ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ನಿಯಂತ್ರಣ ಅಗತ್ಯ

ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ನಿಯಂತ್ರಣ ಅಗತ್ಯ

LK   ¦    Apr 29, 2020 11:44:21 AM (IST)
ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ನಿಯಂತ್ರಣ ಅಗತ್ಯ

ಈಗ ಜಗತ್ತು ಕೊರೊನಾ ಸೋಂಕಿನಿಂದ ಬೆಚ್ಚಿ ಬಿದ್ದಿದೆ. ಮಹಾಮಾರಿಯನ್ನು ಹೊಡೆದೊಡಿಸಿ ಆರೋಗ್ಯವಂತ ವಾತಾವರಣ ನಿರ್ಮಿಸುವುದು ಸವಾಲಾಗಿ ಪರಿಣಮಿಸಿದೆ. ಕೊರೊನಾ ತಡೆಗೆ ಮುಖ್ಯವಾದ ಒಂದೇ ಒಂದು ಉಪಾಯ ಎಂದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು.

ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಇರುವ ಒಂದೇ ದಾರಿ ಎಂದರೆ ಅದು ಲಾಕ್ ಡೌನ್. ಇವತ್ತು ಲಾಕ್ ಡೌನ್ ನಿಂದ ಶ್ರೀಮಂತ, ಬಡವ ಹೀಗೆ ಎಲ್ಲರಿಗೂ ಆರ್ಥಿಕವಾಗಿ ನಷ್ಟವಾಗಿದೆ. ಆದರೆ ಶೀಘ್ರಗತಿಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿರುವ ಸೋಂಕನ್ನು ತಡೆಗಟ್ಟಬೇಕಾದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಮನೆಯಲ್ಲಿರುವುದು ಅಗತ್ಯವಾಗಿದೆ.

ಇದುವರೆಗೆ ಮನೆಯಲ್ಲಿ ಹೆಚ್ಚಿನ ಸಮಯಗಳನ್ನು ಕಳೆಯದ ಮಂದಿಗೆ ಇದೊಂದು ಬಂಧನದಂತೆ ಕಾಣತೊಡಗಿದೆ. ಮನೆಯಿಂದ ದೂರವಿದ್ದು ಬದುಕಿದವರಿಗೆ ತನ್ನ ಕುಟುಂಬದೊಂದಿಗೆ ಬೆರೆಯುವ ಅವಕಾಶ ದೊರೆತಿದೆ. ಆದರೆ ದುಶ್ಚಟಗಳ ದಾಸರಾಗಿದ್ದವರಿಗೆ ಲಾಕ್ ಡೌನ್‍ನಿಂದ ಮದ್ಯ, ಸಿಗರೇಟ್, ತಂಬಾಕು ಇನ್ನಿತರ ವಸ್ತುಗಳು ಸಿಗದೆ ಪರದಾಡುವಂತಾಗಿದೆ. ಅದರಲ್ಲೂ ಮದ್ಯ ವ್ಯಸನಿಗಳ ಪರಿಸ್ಥಿತಿ ಹೇಳ ತೀರದ್ದಾಗಿದೆ.

