News Kannada
Friday, October 07 2022

ಹೊರನಾಡ ಕನ್ನಡಿಗರು

ಶಾರ್ಜಾ ಕರ್ನಾಟಕ ಸಂಘದ “ಮಯೂರ-ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ” ಸರ್ವೋತ್ತಮ ಶೆಟ್ಟಿಯವರ ಕಿರೀಟಕ್ಕೆ - 1 min read

Photo Credit :

ಶಾರ್ಜಾ ಕರ್ನಾಟಕ ಸಂಘದ

ಶಾರ್ಜಾ ಕರ್ನಾಟಕ ಸಂಘದ 15ನೇ ವಾರ್ಷಿಕೋತ್ಸವ ಮತ್ತು ಪ್ರತಿಷ್ಠಿತ “ಮಯೂರ – ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ” ಪ್ರಧಾನ ಸಮಾರಂಭ ಇದೇ 17ರಂದು ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಅಬುಧಾಬಿ ಕರ್ನಾಟಕ ಸಂಘದ ಸ್ಥಾಪಕರು, ಅಧ್ಯಕ್ಷರಾಗಿರುವ ಸರ್ವೋತ್ತಮ ಶೆಟ್ಟಿಯವರು ತನ್ನೊಳಗೆ ಇರುವ ಕಲೆ, ಸಂಸ್ಕೃತಿ, ಭಾಷೆ, ನಟನೆ, ಅಭಿಮಾನ, ವಾಕ್ಚಾತುರ್ಯತೆ, ಸೇವಾಮನೋಭಾವನೆ, ಓರ್ವ ನಾಯಕನಿಗೆ ಇರಬೇಕಾದ ಎಲ್ಲಾ ಆರ್ಹತೆಗಳನ್ನು ಸಾಕ್ಷೀಕರಿಸಿದ ಆಕರ್ಷಕ ವ್ಯಕ್ತಿತ್ವದ ನಾಯಕರಾಗಿದ್ದಾರೆ. ಗಲ್ಫ್ ದೇಶದಲ್ಲಿ ಹಲವಾರು ನಾಯಕರನ್ನು ಸೃಷ್ಠಿಸಿರುವ ಕೀರ್ತಿ ಇವರದ್ದು. ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಕರ್ನಾಟಕ ಪರ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಎಲ್ಲಾ ರೀತಿಯ ಮಾರ್ಗದರ್ಶನ, ಬೆಂಬಲ, ಪ್ರೋತ್ಸಾಹ ನೀಡುತ್ತಾ ಗಲ್ಫ್ ನಾಡಿನಲ್ಲಿ ಕನ್ನಡ ಭಾಷೆ ಸದಾ ಹಸಿರಾಗಿರಿಸಿದ್ದಾರೆ. ಎಳೆಯ ಮಕ್ಕಳಿಂದ ವಿವಿದ ವಯೋಮಿತಿಯ ಪ್ರತಿಭೆಗಳಿಗೆ ವೇದಿಕೆಗಳನ್ನು ಕಲ್ಪಿಸಿ ಕಲೆಯನ್ನು ಅರಳಿಸಿರುವ ಕಲಾಪೋಷಕರಾಗಿದ್ದಾರೆ.

ಸರ್ವೋತ್ತಮ ಶೆಟ್ಟಿಯವರ ಹೆಜ್ಜೆ ಗುರುತುಗಳು: ಭವ್ಯ ಭಾರತ ಕರ್ನಾಟಕದ ತುಳುನಾಡಿನ ಕಡಲ ತಡಿಯ ಉಡುಪಿ ಜಿಲ್ಲೆ ಮಣಿಪಾಲದ ಹತ್ತಿರದ ಪರೀಕಾದಲ್ಲಿ ಸುಸಂಸ್ಕೃತ ಕುಟಂಬದ ಮಟ್ಟಾರ್ ಪರಾರಿ ದಿ.ಸೂರಪ್ಪ ಹೆಗ್ಡೆ ಮತ್ತು ಶ್ರೀಮತಿ ಸರಸ್ವತಿ ಶೆಟ್ಟಿ ದಂಪತಿಗಳ ಹಿರಿಯ ಮಗನಾಗಿ, ಉತ್ತಮ ಪರಿಸರದಲ್ಲಿ ಬೆಳೆದು ತನ್ನ ಪ್ರಾಥಮಿಕ, ಪದವಿಪೂರ್ವ ವಿದ್ಯಾಭ್ಯಾಸವನ್ನು ಪೆರ್ಡೂರು, ಹಿರಿಯಡ್ಕದಲ್ಲಿ ಮುಗಿಸಿ, ಮುಂಬೈಯಲ್ಲಿ ಆರ್. ಎ. ಪೊದ್ದಾ ರ್ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನುಪಡೆದರು. ತಮ್ಮ ವಿದ್ಯಾರ್ಥಿ ಜೀವನದ ಅವಧಿಯಲ್ಲಿ 1974ರಿಂದ1978ರ ಅವಧಿಯಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ ಇವರನ್ನುಕಾಲೇಜಿನಿಂದ ಆಯ್ಕೆಯ ಮೂಲಕ, ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಪ್ರತಿನಿಧಿಯಾಗಿಯಾಗುವ ಅವಕಾಶ ದೊರೆಯಿತು. ಈ ಮೂಲಕ ನಾಯಕತ್ವದ ಶಕ್ತಿಯನ್ನು ಮೈಗೂಡಿಸಿ ಕೊಂಡಿದ್ದರು.

