ಮಗುವಿಗೆ ತಾಯಿಯ ಹಾಲನ್ನೇ ಏಕೆ ಕುಡಿಸಬೇಕು?

ಮಗುವಿಗೆ ತಾಯಿಯ ಹಾಲನ್ನೇ ಏಕೆ ಕುಡಿಸಬೇಕು?

LK   ¦    Aug 03, 2020 04:25:39 PM (IST)
ಮಗುವಿಗೆ ತಾಯಿಯ ಹಾಲನ್ನೇ ಏಕೆ ಕುಡಿಸಬೇಕು?

ಸ್ತನ್ಯಪಾನದ ಅಗತ್ಯತೆ ಮತ್ತು ಮಹತ್ವದ ಕುರಿತಂತೆ ಸಪ್ತಾಹವನ್ನು ಆಗಸ್ಟ್ (1ರಿಂದ 7ರವರೆಗೆ) ತಿಂಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿಯೊಂದು ಜೀವಿಯೂ ತನ್ನ ಮರಿಗೆ ಹಾಲುಣಿಸುವುದನ್ನು ನೋಡುತ್ತೇವೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಕೆಲವೊಂದು ತಪ್ಪು ತಿಳುವಳಿಕೆಯಿಂದಾಗಿ ತಾಯಂದಿರು ಮಗುವಿಗೆ ಹಾಲುಣಿಸಲು ಹಿಂದೇಟು ಹಾಕುತ್ತಿರುವ ಪರಿಣಾಮ ಮಗುವಿಗೆ ಹಾಲುಣಿಸಿ ಎಂದು ಅರಿವು ಮೂಡಿಸಬೇಕಾದ ಪರಿಸ್ಥಿತಿ ಎದುರಾಗಿದೆ.

 

ಮಗುವಿಗೆ ಹಾಲುಣಿಸಿದರೆ ತಮ್ಮ ಎದೆಯ ಸೌಂದರ್ಯಕ್ಕೆ ತೊಂದರೆಯಾಗುತ್ತದೆ ಎಂಬ ತಪ್ಪುಕಲ್ಪನೆಯೊಂದು ಕೆಲವರಲ್ಲಿ ಬಂದಿರುವ ಕಾರಣ ಅದನ್ನು ಹೊಡೆದೊಡಿಸುವುದರೊಂದಿಗೆ ಮಗುವಿಗೂ ಜೀವರಕ್ಷಕ ನೈಸರ್ಗಿಕ ಪೋಷಕ ಆಹಾರವನ್ನು ಎದೆಹಾಲಿನ ಮೂಲಕ ನೀಡಿ ಅದರ ಆರೋಗ್ಯವನ್ನು ವೃದ್ಧಿಸುವ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಇವತ್ತು ವೈಜ್ಞಾನಿಕವಾಗಿ ಸತ್ಯವಲ್ಲದ ಸುದ್ದಿಗಳಿಗೆ ಕಿವಿಗೊಟ್ಟು ಹಾಲುಣಿಸದಿರುವುದರಿಂದ ಮಕ್ಕಳ ಆರೋಗ್ಯ ಕುಂಠಿತವಾಗಿ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ.

 

ಇಷ್ಟಕ್ಕೂ ಮಗುವಿಗೆ ತಾಯಿಯ ಹಾಲನ್ನೇ ಏಕೆ ನೀಡಬೇಕು ಎಂಬುದನ್ನು ನೋಡುವುದಾದರೆ, ತಾಯಿ ಹಾಲು ನೈಸರ್ಗಿಕ ಆಹಾರವಾಗಿದ್ದು, ಸುಲಭ ಜೀರ್ಣವಾಗುತ್ತದೆ. ವೈದ್ಯರ ಪ್ರಕಾರ ಮಗುಹುಟ್ಟಿದ ಅರ್ಧ ಗಂಟೆಯೊಳಗೆ ಹಾಲುಕುಡಿಸಬೇಕಂತೆ ಒಂದು ವೇಳೆ ಸಿಸೇರಿಯನ್ ಮೂಲಕ ಮಗುಹುಟ್ಟಿದ್ದರೆ ನಾಲ್ಕು ಗಂಟೆ ಅವಧಿಯಲ್ಲಿ ಹಾಲುಣಿಸಬೇಕಂತೆ. ಏಕೆಂದರೆ ತಾಯಿಯ ಎದೆಯಿಂದ ಮೊದಲ ಬಾರಿಗೆ ಬರುವ ಹಾಲು ರೋಗನಿರೋಧಕವಾಗಿರುತ್ತದೆ ಮತ್ತು ಇದರಲ್ಲಿ ಪ್ರೊಟೀನ್, ಖನಿಜಾಂಶ, ವಿಟಮಿನ್ ಇಷ್ಟೇ ಅಲ್ಲ ವಿಟಮಿನ್ ಎ, ಆ್ಯಂಟಿಬಾಡಿಗಳು, ಸೋಂಕು ನಿರೋಧಕಗಳು ಜಾಸ್ತಿ ಇರುತ್ತದೆ. ಮೂರು ದಿನಗಳ ಕಾಲ ಬರುವ ಹಾಲು ಗಾಢಹಳದಿ ಬಣ್ಣದಲ್ಲಿರುತ್ತದೆ. ಹೀಗಾಗಿ ಇದನ್ನು ಅಔಐಔSಖಿಖUಒ ಎಂದು ಕರೆಯಲಾಗುತ್ತದೆ. ಇದರಲ್ಲಿ ವಿರೇಚಕ (ಐಚಿxಚಿಣive) ಗುಣವಿರುವುದರಿಂದ ಮಗುವಿನ ಆರೋಗ್ಯಕ್ಕೆ ಪೋಷಕ ಶಕ್ತಿಯಾಗಿ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ.