ಯಾವುದೋ ಒಂದು ಕಾರಣಕ್ಕೆ ಆರಂಭವಾದ ಮದ್ಯ ಸೇವನೆಯ ಚಟವನ್ನು ಬಿಟ್ಟು ಬಿಡಬೇಕೆಂದು ಬಯಸುವ ಮಂದಿಗೆ ಇದು ಸಕಾಲವಾಗಿದೆ. ಒಂದು ಗಟ್ಟಿ ಮನಸ್ಸು ಮಾಡಿ ಚಟದಿಂದ ಹೊರಬಂದು ಬಿಟ್ಟರೆ ನೀವು ನಿಜವಾಗಿಯೂ ಇನ್ನುಳಿದ ಬದುಕನ್ನು ಸುಖವಾಗಿ ಕಳೆಯಲು ಸಾಧ್ಯವಾಗಲಿದೆ. ಇದು ಸಾಧ್ಯವಾಗಬೇಕಾದರೆ ಮನಸ್ಸಿನ ನಿಯಂತ್ರಣ ಮಾಡಿಕೊಳ್ಳುವುದು ಬಹು ಮುಖ್ಯವಾಗಿದೆ. ಆದರೆ ನಾವು ಅಂದುಕೊಂಡಷ್ಟು ಸುಲಭದಲ್ಲಿ ನಮ್ಮ ಮನಸ್ಸಿಲ್ಲ. ಅದನ್ನು ತಹಬದಿಗೆ ತರುವುದೇ ದೊಡ್ಡ ಸಮಸ್ಯೆ. ಈಗ ಮದ್ಯ ಎಲ್ಲೂ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕುಡಿಯದೆ ಉಳಿದು ಬಿಡಬಹುದು. ಆದರೆ ಮದ್ಯ ಕಣ್ಣೆದುರು ಇದ್ದಾಗ ಅದನ್ನು ಕುಡಿಯದೆ ಉಳಿಯುವುದು ಸಾಮಾನ್ಯದ ಮಾತಲ್ಲ. ಮರ್ಕಟ ಮನಸ್ಸು ಕೇಳುವುದಿಲ್ಲ. ಆಗಿದ್ದಾಗಲಿ ಇವತ್ತು ಕುಡಿದು ಬಿಡೋಣ ನಾಳೆಯಿಂದ ಬಿಟ್ಟು ಬಿಡೋಣ ಎಂಬ ತೀರ್ಮಾನಕ್ಕೆ ಬಂದು ಕುಡಿದು ಬಿಡುತ್ತಾರೆ.

ಇಲ್ಲಿ ಒಂದಿಷ್ಟು ಆಧ್ಯಾತ್ಮದ ಸಹಕಾರವೂ ಬೇಕಾಗುತ್ತದೆ. ದೇವರಿಗೆ (ಅದು ಯಾವುದೇ ಧರ್ಮದವರಾಗಿರಲಿ) ನಾವು ಶರಣಾಗಬೇಕಾಗುತ್ತದೆ. ಆತನ ಮೇಲೆ ಭಕ್ತಿಯಿಟ್ಟು ಸಂಪೂರ್ಣ ಆತನಿಗೆ ಮೊರೆ ಹೋಗಬೇಕು. ದೇವರತ್ತ ನಾವು ಮನಸ್ಸನ್ನು ಹರಿಸಿದ್ದೇ ಆದರೆ ಮನಸ್ಸು ದುಶ್ಚಟದತ್ತ ಸೆಳೆಯುವುದನ್ನು ತಡೆಯಬಹುದು. ಜತೆಗೆ ಮನೋ ನಿಗ್ರಹದಿಂದ ಶಾಂತಿ, ಶಾಂತಿಯಿಂದ ಚಿತ್ತ ಸ್ವಾಸ್ಥ್ಯ, ಚಿತ್ತ ಸ್ವಾಸ್ಥ್ಯದಿಂದ ಸುಖ ಪಡೆಯಲು ಸಾಧ್ಯವಾಗುತ್ತದೆ.

ಮನಸ್ಸಿನ ನಿಯಂತ್ರಣ ಸಾಧಿಸಿದರೆ ದುಶ್ಚಟದಿಂದ ದೂರವಿರಲು ಸಾಧ್ಯವಾಗುತ್ತದೆ. ಯಾವುದು ಒಳ್ಳೆಯದು ಮತ್ತು ಕೆಟ್ಟದು ಎಂಬುದು ನಮ್ಮ ಅರಿವಿಗೆ ಬಂದಿದ್ದೇ ಆದರೆ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುತ್ತದೆ. ಜತೆಗೆ ಮಾನಸಿಕ ತುಮುಲಗಳ ಪರಿಣಾಮವಾದ ಮಾನಸಿಕ ಹಾಗೂ ದೈಹಿಕ ಜಾಢ್ಯಗಳಿಂದ ಮುಕ್ತನಾಗಿರುತ್ತಾನೆ. ಯಾರು ಮನಸ್ಸನ್ನು ತನ್ನ ಹತೋಟಿಗೆ ತಂದುಕೊಂಡವನಾಗುತ್ತಾನೋ, ಅವನಲ್ಲಿ ಉದಾತ್ತ ಭಾವನೆಗಳು ಸ್ಥಾಯಿಯಾಗುತ್ತವೆ. ಆತನ ಸುಪ್ತ ಶಕ್ತಿಗಳು ಜಾಗೃತವಾಗುತ್ತವೆ. ಅಷ್ಟೇ ಅಲ್ಲ, ಕ್ರಮೇಣ ಉದಾತ್ತ ಸ್ಥಿತಿಗೂ ಏರುತ್ತಾನೆ. ಬದುಕಿನ ಯಾವುದೇ ಕ್ಷೇತ್ರದಲ್ಲಿ ಬಹುಕಾಲ ಉಳಿಯಬಲ್ಲ ಪ್ರಗತಿಯನ್ನಾಗಲೀ, ಅಭಿವೃದ್ಧಿಯನ್ನಾಗಲೀ, ಶಾಂತಿಯನ್ನಾಗಲೀ ಸಾಧಿಸುವುದು ದೃಢಮನಸ್ಕರಿಂದ ಮಾತ್ರ ಸಾಧ್ಯ ಎಂಬುದು ಆಧ್ಯಾತ್ಮ ಚಿಂತಕರು ಹೇಳಿದ್ದಾರೆ.

