ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ...!

ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ...!

LK   ¦    Feb 20, 2020 01:01:37 PM (IST)
ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ...!

ಬೇಸಿಗೆ ಬರುತ್ತಿದ್ದು ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುವುದರಿಂದ ನಮ್ಮ ದೇಹದಲ್ಲಿಯೂ ಒಂದಷ್ಟು ಬದಲಾವಣೆಗಳಾಗುವುದು ಸಹಜ. ಹೀಗಾಗಿ ಬೇಸಿಗೆಯಲ್ಲಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ.


ಮನುಷ್ಯನಿಗೆ ಆರೋಗ್ಯಕ್ಕಿಂತ ಮುಖ್ಯವಾದ ಸಂಪತ್ತು ಬೇರೊಂದಿಲ್ಲ. ಆರೋಗ್ಯವಾಗಿದ್ದರೆ ಮಾತ್ರ ನಾವು ದುಡಿದು ಬದುಕಲು ಸಾಧ್ಯ. ಆರೋಗ್ಯವೇ ಇಲ್ಲದಿದ್ದರೆ ಬದುಕಿ ಪ್ರಯೋಜನವೂ ಇಲ್ಲ. ಆದ್ದರಿಂದ ನಮ್ಮ ಆರೋಗ್ಯವನ್ನು ನಮ್ಮದೇ ಪರಿಧಿಯಲ್ಲಿ ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಅರಿತು ಅದರಂತೆ ಒಂದಷ್ಟು ಕ್ರಮಗಳನ್ನು ಕೈಗೊಂಡರೆ ಬೇಸಿಗೆಯಲ್ಲಿ ನಮ್ಮನ್ನು ಕಾಡುವ ರೋಗಗಳಿಂದ ಮುಕ್ತರಾಗಿ ಬದುಕಲು ಸಾಧ್ಯವಿದೆ.

ಬೇಸಿಗೆಯ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅದು ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಎರಡು ವಿಚಾರದಲ್ಲಿಯೂ ಅತಿ ಮುಖ್ಯ. ಬೇಸಿಗೆಯಲ್ಲಿ ಬಿಸಿಲಿಗೆ ಹೊರಗೆ ಹೋದರೆ ಮೈಬೆವರುತ್ತದೆ ಜತೆಗೆ ನೀರಡಿಕೆಯೂ ಆಗುತ್ತದೆ. ಮೈಬೆವರುವುದರಿಂದ ದುರ್ವಾಸನೆ ಹೊರಬರುತ್ತದೆ. ಈ ದುರ್ವಾಸನೆ ಮುಜುಗರಕ್ಕೆ ಕಾರಣವಾಗುತ್ತದೆ. ಜತೆಗೆ ತುರಿಕೆ, ಕಜ್ಜಿಯಂತಹ ರೋಗಕ್ಕೂ ದಾರಿಮಾಡಿಕೊಡುತ್ತದೆ. ಆದ್ದರಿಂದ ಪ್ರತಿದಿನ ಸ್ನಾನ ಮಾಡುವುದು, ಶುಚಿಯಾದ ಬಟ್ಟೆಯನ್ನು ಧರಿಸುವುದು, ಆದಷ್ಟು ಬಿಗಿಯಾಗಿರದ ಉಡುಪು ಧರಿಸಿದರೆ ಇನ್ನು ಉತ್ತಮ. ದೇಹಕ್ಕೆ ಗಾಳಿಯಾಡುವಂತ ಬಟ್ಟೆಯಾದರೆ ಇನ್ನು ಒಳ್ಳೆಯದು ಬಿಗಿಯಾದ ಉಡುಪನ್ನು ಧರಿಸುವುದರಿಂದ ಬೆವರಿಗೆ ತುರಿಕೆ, ಕಜ್ಜಿಗಳಾಗಬಹುದು. ಅನಗತ್ಯ ಕೂದಲುಗಳನ್ನು ತೆಗೆದು ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತಿ ಮುಖ್ಯ.

ಬೆರಳುಗಳಲ್ಲಿ ಬೆಳೆಯುವ ಉಗುರನ್ನು ಕತ್ತರಿಸಿ ತೆಗೆಯಬೇಕು. ಸೆಕೆಗೆ ದೇಹದಲ್ಲಿ ತುರಿಕೆಗಳಾದಾಗ ಕೆಲವೊಮ್ಮೆ ನಮಗೆ ಗೊತ್ತಾಗದಂತೆ ಕೆರೆದುಕೊಳ್ಳುತ್ತೇವೆ. ಈ ಸಂದರ್ಭ ಉಗುರಿನ ಮೂಲಕ ಆಹಾರದಲ್ಲಿ ಕೀಟಾಣುಗಳು ದೇಹವನ್ನು ಸೇರಿದರೆ ಅಚ್ಚರಿ ಪಡಬೇಕಾಗಿಲ್ಲ. ಆದ್ದರಿಂದ ಉಗುರು ತೆಗೆಯುವುದು ಮತ್ತು ಕೈಯ್ಯನ್ನು ಶುದ್ಧ ನೀರಿನಿಂದ ತೊಳೆಯುವುದನ್ನು ತಪ್ಪದೆ ಮಾಡಬೇಕು.