 

ಮಗುವಿಗೆ ಹಾಲುಣಿಸಲು ಕೆಲವು ತಾಯಂದಿರು ಹಿಂದೇಟು ಹಾಕುತ್ತಿರುವುದಕ್ಕೆ ಕೆಲವೊಂದು ಗಾಳಿಸುದ್ದಿಗಳು ಕಾರಣವಾಗಿವೆ ಎಂದರೆ ತಪ್ಪಾಗಲಾರದು. ಹಾಲುಣಿಸುವ ವಿಚಾರದಲ್ಲಿ ವೈಜ್ಞಾನಿಕವಾಗಿ ಯಾವುದೇ ರೀತಿಯ ಆಧಾರಗಳು ಇಲ್ಲವಾದರೂ ಬಾಯಿಂದ ಬಾಯಿಗೆ ಕೆಲವು ಹಾಗಂತೆ.. ಹೀಗಂತೆ ಎಂಬ ಮಾತುಗಳನ್ನು ನಂಬಿ ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಿಬಿಡುತ್ತಾರೆ. ತಾವು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಒಳ್ಳೆಯದು ಎಂಬುದನ್ನು ತಾಯಂದಿರು ಅರಿಯಬೇಕಾಗಿದೆ.

 

ಇನ್ನು ಮಗುವಿಗೆ ಹಾಲುಣಿಸುವ ತಾಯಂದಿರು ಮಗುವಿನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರೋ ಅಷ್ಟೇ ಕಾಳಜಿಯನ್ನು ತಮ್ಮ ಆರೋಗ್ಯದ ಬಗ್ಗೆಯೂ ವಹಿಸಬೇಕು. ಹಾಲುಣಿಸುವ ಸಂದರ್ಭಗಳಲ್ಲಿ ತಾಯಿಗೆ ಅಗತ್ಯವಿರುವ ಪೌಷ್ಠಿಕಾಂಶಗಳಾದ ಪ್ರೊಟೀನ್, ಕೊಬ್ಬು, ಕ್ಯಾಲ್ಸಿಯಂ, ಕಬ್ಬಿಣಾಂಶ, ಅಗತ್ಯ ವಿಟಮಿನ್ ಇರುವ ಪೋಷಕಾಂಶಗಳು ಹೇರಳವಾಗಿರುವ ಆಹಾರಗಳು ಹಾಗೂ ಅಕ್ಕಿ, ರಾಗಿ. ಗೋಧಿ ಸೇರಿದಂತೆ ವಿವಿಧ ಧಾನ್ಯಗಳು, ಸಕ್ಕರೆಯ ಉತ್ಪನ್ನಗಳು, ಕಾಳುಕಡ್ಡಿಗಳನ್ನು ಸೇವಿಸಬೇಕು. ಒಟ್ಟಾರೆಯಾಗಿ ಹೇಳಬೇಕೆಂದರೆ ಮಗುವಿಗೆ ಎದೆಹಾಲು ಎಷ್ಟು ಪ್ರಮುಖವೋ ಹಾಗೆಯೇ ಹಾಲನ್ನುಣಿಸಬೇಕಾದರೆ ತಾಯಂದಿರು ಕೂಡ ಆರೋಗ್ಯವಾಗಿರಬೇಕು. ಅದು ಸಾಧ್ಯವಾಗಬೇಕಾದರೆ ಉತ್ತಮ ಆಹಾರಸೇವನೆ ಮತ್ತು ಆರೋಗ್ಯದತ್ತ ಕಾಳಜಿ ವಹಿಸಬೇಕೆಂಬುದನ್ನು ಮರೆಯಬಾರದು.