ಮುಂಬಯಿ: ನಗರದ ಹಿರಿಯ ಜಾತೀಯ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖವಾಣಿ ಮೊಗವೀರ ಪತ್ರಿಕೆಯ ಅಮೃತ ಸಂಭ್ರಮ ಫೆ.7 ರಂದು ಅಂಧೇರಿ ಪಶ್ಚಿಮ ಎಂ.ವಿ.ಎಂ. ಶಿಕ್ಷಣ ಸಂಸ್ಥೆಯಲ್ಲಿನ ಶಾಲಿನಿ ಜಿ. ಶಂಕರ್ ಕನ್ವೆನ್ಶನ್ ಸೆಂಟರಿನಲ್ಲಿ ನಾಡಿನ ಖ್ಯಾತ ಸಾಹಿತಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ದೀಪ ಬೆಳಗಿಸಿ 75ನೆಯ ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಮೊಗವೀರ ಪತ್ರಿಕೆಯು 75 ವರ್ಷಗಳ ತನಕ ಉಳಿದಿದ್ದು ಮೊಗವೀರ ವ್ಯವಸ್ಥಾಪಕ ಮಂಡಳಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ. ಒಂದು ನಿಯತಕಾಲಿಕೆ ದೀರ್ಘಕಾಲ ಉಳಿಯಬೇಕಾದರೆ ಲೇಖಕರು ಅದರ ಬಂಡವಾಳವಾಗಿದೆ. ಜಾತ್ಯಾತೀತ ನಿಲುವನ್ನು ಈ ಪತ್ರಿಕೆ ಇಟ್ಟುಕೊಂಡಿದೆ. ಕಾಲ್ಪನಿಕ ಶಕ್ತಿಗಳಿಗಿಂತ ವಿವೇಕವನ್ನು ಬೆಳೆಸುವಂತ ಕ್ರಿಯೆಯನ್ನು ಮೊಗವೀರದಂತಹ ಪತ್ರಿಕೆಗಳು ಮಾಡಿದೆ. ಇಂತಹ ಪತ್ರಿಕೆಗಳಿಗೆ ಬಹಳ ದೊಡ್ಡ ಬಂಡವಾಳಬೇಕಾಗಿಲ್ಲ. ದಿನಪತ್ರಿಕೆ ಮತ್ತು ವಾರಪತ್ರಿಕೆಗೆ ದೊಡ್ಡ ಬಂಡವಾಳ ಬೇಕಾಗಿದೆ. ಇಂತಹ ಪತ್ರಿಕೆಯನ್ನು ನಡೆಸುವವರಿಗೆ ಬದ್ದತೆ ಬೇಕು. ಅದು ಮೊಗವೀರ ವ್ಯವಸ್ಥಾಪಕ ಮಂಡಳಿಯವರಲ್ಲಿದೆ. ಮೊಗವೀರ ಮಾಸಿಕವು ಮುಂಬಯಿ ಕನ್ನಡಿಗರ ಸಾಹಿತ್ಯದ ಮುಖ ಪುಟವಾಗಿದೆ. ದೇಶದ ಯಾವುದೇ ಮೂಲೆಯಲ್ಲಿರುವ ಕನ್ನಡಿಗರಿಗಿಂತ ಮುಂಬಯಿ ಕನ್ನಡಿಗರು ಹೆಚ್ಚಿನ ಕ್ರೀಯಾಶೀಲರಾಗಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ರಂಗ ತಜ್ನ ಮೈಸೂರು ಅಸೋಷಿಯೇಶನಿನ ಟ್ರಸ್ಟಿ ಡಾ. ಬಿ. ಆರ್. ಮಂಜುನಾಥ, ಈ ಪತ್ರಿಕೆಯ ಹತ್ತನೇ ವರ್ಷದ ಸಂಭ್ರಮದಲ್ಲಿ ನನ್ನ ಅಜ್ಜನಿಗೆ ಗೌರವಿಸಿದನ್ನು ಕಂಡಾಗ ಆ ಕ್ಷಣದಲ್ಲಿ ನಾನೂ ಅವರೊಂದಿಗಿದ್ದೆ. ಆಗ ನನಗೂ ಗೌರವಿಸದಿರುದಕ್ಕೆ ಅಜ್ಜನಲಿದ್ದ ಗೌರವದ ವಸ್ತುವನ್ನು ನಾನು ಪಡೆದಿದ್ದು ಇಂದು ಈ ಪತ್ರಿಕೆಯ 75 ನೇ ವರ್ಷದಲ್ಲಿ ಅಧ್ಯಕ್ಷನಾಗಿರುವುದು ನನ್ನ ಭಾಗ್ಯ ಇಂತಹ ಸಂದರ್ಭ ಎಲ್ಲರಿಗೂ ಸಿಗುವುದಿಲ್ಲ ಎಂದರು.
ವೇದಿಕೆಯಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಜಿ. ಎನ್. , ಕರ್ನಾಟಕ ಮಲ್ಲದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ, ಸಂಶೋಧಕ ಹಾಗೂ ರಂಗತಜ್ನ ಡಾ.ಭರತ್ ಕುಮಾರ್ ಪೊಲಿಪು, ಮೊಗವೀರ ಮಂಡಳಿಯ ಅಧ್ಯಕ್ಷ ಅಜಿತ್ ಸುವರ್ಣ, ಉಪಾಧ್ಯಕ್ಷ ಎಚ್. ಅರುಣ್ ಕುಮಾರ್, ಕಾರ್ಯದರ್ಶಿ ಸಂಜೀವ ಕೆ.ಸಾಲ್ಯಾನ್, ಕೋಶಾಧಿಕಾರಿ ಭಾಸ್ಕರ ಎಲ್. ಸಾಲ್ಯಾನ್, ಪತ್ರಿಕೆಯ ಪ್ರಭಂದಕ ಚಂದ್ರಶೇಖರ ಕರ್ಕೇರ, ವ್ಯವಸ್ಥಾಪಕ ಸಂಪಾದಕ ಜಿ. ಕೆ. ರಮೇಶ್, ಸಂಪಾದಕ ಅಶೋಕ್ ಸುವರ್ಣ, ಪತ್ರಿಕಾ ಸಮಿತಿಯ ಕಾರ್ಯದರ್ಶಿ ದಯಾವತಿ ಸುವರ್ಣ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಪ್ರಶಸ್ತಿ ವೆಜೇತ, ಲಿಮ್ಕಾ ಬುಕ್ ದಾಖಲೆಯ ವಿಜಯಕುಮಾರ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಡಾ. ಬರಗೂರು ಹಾಗು ಇತರ ಎಲ್ಲಾ ಗಣ್ಯರು ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಬಿ. ಎ. ಸನದಿಯವರ ಮಧುಸಂಚಯ, ಮಿತ್ರಪಟ್ನ ನಾರಾಯಣ ಬಂಗೇರ ಅವರ ನಾಗಚರಿತ್ರೆ ಮತ್ತು ಎಸ್. ಕೆ. ಉಚ್ಚಿಲ ಅವರ ಲೇಖನ ಸಂಕಲನ ವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು. ಉಪಾಧ್ಯಕ್ಷ ಎಚ್. ಅರುಣ್ ಕುಮಾರ್ ಅವರು ವಂದನಾರ್ಪಣೆ ಮಾಡಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ: ದಿನೇಶ್ ಕುಲಾಲ್