ಪ್ರಖ್ಯಾತ ನಾಟಕಕಾರ ಪರ್ವತವಾಣಿಯವರ ಕೃತಿ”ಹಗ್ಗದ ಕೊನೆ” ನಾಟಕದ ಮೂಲಕ ಅಂತರಕಾಲೇಜು ನಾಟಕ ಸ್ಪರ್ಧೆಗಳಲ್ಲಿ ಮೊದಲ ಬಹುಮಾನಗಳನ್ನು ಪಡೆಯುವುದರೊಂದಿಗೆ ಕಲಾರಂಗದ ಪಯಣ ಮುಂದುವರಿಯಿತು.ತಮ್ಮ ವ್ಯಾಸಂಗದ ಅವಧಿಯಲ್ಲಿ ಪ್ರಥಮ ಬಾರಿಗೆ ಮುಂಬೈ ಆರ್. ಎ. ಪೊದ್ದಾರ್ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಸಂಘಟನೆಯ ಸ್ಥಾಪನೆ. ಹಲವಾರು ನಾಟಕಗಳ ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ, ಕನ್ನಡ ಚಲನಚಿತ್ರ ನಿರ್ದೇಶಕರಾದ ಶ್ರೀ ವಿಶು ಕುಮಾರ್ರವರಿಂದ ಪ್ರಶಸ್ತಿ ಸ್ವೀಕಾರ, ಕ್ರೀಡಾಕೂಟದಲ್ಲಿ ಮೆಲುಗೈ, ಕ್ರಿಕೆಟ್ ಆಟಗಾರರಾದ ಭಾರತದ ಸುನಿಲ್ ಗವಾಸ್ಕರ್, ಪಾಕಿಸ್ಥಾನದ ಬೌಲರ್ ಸಪ್ರರ್ಜಜ್ಖಾನ್ರವರಿಂದ ಬಹುಮಾನ ಪಡೆದ ಇವರು ಭಾರತ ತಂಡದ ಕ್ರಿಕೆಟ್ ಪಟು ವೆಂಗ್ ಸರ್ಕಾರ್, ಪ್ರಖ್ಯಾತ ರಾಜಕಾರಣಿ ಗುರುದಾಸ್ ಕಾಮತ್ ಇವರ ಸಹಪಾಠಿಯಾಗಿದ್ದಾರೆ.

1979ರಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ನಂತರ ಕಲೆಗೆ ಸೂಕ್ತ ವೇದಿಕೆಯನ್ನುರೂಪಿಸಲು, ತನ್ನಕಾಲೇಜಿನ ಹವ್ಯಾಸಿ ಕಲಾವಿದರು, ಸ್ನೇಹಿತರೊಡಗೂಡಿ “ಕಲಾ ಜಗತ್ತು” ಕಲಾಸಂಸ್ಥೆ ಕಟ್ಟಿದರು. ಸ್ಥಾಪಕ ಅಧ್ಯಕ್ಷರಾಗಿ ಸೇವೆಸಲ್ಲಿಸುವುದರ ಮೂಲಕ ಕರ್ನಾಟಕದ ಕನ್ನಡ ತುಳು ಕಲಾ ಪರಂಪರೆಯ ಕೀರ್ತಿ ಪತಾಕೆ ಹೊರನಾಡಿನ ಮುಂಬೈಯಲ್ಲಿ ಎತ್ತಿ ಹಿಡಿದ್ದಾರೆ. “ಕಲಾ ಜಗತ್ತು” ಸಂಸ್ಥೆ ಕಳೆದ ನಾಲ್ಕು ದಶಕಗಳಿಂದಲೂ ಸತತವಾಗಿ ಕನ್ನಡ, ತುಳು ನಾಟಕಗಳನ್ನು ಪ್ರದರ್ಶಿಸುತ್ತಾ, ತುಳು ಚಲನಚಿತ್ರ ನಿರ್ಮಾಣದ ಮೂಲಕ ಮುಂಬೈ ನಗರದಲ್ಲಿ ಅಗ್ರಸ್ಥಾನದಲ್ಲಿದೆ.

