News Kannada
Wednesday, October 05 2022

ಹೊರನಾಡ ಕನ್ನಡಿಗರು

ಕಲಾವಿದ ಶೇಖರ್ ಡಿ. ಶೆಟ್ಟಿಗಾರ್ ಗೆ ಅಬುಧಾಬಿ ಕರ್ನಾಟಕ ಸಂಘದಿಂದ “ದ. ರಾ. ಬೇಂದ್ರೆ ಪ್ರಶಸ್ತಿ” - 1 min read

Photo Credit :

ಕಲಾವಿದ ಶೇಖರ್ ಡಿ. ಶೆಟ್ಟಿಗಾರ್ ಗೆ ಅಬುಧಾಬಿ ಕರ್ನಾಟಕ ಸಂಘದಿಂದ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃ ಸ್ಥಾನದಲ್ಲಿರುವ ಅಬುಧಾಬಿ ಕರ್ನಾಟಕ ಸಂಘ, ಯು.ಎ.ಇ. ಯಲ್ಲಿ ಕನ್ನಡ ಭಾಷೆ, ಕಲೆ ಸಂಸ್ಕೃತಿಯಲ್ಲಿ ಸೇವೆಸಲ್ಲಿಸಿರುವ ಕನ್ನಡಿಗರನ್ನು ಗುರುತ್ತಿಸಿ ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ “ದ. ರಾ. ಬೇಂದ್ರೆ ಪ್ರಶಸ್ತಿ” ನೀಡಿ ಸನ್ಮಾನಿಸಿ ಗೌರವಿಸುತ್ತಾ ಬರುತ್ತಿದೆ.

2017 ನವೆಂಬರ್ 3ನೇ ತಾರೀಕಿನಂದು ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಬೃಹತ್ ಸಭಾಂಗಣದಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆಯವರೆಗೆ ನಡೆಯುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಮಹಾಪೋಷಕರಾಗಿರುವ ಡಾ.ಬಿ. ಆರ್. ಶೆಟ್ಟಿಯವರು ಮತ್ತು ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ.

2017ನೇ ಸಾಲಿನ “ದ. ರಾ. ಬೇಂದ್ರೆ ಪ್ರಶಸ್ತಿ” ಯನ್ನು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕರಾವಳಿ ಕರ್ನಾಟಕದ ಗಂಡುಕಲೆ ಯಕ್ಷಗಾನವನ್ನು ಇಲ್ಲಿ ನೆಲೆಸಿರುವ ಹವ್ಯಾಸಿ ಕಲಾವಿದರನ್ನು ಮತ್ತು ಮಕ್ಕಳ ತಂಡವನ್ನು ಪೂರ್ಣ ಪ್ರಮಾಣದಲ್ಲಿ ಶಾಸ್ತ್ರೀಯವಾಗಿ ತಯಾರುಗೊಳಿಸಿ ಯಕ್ಷಗಾನ ಪ್ರದರ್ಶನವನ್ನು ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅತ್ಯುತ್ತಮ ಯಕ್ಷಗಾನ ಕಲಾವಿದರು, ಗುರುಗಳು, ನಿರ್ದೇಶಕರು ಶೇಖರ್ ದಾಮೋದರ ಶೆಟ್ಟಿಗಾರ್ ಕಿನ್ನಿಗೋಳಿ ಇವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಗುವುದು.

ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಯಕ್ಷ ರಂಗದ ಹೆಜ್ಜೆಗುರುತುಗಳು….
ಭವ್ಯಭಾರತದ ಸುಂದರ ಕರ್ನಾಟಕದ ಕರಾವಳಿ ಭಾಗದ ತುಳುನಾಡಿನ ಕಿನ್ನಿಗೋಳಿಯಲ್ಲಿ ಪ್ರಸಿದ್ಧ ವೇಷಧಾರಿ, ವೇಷಭೂಷಣ ಪ್ರಸಾದನ ತಜ್ಞ, ಮೋಹಿನಿ ಕಲಾ ಸಂಪದ ಸಂಸ್ಥೆಯ ಸ್ಥಾಪಕರಾದ ದಿವಂಗತ ತಾಳಿಪಾಡಿ ದಾಮೋದರ ಶೆಟ್ಟಿಗಾರ್ ಮತ್ತು ಶ್ರೀಮತಿ ಮೋಹಿನಿ ಶೆಟ್ಟಿಗಾರ್ ದಂಪತಿಗಳ ಮಗನಾಗಿ 1966ರಲ್ಲಿ ಜನಿಸಿದ ಶೇಖರ್ ಶೆಟ್ಟಿಗಾರ್ ಬಿ. ಕಾಂ. ಪದವಿದರರು. ಪ್ರಸ್ತುತ ಡಾ| ಬಿ. ಆರ್. ಶೆಟ್ಟಿಯವರ ಎನ್.ಎಂ.ಸಿ. ಸಮೂಹ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇವರ ಜೀವನ ಸಂಗಾತಿ ಶ್ರೀಮತಿ ಶಾಂತಾ ರವರು ಉಡುಪಿಯ ಬಳಿ ಇರುವ ಉಚ್ಚಿಲದಲ್ಲಿ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳು ಹೃಷಿಕೇಶ ದ್ವಿತೀಯ ಪಿ. ಯು. ಸಿ. ವಿಘ್ನೇಶ ಪ್ರಥಮ ಪಿ. ಯು. ಸಿ. ಯಲ್ಲಿ ವ್ಯಾಸಂಗ ಮಾಡುತಿದ್ದಾರೆ.

