ಕ. ಸಾ. ಪ. ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ ನಿಧನ

ಕ. ಸಾ. ಪ. ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ ನಿಧನ

Apr 22, 2020 04:00:48 PM (IST)
ಕ. ಸಾ. ಪ. ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ ನಿಧನ

ಮುಂಬಯಿ: ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ (87) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಬೆಳಗ್ಗೆ (ಏಪ್ರಿಲ್ 22) ರಂದು ನಿಧನರಾದರು.

ಮೂಲತಃ ಮಂಗಳೂರಿನ ಹೆಜಮಾಡಿಯವರಾಗಿದ್ದು ಪತ್ನಿ, ಪುತ್ರಿ, ಅಳಿಯ, ಮೊಮ್ಮಗಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಬದುಕಿನಲ್ಲಿ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಹೆಚ್.ಬಿ.ಎಲ್ ರಾವ್ ಉದಾಹರಣೆ. ಅವರ ಹೆಸರು ಕೇಳಿದರೆ ನಮಗೆ ನೆನಪಾಗುವುದು ಅವರು ಮುಂಬಯಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಕನ್ನಡಾಂಬೆಯ ಸೇವಾ ಕೈಂಕರ್ಯಗಳು. ಅಲ್ಲದೆ  ಒಂದು ದಶಕಗಳ ಕಾಲ (2004 ರಿಂದ 2014ರ ವರೆಗೆ) ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.

ಅವರ ಸಂಪಾದಕತ್ವದ "ಅಣಿ ಅರದಲ ಸಿರಿ ಸಿಂಗಾರ" ಅಪೂರ್ವ ಬೃಹತ್ ಗ್ರಂಥಕ್ಕೆ 2017ರಲ್ಲಿ  ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ "ಪುಸ್ತಕ ಸೊಗಸು" ಪ್ರಶಸ್ತಿ ದೊರೆತಿದೆ.

ಅಲ್ಲದೆ ಇವರ ನೇತೃತ್ವದ  ಪದವೀಧರ ಯಕ್ಷಗಾನ ಮಂಡಳಿಗೆ ಈ ಸಲದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು  2019 ನವೆಂಬರ್ ನಲ್ಲಿ ಯಕ್ಷಗಾನ ಕಲಾರ0ಗ ಪ್ರದಾನ ಮಾಡಿದೆ.

ಯಕ್ಷಗಾನ, ಸಾಹಿತ್ಯ ಸಮ್ಮೇಳನ, ತುಳು ಪರ್ಬ, ಪದವೀಧರ ಯಕ್ಷಗಾನ ಸಮಿತಿ, ಸಾಹಿತ್ಯ ಬಳಗ, ಶಿವಳ್ಳಿ ಪ್ರತಿಷ್ಠಾನ, ಕರ್ನಾಟಕ ಗಮಕ ಕಲಾ ಪರಿಷತ್ತು ಮಹಾರಾಷ್ಟ್ರ ಘಟಕದ ನೇತೃತ್ವ, ಪ್ರವಚನ, ಈ ಪಟ್ಟಿಯನ್ನು ಬೆಳೆಸುತ್ತ ಹೋಗಬಹುದು.

ಯಕ್ಷಗಾನ ಕಲಾವಿದನಾಗಿ, ಪೋಷಕರಾಗಿ, ಕಲಾವಿದರಾಗಿ, ಸಂಘಟಕರಾಗಿ, ಅರ್ಥಧಾರಿಯಾಗಿ, ವಿಭಿನ್ನ ಕಲೆಗಳಲ್ಲಿ ಕಲಾ ಸೇವೆಗೈದ ಅವರಂತಹ ಇನ್ನೋರ್ವ ಸಂಘಟಕರನ್ನು ಹೆಸರಿಸುವುದು ಕಷ್ಟ.