ಬಿಸಿಲಿಗೆ ಹೊರಗೆ ವಿವಿಧ ರೀತಿಯ ಕೆಲಸ ಮಾಡುವವರು ಜತೆಯಲ್ಲಿ ನೀರಿನ ಬಾಟಲಿಗಳನ್ನಿಟ್ಟುಕೊಳ್ಳಬೇಕು. ನೀರಡಿಕೆಯಾದಾಗ ಒಮ್ಮೆಲೆ ನೀರು ಕುಡಿಯುವ ಬದಲು ಸ್ವಲ್ಪ ಸ್ವಲ್ಪ ಕುಡಿದು ನೀರಡಿಕೆಯನ್ನು ತಗ್ಗಿಸಿಕೊಳ್ಳಬೇಕು. ಸೆಕೆಗೆ ಶೀತಲೀಕರಿಸಿದ ಪದಾರ್ಥಗಳು ಹಿತವೆನಿಸಿದರೂ ಅವುಗಳು ಆರೋಗ್ಯದ ದೃಷ್ಠಿಯಿಂದ ಉತ್ತಮವಲ್ಲ. ಹೀಗಾಗಿ ನೈಸರ್ಗಿಕವಾಗಿರುವ ಪಾನೀಯಗಳನ್ನು ಸೇವಿಸುವುದು ಒಳ್ಳೆಯದು.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚಿನ ಜನರು ಪಾನೀಯಗಳನ್ನು ಇಷ್ಟಪಡುತ್ತಾರೆ. ಪಾನೀಯ ಕುಡಿಯುವಾಗ ಹಣ್ಣಿನಿಂದ ತಯಾರಿಸಿದ ಪಾನೀಯಗಳಿಗೆ ಆದ್ಯತೆ ನೀಡಿ ಅದು ಬಿಟ್ಟು ಇತರೆ ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯೇ ಜಾಸ್ತಿ. ಸಾಧ್ಯವಾದರೆ ಪಾನೀಯಗಳಿಗಿಂತ ಎಳನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅದರಿಂದ ಹತ್ತು ಹಲವು ಉಪಯೋಗಗಳನ್ನು ಪಡೆಯಬಹುದಾಗಿದೆ. ಏಕೆಂದರೆ ಎಳನೀರು ಕೇವಲ ಬಾಯಾರಿಕೆಯನ್ನು ಮಾತ್ರ ನೀಗಿಸದೆ, ಆರೋಗ್ಯದ ದೃಷ್ಟಿಯಿಂದಲೂ ಇದು ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಅಧಿಕ ವಿಟಮಿನ್ ಹಾಗೂ ಖನಿಜವಿದ್ದು, ಬೊಜ್ಜು ಕರಗಲು ಸಹಾಯಮಾಡುತ್ತದೆ. ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದ ಉಷ್ಣಾಂಶ ಕಡಿಮೆ ಮಾಡಿ ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಸೂರ್ಯನ ಕಿರಣ ದೇಹದ ಮೇಲೆ ಬಿದ್ದು ಚರ್ಮಕ್ಕೆ ಆಗುವ ಹಾನಿಯನ್ನು ತಡೆಗಟ್ಟುವುದಲ್ಲದೆ ಮುಖದ ತ್ವಚ್ಛೆಯ ಕಾಂತಿಯನ್ನು ಕಾಪಾಡುವ ಶಕ್ತಿಯನ್ನು ಹೊಂದಿದೆ.

ಬೇಸಿಗೆಯ ದಿನಗಳಲ್ಲಿ ಮಾಂಸಹಾರಕ್ಕಿಂತ ಸಸ್ಯಾಹಾರಕ್ಕೆ ಆದ್ಯತೆ ನೀಡಬೇಕು. ಅದರಲ್ಲಿಯೂ ದೇಹಕ್ಕೆ ತಂಪು ನೀಡುವ ಬಸಳೆ, ಸೌತೆಕಾಯಿ, ಸೋರೆಕಾಯಿ, ಬೂದಿ ಕುಂಬಳ, ಕ್ಯಾರೆಟ್, ಮೂಲಂಗಿ ಮತ್ತು ಸೊಪ್ಪು ತರಕಾರಿಗಳನ್ನು ನಿತ್ಯದ ಆಹಾರದಲ್ಲಿ ಬಳಸುವುದು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ

ಇನ್ನು ಬೇಸಿಗೆಯ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುವುದರಿಂದ ರೋಗ ಬರದಂತೆ ನಮ್ಮ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹುಮುಖ್ಯ. ಕುಡಿಯುವ ನೀರನ್ನು ಚೆನ್ನಾಗಿ ಕುದಿಸಿ ಆರಿಸಿ ಕುಡಿಯಬೇಕು. ಎಲ್ಲೆಂದರಲ್ಲಿ ನೀರು ಕುಡಿಯುವ ಮುನ್ನ ಶುದ್ಧವಾಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ಏಕೆಂದರೆ ಕಾಮಾಲೆ ಸೇರಿದಂತೆ ಕೆಲವು ಸಾಂಕ್ರಾಮಿಕ ರೋಗಗಳು ನೀರಿನಿಂದಲೇ ಹೆಚ್ಚಾಗಿ ಹರಡುವುದರಿಂದ ಮುಂಜಾಗ್ರತಾ ಕ್ರಮ ವಹಿಸುವುದು ಆರೋಗ್ಯದ ದೃಷ್ಠಿಯಿಂದ ಉತ್ತಮ.

ಇವತ್ತಿನ ಪರಿಸ್ಥಿತಿಯಲ್ಲಿ ಕಾಯಿಲೆಗಳು ಯಾವಾಗ? ಯಾವುದರ ಮುಖೇನ ಬರುತ್ತದೆ ಎಂಬುದನ್ನು ಹೇಳುವುದೇ ಕಷ್ಟವಾಗಿದ್ದು, ಹೀಗಿರುವಾಗ ಕಾಲಗಳಿಗೆ ತಕ್ಕಂತೆ ನಮ್ಮ ಲೈಫ್ ಸ್ಟೈಲ್ ಬದಲಾಯಿಸಿಕೊಂಡು ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜಾಣತನವಾಗುತ್ತದೆ.