ಮುಂಬೈಯ ಸಿಂಡಿಕೇಟ್ ಬ್ಯಾಂಕಿನಲ್ಲಿ ಹತ್ತು ವರ್ಷಗಳ ಕಾಲ ಉದ್ಯೋಗದಲ್ಲಿದ್ದು ನಂತರ ಗಲ್ಫ್ ನತ್ತ ಪಯಣ, ಅಬುಧಾಬಿಯಲ್ಲಿ ಉನ್ನತ ಹುದ್ದೆಯೊಂದಿಗೆ ಗಲ್ಫ್ ನಲ್ಲಿ ಜೀವನ ಪ್ರಾರಂಭ, ಇಂಟರ್ ನ್ಯಾಶನಲ್ ಡಿಸ್ಟ್ರಿಬ್ಯೂಶನ್ ಸಂಸ್ಥೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಣೆ, ಸಂಸ್ಥೆಯ ಉನ್ನತಿಯಲ್ಲಿ ತನ್ನ26 ವರ್ಷಗಳ ಸುದೀರ್ಘ ಸೇವೆಯ ನಂತರ ಅಬುಧಾಬಿಯಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಸ್ವಂತ ಅಟೊಮೊಬೈಲ್ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಗಲ್ಫಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ತುಳು ಮತ್ತು ಪ್ರತಿಭೆಗಳಿಗೆ ಹಲವು ಸಂಘ ಸಂಸ್ಥೆಗಳ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಕೊಟ್ಟು ಪೋತ್ಸಾಹ ನೀಡಿದ್ದಾರೆ.

ಸಂಘ ಸಂಸ್ಥೆಗಳ ಜವಾಬ್ಧಾರಿ: 1995-1996ರಲ್ಲಿಅಬುಧಾಬಿಯಲ್ಲಿರುವ ಪ್ರತಿಷ್ಠಿತ ಇಂಡಿಯಾ ಸೋಶಿಯಲ್ ಅಂಡ್ಕಲ್ಚರಲ್ ಸೆಂಟರ್ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ 1999-2000ರಲ್ಲಿ ಸರ್ವೋತ್ತಮ ಶೆಟ್ಟಿಯವರು ಅಂದಿನ 37 ವರ್ಷಗಳ ಇತಿಹಾಸದಲ್ಲಿ ಪ್ರಥಮ ಕನ್ನಡಿಗ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿ ದಾಖಲೆಯನ್ನು ಸೃಷ್ಠಿಸಿದರು. ನಂತರ 2002-2003ರಲ್ಲಿ ಎರಡನೆಯ ಬಾರಿ ಅಧ್ಯಕ್ಷನಾಗಿ ಆಯ್ಕೆಯಾದ ತಮ್ಮಅಧಿಕಾರದ ಅವಧಿಗಳಲ್ಲಿ ಇಂಡಿಯಾ ಸೋಶಿಯಲ್ ಅಂಡ್ಕಲ್ಚರಲ್ ಸೆಂಟರ್ಗೆ ಕಟ್ಟದ ನಿರ್ಮಾಣ ಮಾಡಲು ಸ್ವಂತ ಸ್ಥಳ ಮತ್ತು ಯು.ಎ.ಇ. ಸರ್ಕಾರದಿಂದ ಅನುಮತಿ ಪಡೆದ ಫಲವಾಗಿ ಪ್ರಸ್ತುತ ಭವ್ಯ ವಾಸ್ತುಶಿಲ್ಪದ ಸಭಾಂಗಣ ನಿರ್ಮಾಣವಾಗಿದೆ. ಇದುಕನ್ನಡಿಗಅಧ್ಯಕ್ಷನ ಸಾಧನೆಇಂಡಿಯಾ ಸೋಶಿಯಲ್ ಅಂಡ್ಕಲ್ಚರಲ್ ಸೆಂಟರಿನಲ್ಲಿದಾಖಲಾಗಿದೆ.