ಯಕ್ಷಗಾನ ಕಲೆಯನ್ನು ನಾಲ್ಕು ತಲೆಮಾರಿನಿಂದ ಪೂರ್ಣವಾಗಿ ತೊಡಗಿಸಿಕೊಂಡಿರುವ ಶೆಟ್ಟಿಗಾರ್ ಕುಟುಂಬ

ಶೇಖರ್ ಶೆಟ್ಟಿಗಾರ್ ರವರ ಅಜ್ಜ ದಿವಂಗತ ವೀರಯ್ಯ ಶೆಟ್ಟಿಗಾರ್ ಶನಿಪೂಜೆ ಪ್ರವಚನದ ಪ್ರಸಿದ್ಧ ಅರ್ಥಧಾರಿಯಾಗಿದ್ದರು.
ಶೇಖರ್ ಶೆಟ್ಟಿಗಾರ್ ರವರ ತಂದೆ ದಿವಂಗತ ತಾಳಿಪಾಡಿ ದಾಮೋದರ ಶೆಟ್ಟಿಗಾರ್ ಯಕ್ಷಗಾನ ನಾಟಕಗಳ ಪ್ರಸಿದ್ಧ ವೇಷಧಾರಿಯೂ, ವೇಷಭೂಷಣಗಳ ಪ್ರಸಾದನ ಕಲಾವಿದರಾಗಿದ್ದರು. ಯಕ್ಷಗಾನ ವೇಷ ಬಣ್ಣಗಾರಿಕೆ ಮತ್ತು ವಸ್ತ್ರಾಲಂಕಾರಗಳಲ್ಲಿ ಮೂರು ದಶಕಗಳಿಗೂ ಮಿಕ್ಕಿದ ಅನುಭವ ಗಳಿಸಿದವರು.

ಕಟೀಲು, ಇರುವೈಲು, ಸೌಕೂರು ಮೇಳಗಳಲ್ಲಿ ವೃತ್ತಿಕಲಾವಿದರಾಗಿ, ಸ್ತ್ರೀಪಾತ್ರಧಾರಿಯಾಗಿಯೂ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರಸಿದ್ದಿಯನ್ನು ಪಡೆದವರಾಗಿದ್ದರು. ಯಕ್ಷಗಾನ ನಾಟಕಗಳಿಗೆ ವೇಷಭೂಷಣ, ಬಣ್ಣಗಾರಿಕೆಯನ್ನು ಒದಗಿಸುವ ಸಂಸ್ಥೆ “ಮೋಹಿನಿ ಕಲಾ ಸಂಪದ” ಸಂಸ್ಥೆಯನ್ನು ಸ್ಥಾಪಿದವರು.
ಪ್ರತಿವರ್ಷ ದಾಮೋದರ ಶೆಟ್ಟಿಗಾರರ ಸಂಸ್ಕರಣಾ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ, ಯಕ್ಷರಂಗದ ವಿಶಿಷ್ಟ ಕಲಾವಿದರೊಬ್ಬರನ್ನು ಹುಡುಕಿ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

See also  ಮುಂಬೈಯ ಕುಲಾಲ ಸಂಘದಿಂದ ಕ್ರೀಡೋತ್ಸವ

ಶೇಖರ್ ಶೆಟ್ಟಿಗಾರ್ ರವರ ತಂದೆಯರಾದ ದಾಮೋದರ ಶೆಟ್ಟಿಗಾರ್ ರವರಿಂದ ಬಳುವಳಿಯಾಗಿ ಯಕ್ಷಗಾನ ಕಲೆಯನ್ನು ಪಡೆದು ಯಕ್ಷಗಾನ ಕಲೆಗಾಗಿ ತಮ್ಮನ್ನು ಸಮರ್ಪಿಸಿ ಕೊಂಡಿರುವರಲ್ಲಿ ಮೊದಲನೆಯವರು. ಮನೆಯ ಹಿರಿಯ ಮಗಳು ವೇದಾವತಿ ಶೆಟ್ಟಿಗಾರ್ (ಅಕ್ಕ) ಅತಿಥಿ ಕಲಾವಿದರಾಗಿ ಮೇಳಗಳಲ್ಲಿ ವೇಷ ಮಾಡಿರುವ ಹಿರಿಮೆ – ಸುರತ್ಕಲ್ ಮೇಳ, ಅರುವ ಮೇಳ.