ಇವತ್ತಿನ ಪರಿಸ್ಥಿತಿಯಲ್ಲಿ ಒಂದಷ್ಟು ದೃಢಮನಸ್ಸು ಮಾಡಿ ಯಾರೆಲ್ಲ ದುಶ್ಚಟಗಳನ್ನು ಹೊಂದಿದ್ದಾರೋ ಅವರು ಬಿಟ್ಟು ಬಿಡುವ ಪ್ರಯತ್ನ ಮಾಡಿದ್ದೇ ಆದರೆ ನಿಜಕ್ಕೂ ಒಂದೊಳ್ಳೆಯ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಹಾಗೆನೋಡಿದರೆ ಮನೆಯಲ್ಲಿದ್ದಾಗ, ಕಷ್ಟದ ಸಮಯದಲ್ಲಿ ತಮಗೆಲ್ಲರ ಅರಿವಿಗೂ ಬಂದಿರುತ್ತದೆ. ಸಿಗರೇಟಿಗೆ ಅಥವಾ ಮದ್ಯಕ್ಕೆ ಮಾಡುವ ಖರ್ಚನ್ನು  ಲೆಕ್ಕ ಹಾಕಿ ನೋಡಿದರೆ ದುಪ್ಪಟ್ಟು ಎಂಬುದು ಎಲ್ಲರ ಗಮನಕ್ಕೆ ಬಂದಿರುತ್ತದೆ. ಅದೇ ಹಣವನ್ನು ಮನೆಯ ಅಗತ್ಯತೆಗೆ ಖರ್ಚು ಮಾಡಿದರೆ ಇಡೀ ಕುಟುಂಬ ನೆಮ್ಮದಿಯಾಗಿ ಜೀವನ ಮಾಡಲು ಸಾಧ್ಯವಿದೆ.

ಒಬ್ಬ ವ್ಯಕ್ತಿ ಭಗವಂತನ ಕೃಪೆಗೆ ಪಾತ್ರನಾಗಬಹುದು. ಗುರುಹಿರಿಯರ ಆಶೀರ್ವಾದವೂ ಅವನ ಮೇಲಿರಬಹುದು. ಆದರೆ ಆತ ತನ್ನ ಮನಸ್ಸಿನ ಕೃಪೆಗೆ ತಾನೇ ಪಾತ್ರನಾಗದಿದ್ದರೆ ಅವನು ನಾಶವಾದಂತೆಯೇ ಸರಿ ಎಂಬ ಲೋಕೋಕ್ತಿಯಿದೆ. ಇದು ನಿಜ. ನಾವು ಎಷ್ಟೇ ಒಳ್ಳೆಯವರಾದರೂ ದುಶ್ಚಟಗಳ ದಾಸರಾಗಿದ್ದೇವೆ ಎಂದರೆ ಸಮಾಜದಲ್ಲಿ ಸಿಗುವ ಗೌರವೂ ಅಷ್ಟಕಷ್ಟೆ. ಆದ್ದರಿಂದ ದುಶ್ಚಟವನ್ನು ಬಿಟ್ಟು ಬಿಡಿ. ಅದು ಸಾಧ್ಯವಾಗಬೇಕಾದರೆ ಮನಸ್ಸಿನ ನಿಯಂತ್ರಣ ಮಾಡುವುದು ಅಗತ್ಯವಿದೆ.