ದುಬೈ: ದುಬೈ ಅಲ್ ಬರ್ಶಾದ ಜೆಎಸ್ಎಸ್ ಇಂಟರ್ ನ್ಯಾಶನಲ್ ಶಾಲಾ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ದುಬೈ ಶುಕ್ರವಾರ ಕನ್ನಡಿಗರು ಆಚರಿಸಿದರು.
ಕನ್ನಡಿಗರನ್ನು ಒಂದೆಡೆ ಸೇರಿಸುವ ಮೂಲಕ ಕನ್ನಡ ಕಹಳೆಯನ್ನು ಮೊಳಗಿಸಿದ್ದು, ಕನ್ನಡನಾಡಿನ ಭಾಷೆ, ನೆಲ, ಜಲ, ಸಂಸ್ಕೃತಿ, ಸಂಗೀತ-ಸಾಹಿತ್ಯವನ್ನು ಕಣ್ಣೆದುರಿಗೆ ತಂದಿಟ್ಟಂತಾಯಿತು. ಪ್ರತಿವರ್ಷವೂ ವಿಜೃಂಭಣೆ ಹಾಗೂ ವಿಭಿನ್ನವಾಗಿ ದುಬೈಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಾ ಬಂದಿರುವ ಕನ್ನಡಿಗರು ದುಬೈ ಸಂಘಟನೆಯ ಈ ಬಾರಿಯ ಕಾರ್ಯಕ್ರಮವಂತೂ ವಿಶಿಷ್ಟತೆಯಿಂದ ಕೂಡಿತ್ತು. ಕನ್ನಡಮಾತೆಯ ತೇರನ್ನು ಎಳೆಯುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿ, ಅದ್ದೂರಿಯ ವೇದಿಕೆಯಲ್ಲಿ ಗಣ್ಯರು ದೀಪವನ್ನು ಬೆಳಗಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ, ಜೆಡಿಎಸ್ ನಾಯಕ ಚೆಲುವರಾಯಸ್ವಾಮಿ, ದುಬೈಯ ಉದ್ಯಮಿ ಝಫ್ರುಲ್ಲಾ ಖಾನ್, ಮೊಹಮ್ಮದ್ ಮುಸ್ತಫಾ, ಬೆಂಗಳೂರಿನ ಸುಚಿತ್ರಾ ಚಲನಚಿತ್ರ ಮತ್ತು ಸಾಂಸ್ಕೃತಿಕ ಅಕಾಡಮಿಯ ಅಧ್ಯಕ್ಷ ಕೆ.ವಿ.ಆರ್. ಟ್ಯಾಗೋರ್, ಸುವರ್ಣ ಸುದ್ದಿ ವಾಹಿನಿಯ ವಿಜಯಲಕ್ಷ್ಮಿ ಶಿಬರೂರು, ಅಲೋಕ್ ಕುಮಾರ್, ಚಿಲಿವಿಲಿಯ ಸತೀಶ್ ವೆಂಕಟರಮಣ, ರವೀಶ್ ಗೌಡ, ಶೇಖರ್ ರೆಡ್ಡಿ, ಸರ್ವೋತಮ ಶೆಟ್ಟಿ, ಸಂಘದ ಅಧ್ಯಕ್ಷ ಸದನ್ದಾಸ್, ಕನ್ನಡ ಸಿನಿಮಾರಂಗದ ಹಾಸ್ಯ ಕಲಾವಿದರಾದ ಟೆನ್ನಿಸ್ ಕೃಷ್ಣ, ಮಂಡ್ಯ ರಮೇಶ್, ಮಂಜು ಭಾಷಿಣಿ, ಪ್ರಶಾಂತ್, ರೂಪಾ ಪ್ರಭಾಕರ್, ಸಂಧ್ಯಾ ಶೆಣೈ ಮತ್ತಿತರರು ಹಾಜರಿದ್ದರು.
ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಖ್ಯಾತ ಕನ್ನಡಿಗರನ್ನು ಗುರುತಿಸಿ ಈ ಬಾರಿಯಿಂದ ಕನ್ನಡ ರತ್ನ ಪ್ರಶಸ್ತಿ ಕೊಡಮಾಡಲಾಗುತ್ತಿದ್ದು, ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ದ್ವಾರಕೀಶ್ರವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಕಾರಣಾಂತರಗಳಿಂದ ಅವರು ಕಾರ್ಯಕ್ರಮಕ್ಕೆ ಬಾರದ ಕಾರಣ ಅವರ ಸುಪುತ್ರರಾದ ಯೋಗೀಶ್ ಹಾಗೂ ಸುಖೇಶ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಇದೇ ವೇಳೆ ಸುವರ್ಣ 24X7 ಇನ್ ವೆಸ್ಟಿಗೇಟಿವ್ ಡೆಸ್ಕ್ ಹೆಡ್ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ಪ್ರಸಿದ್ದ ಗ್ರಾಫೀಕ್ಸ್ ಡಿಸೈನರ್ ಗಣೇಶ್ ರೈ, ಕೆ.ವಿ.ಆರ್. ಟ್ಯಾಗೋರ್ರವರನ್ನು ಅವರ ಕಾರ್ಯ ಸಾಧನೆಯನ್ನು ಮೆಚ್ಚಿ ಸನ್ಮಾನಿಸಿ, ಗೌರವಿಸಲಾಯಿತು. ಕನ್ನಡ ಸಿನಿಮಾರಂಗದ ಹಾಸ್ಯ ಕಲಾವಿದರಾದ ಟೆನ್ನಿಸ್ ಕೃಷ್ಣ, ಮಂಡ್ಯ ರಮೇಶ್, ಮಂಜು ಭಾಷಿಣಿ, ಪ್ರಶಾಂತ್ ಹಾಗೂ ರೂಪಾ ಪ್ರಭಾಕರ್ ತಮ್ಮ ಹಾಸ್ಯ ನಟನೆಯ ಮೂಲಕ ನೆರೆದವರನ್ನು ರಂಜಿಸಿದರು. ಮಾತಿನ ಮಲ್ಲಿ ಎಂದೇ ಹೆಚ್ಚು ಜನಪ್ರಿಯರಾಗಿರುವ ಸಂಧ್ಯಾ ಶೆಣೈಯವರು ತಮ್ಮ ಹಾಸ್ಯಭರಿತ ಮಾತುಗಳನ್ನಾಡಿದರೆ, ಶಿವಕುಮಾರ್, ಉದಯ್ ನಂಜಪ್ಪ, ಸಾಯಿ ಸಲ್ಲಿಕಾರವರು ಕನ್ನಡ ಸಿನೆಮಾ ಹಾಡುಗಳನ್ನು ಹಾಡಿರಂಜಿಸಿದರು.