News Karnataka Kannada
Tuesday, April 23 2024
Cricket
ಹೊರನಾಡ ಕನ್ನಡಿಗರು

ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ ಪ್ರಾಯೋಜಿತ ಯಕ್ಷ ರಕ್ಷಾ ಗೌರವ- ವಾರ್ಷಿಕ ಪ್ರಶಸ್ತಿಗೆ ಪ್ರಭಾಕರ ಡಿ. ಸುವರ್ಣ ಆಯ್ಕೆ

Dubai
Photo Credit :

ದುಬಾಯಿ:  ಯಕ್ಷಗಾನ ಅಭ್ಯಾಸ ತರಗತಿ (DYAT) ತನ್ನ ನೂತನ ಯೋಜನೆಯಂತೆ, ದುಬಾಯಿ ಮತ್ತು ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ವಿಶೇಷವಾಗಿ ವಾರ್ಷಿಕ ಯಕ್ಷ ರಕ್ಷಾ ಗೌರವ ಪ್ರಶಸ್ತಿ ನೀಡಲು ಉದ್ದೇಶಿಸಿದಂತೆ, 2021-2022 ರ ಸಾಲಿನ ಪ್ರಶಸ್ತಿಗೆ ಯಕ್ಷಗಾನ ಕಲಾವಿದರೂ, ದುಬಾಯಿ- ತಾಯ್ನಾಡಿನಲ್ಲಿ ಯಕ್ಷಗಾನ ಸಂಘಟಕರಾಗಿ ಗುರುತಿಸಿಕೊಂಡ, ಸುವರ್ಣ ಪ್ರತಿಷ್ಠಾನ ಎಂಬ ಸೇವಾ ಸಂಸ್ಥೆಯ ಮೂಲಕ ವಿವಿಧ ಸೇವಾ ಯೋಜನೆ, ಯಕ್ಷಗಾನ ಕಲೆ – ಕಲಾವಿದರಿಗೆ ನೆರವಿನ ಹಸ್ತ ಚಾಚುತ್ತಿರುವ ಸಹೃದಯಿ ಸಾಧಕ. ಶ್ರೀಯುತ ಪ್ರಭಾಕರ ಡಿ. ಸುವರ್ಣರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.

ಈಗಾಗಲೆ ಒಂದು ವರ್ಷ ಪೂರೈಸಿರುವ ಈ ಯೋಜನೆಯಲ್ಲಿ ನಿವೃತ್ತ ಕಲಾವಿದರನ್ನು ಗೌರವಿಸುವ ಈ ಯಕ್ಷ ರಕ್ಷಾ ಗೌರವ ಯೋಜನೆಯಲ್ಲಿ ತ್ರೈಮಾಸಿಕಕ್ಕೆ 3 ಮಂದಿಯಂತೆ 12 ಮಂದಿ ಹಿರಿಯ ಕಲಾವಿದರನ್ನು, ಗೌರವಧನ ನೀಡಿ ಗೌರವಿಸಲಾಗಿದೆ. 3 ಮಂದಿಗೆ ತುರ್ತು ವೈದ್ಯಕೀಯ ನೆರವು ನೀಡಲಾಗಿದೆ. ಇದು ನೂತನವಾಗಿ ಪ್ರಾರಂಭಿಸಿದ ವಾರ್ಷಿಕ ಪ್ರಶಸ್ತಿ. ಪ್ರಶಸ್ತಿ ಭಾಜನರಾದ ಶ್ರೀಯುತ ಪ್ರಭಾಕರ ಡಿ. ಸುವರ್ಣರ ಕಿರು ಪರಿಚಯ ನಿಮ್ಮ ಮುಂದೆ.