See also  ಬಾಂಬೆ ಬಂಟ್ಸ್ ಅಸೋಸಿಯೇಶನ್, ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ, ಸನ್ಮಾನ

7500ಕಿಂತಲೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಅಬುಧಾಬಿ ಇಂಡಿಯನ್ ಸ್ಕೂಲಿನ ಆಡಳಿತ ನಿರ್ದೇಶಕ ಮಂಡಳಿಯಲ್ಲಿ 1997ರಿಂದ ನಿರ್ದೇಶಕರಾಗಿ ಗೌರವ ಪೂರ್ವಕ ಸ್ಥಾನ ಲಭಿಸಿ, ಶಾಲಾ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ. ಕ್ರೀಡೆಯಲ್ಲಿ ಮತ್ತು ಶಾಲಾ ಸರ್ವಾಂಗೀಣಕರಣ ಅಭಿವೃದ್ದಿಯಲ್ಲಿ ಅಪಾರಸೇವೆ ಸಲ್ಲಿಸುತಿದ್ದಾರೆ. ಶಾಲಾ ಆಡಳಿತ ಮಂಡಳಿಯ ಸ್ಪೋರ್ಟ್ಸ್ ಕಮಿಟಿಯ ಚೇರ್ಮನ್ ಆಗಿ ಸಹ ಸೇವೆ ಸಲ್ಲಿಸುತ್ತಿರುವ ಸರ್ವೋತ್ತಮ ಶೆಟ್ಟಿಯವರು ಅಲ್ ವತ್ ಬಾ ದಲ್ಲಿ ಶಾಲೆಯ ನೂತನ ಶಾಖೆ ನಿರ್ಮಾಣ ಮಂಡಲಿಯಲ್ಲಿ ಕಾರ್ಯ ನಿರ್ಹವಣೆಯ ಜವಬ್ಧಾರಿಯನ್ನು ವಹಿಸಿಕೊಂಡು ನಿರ್ಮಾಣವಾದ ಶಾಲೆ ಪ್ರಸ್ತುತ 3000ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಬಂಟರ ಸಮೂದಾಯದ “ಯು. ಎ. ಇ. ಬಂಟ್ಸ್” ಸಂಘಟನೆಯನ್ನು ಕಳೆದ ಮೂರುವರೆ ದಶಕಗಳಿಂದ ತಮ್ಮ ಸಂಘಟನಾಚತುರತೆಯಿಂದ ಸಾಂಗವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇವರು ಪ್ರತಿ ವರ್ಷ ನೂತನಕಾರ್ಯಕಾರಿ ಸಮಿತಿ ರಚಿಸಿ ಜವಬ್ದಾರಿಯನ್ನು ಹಂಚಿಕೊಡುತ್ತಾರೆ. ಜವಬ್ಧಾರಿ ವಹಿಸಿಕೊಂಡ ಸದಸ್ಯರು ಬಂಟರಸ್ನೇಹ ಮಿಲನ, ವಿಹಾರಕೂಟ, ಕ್ರೀಡಾಕೂಟ, ಪೂಜೆ, ರಕ್ತದಾನ ಶಿಬಿರದಂತಹ ಕಾರ್ಯಕ್ರಮಗಳನ್ನು ವರ್ಷಂಪ್ರತಿ ವ್ಯವಸ್ಥಿತವಾಗಿ ನಡೆಸಿಕೊಂಡು ಪ್ರತಿಯೊಂದು ಸದಸ್ಯರು ನಾಯಕತ್ವಗುಣವನ್ನು ಹೆಚ್ಚಿಸಿಕೊಳ್ಳುವಲ್ಲಿ ಸರ್ವೋತ್ತಮ ಶೆಟ್ಟಿಯವರ ಪಾತ್ರ ಬಹುಮುಖ್ಯವಾಗಿರುತ್ತದೆ.

ಯು. ಎ. ಇ. ತುಳು ಕೂಟದಲ್ಲಿ ಕಳೆದ ಎರಡುವರೆ ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡು ತುಳುನಾಡಿನ ಕಲಾ ಸಂಸ್ಕೃತಿಯ, ತುಳುಪರ್ಬ, ಸ್ಥಬ್ದಚಿತ್ರಗಳ ಮೆರವಣಿಗೆ, ಕ್ರೀಡಾಕೂಟ, ನಾಟಕ, ಯಕ್ಷಗಾನದ ಪ್ರದರ್ಶನಗಳಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಉತ್ಸಾಹ ತುಂಬಿ ಯಶಸ್ವಿಯಾಗಿ ಮುನ್ನಡೆಸುವಲ್ಲಿ ಇವರ ಕೊಡುಗೆ ಅಪಾರ.

