ದುಬೈಯ "ಹೆಮ್ಮೆಯ ಯುಎಇ ಕನ್ನಡಿಗರು"

ದುಬೈಯ "ಹೆಮ್ಮೆಯ ಯುಎಇ ಕನ್ನಡಿಗರು"

Sep 25, 2020 10:23:04 AM (IST)
ದುಬೈಯ "ಹೆಮ್ಮೆಯ ಯುಎಇ ಕನ್ನಡಿಗರು"

ನಿಸ್ಸಾಯಕತೆಗೆ ಸ್ಪಂದಿಸುವ ಸಹಾಯಕ ಮನೋಭಾವ, ದಾನ-ಧರ್ಮವನ್ನು ಮೂಲವಾಗಿಸಿ ಜಾತಿ,ಮತ ಪರಿಗಣಿಸದೆ ಪರಸ್ಪರ ಸಹಕರಿಸುವ ಕನ್ನಡ ನಾಡಿನ ಜನತೆಯ ಒಗ್ಗಟ್ಟನ್ನು ಕೊಲ್ಲಿ ರಾಷ್ಟ್ರದಲ್ಲಿ ಪ್ರತಿಬಿಂಬಿಸುವಲ್ಲಿ ದುಬೈ ಹೆಮ್ಮೆಯ ಕನ್ನಡಿಗರು-ಯುಎಇ ಸಂಘಟನೆಯು ಮಹತ್ತರವಾದ ಪಾತ್ರವಹಿಸಿದೆ.

"ಕನ್ನಡವೇ ಜಾತಿ-ಕನ್ನಡವೇ ಧರ್ಮ" ಎಂಬ ಧ್ಯೆಯೋದ್ದೇಶವನ್ನಿರಿಸಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆಯು "ಎಲ್ಲದರೂ ಇರು ಎಂತದರೂ ಇರು...ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ವಾಕ್ಯಕ್ಕೆ ಅನ್ವರ್ಥವಾಗಿದೆ.
ದೈನಂದಿನ ಜೀವನವನ್ನು ಕಟ್ಟಿಕೊಳ್ಳಲು ತಾಯ್ನಾಡನ್ನು ಬಿಟ್ಟು ದುಬೈ ಮಣ್ಣಿಗೆ ಆಗಮಿಸಿದವರಿಗೆ ತುರ್ತು ಸಂದರ್ಭದಲ್ಲಿ ಆಸರೆಯಾಗಿ ನಿಂತ ಅಭಿಮಾನ ಮೂಡಿಸಿದ ಸಂಘಟನೆಯ ಕಾರ್ಯ ವೈಖರಿಯ ಬಗ್ಗೆ ವಿಶೇಷ ಚಾನೆಲ್ "ವಿದೇಶ_ವಿಶೇಷ" ಎಂಬ ಈ ಅಂಕಣದ ಮೂಲಕ ಸಚಿತ್ರ ಪರಿಚಯ ನಿಮ್ಮ‌ ಮುಂದಿಡುತ್ತಿದೆ.

