ಮುಂಬಯಿ: ಜಾಗತೀಕರಣದಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯವಿದ್ದರೂ ತಮ್ಮ ಕಾರ್ಯಚಟುವಟಿಕೆಗಳಲ್ಲಿ ಹೃದಯವಂತಿಕೆ ಬೆಳೆಸಿಕೊಳ್ಳಬೇಕು. ತಾವು ನಾಳೆಯ ಬಗ್ಗೆ ಚಿಂತಿತರಾಗಿರಬೇಕು. ಬಾಲ್ಯವು ಪ್ರತಿಯೊಬ್ಬರಿಗೂ ವರದಾನವಾಗಿದ್ದು, ಅದೃಷ್ಟವನ್ನು ನಾವು ಕಾಪಾಡಿಕೊಂಡಿರಬೇಕು ಎಂದು ಉದ್ಯಮಿ ರಮೇಶ್ ವೈ.ಶೆಟ್ಟಿ ಹೇಳಿದರು.
ಡಿ. 6ರಂದು ಮಲಾಡ್ ಕನ್ನಡ ಸಂಘವು ಸೈಂಟ್ ಜ್ಯೂಡ್ ಹೈಸ್ಕೂಲಿನಲ್ಲಿ ಆಯೋಜಿಸಿದ ಮಕ್ಕಳ ಪ್ರತಿಭಾನ್ವೇಷಣೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಮಾತನಾಡಿ, ಸ್ಪರ್ಧೆಗೆ ಪರಿಶ್ರಮ ಮುಖ್ಯ. ಜತೆಗೆ ಮಕ್ಕಳು ತಮ್ಮ ಸಂಸ್ಕಾರ, ಸಂಪ್ರದಾಯ ಪದ್ಧತಿಯೊಂದಿಗೆ ಬೆರೆತು ಬಾಳಬೇಕು. ಮನುಷ್ಯ ಸುಸಂಸ್ಕೃತನಾಗಲು ಸಂಸ್ಕೃತಿಯ ಅರಿವು ಮುಖ್ಯ. ಆಗ ಅವರು ಸಮಾಜದಲ್ಲಿ ಪ್ರಜ್ಞಾವಂತರಾಗಿ ಬೆಳೆಯಲು ಸಾಧ್ಯ. ಇದಕ್ಕೆ ಹಿರಿಯರ ಸಂದೇಶವೂ ಬಹು ಮುಖ್ಯವಾಗಿರಬೇಕು ಎಂದು ಹೇಳಿದರು.
ಮಕ್ಕಳ ಪ್ರತಿಭೆಯನ್ನು ಗುರುತಿಸಲು ಪಾಲಕರ ಪ್ರೋತ್ಸಾಹ ಮುಖ್ಯ. ನಮ್ಮ ಹಿರಿಯರ ಸಂಸ್ಕೃತಿ, ಸಂಪ್ರದಾಯ ಇಂದು ಅವನತಿಯತ್ತ ಸಾಗುತ್ತಿರುವ ಕಾಲಘಟ್ಟದಲ್ಲಿ ಪಾಲಕರು ಶಾಲೆಗಿಂತ ಮೊದಲು ಮಕ್ಕಳಿಗೆ ಮನೆಯಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ನೀಡಬೇಕು. ಯಾವುದೇ ಭಾಷೆಯನ್ನು ಕಲಿತರೂ ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು ಎಂದು ಹರೀಶ್ ಎನ್. ಶೆಟ್ಟಿ ಹೇಳಿದರು.
5ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಪ್ರಬಂಧ, ಚಿತ್ರಕಲೆ, ಸಾಮಾನ್ಯ ಜ್ಞಾನ, ನೃತ್ಯ ಸ್ಪರ್ಧೆಗಳು ಜರಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶರ್ಮಿಳಾ ಹೆಗ್ಡೆ, ಸುಧಾ ರೈ, ರಜನಿ ಶೆಟ್ಟಿ, ವಿಜಯಾ ಪೂಜಾರಿ, ಶಾರದಾ ಪೂಜಾರಿ, ಲಲಿತಾ ಪೂಜಾರಿ, ಮಲ್ಲಿಕಾ ಯು. ಶೆಟ್ಟಿ, ರಶ್ಮೀ ಪೂಜಾರಿ ತೀರ್ಪುಗಾರರಾಗಿ ಆಗಮಿಸಿದ್ದರು. ವೇದಿಕೆಯಲ್ಲಿ ಗೌ.ಕೋಶಾಧಿಕಾರಿ ಪ್ರಕಾಶ್ಎಸ್. ಶೆಟ್ಟಿ, ಜತೆ ಕಾರ್ಯದರ್ಶಿ ಅನಿಲ್ಪೂಜಾರಿ, ಜತೆ ಕೋಶಾಧಿಕಾರಿ ಶಂಕರ್ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸೂರಪ್ಪ ಕುಂದರ್ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯದರ್ಶಿ ಶಾಂಭವಿ ವಿ. ಶೆಟ್ಟಿ ನಿರೂಪಿಸಿ, ವಂದಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ: ದಿನೇಶ್ ಕುಲಾಲ್