ಅಬುಧಾಬಿ ಕರ್ನಾಟಕ ಸಂಘದಆ ಶ್ರಯದಲ್ಲಿ ಯು.ಎ.ಇ. ಮಟ್ಟದ “ಕೂಸಮ್ಮ ಶಂಭು ಶೆಟ್ಟಿ ಸ್ಮರಣಾರ್ಥ ಮಹಿಳಾ ಮತ್ತು ಪುರುಷರ ಥ್ರೋಬಾಲ್ ಪಂದ್ಯಾಟ” ವನ್ನು ಪ್ರಾರಂಭಿಸಿ ಹತ್ತು ಹಲವಾರು ಮಹಿಳಾ ತಂಡಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಪ್ರತಿಷ್ಠಿತ ತಂಡಗಳಾಗಿ ಪೈಪೊಟಿಯಲ್ಲಿ ಚಮತ್ಕಾರಿಕಾ ಪ್ರದರ್ಶನ ನೀಡುವಲ್ಲಿ ಯಶಸ್ಸುಕಂಡಿವೆ. ನೆರೆಯಕೊಲ್ಲಿ ರಾಷ್ಟ್ರಗಳಾದ ಕುವೈಟ್, ಒಮಾನ್, ಬಹೆರಿನ್, ಕತ್ತಾರ್ ತಂಡಗಳೊಂದಿಗೆ ಭಾರತದಿಂದತಂಡಗಲ್ಪ್ ನಾಡಿಗೆ ಬಂದು ಭಾಗವಹಿಸಿದ್ದು ಕ್ರೀಡಾಲೋಕದಲ್ಲಿ ಸಾಕ್ಷಿಯಾಗಿದೆ.

ಕರ್ನಾಟಕ ಕಡಲ ತೀರದ ಗಡಿನಾಡು ಕಾಸರಗೋಡಿನ ಬದಿಯಡ್ಕದಲ್ಲಿ 2016 ಡಿಸೆಂಬರ್ 9ರಿಂದ 13ರವರೆಗೆ ನಡೆದ ಐತಿಹಾಸಿಕ “ವಿಶ್ವ ತುಳುವೆರೆ ಆಯನೊ”ದ ತುಳು ಸಾಹಿತ್ಯ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಅಧ್ಯಕ್ಷರಾಗಿ ಜವಬ್ಧಾರಿ ವಹಿಸಿಕೊಂಡು ಯಶಸ್ವಿಯಾಗಿಸಿದ ಕೀರ್ತಿ ಇವರದ್ದಾಗಿದೆ. 2017ಡಿಸೆಂಬರ್23 ಮತ್ತು24 ರಂದು ಪಿಲಿಕುಳದಲ್ಲಿ ನಡೆಯಲಿರುವ, ತುಳುನಾಡಿನ ಜಾತಿ ಮತ, ಭಾಷಾ ಸೌಹಾರ್ದ ನೆಲೆಗಟ್ಟಿನಲ್ಲಿ ನಡೆಯುವ” ತುಳುನಾಡೋಚ್ಚಯ 2017 “ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸರ್ವೋತ್ತಮ ಶೆಟ್ಟಿಯವರಿಗೆ ಸಂದ ಗೌರವವಾಗಿದೆ.
ಪಟ್ಲಯಕ್ಷ ಫೌಂಡೆಶನ್ ನ ಘಟಕದಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರದ ಆಶ್ರಯದಲ್ಲಿ 2017ರಲ್ಲಿ ಸ್ಥಾಪನೆಯಾಗಿರುವ ಅನಿವಾಸಿ ಭಾರತೀಯ ಸಮಿತಿಯು.ಎ.ಇ.ಯಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿ ಸನ್ಮಾನ ಗೌರವ: ವಿದೇಶದಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯ ಬೆಳವಣಿಗೆಯಲ್ಲಿ 1998ರಲ್ಲಿ ಹೊರನಾಡ ಕನ್ನಡಿಗ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಅಂದಿನ ಸನ್ಮಾನ್ಯ ಮುಖ್ಯಮಂತ್ರಿಜೆ ಹೆಚ್. ಪಟೆಲ್ರವರಿಂದ ಸರ್ವೋತ್ತಮ ಶೆಟ್ಟಿಯವರು ಸ್ವೀಕರಿಸಿದ್ದಾರೆ. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯಕಾರಿ ಸಮಿತಿಯ ತಂಡದೊಂದಿಗೆ ಗಲ್ಪಿನಲ್ಲಿ ಕರ್ನಾಟಕದ ಕಲೆ, ಭಾಷೆ, ಸಂಸ್ಕೃತಿಯನ್ನು ವೈಭವೀಕರಿಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ ಅದ್ಭುತ ಸಾಧನೆಗೆ ಸಾಕ್ಷಿಯಾಗಿದ್ದಾರೆ.