  • ಸದಾಶಿವ ಶೆಟ್ಟಿಗಾರ್ (ತಮ್ಮ) ವೃತ್ತಿಯಲ್ಲಿ ಭೌತಶಾಸ್ತ್ರ ಉಪನ್ಯಾಸಕರು, ಯಕ್ಷಗಾನ ವೇಷಧಾರಿ, ಬಣ್ಣದ ವೇಷದಲ್ಲಿ ಹೆಚ್ಚಿನ ಪ್ರಸಿದ್ದಿಯನ್ನು ಪಡೆದವರು.
  • * ಗಂಗಾಧರ ಶೆಟ್ಟಿಗಾರ್ (ತಮ್ಮ) ವೃತ್ತಿಯಲ್ಲಿ ಯಕ್ಷಗಾನ, ನಾಟಕ, ನೃತ್ಯಗಳಿಗೆ ವೇಷಭೂಷಣ ತಯಾರಿಸುವವರು ಮತ್ತು ಬಾಡಿಗೆ ಕೊಡುವವರಾಗಿದ್ದು ಯಕ್ಷಗಾನ ವೇಷಧಾರಿಯಾಗಿ ಹಲವು ಪ್ರಸಂಗಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರರ್ಶಿಸಿದ್ದಾರೆ.
    * ಬಾಲಕೃಷ್ಣ ಶೆಟ್ಟಿಗಾರ್ (ತಮ್ಮ) ದುಬಾಯಿಯಲ್ಲಿ ಎನ್. ಎಂ.ಸಿ. ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು ಯಕ್ಷಮಿತ್ರ ತಂಡದಲ್ಲಿ ರಾಜ ವೇಷ, ಪುಂಡು ವೇಷ ಮಾಡುವಲ್ಲಿ ಪ್ರೌಡಿಮೆಯನ್ನು ಪಡೆದಿದ್ದಾರೆ.
    ಶೇಖರ್ ಶೆಟ್ಟಿಗಾರ್ ರವರ ಮಕ್ಕಳು ಇಬ್ಬರೂ ಯಕ್ಷಗಾನ, ಚೆಂಡೆ-ಮದ್ದಳೆ, ಭಾಗವತಿಕೆ ವಿದ್ಯಾರ್ಥಿಗಳಾಗಿ ಗುರುಗಳು ಶ್ರೀಯುತರುಗಳಾದ ರಾಜೇಶ್ ಐ. ಕಟೀಲು, ಹರಿನಾರಾಯಣ ಬೈಪಡಿತ್ತಾಯ ಮತ್ತು ಗಣೇಶ್ ಕೊಲಕಾಡಿ ಇವರಿಂದ ಅಭ್ಯಾಸ ಮಾಡುತಿದ್ದಾರೆ.

ಶೇಖರ್ ಶೆಟ್ಟಿಗಾರರ ಅಕ್ಕನ ಮಕ್ಕಳು, ತಮ್ಮಂದಿರ ಮಕ್ಕಳು ಯಕ್ಷಗಾನ ಅಭ್ಯಾಸಿಗಳಾಗಿದ್ದು ವೇಷಧಾರಿಗಳಾಗಿ ಮನೆಮಂದಿ ಎಲ್ಲರೂ ತೊಡಗಿಸಿಕೊಂಡಿರುವ ಯಕ್ಷಗಾನ ಕಲೆಯನ್ನು ಆರಾಧಿಸುವ ಪರಿಪೂರ್ಣ ಕುಟುಂಬವಾಗಿದೆ.