ಒಂದು ವಿಶ್ವವಿದ್ಯಾನಿಲಯ, ಒಂದು ಅಕಾಡೆಮಿ ಮಾಡಬಹುದಾದಷ್ಟು ಕೆಲಸವನ್ನು ಅವರು ಮುಂಬಯಿ ಯಲ್ಲಿ ಕಳೆದ 6 ದಶಕಗಳಲ್ಲಿ ಮಾಡಿದ್ದಾರೆ. ಯಕ್ಷಗಾನಕ್ಕಾದ ಅನ್ಯಾಯ, ಅವಹೇಳನವನ್ನು ಪ್ರತಿಭಟಿಸಿ ಅವರು ಅನೇಕ ಬಾರಿ ನ್ಯಾಯಾಲಯದ ಮೊರೆ ಹೋಗಿ ಜಯಶೀಲರಾಗಿದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ಈ ಕಲಾಪೋಷಕನನ್ನು ಮುಗಿಸಿಬಿಡಲು ಭೂಗತ ಸಂಚು ಕೂಡ ವಿಫಲವಾಗಿತ್ತು.

ಅಲ್ಲಿ ಅವರು ಬದುಕಿ ಉಳಿದು ಕಲೆಯ ಉಳಿವಿಗಾಗಿ ಶ್ರಮಿಸಿದ್ದು ಈಗ ಇದೆಲ್ಲ ಇತಿಹಾಸದ ಭಾಗ. ಮುಂಬಯಿ ಮಹಾನಗರದಲ್ಲಿ ಓರ್ವ ಅಪೂರ್ವ ಸಂಘಟಕನೆಂಬ ಹೆಸರಿಗೆ ಪಾತ್ರರಾಗಿದ್ದವರು. ಅಷ್ಟ ಮಠಗಳ ಉಡುಪಿಯ ಸ್ವಾಮೀಜಿಯವರೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡವರು. ನಾಡಿನಾದ್ಯಂತವಿರುವ ಸಾಹಿತ್ಯ ವಿದ್ವಾಂಸರನ್ನು, ಹಿರಿಯ ಯಕ್ಷಗಾನ ಕಲಾವಿದರನ್ನು ಮುಂಬಯಿಗೆ ಬರ ಮಾಡಿಸಿ ಅವರಿಂದ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳುತ್ತಿದ್ದರು. ಹೊರನಾಡಿನ ಹಲವಾರು ಕವಿಗಳಿಗೆ, ಸಾಹಿತಿಗಳಿಗೆ ಉತ್ತಮ ವೇದಿಕೆಯನ್ನು ನಿರ್ಮಾಣ ಮಾಡಿಕೊಂಡವರು.

ಮುಂಬಯಿಯ ಬಿ.ಎಸ್.ಕೆ.ಬಿ. ಅಸೋಸಿಯೇಷನ್ ನ ಮುಂಬಯಿಯ ಸಯನ್ ನಲ್ಲಿ ನಿರ್ಮಾಣವಾಗುತ್ತಿರುವ ಗೋಕುಲದ ಕೃಷ್ಣ ಮಂದಿರ ನಿರ್ಮಾಣದ ಕಾರ್ಯಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಾ ಬಂದವರು. ಇವರನ್ನು ದೇಶದ ಪ್ರಮುಖ ನಗರಗಳಲ್ಲಿ ಬಿರುದು ಸನ್ಮಾನವನ್ನು ನೀಡಿ ಸನ್ಮಾನಿಸಲಾಗಿದೆ.

ದುಃಖಕರ ವಿಚಾರವೆಂದರೆ ಕರ್ನಾಟಕ ಸರಕಾರ ಮಾತ್ರ ಇವರನ್ನು ಕೊನೆ ತನಕ ಗುರುತಿಸಲೇ ಇಲ್ಲ.  ಇವರ ನಿಧನ ಸಾಹಿತ್ಯ ಲೋಕಕ್ಕೆ, ಮರಾಠಿ ಮಣ್ಣಿಗೆ ತುಂಬಲಾರದ ನಷ್ಟವಾಗಿದೆ.

ಬಿಎಲ್ ರಾವ್ ಅವರ ನಿಧನಕ್ಕೆ ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವರದಿ: ದಿನೇಶ್ ಕುಲಾಲ್