ವಿಶ್ವದಲ್ಲಿ ಪ್ರಥಮ ಬಾರಿಗೆ ಅಬುಧಾಬಿಯಲಿ “ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ” ಏರ್ಪಡಿಸಿ ಅಂದಿನ ಕರ್ನಾಟಕದ ಉಪ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ಮತ್ತು ಕರ್ನಾಟಕ ಸರ್ಕಾರದ 14 ಮಂದಿ ಗಣ್ಯರ ತಂಡ ವಿವಿಧ ದೇಶಗಳಿಂದ ಪ್ರತಿನಿಧಿಗಳು ಸಹಸ್ರಾರು ಕನ್ನಡಿಗರ ಸಮಾವೇಶದಲ್ಲಿ ಪಾಲ್ಗೊಂಡು, ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆಕ ನ್ನಡ ಭಾಷೆಯ ಸಮ್ಮೇಳನ ದಾಖಲಾಯಿತು.

2006ರಲ್ಲಿ 25ವರ್ಷಗಳ ಯಶಸ್ವೀ ಹೆಜ್ಜೆಯೊಂದಿಗೆ ಮುನ್ನಡೆದ ಅಬುಧಾಬಿ ಕರ್ನಾಟಕ ಸಂಘದ ರಜತ ಮಹೋತ್ಸವವನ್ನು ಸನ್ಮಾನ್ಯ ಹೆಚ್. ಡಿ. ಕುಮಾರಸ್ವಾಮಿಯವರು ಉದ್ಘಾಟಿಸಿದ್ದು ಕರ್ನಾಟಕದಿಂದ 50 ವರ್ಷದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿಯೊಬ್ಬರು ಗಲ್ಫ್ ನಾಡಿಗೆ ಆಗಮಿಸಿದ್ದು, ಗಲ್ಪಿನಲ್ಲಿ ನೆಲೆಸಿರುವ ಕನ್ನಡಿಗರಿಗೆ ಮರೆಯಲಾರದ ಉತ್ಸವವಾಗಿತ್ತು.

See also  ಬಹ್ರೈನ್ ನಲ್ಲಿ ಕನ್ನಡ ಭವನಕ್ಕೆ ದೇವೇಗೌಡರಿಂದ ಶಂಕುಸ್ಥಾಪನೆ

ಸರ್ವೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ 2006ರಲ್ಲಿ ನಡೆದ ಅಬುಧಾಬಿ ಕರ್ನಾಟಕ ಸಂಘದ ರಜತ ಮಹೋತ್ಸವ ವರ್ಷದಲ್ಲೆ ಪ್ರತಿಷ್ಠಿತ “ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ” ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಹೆಚ್. ಡಿ. ಕುಮಾರ ಸ್ವಾಮಿಯವರಿಂದ ಸರ್ವೋತ್ತಮ ಶೆಟ್ಟಿಯವರು ಸ್ವೀಕರಿಸಿದ್ದಾರೆ.

ಸಮಾಜ ಸೇವೆಗಾಗಿ 2009ರಲ್ಲಿ ಸರ್ವೋತ್ತಮ ಶೆಟ್ಟಿಯವರು ಪ್ರತಿಷ್ಠಿತ ‘ಆರ್ಯಭಟ ಪ್ರಶಸ್ತಿ”ಯನ್ನು ಬೆಂಗಳೂರಿನಲ್ಲಿ ಸ್ವೀಕರಿಸಿದರು. ಬೆಂಗಳೂರಿನಲ್ಲಿ “ಕಿರೀಟ ಪ್ರಶಸ್ತಿ”ಯನ್ನು ಕರ್ನಾಟಕ ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯನವರಿಂದ ಸ್ವೀಕಾರ