ಶೇಖರ್ ಶೆಟ್ಟಿಗಾರ್ ನಡೆದು ಬಂದ ಹಾದಿ: ಯಕ್ಷಶಿಕ್ಷಣ ಬಾಲಪಾಠವನ್ನು ತಮ್ಮ ತಂದೆಯವರಿಂದ ಪ್ರಾರಂಭಿಸಿ ದಿವಂಗತ ಕಟೀಲು ಶ್ರೀನಿವಾಸ ಭಟ್, ಕೋಳ್ಯೂರ್ ರಾಮಚಂದ್ರ ಭಟ್, ಐ. ಲೋಕೇಶ್ ಕುಮಾರ್ ಕಟೀಲು ಮತ್ತು ಗಣೇಶ್ ಕೊಲಕಾಡಿಯವರಿಂದ ಛಂದಸ್ಸು-ಅರ್ಥಗಾರಿಕೆ ಅಭ್ಯಾಸವನ್ನು ಪಡೆದುಕೊಂಡರು.

ಮುಂಬೈಯ ಪ್ರಸಿದ್ಧ ಶಣ್ಮುಖಾನಂದ ಹಾಲ್ ನಲ್ಲಿ ಪ್ರಥಮ ರಂಗಪ್ರವೇಶ ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ ಪ್ರದ್ಯುಮ್ನ ಮತ್ತು ಬಬ್ರುವಾಹನನ ದೂತನ ವೇಷದಲ್ಲಿ ಶೇಖರ್ ಶೆಟ್ಟಿಗಾರ್ ಯಕ್ಷಗಾನ ಕಲೆಯ ಹಾದಿಯಲ್ಲಿ ಮೊದಲನೆಯ ಹೆಜ್ಜೆಯನ್ನು ಪ್ರಾರಂಭಿಸಿದರು.

ಹವ್ಯಾಸಿ ಕಲಾವಿದನಾಗಿ ಮುಂಬೈಯ ನಾರಾಯಣ ಗುರುಸ್ವಾಮಿ ಯಕ್ಷಗಾನ ಮಂಡಳಿ, ವೀರಭದ್ರ ಯುವಕ ಮಂಡಲ – ತಾಳಪಾಡಿ, ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ-ಮಂಡ್ಕೂರು, ನಂದಿಕೂರು ಮಂಡಳಿಗಳಲ್ಲಿ ವೇಷಧಾರಿಯಾಗಿ ಭಾಗವಹಿಸಿದ್ದಾರೆ.

ವೃತ್ತಿಪರ ಕಲಾವಿದರಾಗಿ ಶ್ರೀಭಗವತಿ ಮೇಳ ಸಸಿಹಿತ್ಲು 2002 ರಿಂದ 2004 ರವರೆಗೆ ಎರಡು ವರ್ಷ, ಮತ್ತು 2004 ರಿಂದ 2008 ರವರೆಗೆ ನಾಲ್ಕು ವರ್ಷ ಶ್ರೀ ದುರ್ಗಾಪರಮೇಶ್ವರಿ ಮೇಳ ಕಟೀಲು ತಿರುಗಾಟದಲ್ಲಿ ಶೇಖರ್ ಶೆಟ್ಟಿಗಾರ್ ಅಪಾರ ಅನುಭವವನ್ನು ಮೈಗೂಡಿಸಿಕೊಂಡಿದ್ದಾರೆ.

ನಾಟ್ಯ ತರಬೇತಿ ಮತ್ತು ಪ್ರಸಂಗ ನಿರ್ದೇಶನ: ಶೇಖರ್ ಶೆಟ್ಟಿಗಾರ್ ರವರಿಗೆ ಕಲಾದೇವಿಯ ಅನುಗ್ರಹದಿಂದ ಯಕ್ಷಗಾನ ಕಲೆಯನ್ನು ಕಲಿಯುವ ಯುವ ಕಲಾವಿದರಿಗೆ ಸರಿಯಾದ ಮಾರ್ಗದರ್ಶನ ತರಭೇತಿ ನೀಡುವ ಗುರುವಾಗಿ ನಿರ್ದೇಶಕರಾಗಿ ಅವಕಾಶ ದೊರೆಯಿತು.

ಅವುಗಳಲ್ಲಿ ಪ್ರಮುಖವಾದವುಗಳು ವೀರಭದ್ರ ಯುವಕ ಮಂಡಲದ ಬಾಲ ಕಲಾವಿದರ ತಂಡ, ತೆಂಕ ಎರ್ಮಾಳು ಹಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಉಲ್ಲಂಜೆ – ಕಟೀಲು, ಆಳ್ವಾಸ್ ಧೀಂಕಿಟ ಅಧ್ಯಯನ ಕೇಂದ್ರ – ಮೂಡಬಿದ್ರೆ, ಯಕ್ಷಮಿತ್ರರು ದುಬಾಯಿ.

See also  ದೆಹಲಿ ಕರ್ನಾಟಕ ಸಂಘದಿಂದ ರಾಣಿ ಅಬ್ಬಕ್ಕ ಉತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು