ಮಹಿಳೆಯರು ತಮ್ಮ ಆರೋಗ್ಯದತ್ತ ಕಾಳಜಿ ವಹಿಸಿ

ಮಹಿಳೆಯರು ತಮ್ಮ ಆರೋಗ್ಯದತ್ತ ಕಾಳಜಿ ವಹಿಸಿ

LK   ¦    Oct 31, 2020 03:00:42 PM (IST)
ಮಹಿಳೆಯರು ತಮ್ಮ ಆರೋಗ್ಯದತ್ತ ಕಾಳಜಿ ವಹಿಸಿ

ಹೆಣ್ಣು ತನ್ನ ಜೀವಿತಾವಧಿಯಲ್ಲಿ ತನ್ನ ದೇಹದಲ್ಲಿ ಹಲವು ರೀತಿಯ ಬದಲಾವಣೆ ಕಾಣುತ್ತಿದ್ದು, ಪ್ರೌಢಾವಸ್ಥೆಯ ನಂತರ ಮದುವೆ, ಹೆರಿಗೆ, ಮಕ್ಕಳ ಲಾಲನೆ, ಪೋಷಣೆ ಹೀಗೆ ಹಲವು ಜವಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುವುದು ಅನಿವಾರ್ಯವಾಗಿದೆ.

ಇವತ್ತು ಗಂಡಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ದುಡಿಯುವ ಹೆಣ್ಣು ತನ್ನದೇ ಆದ ಒತ್ತಡವನ್ನು ಹೊಂದಿರುವುದಂತು ಸತ್ಯ. ಬಹಳಷ್ಟು ಸಂದರ್ಭಗಳಲ್ಲಿ ಮಹಿಳೆಯರು ಉದ್ಯೋಗದ ಒತ್ತಡ, ಸಂಸಾರದ ಜಂಜಾಟದಲ್ಲಿ ಸಿಲುಕಿ ತಮ್ಮ ಬಗ್ಗೆಯೇ ನಿರ್ಲಕ್ಷ್ಯ ತೋರಿಸಿ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಕೆಲವು ಮಹಿಳೆಯರು ತಮ್ಮ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತಿದ್ದರೂ ಅದನ್ನು ಯಾರಿಗೂ ಹೇಳಿಕೊಳ್ಳದೆ, ವೈದ್ಯರಿಗೆ ತೋರಿಸದೆ ಕಾಲ ಕಳೆಯುತ್ತಾರೆ. ಕಾಯಿಲೆ ಉಲ್ಭಣಗೊಂಡ ಬಳಿಕ ಆಸ್ಪತ್ರೆಗೆ ತೆರಳುತ್ತಾರೆ. ಆ ವೇಳೆಗಾಗಲೇ ಕಾಯಿಲೆ ಕೂಡ ಕೆಲವೊಮ್ಮೆ ವಾಸಿಯಾಗಲಾರದ ಹಂತ ತಲುಪಿರುತ್ತದೆ.

ಇವತ್ತು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ನೀಡುವ ಆಹಾರ ಪದಾರ್ಥಗಳು ಸಮರ್ಪಕವಾಗಿ ದೊರೆಯದ ಕಾರಣ ಅಷ್ಟೇ ಅಲ್ಲ ಸೇವಿಸುವ ಆಹಾರ ರಾಸಾಯನಿಕಯುಕ್ತ ಪದಾರ್ಥಗಳಾಗಿರುವುದರಿಂದ ರೋಗಗಳು ಯಾವಾಗ ಹೇಗೆ ದೇಹದ ಮೇಲೆ ದಾಳಿ ಮಾಡುತ್ತದೆ ಎಂಬುವುದು ಗೊತ್ತಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹೀಗಿರುವಾಗ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಅಪಾಯಕಾರಿ. ಮಹಿಳೆಯರು ಸದಾ ಎಚ್ಚರವಾಗಿರುವುದು ಒಳ್ಳೆಯದು.

ಅದರಲ್ಲೂ ಗರ್ಭಿಣಿ ಮಹಿಳೆಯರಂತು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ತುಂಬಾ ಅಗತ್ಯ. ಏಕೆಂದರೆ  ತನ್ನದು ಮಾತ್ರವಲ್ಲದೆ ಮತ್ತೊಂದು ಜೀವದ ಬೆಳವಣಿಗೆಗೂ ಆದ್ಯತೆ ನೀಡಬೇಕಾಗಿರುವುದರಿಂದ ಸೇವಿಸುವ ಆಹಾರದಿಂದ ಶುರುವಾಗಿ ಪಡೆದುಕೊಳ್ಳಬೇಕಾದ ಚಿಕಿತ್ಸೆ ತನಕ ಎಲ್ಲ ವಿಚಾರದಲ್ಲಿಯೂ ಬಹಳಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳ ಬೇಕಾಗುತ್ತದೆ. ಈ ಅವಧಿಯಲ್ಲಿ ಆಕೆಗೆ ಪೌಷ್ಠಿಕ ಆಹಾರದ ಅಗತ್ಯತೆ ಹೆಚ್ಚಿರುತ್ತದೆ. ಕೇವಲ ಹೊಟ್ಟೆ ತುಂಬಿ ಹಸಿವು ನೀಗಿದರಷ್ಟೆ ಸಾಲದು ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳುಳ್ಳ ಆಹಾರವನ್ನು ಸೇವಿಸುವುದು ತುಂಬಾ ಅಗತ್ಯವಾಗಿರುತ್ತದೆ.

ಇನ್ನು ಕೇವಲ ಉತ್ತಮ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸಿದರೆ ಮಾತ್ರ ತಾನು ಆರೋಗ್ಯವಾಗಿದ್ದು, ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಮತ್ತು ಹಾಲುಣಿಸಲು ಸಾಧ್ಯವಾಗುತ್ತದೆ. ಏಕೆಂದರೆ ಗರ್ಭದಲ್ಲಿ ಬೆಳೆಯುವ ಮಗುವಿಗೆ ಮತ್ತು ತಾಯಿಯ ಅಂಗಾಂಶಗಳಿಗೆ ಅಗತ್ಯ ಪೋಷಣೆ ಬೇಕಾಗುತ್ತದೆ.

ಗರ್ಭಿಣಿ ಮಹಿಳೆಯರು ಹೆಚ್ಚಿನ ಪೋಷಕಾಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಅವರ ಸಲಹೆಯಂತೆ ತರಕಾರಿ, ಹಾಲು, ಮೊಟ್ಟೆ, ಹಣ್ಣು ಇನ್ನಿತರ ದೇಹಕ್ಕೆ ಪೋಷಕಾಂಶ ಒದಗಿಸುವ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ.

ಆಹಾರ ಸೇವನೆಯಲ್ಲಿ ಉದಾಸೀನತೆ ತೋರುವುದು, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು. ಇದೆಲ್ಲವೂ ತನ್ನ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.