ದುಬಾಯಿ ಯಕ್ಷ ರಕ್ಷಾ ಗೌರವ ಪ್ರಶಸ್ತಿ ಪುರಸ್ಕ್ರತ ಪ್ರಭಾಕರ ಡಿ. ಸುವರ್ಣ :
ಪ್ರಭಾಕರ ಡಿ. ಸುವರ್ಣ ಅವರು ಯಕ್ಷಗಾನ ಸಂಘಟಕರಾಗಿ, ಕಲಾವಿದರಾಗಿ, ಕಲಾಪೋಷಕರಾಗಿ ತನ್ನ ಇಳಿ ವಯಸ್ಸಿನಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತನ್ನ ಕಲಾ ಸೇವೆಯನ್ನು ಮುಂದುವರಿಸುತ್ತಿದ್ದಾರೆ. 2012 ರಲ್ಲಿ ದುಬೈಯ ಯಕ್ಷಗಾನ ಅಭ್ಯಾಸ ತರಗತಿಗೆ ಸೇರ್ಪಡೆಗೊಂಡ ಇವರು ಯಕ್ಷಗಾನ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್, ಶರತ್ ಕುಡ್ಲ ಅವರಿಂದ ನಾಟ್ಯ, ಅರ್ಥಗಾರಿಕೆ ಕಲಿತುಕೊಂಡವರು ಆರಂಭದ ದಿನಗಳಲ್ಲಿ ಕಿಶೋರ್ ಗಟ್ಟಿಯವರಿಂದಲೂ ತರಬೇತಿ ಪಡೆದಿದ್ದಾರೆ.

ಈಗಾಗಲೇ ವಿವಿದೆಡೆ ಪ್ರದರ್ಶನಗೊಂಡ ಯಕ್ಷಗಾನದಲ್ಲಿ ವಿವಿಧ ಪ್ರಸಂಗದಲ್ಲಿ ಭಾಗವಹಿಸಿದ ಇವರು ಆದಿಮಾಯೆ, ಬ್ರಹ್ಮ, ವಿಷ್ಣು, ಈಶ್ವರ, ಸುಗ್ರೀವ, ಅಷ್ಟಭುಜೆ, ಶಮೀಕ, ಚೆನ್ನಯ, ಧರ್ಮರಾಯ, ಬಪ್ಪನಾಡು ದುರ್ಗಾಪರಮೇಶ್ವರಿ, ವಾಮನ, ವಿಭೀಷಣ , ಮಾನಿಷಾದದ ಶ್ರೀರಾಮ, ಶ್ರೀನಿವಾಸ ಕಲ್ಯಾಣದ ಶ್ರೀನಿವಾಸ ಮೊದಲಾದ ಪಾತ್ರಗಳನ್ನು ಯಶಸ್ವಿಯಾಗಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಮಾತ್ರವಲ್ಲದೆ ಶ್ರೀ ಕಟೀಲು ಮೇಳ, ಶ್ರೀ ಧರ್ಮಸ್ಥಳ ಮೇಳ, ಬಪ್ಪನಾಡು, ಬಾಳ ಮೇಳಗಳಲ್ಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದಾರೆ.

1951 ಜುಲೈ 10 ರಂದು ದಾಸಪ್ಪ ಜತನ್ನ – ಕಲ್ಯಾಣಿ ದಾಸಪ್ಪ ದಂಪತಿಯ ಪುತ್ರನಾಗಿ ಜನಿಸಿದರು. ಧರ್ಮಪತ್ನಿ ವಸಂತಿ ಸುವರ್ಣ, ಅವರೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ. ಇಬ್ಬರು ಪುತ್ರಿಯರಲ್ಲಿ ಒಬ್ಬಾಕೆ ಪೃಥ್ವಿ ಸುವರ್ಣ ಯಕ್ಷಗಾನ ಕಲಾವಿದೆಯಾಗಿ ಬಣ್ಣ ಹಚ್ಚಿದವರು.