ಕೊರೋನಾ ಮಹಾಮಾರಿ ಪ್ರಾಂಭವಾಗಿ ಲಕ್ಷಾಂತರ ಜನರು ವಾಸಿಸುವ ದುಬೈಯ ಹೃದಯ ಭಾಗವಾದ ದೇರಾ ದುಬೈಯನ್ನು ಕೋರೋನ ವೈರಸ್ ಹಾಟ್ ಸ್ಪಾಟ್ ಸ್ಥಳವಾಗಿ ಮಾರ್ಪಟ್ಟಾಗ ದುಬೈ ಸರ್ಕಾರ ದೇರಾ ದುಬೈ ಪ್ರಾಂತ್ಯವನ್ನು ಸಂಪೂರ್ಣವಾಗಿ ಎರಡು ತಿಂಗಳುಗಳ ಕಾಲ ಲಕ್ ಡೌನ್ ಮೇಲೆ ಸೀಲ್ಡೌನ್ ಮಾಡಿದರು ( ಈ ಪ್ರದೇಶದಿಂದ ಯಾರು ಸಹ ಹೊರ ಹೋಗುವಾಗಿಲ್ಲ ಮತ್ತು ಇಲ್ಲಿಗೆ ಯಾರು ಸಹ ಒಳ ಬರುವಾಗಿಲ್ಲ ಎಂಬ ನಿಷೇದಾಜ್ಞೆ) ,
ಈ ಸೀಲ್ಡೌನ್ ಸಮಯದಲ್ಲಿ ದುಬೈ ಪೊಲೀಸರು ಮತ್ತು ದುಬೈ ಅರೋಗ್ಯ ಸಂಸ್ಥೆಯೊಂದಿಗೆ ಸೇರಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಕರ್ನಾಟಕದಿಂದ ದುಬೈ ಹೆಮ್ಮೆಯ ಕನ್ನಡಿಗರು ಸಂಘಕ್ಕೆ ಮಾತ್ರ ಅವಕಾಶ ಸಿಕ್ಕಿತ್ತು, ಸೀಲ್ಡೌನ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಜನರಿಗೆ ಆಹಾರ ಪೂರೈಕೆ, ಅಗತ್ಯ ಔಷಧಿ ಪೂರೈಕೆ ಮತ್ತು ಸಾವಿರಾರು ಕೋವಿಡ್ ರೋಗಿಗಳನ್ನು( ನೂರಾರು ಕನ್ನಡಿಗ ರೋಗಿಗಳನ್ನು ಸಹ ) ಐಸೋಲೇಷನ್ ವಾರ್ಡುಗಳಿಗೆ ಮತ್ತು ಆಸ್ಪತ್ರೆಗೆ ವರ್ಗಾವಣೆ ಮಾಡುವ ಕೆಲಸವನ್ನು ಸಂಘಟನೆ ದುಬೈ ಪೊಲೀಸರು ಮತ್ತು ದುಬೈ ಆರೋಗ್ಯ ಸಂಸ್ಥೆಯ ಜೊತೆ ಸೇರಿ ರಫೀಕಲಿ ಕೊಡಗು ಅವರ ಮುಂದಾಳತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಇಲ್ಲಿನ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾದರು .

ದುಬೈ ಹೆಮ್ಮೆಯ ಕನ್ನಡ ಸಂಘಟನೆ ಕೋವಿಡ್ ಲಾಕ್‌ಡೌನ್ ಕಾರಣ ಕೆಲಸ ಕಳೆದುಕೊಂಡ ನೂರಾರು ಕನ್ನಡಿಗರಿಗೆ, ವಿಸಿಟ್ ವೀಸಾದಲ್ಲಿ ಕೆಲಸ ಹುಡುಕಲು ಬಂದ ನೂರಾರು ಕನ್ನಡಿಗರಿಗೆ ಮತ್ತು ಸಂಕಷ್ಟದಲ್ಲಿದ್ದ ಕನ್ನಡ ಕುಟುಂಬಗಳಿಗೆ ಉದ್ಯಮಿ ಮೊಹಮ್ಮದ್ ಮುಸ್ತಫಾ ಕನ್ನಡಿಗ ಮತ್ತು ಹಲವು ಕನ್ನಡಿಗ ದಾನಿಗಳ ಸಹಾಯದಿಂದ ಒಂದು ತಿಂಗಳಿಗಾಗುವಷ್ಟು ಆಹಾರ ಪದಾರ್ಥ ತಲುಪಿಸಿದರು ಮತ್ತು ಸಂಕಷ್ಟದಲ್ಲಿದ್ದವರಿಗೆ ವಾಸಸ್ಥಳದ ವ್ಯವಸ್ಥೆ ಮಾಡಿಕೊಟ್ಟರು, ಹಾಗೂ ತಾಯಿನಾಡಿಗೆ ಮರಳಲು ವಿಮಾನ ಟಿಕೆಟ್ ತೆಗೆಯಲು ಹಣ ಇಲ್ಲದ ಹಲವರಿಗೆ ಉಚಿತವಾಗಿ ಟಿಕೆಟ್ ನೀಡಿದರು, ದಾನಿಗಳ ಸಹಾಯದಿಂದ ಸುಮಾರು 16 ಲಕ್ಷ ರೂಗಿಂತ ಹೆಚ್ಚು ಸಹಾಯವನ್ನು ವಿವಿಧ ರೀತಿಯಲ್ಲಿ ಈ ಹೆಮ್ಮೆಯ ಕನ್ನಡಿಗರು ತಂಡ ಮಾಡಿತ್ತು.