ಕುವೈಟಿನಲ್ಲಿ ನಡೆದ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ರಾಷ್ಟ್ರಕವಿ ಶ್ರೀ ಶಿವರುದ್ರಪ್ಪನವರಿಂದ “ವಿಶ್ವಮಾನ್ಯ ಪ್ರಶಸ್ತಿ” ಸ್ವೀಕಾರ, ನಾರಾಯಣ ಹೃದಯಾಲಯದಲ್ಲಿ ಡಾ/. ದೇವಿ ಪ್ರಸಾದ್ ಶೆಟ್ಟಿಯವರಿಂದ ಸನ್ಮಾನ, ಸನ್ಮಾನ ನೀಡಿರುವ ಇನ್ನಿತರ ಸಂಘ ಸಂಸ್ಥೆಗಳು – ಅಲ್ಐನ್ ಬುರೈಮಿ ಕನ್ನಡ ಸಂಘ, ಬಹೆರಿನ್ ಕನ್ನಡ ಸಂಘ, ಅಬುಧಾಬಿ ಕರ್ನಾಟಕ ಸಂಘ, ದುಬಾಯಿ ಕರ್ನಾಟಕ ಸಂಘ ಬೆಂಗಳೂರು ಯು.ಎ.ಇ.ಬಂಟ್ಸ್, ದೆಹಲಿ ಬಂಟ್ಸ್ ಸಂಘ, ದೆಹಲಿ ತುಳು ಸಿರಿ, ಪೂನ ಕನ್ನಡ ಸಂಘ, ಪೂನ ಬಂಟರ ಸಂಘ, ಪೂನಾ ತುಳು ಕೂಟ, ಪಿಂಪ್ರಿಚಿಂಚ್ವಾಡ್ ಬಂಟರ ಸಂಘ, ಪಿಂಪ್ರಿಚಿಂಚ್ಯಾಡ್ ತುಳು ಕೂಟ, ಕಲಾಜಗತ್ತು ಮುಂಬೈ, ಮುಂಬೈ ಬಂಟರ ಸಂಘ, ಬಂಟರ ಮಾತೃ ಸಂಘ ಮಂಗಳೂರು, ಸಾಂಗ್ಲಿತುಳುಕೂಟ ಬೆಳ್ಳಿಹಬ್ಬ, ನಾಸಿಕ್ ಬಂಟರ ಸಂಘ, ಕತ್ತಾರ್ ತುಳುಕೂಟ, ಕುವೈಟ್ತುಳುಕೂಟ, ಕುವೈಟ್ ಬಂಟರ ಸಂಘ, 2016ರಲ್ಲಿ ಸುಂದರ್ರಾಮ್ ಶೆಟ್ಟಿ ಪ್ರಶಸ್ತಿ, ಇತ್ಯಾದಿ ಹತ್ತು ಹಲವು ಪ್ರಶಸ್ತಿಗಳ ಸರಮಾಲೆಯನ್ನು ಸರ್ವೋತ್ತಮ ಶೆಟ್ಟಿಯವರು ಧರಿಸಿರುವರು.

ಸರ್ವೋತ್ತಮ ಶೆಟ್ಟಿಯವರ ಸಹಾಯ ಹಸ್ತ ಚಾಚುವಲ್ಲಿಎತ್ತಿದ ಕೈ. ಸಾಮಾಜಿಕ ಕಳಕಳಿ ಇರುವ ಇವರು ಅಪಘಾತಕ್ಕೆ ಒಳಗಾದವರಿಗೆ, ಸಂಕಷ್ಟದಲ್ಲಿ ಇರುವವರಿಗೆ, ನಿಧನರಾದವರ ಮನೆಗೆತೆರಳಿ ನೆರವು ನೀಡಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿರುವ ಸಹೃದಯಿ.

ಸಹಸ್ರಾರು ಸಂಖ್ಯೆಯಲ್ಲಿ ವಿಳಾಸ, ದೂರವಾಣಿ ಸಂಖ್ಯೆ, ಇ-ಮೈಲ್,ವಾಟ್ಸೆಪ್ವಿಳಾಸ ಹೊಂದಿರುವ ಇವರು ಗಲ್ಪ್ ನಾಡಿನಲ್ಲಿ ನಡೆಯುವ, ಕಾರ್ಯಕ್ರಮ, ಸಲಹೆ, ಸಹಾಯ, ವೈದ್ಯಕೀಯ ಶಿಬಿರ, ರಕ್ತಧಾನ ಶಿಬಿರ, ನೌಕರಿ, ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಸಹಾಯ ಇತ್ಯಾದಿ ಹತ್ತು ಹಲವು ವಿಚಾರಗಳನ್ನು ಗಲ್ಪಿನಾದ್ಯಂತ ಇರುವ ಬಂಧು ಮಿತ್ರರಿಗೆ ತಿಳಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ಸುಕಂಡಿದ್ದಾರೆ.
ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ, ಸಭೆ ಸಮಾರಂಭಗಳಲ್ಲಿ ಮುಖ್ಯಅತಿಥಿಯಾಗಿ, ಕಾರ್ಯಕ್ರಮ ನಿರೂಪಕರಾಗಿ, ಕ್ರೀಡಾಕೂಟದಲ್ಲಿ, ವಿಹಾರಕೂಟದಲ್ಲಿ ತಲೆಯ ಮೇಲೊಂದು ದೊಡ್ಡ ಹ್ಯಾಟ್ ಹಾಕಿ ಕೈಲೊಂದು ಮೈಕ್ ಹಿಡಿದು ಮಾತನಾಡಿದರೆ ಕಂಚಿನ ಕಂಠದ ಸ್ವರ ತುಳು ಕನ್ನಡ ಆಂಗ್ಲ ಭಾಷೆಯಲ್ಲಿ ಪ್ರತಿಧ್ವನಿಸುವ ವ್ಯಕ್ತಿತ್ವದ ಸರ್ವೋತ್ತಮಣ್ಣ ಎಲ್ಲರ ಅಚ್ಚುಮೆಚ್ಚಿನ ಕೇಂದ್ರಬಿಂದು ಆಗಿರುತ್ತಾರೆ

