ಅಮೇರಿಕ: ಸಿ-ಯು-ಟಿ ಕಟ್, ಪಿ-ಯು-ಟಿ ಪುಟ್, ಸ್ಯಾನ್ ಹೋಝೆ, ಸ್ಯಾನ್ ಜೋಸೆ ಇತ್ಯಾದಿ ಅಸಂಖ್ಯ ಅಸಮರ್ಥನೀಯ ಭ್ರಾಮಕ ಉಚ್ಚಾರಣೆಗಳ ಪದಪುಂಜಗಳಿಂದ ರಂಜಿತವಾದ, ಪುಣ್ಯವಾಚಕ ಪದವಿಲ್ಲದ, ರುಜುವಲ್ಲದ ಸ್ವಚ್ಛಂದ ಭಾಷೆ ಇಂಗ್ಲೀಷ್ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಅವರು ಸ್ಯಾನ್ ಹೋಸೆ ಸಂಸ್ಕೃತ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ಶಬ್ದ ಅರ್ಥಗಳಿಗೆ ಸಹಜವಾದ ಔತ್ಪತ್ತಿಕ ಸಂಬಂಧವುಳ್ಳದ್ದೆಂದು ಗುರುತಿಸಿಲ್ಪಟ್ಟ, ಸ್ಪಷ್ಟ ಕ್ಲಿಷ್ಟ ಉಚ್ಚಾರಣೆಗಳ ಮೂಲಕ ಭಾವನಾ ಪರಿಶುದ್ಧತೆಯನ್ನು ಸಾಧಿಸುವ ಅತ್ಯಂತ ಸುಸಂಸ್ಕೃತ ರುಜು ಭಾಷೆಯಾದ ಚೌಕಟ್ಟು ಬದ್ಧವಾದ ಅನಾದಿ, ವೈಜ್ಞಾನಿಕ ಭಾಷೆಯಾದ, ಸಮಸ್ತ ಪದಗಳ ಮೂಲಕ ಕಂಪ್ಯೂಟರ್ ಯಂತ್ರಕ್ಕೂ ಆಪ್ಯಾಯಮಾನವಾದ, ಸಂಸ್ಕೃತ, ಗಂಗಾ ಇತ್ಯಾದಿ ಸಂಸ್ಕಾರಯುಕ್ತ ಪದಗಳನ್ನು ಸ್ಯಾಂಸ್ಕೃಟ್, ಗ್ಯಾಂಜಸ್ ಇತ್ಯಾದಿ ಕುರೂಪೀಕರಿಸುವ ಅನಿವಾರ್ಯತೆ ಇಲ್ಲದ, ಏಕ ಭಾಷಾಧ್ಯಯನದಿಂದ ಜಗತ್ತಿನ ಸರ್ವ ಭಾಷಾಧ್ಯಯನವನ್ನು ಸುಲಭ ಸಾಧ್ಯಗೊಳಿಸುವ, ಜನರನ್ನು ಅಸ್ಪಷ್ಟತೆಯಿಂದ ಸ್ಪಷ್ಟತೆಗೆ ಒಯ್ಯುವ ಸಂಸ್ಕೃತ ಭಾಷೆಯನ್ನು ತುಲನೆ ಮಾಡಿದಾಗ ಭಾಷೆಗಳೆರಡರ ಬಗ್ಗೆ ಸ್ಪಷ್ಟ ಅಂತರ ಹಾಗೂ ಮೌಲ್ಯಗಳು ದೃಗ್ಗೋಚರವಾಗುತ್ತದೆ, ನಿಚ್ಛಳವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಅವರು ಮಹಾಭಾರತ ಚಿತ್ರಮಾಲಿಕೆ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಇತ್ತೀಚೆಗೆ ಕ್ಯಾಲಿಫೋರ್ನಿಯಾದ, ಕ್ಯೂಪರ್ಟಿನೋ ನಗರದ ವಿದ್ಯಾಲಯಗಳಲ್ಲಿ ಸಂಸ್ಕೃತವನ್ನೂ ಪಠ್ಯ ಭಾಷೆಯನ್ನಾಗಿ ಅಂಗೀಕರಿಸಿದನ್ನು ಅಭಿನಂದಿಸುತ್ತಾ ಅವರು, ಇಂದು ಆಸ್ಟ್ರೇಲಿಯಾ, ಇಂಗ್ಲೆಂಡ್ ಇತ್ಯಾದಿ ಅನೇಕ ದೇಶಗಳು ಸಂಸ್ಕೃತದ ಮಹತ್ತ್ವವನ್ನು ಗುರುತಿಸಿ ಅದರ ಪ್ರಸಾರಕ್ಕೆ ವಿಶೇಷ ಆಸ್ಥೆಯನ್ನು, ಕಾಳಜಿಯನ್ನು ಹೊಂದಿರುವುದನ್ನು ಭಾರತೀಯರು ಗುರುತಿಸುವ ಆವಶ್ಯಕತೆಯಿದೆ ಎಂದರು.
ವಿದ್ವಾನ್ ಶ್ರೀಪ್ರಸಾದ ಕೈಪ, ವೇದವಿದ್ವಾನ್ ಶ್ರೀ ನರೇಂದ್ರ ಕಪ್ರೆ, ಸತ್ಯನಾರಾಯಣ ಭಟ್ಟ ಇವರ ನೇತೃತ್ವದಲ್ಲಿ ಸಂಸ್ಕೃತ ಭಾರತಿ, ಕ್ಯಾಲಿಫೋರ್ನಿಯಾ ಶಾಖೆಯ ವಿಂಶತಿ ಉತ್ಸವದ ಪ್ರಯುಕ್ತ ಪ್ರಾರಂಭವಾದ ಸಂಸ್ಕೃತ ಸಮ್ಮೇಳನದಲ್ಲಿ ಪ್ಯಾಲೋ ಆಲ್ಟೊ, ಕ್ಯೂಪರ್ಟಿನೋ, ಎವರ್ ಗ್ರೀನ್ ಹಾಗೂ ಫ್ರೀಮಾಂಟ್ ಶಾಖೆಗಳ ಬಾಲ ಕೇಂದ್ರದ ವಿದ್ಯಾರ್ಥಿಗಳಿಂದ ಹಾಗೂ ಸನ್ನಿವೇಲ್ ಪ್ರೌಢ ವಿದ್ಯಾರ್ಥಿಗಳಿಂದ ವಿವಿಧ ಪ್ರದರ್ಶನಾವಳಿಗಳು ನಡೆದವು. ವಿದ್ವಾನ್ ಶ್ರೀನಿವಾಸ ಕಡಬ ಅವರು ಕಾರ್ಯಕ್ರಮ ನಿರೂಪಿಸಿ, ಜ್ಯೋತಿ ಗೋವಿಂದ ರಾವ್ ಅವರು ನಿರ್ವಹಿಸಿದರು.