ಮೆಲ್ಬರ್ನ್ ನಗರ: ನಾಲ್ಕನೇ ಐತಿಹಾಸಿಕ ಪರ್ಯಾಯದ ಪೂರ್ವಭಾವಿಯಾಗಿ ವಿಶ್ವ ಪರ್ಯಟನೆ ನಡೆಸುತ್ತಿರುವ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್ ಮಹಾನಗರದಲ್ಲಿ ಅಭೂತಪೂರ್ವ ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವವನ್ನು ಸಲ್ಲಿಸಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪೂರ್ಣಕುಂಭ, ವೇದಘೋಷ, ಚಂಡೆ ವಾದ್ಯಗಳೊಂದಿಗೆ ಗುರುಗಳನ್ನು ಸ್ವಾಗತಿಸಲಾಯಿತು. ನಂತರ ಭಕ್ತರಿಂದ ಸಾಮೂಹಿಕ ಪಾದಪೂಜೆ, ಶ್ರೀಗಳಿಂದ ಸಂಸ್ಥಾನ ಪೂಜೆ ನೆರವೇರಿತು.
ನಂತರ ಸಾಂಪ್ರದಾಯಿಕ ಶೈಲಿಯಲ್ಲಿ ಉಡುಪಿ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಗಳನ್ನು ವೈಭವೋಪೇತವಾಗಿ ಮೆರವಣಿಗೆಯ ಮೂಲಕ ಕರೆತರಲಾಯಿತು.
ಮೆರವಣಿಗೆಯಲ್ಲಿ ಉಡುಪಿಯ ಪ್ರಸಿದ್ಧ ಕಲೆ ಹುಲಿವೇಷ , ಕೋಲಾಟ, ಪ್ರಸಿದ್ಧ ದಾಸರುಗಳ ವೇಷ ಪ್ರಮುಖ ಆಕರ್ಷಣೆಯಾಗಿತ್ತು.
ಗುರುವಂದನಾ ಕಾರ್ಯಕ್ರಮಕ್ಕೆ ಸರಕಾರದ ವತಿಯಿಂದ ಆಗಮಿಸಿದ ಪ್ರವಾಸ ಮತ್ತು ಕ್ರೀಡಾ ಸಚಿವ ಸ್ಟೀವ್ ಡಿಮೋ ಪುಲಸ್ ಅವರು ತಮ್ಮ ಗೌರವವನ್ನು ಶ್ರೀಗಳಿಗೆ ಅರ್ಪಿಸಿದರು.