ಅದು ಅಲ್ಲದೆ ಯುಎಇಯಲ್ಲಿ ಸೇವೆ ನಿರ್ವಹಿಸುತ್ತಿರುವ ಕನ್ನಡ ಡಾಕ್ಟರ್ಸ್ ಜೊತೆ ಸೇರಿ ಹೆಮ್ಮೆಯ ಕನ್ನಡಿಗರು ತಂಡದ ಡಾಕ್ಟರ್ ಸವಿತಾ ಮೋಹನ್ ಮೈಸೂರು ಅವರ ಮುಂದಾಳತ್ವದಲ್ಲಿ ಫೀಸ್ ಭರಿಸಲು ಸಾಧ್ಯವಿಲ್ಲದ ಹಲವು ಕನ್ನಡಿಗ ರೋಗಿಗಳಿಗೆ ಉಚಿತ ಮೆಡಿಕಲ್ ಚಿಕಿತ್ಸೆ ಮತ್ತು ಆರೋಗ್ಯ ಕನ್ಸಲ್ಟೇಷನ್ ಆನ್ಲೈನ್ ಮೂಲಕ ನೀಡಿ ಸಹಾಯ ಮಾಡಿದರು.

ಕೋವಿಡ್-19 ಮಾರಕ ಖಾಯಿಲೆಯಿಂದ ಇಡೀ ಪ್ರಪಂಚವೇ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಲಾಕ್ ಡೌನ್ ಸಡಿಲಗೊಂಡಾಗ ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಗರ್ಭಿಣಿಯರು, ಮೆಡಿಕಲ್ ಎಮರ್ಜೆನ್ಸಿ,ವಿದ್ಯಾರ್ಥಿಗಳು, ಮಕ್ಕಳು ಮತ್ತು ಹಿರಿಯರು ಸೇರಿ ಸಂಕಷ್ಟದಲ್ಲಿದ್ದ ಹಲವು ಕನ್ನಡಿಗರನ್ನು ಚಾರ್ಟೆಡ್ ವಿಮಾನ ಮತ್ತು ವಂದೇ ಭಾರತ್ ವಿಮಾನಗಳ ಮೂಲಕ ತಾಯಿನಾಡಿಗೆ ತಲುಪಿಸುವ ಕಾರ್ಯದಲ್ಲಿ ಹೆಮ್ಮೆಯ ಕನ್ನಡಿಗರು ಸಕ್ರೀಯವಾಗಿ ಕಾರ್ಯ ನಿರ್ವಹಿಸಿತ್ತು.

ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ಆಹಾರ ಸಾಮಗ್ರಿ, ಔಷದಿ ಮತ್ತು ಇನ್ನಿತರ ಸಹಾಯ ತಲುಪಿಸಲು ತಮ್ಮ ತಮ್ಮ ಸ್ವಂತ ವಾಹನಗಳನ್ನು ತಂದು ತಂಡದ ಜೊತೆ ನವಾಜ್ ಕುಂದಾಪುರ, ಹರೀಶ್ ಕೊಡಗು, ಕ್ಲೀವನ್ ಉಡುಪಿ, ಅಬ್ದುಲ್ ಹಾದಿ ಭಟ್ಕಳ, ಸುಹೈಲ್ ಮಂಗಳೂರು, ನೌಫಲ್ ದಕ್ಷಿಣ ಕನ್ನಡ,ನಿಜಾರ್ ಕಾಸರಗೋಡು ಕನ್ನಡಿಗ, ಫಯಾಜ್ ಕುಂದಾಪುರ, ಅಬ್ರಾರ್ ಶಿವಮೊಗ್ಗ, ಹಾದಿಯ ಮಂಡ್ಯ, ಮಮತಾ ಶಾರ್ಜಾ, ಸೆಂತಿಲ್ ಬೆಂಗಳೂರು, ಮೊಯಿನುದ್ದೀನ್ ಹುಬ್ಬಳ್ಳಿ, ಸಯ್ಯದ್ ಶಿವಮೊಗ್ಗ,ವಿನೋದ್ ಡಿಸೋಜ ಮಂಗಳೂರು, ರಫೀಕಲಿ ಕೊಡಗು ಮುಂತಾದವರು ಸಂಯುಕ್ತ ಅರಬ್ ಸಂಸ್ಥಾನದ ಏಳು ಎಮಿರೇಟುಗಳ ( ಅಬುಧಾಬಿ, ದುಬೈ, ಅಜ್ಮಾನ್, ಫುಜೈರಾ, ರಾಸ್ ಅಲ್ ಖೈಮಾ, ಶಾರ್ಜಾ ಮತ್ತು ಉಮ್ ಅಲ್ ಕ್ವೈನ್ ) ವಿವಿಧ ಕಡೆಗಳಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಆಹಾರ ಔಷದಿ ತಲುಪಿಸಲು ಬಹಳ ಶ್ರಮ ವಹಿಸಿದರು.

ಕನ್ನಡ ಮಣ್ಣಿಗೆ ಅನ್ಯಾಯವಾಗುವಾಗ ದೂರದ ವಿದೇಶದಿಂದಲೇ ತಾಯ್ನಾಡಿಗಾಗಿ ದ್ವನಿ ಎತ್ತುವ ಇವರು ದಸರಾ ಕ್ರೀಡಾಕೂಟ, ಕನ್ನಡ ರಾಜ್ಯೋತ್ಸವ , ಸ್ವಾತಂತ್ರ್ಯ ದಿನಾಚರಣೆ ಮುಂತಾದ ಕಾರ್ಯಕ್ರಮಗಳನ್ನು ಮತ್ತು ಸರ್ವ ಧರ್ಮ ಇಫ್ತಾರ್ ಕೂಟ, ಸಂಕ್ರಾಂತಿ ಕ್ರಿಸ್ಮಸ್ ಮುಂತಾದ ಧಾರ್ಮಿಕ ಹಬ್ಬಗಳನ್ನು ವಿದೇಶದಿಂದಲೇ ಸಂಭ್ರಮದೊಂದಿಗೆ ಎಲ್ಲರೂ ಜೊತೆ ಸೇರಿ ಆಚರಿಸಿತ್ತಾರೆ.ಇದರೊಂದಿಗೆ ಕನ್ನಡಿಗರ ಯಶಸ್ವಿಗೆ ಶ್ರಮಿಸಿದ ಕರ್ನಾಟಕದ ಹೆಸರನ್ನು ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ಬೆಳಗಿಸಿದ ಕ್ರಿಡಾಪಟುಗಳು,ಧೀರ ಯೋಧರು, ಕವಿಗಳನ್ನು ದುಬೈಗೆ ಕರೆಸಿಕೊಂಡು ಅವರಿಗೆ ಸನ್ಮಾನ ಸಮಾರಂಭಗಳನ್ನು ಏರ್ಪಡಿಸುತ್ತಾರೆ.

ಕನ್ನಡ ನಾಡಿನಿಂದ ಕೆಲಸ ಹುಡುಕಿಕೊಂಡು ಬಂದ ಜನರಿಗೆ ಉದ್ಯೋಗದ ಬಗ್ಗೆ ಮಾಹಿತಿ ಮತ್ತು ಹಲವರಿಗೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಕೊಟ್ಟಿದ್ದಲ್ಲದೆ ವರ್ಷಕ್ಕೆ ಒಂದು ಬಾರಿ ಜಾಬ್ ಫೇರ್ ಮಾಡಿ ಇಲ್ಲಿ ನೆಲಸಿರುವ ಬಿಸ್ನೆಸ್ ಕನ್ನಡಿಗರನ್ನು ಮತ್ತು ಇತರ ಕನ್ನಡೇತರ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗ ಎಚ್ ಆರ್ ಗಳನ್ನು ಕರೆಸಿ ಅವರ ಸಂಸ್ಥೆಗಳಿಗೆ ನೇಮಕಾತಿ ಮಾಡಿಕೊಳ್ಳುದು ಹಾಗೆ ಯುಎಇಯಲ್ಲಿರುವ ಬಿಸ್ನೆಸ್ ಕನ್ನಡಿಗರನ್ನು ಒಂದುಗೂಡಿಸಿ ಯುಎಇ ಕನ್ನಡಿಗಸ್ ಬಿಸ್ನೆಸ್ ಫಾರಂ ಮೂಲಕ ಕನ್ನಡಿಗರ ವ್ಯಾಪಾರ ವ್ಯವಹಾರಗಳಿಗೆ ಸಹಾಯ ಮಾಡುದು ಮುಂತಾದ ಯೋಜನಗಳನ್ನು ಮಾಡುತ್ತಾರೆ. ಅದೇ ರೀತಿ ರಕ್ತದಾನ ಶಿಬಿರದಂತ ಸಾಮಾಜಿಕ ಕಾರ್ಯ, ವರ್ಷದಲ್ಲಿ ಒಂದು ಬಾರಿ ಕನ್ನಡಿಗರನ್ನೆಲ್ಲ ಸೇರಿಸಿ ದೂರದ ಪ್ರದೇಶಗಳಿಗೆ ಬಸ್ ಪ್ರವಾಸವನ್ನು ಆಯೋಜಿಸುತ್ತಾರೆ.

ಹೆಮ್ಮೆಯ ಕನ್ನಡಿಗರು ತಂಡ : ಸುದೀಪ್ ದಾವಣಗೆರೆ ( ಅಧ್ಯಕ್ಷರು ) , ಮಮತಾ ರಾಘವೇಂದ್ರ ಮೈಸೂರು ( ಉಪಾಧ್ಯಕ್ಷರು), ಸೆಂತಿಲ್ ಬೆಂಗಳೂರು ( ಮುಖ್ಯ ಕಾರ್ಯದರ್ಶಿ), ರಫೀಕಲಿ ಕೊಡಗು, ಮಮತಾ ಶಾರ್ಜಾ ಬೆಂಗಳೂರು, ಪಲ್ಲವಿ ಬಸವರಾಜ್ ಧಾರವಾಡ, ಡಾ. ಸವಿತಾ ಮೋಹನ್ ಮೈಸೂರು, ಅನಿತಾ ರಾಮ್ ಬೆಂಗಳೂರು, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ಶಂಕರ್ ಬೆಳಗಾವಿ, ಮೊಇದೀನ್ ಹುಬ್ಬಳ್ಳಿ, ವಾಗೀಶ್ ಮೈಸೂರು ಹಾಗೂ 5೦ ಸದಸ್ಯರ ಉಪ ತಂಡವನ್ನು ಒಳಗೊಂಡಿದೆ.

ಕನ್ನಡ ನಾಡಿನ ಹೆಮ್ಮೆಯ ಪ್ರತಿನಿದಿಯಾಗಿ ಕಾರ್ಯಚರಿಸುತ್ತಿರುವ ಹೆಮ್ಮೆಯ ಕನ್ನಡಿಗರು ಸಂಘಟನೆಯು ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿ ಸಂಕಷ್ಟದಲ್ಲಿರುವವರ ಪಾಲಿಗೆ ಆಶಾಕಿರಣವಾಗಿ ಇನ್ನೂ ಎತ್ತರಕ್ಕೆ ಬೆಳೆಯಲಿ ಹಾಗೂ ಈ ಸಂಘಟನೆಯೂಂದಿಗೆ ಕೈ ಜೋಡಿಸುವ ಎಲ್ಲಾ ಸಹೃದಯದವರೀಗು ದೇವರು ಒಳಿತನ್ನು ಕರುಣಿಸಲಿ ಎಂದು ಕನ್ನಡ ನಾಡಿನ ಪರವಾಗಿ ನಮ್ಮ ಮಾಧ್ಯಮ ಹಾರೈಸುತ್ತೇವೆ.