

ಜ್ವರ ಬಂದ ಬಳಿಕ ಕಷ್ಟ ಪಡುವುದಕ್ಕಿಂತ ಅದು ಬರದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ. ಜ್ವರದ ಲಕ್ಷಣಗಳು ಕಂಡು ಬಂದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳುವುದು ಬಹು ಮುಖ್ಯವಾಗಿದೆ.