ಬಿ.ಕಾಂ ಪದವೀಧರನಾದ ಇವರು ದುಬೈಯ ಅಲ್ಶಾಯ ಟ್ರೇಡಿಂಗ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಬಾಲ್ಯದಲ್ಲೇ ಇವರಿಗೆ ಯಕ್ಷಗಾನದ ಆಸಕ್ತಿ ಇತ್ತಾದರೂ ಅದನ್ನು ತನ್ನ ಜೀವನದ ಒಂದು ಭಾಗವನ್ನಾಗಿಸಿಕೊಳ್ಳುವ ಅವಕಾಶ ಲಭಿಸಿದ್ದು ಜೀವನದ ತುಂಬು 5 ದಶಕಗಳನ್ನು ಕಳೆದ ಮೇಲೆ. ಅದೂ ದುಬಾಯಿಯ ನೆಲದಲ್ಲಿ. ಆ ಕಲೆಯ ಒಲವು ಇನ್ನಷ್ಟು ಪ್ರಜ್ವಲಿಸಿದ್ದು – ಸಾರ್ಥಕಗೊಂಡಿರುವುದು ದುಬೈಯ ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ಎಂಬುವುದು ಹೆಮ್ಮೆಯ ಸಂಗತಿ. ಯಕ್ಷಗಾನವೆಂಬ ದೈವಿಕ ಕಲೆಯನ್ನು ಆರಾಧಿಸಿಕೊಂಡು ಅದನ್ನು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಿದ ಪ್ರಭಾಕರ ಸುವರ್ಣ ಅವರನ್ನು ವಿವಿಧ ಸಂಘ – ಸಂಸ್ಥೆಗಳ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.

ಬಿಲ್ಲವಾಸ್ ದುಬೈ, ರಜತ ಚಂದ್ರ, ಅಮ್ಮುಂಜೆ ಮಹೋತ್ಸವ, ಸುವರ್ಣ ಪ್ರತಿಷ್ಠಾನ, ಯಕ್ಷಮಿತ್ರರು ದುಬೈ, ಮುಂಬಯಿಯಲ್ಲಿ ಅಸ್ರಣ್ಣ ವೇದಿಕೆ ಮೊದಲಾದ ಕಡೆಗಳಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಯಕ್ಷಗಾನ ರಂಗದಲ್ಲಿ ಇನ್ನಷ್ಟು ಸಾಧನೆಗೈಯಲಿರುವ ಎಲ್ಲಾ ಸಾಧ್ಯತೆಗಳು ಇವರಿಗಿರುವುದು ಹೆಮ್ಮೆಯ ವಿಷಯವಾಗಿದೆ. ತಾನೇ ಸ್ಥಾಪಕನೂ, ಮುಖ್ಯ ಕಾರ್ಯಕರ್ತನೂ, ಮುಖ್ಯ ಪ್ರಾಯೋಜಕನೂ ಆಗಿರುವ ಸುವರ್ಣ ಪ್ರತಿಷ್ಠಾನ ಕರ್ನಿರೆ ಎಂಬ ಸಂಸ್ಥೆ ಸ್ಥಾಪಿಸಿ ಕಲೆ, ಕಲಾವಿದರಿಗೆ ಉದಾರವಾಗಿ ಸಹಾಯ ನೀಡುವುದಲ್ಲದೇ ತನ್ನ ಸುವರ್ಣ ಪ್ರತಿಷ್ಠಾನದ ಮೂಲಕ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ತುಂಬು ಹೃದಯದಿಂದ ಸಹಾಯ ನೀಡುವ ದಾನಿಗಳೂ ಆಗಿದ್ದಾರೆ.