ಸದಾ ಗಣ್ಯರೊಂದಿಗೆ ಒಡನಾಟದಲ್ಲಿರುವ, ಎಲ್ಲಾ ಸಂಘಟನೆಗಳ ಮುಖ್ಯಸ್ಥರೊಂದಿಗೆ,ಸದಸ್ಯರೊಂದಿಗೆ ನಗುಮೊಗದಿಂದ ಸ್ನೇಹ ಜೀವಿಯಾಗಿರುವ ಸರ್ವೋತ್ತಮ ಶೆಟ್ಟಿಯವರು 1984ರಲ್ಲಿ ಶ್ರೀಮತಿ ಉಷಾರವರನ್ನು ಬಾಳಾಸಂಗಾತಿಯನ್ನಾಗಿ ಮಾಡಿಕೊಂಡು, ಪುತ್ರ ಸಮರ್ಥ್, ಸೊಸೆ ಶೃತಿ, ಪುತ್ರಿ ಸಂಯುಕ್ತರೊಂದಿಗೆ ಸುಖಿ ಜೀವನ ನಡೆಸುತ್ತಿರುವ ಇವರು2009ರಲ್ಲಿ ತಮ್ಮದಾಂಪತ್ಯ ಜೀವನದ ರಜತ ವರ್ಷಚರಣೆಯನ್ನು ನೂರಾರು ಆತ್ಮೀಯರೊಂದಿಗೆ ಆಚರಿಸಿದ ಸಮಾರಂಭ ಆತ್ಮೀಯ ಲೋಕವನ್ನು ಸೃಷ್ಠಿಸಿತ್ತು.

ಜೀವನದ ಯಶಸ್ವಿ ಹೆಜ್ಜೆಯಲ್ಲಿ ಎರಡು ಮಹಾನ್ ವ್ಯಕ್ತಿಗಳು ಇವರಿಗೆ ಮಾದರಿಯಾಗಿದ್ದಾರೆ. ಭಾರತೀಯ ಹೆಮ್ಮೆಯ ವರಪುತ್ರ ಸರಳ ಸಜ್ಜನಿಕೆಯ ಸಕಾರ ಮೂರ್ತಿ, ತುಳು ಮಣ್ಣಿನ ಮಗ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು ಮತ್ತು ಗುಲಾಮ ಗಿರಿಯಿಂದ ಮಾನವ ಕೋಟಿಯನ್ನುಮುಕ್ತಗೊಳಿಸಿದ ವಿಶ್ವ ಮೆಚ್ಚಿದ ನಾಯಕ ನೆಲ್ಸನ್ ಮಂಡೆಲಾ.

ಸರ್ವರಲ್ಲಿ ಉತ್ತಮ “ಸರ್ವೋತ್ತಮ” ಆತ್ಮೀಯರ ಅಭಿಮಾನದ ಸರ್ವೋತ್ತಮಣ್ಣನವರು ಗಲ್ಪ್ ನಾಡಿನಲ್ಲಿ ನೆಲೆಸಿರುವ ಅಪ್ಪಟ ಅನಿವಾಸಿ ಭಾರತೀಯ, ಕನ್ನಡಿಗ, ತುಳುಮಣ್ಣಿನ ತುಳುಮಾತೆಯ ಪುತ್ರ. ಜಾತಿ ಮತಧರ್ಮದ ಎಲ್ಲೆಯನ್ನು ಮೀರಿ, ವಿಶ್ವಮಾನವ ತತ್ವವನ್ನು ತನ್ನಲ್ಲಿ ಅಳವಡಿಕೊಂಡಿರುವ ಆತ್ಮೀಯರಿಗೆ ಶಾರ್ಜ ಕರ್ನಾಟಕ ಸಂಘದ ಪ್ರತಿಷ್ಠಿತ “ಮಯೂರ – ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ” ಯಗರಿ ಸರ್ವೋತ್ತಮ ಶೆಟ್ಟಿಯವರ ಕೀರಿಟವನ್ನುಅಲಂಕರಿಸುವ ಸುಮಧುರ ಕ್ಷಣಕ್ಕೆಯು.ಎ.ಇ. ಯ ಎಲ್ಲಾ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರು, ಕಳೆದಹದಿನಾಲ್ಕು ವರ್ಷಗಳಿಂದ “ಮಯೂರ – ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ” ಪಡೆದಿರುವ ಗಣ್ಯರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಕನ್ನಡಿಗರು ಸಾಕ್ಷಿಯಾಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು