ದೋಹಾ: ಮನುಷ್ಯ ಕೇವಲ ಬದುಕಿದರೆ ಸಾಲದು. ಸಮಾಜಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಉಪಯೋಗವಾಗುವಂತಹ ಸಮಾಜಮುಖಿ ಕೆಲಸ ಮಾಡಬೇಕು. ಸಮಾಜದ ಉನ್ನತಿಗಾಗಿ ದುಡಿಯಬೇಕು. ತಾನು ಬದುಕುವುದರ ಜೊತೆಗೆ ಸಮಾಜವನ್ನು ಕಟ್ಟಿ ಬೆಳೆಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನೂತನ ವೆಬ್ ಸೈಟ್ ಕುಲಾಲ/ಕುಂಬಾರ ಸಮಾಜದ ಪ್ರಗತಿಗೆ ಸಹಕಾರಿಯಾಗಲಿ, ಇದು ಸಮಾಜದ ಪ್ರತಿಬಿಂಬವಾಗಲಿ ಎಂದು ದೋಹಾ ಕತಾರ್ ಕುಲಾಲ್ ಫ್ರೆಂಡ್ಸ್ ನ ಅಧ್ಯಕ್ಷ ಆನಂದ ಕುಂಬಾರ ಹೇಳಿದರು.
ಅ.30 ಶುಕ್ರವಾರದಂದು ಕುಲಾಲ ಹಾಗು ಕುಂಬಾರರ ಸಮಾಜದ ನೂತನ ಸುದ್ದಿ ವೆಬ್ ಸೈಟ್ ಕುಲಾಲ್ ವರ್ಲ್ಡ್ ಲೋಕಾರ್ಪಣೆಗೈದು ಸರಳ ಸಮಾರಂಭದಲ್ಲಿ ಮಾತನಾಡಿದ ಅವರು ನಮ್ಮ ಕುಂಬಾರ ಸಮಾಜ ಶತಶತಮಾನಗಳ ಇತಿಹಾಸ, ಸಂಸ್ಕೃತಿ, ಪರಂಪರೆಗಳನ್ನು ಹೊಂದಿದ ಸಮಾಜ. ಇದು ಜಗತ್ತಿನ ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದೆ. ನೈತಿಕ ಮೌಲ್ಯ ಅಧಃಪತನವಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಸಂವಹನದ ಜೊತೆಗೆ ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಬೇಕಿದೆ. ಆ ಕೆಲಸವನ್ನು ಕುಲಾಲ್ ವರ್ಲ್ಡ್ ಮಾಡಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕತಾರಿನ ಉದ್ಯಮಿ ನಾಗರಾಜ್ ಬಂಗೇರ ಈ ವೆಬ್ ಸೈಟ್ ಸಮಾಜದ ಇತಿಹಾಸ, ಚರಿತ್ರೆ, ಸಾಂಸ್ಕ್ರತಿಕ, ಆಚಾರ-ವಿಚಾರ ಧಾರೆಗಳ ಬಗ್ಗೆ ಬೆಳಕು ಚೆಲ್ಲುವ , ದಾಖಲೆಗಳನ್ನು ಸಂಗ್ರಹಿಸಿಡುವ ಮಹತ್ತರವಾದ ಕಾರ್ಯವನ್ನು ಮಾಡುವಲ್ಲಿ ಸಹಕಾರಿಯಾಗಲಿದೆ. ಅಲ್ಲದೆ ಪ್ರಪಂಚದ ಮೂಲೆ ಮೂಲೆಯಲ್ಲಿರುವ ಸಮಾಜದ ಸಮಾಜದ ಪ್ರತಿಭಾನ್ವಿತರ, ಸಾಧಕರ, ಆದರ್ಶ ಪ್ರಾಯರ, ಸಮಾಜಸೇವಾ ಮುಖಿ ಪ್ರಮುಖರ ಸಾಧನೆಯನ್ನು ವಿವರವನ್ನು ಸಂಗ್ರಹಿಸಿ–ದಾಖಲಿಸಿ ಸರ್ವರೂ ವಿಷಯವನ್ನರಿಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಲಾಗಿದ್ದು ಹೆಮ್ಮೆಯ ವಿಚಾರ. ಇದಕ್ಕಾಗಿ ದಿನೇಶ್ ಬಂಗೇರ ಇರ್ವತ್ತೂರು ಅವರೊಂದಿಗೆ ಸಮಾಜದ ಎಲ್ಲರೂ ಕೈಜೋಡಿಸಿ ಬೆಂಬಲಿಸಬೇಕು ಎಂದರು.
ಸಮಾರಂಭದಲ್ಲಿ ನೂತನ ವೆಬ್ ಸೈಟಿನ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಕತಾರ್ ಸ್ಟೀಲ್ ನ ಇಂಜಿನಿಯರ್ ಸತೀಶ್ ಬಂಗೇರ ಮಾತನಾಡಿ ಈ ಸುದ್ದಿ ಜಾಲತಾಣ ಕುಂಬಾರ ಜನಾಂಗದ ಪ್ರತಿಯೊಬ್ಬ ಸಾಧಕರ, ವಿವಿಧ ಸಂಘ ಸಂಸ್ಥೆಗಳ ವಿವರ ಸಂಗ್ರಹಣೆ, ಸಮಾಜದ ಪ್ರತಿಯೊಂದು ಹಾಗು-ಹೋಗುಗಳು, ಚಟುವಟಿಕೆಗಳು, ಕಾರ್ಯಕ್ರಮಗಳ ದೈನಂದಿನ ವರದಿಯನ್ನು ಶೇಖರಿಸಿ ಸಂಗ್ರಹಿಸುವುದನ್ನು ಗುರಿಯಾಗಿಸಿಕೊಂಡು ಸಮಾಜದ ಪ್ರತಿಯೊಬ್ಬರಿಗೂ ಉಪಯುಕ್ತವಾದ ಮಾಹಿತಿಯನ್ನು ಸಂಗ್ರಹಿಸಿ ವಿವರವನ್ನು ಒದಗಿಸುವ ಉದ್ದೇಶ ಹೊಂದಿರುವುದು ಸಂತೋಷಕರ ಎಂದರು.
ಮುಂದುವರಿಸಿ ಮಾತನಾಡಿದ ಅವರು, ಸಮಾಜದ ಶೈಕ್ಷಣಿಕ , ಸಾಮಾಜಿಕ , ಆರ್ಥಿಕ , ಸಾಂಸ್ಕ್ರತಿಕ ,ಹಾಗೂ ರಾಜಕೀಯ ಸಂಘಟನೆಯ ರೂವಾರಿಯಾಗಿ ಇತರೆ ಜನಾಂಗದವರೊಂದಿಗೆ ಸಮಾನಶಾಲಿಗಳಾಗಿ ಮುನ್ನೆಡುಸುವ ನಿಟ್ಟಿನಲ್ಲಿ ಮುಖಂಡತ್ವವನ್ನು ಸರ್ವರೂ ಕೂಡಿ ನಿರ್ವಹಿಸಲು ಅನುವಾಗುವಂತೆ ಯಾವುದೇ ಕ್ಷಣದಲ್ಲಿ ಎಲ್ಲರನ್ನು ತಲುಪಿ ಎಲ್ಲರ ಸ್ಪರ್ಶದಲ್ಲಿದ್ದು ಇದ್ದ ಸ್ಥಳದಿಂದಲೇ ಸಮಾಜಾಭಿವೃದ್ಧಿಗಾಗಿ ಸರ್ವರೂ ಭಾಗವಹಿಸುವ ತಾಣವಾಗಿ ರೂಪುಗೊಳ್ಳಲಿ ಎಂದು ಶುಭ ಹಾರೈಸಿದರು.