ಕೋರೋನದ ವಿಷಮ ಕಾಲದಲ್ಲಿ ಕಲಾವಿದರಿಗೆ, ಮತ್ತು ಬಡ ಜನರಿಗೆ ಆಹಾರ ಕಿಟ್ ಪೂರೈಸಿದ್ದಾರೆ. 70 ವಸಂತಗಳು ಮುಂದುವರಿದು, ಯುವಕರೂ ನಾಚುವಂತೆ ಉತ್ಸಾಹದ ಬುಗ್ಗೆ ಯಾಗಿರುವ ಇವರ ಯಕ್ಷರಂಗದ ಪ್ರವೇಶ ವಿಳಂಬವಾದರೂ ಎರಡು ಮುಖ್ಯ ಕಾರಣಗಳಿಂದ ಪ್ರಾಮುಖ್ಯ ಪಡೆಯುವುದು, ಒಂದು, ಇವರು ಹಮ್ಮಿಕೊಂಡ ಅನೇಕ ಯಕ್ಷಗಾನ ಕಾರ್ಯಕ್ರಮ-ಮತ್ತದೇ ವೇದಿಕೆಯಲ್ಲಿ ಅನೇಕ ಕಲಾವಿದರಿಗೆ ಸನ್ಮಾನ ಗಳ ಮೂಲಕ ಅನೇಕ ಕಲಾವಿದರ ಅನ್ನಕ್ಕೆ ಕಾರಣರಾದವರು. ಮಾತ್ರವಲ್ಲದೆ, ಅನೇಕ ಬಡ ಕಲಾವಿದರಿಗೆ, ಕಲಾವಿದರ ಮಕ್ಕಳಿಗೆ ಸಹಾಯಧನ, ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ತುಂಬು ಹೃದಯದಿಂದ ಸಹಾಯ ನೀಡುವ ದಾನಿಗಳೂ ಆಗಿದ್ದಾರೆ. ದುಬಾಯಿಯ ಯಕ್ಷಗಾನ ಕಾರ್ಯಕ್ರಮಗಳಿಗೆ ಹುಟ್ಟೂರಿನ ಅನೇಕ ಕಲಾವಿದರನ್ನು ಬರಮಾಡಿಕೊಂಡು ಸತ್ಕರಿಸಿದವರು ಮಾತ್ರವಲ್ಲದೆ ಇಲ್ಲಿ ನಡೆವ ಅನೇಕ ಯಕ್ಷಗಾನ ಕಾರ್ಯಕ್ರಮಗಳಿಗೆ ಊರಿಂದ ಬರುವ ಯಕ್ಷಗಾನ ಕಲಾವಿದರ ಪ್ರಾಯೋಜಕತ್ವ ವಹಿಸಕೊಂಡು ಸದಾ ದುಬಾಯಿಯ ಯಕ್ಷಗಾನ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿದವರು.

ಪ್ರಶಸ್ತಿ ಪುರಸ್ಕ್ರತ ಶ್ರೀಯುತ ಪ್ರಭಾಕರ ಡಿ. ಸುವರ್ಣರಿಗೆ ಅಭಿನಂದನೆಗಳನ್ನು ಸಲ್ಲಿಸುವ ಜೊತೆಗೆ, ಅವರ ಶೇಷ ಜೀವನ ಸುಖ, ಸಂತೋಷ, ಸಮೃದ್ಧಿಗಳಿಂದ ನಡೆವಂತೆ, ಅವರ ಕೈಯಿಂದ ಇನ್ನಷ್ಟು ಯಕ್ಷಗಾನ ಸೇವೆ ನಡೆವಂತೆ ನಾವು ಪೂಜಿಸುವ ಕಲಾಮಾತೆ ಕಟೀಲು ದುರ್ಗಾಪರಮೇಶ್ವರಿ, ಮಹಾಗಣಪತಿ ಮತ್ತು ಈ ವರ್ಷ ಯಕ್ಷರಾಧನೆಯಿಂದ ಕೊಂಡಾಡಲ್ಪಡುವ ತಾಯಿ ಅನ್ನಪೂರ್ಣೇಶ್ವರಿ, ಸಕಲ ಧುರಿತ ನಿವಾರಕಿಯಾದ ತಾಯಿ ಲಲಿತಾಪರಮೇಶ್ವರಿ ಸದಾ ಅನುಗ್ರಹ ಹಸ್ತಳಾಗಲೆಂದು ಸಮಸ್ತ ದುಬಾಯಿಯ ಯಕ್ಷಕಲಾರಾಧಕರ ಪರವಾಗಿ ಹಾರೈಕೆ.

ಇದೇ ಬರುವ ಜೂನ್ 11ರಂದು ನಡೆಯಲಿರುವ ದುಬಾಯಿ ಯಕ್ಷೋತ್ಸವದ ಅಂಗವಾಗಿ ನಡೆಯಲಿರುವ ಲಲಿತೋಪಖ್ಯಾನ ಯಕ್ಷಗಾನ ಪ್ರದರ್ಶನದ ವೇದಿಕೆಯಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ, ಈ ವಿಶೇಷ ಪ್ರಶಸ್ತಿಯನ್ನು ನೀಡಿ ಶ್ರೀಯುತ ಪ್ರಭಾಕರ ಡಿ.ಸುವರ್ಣರನ್ನು ಗೌರವಿಸಲಾಗುವುದೆಂದು ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಸಂಚಾಲಕರಾದ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು