ಕನ್ನಡ ಕಲಿತು ವಚನ ಹೇಳಿದ ಇಟಲಿ ಮಹಿಳೆ

ಕನ್ನಡ ಕಲಿತು ವಚನ ಹೇಳಿದ ಇಟಲಿ ಮಹಿಳೆ

LK   ¦    Oct 14, 2020 09:45:16 AM (IST)
ಕನ್ನಡ ಕಲಿತು ವಚನ ಹೇಳಿದ ಇಟಲಿ ಮಹಿಳೆ

ಮೈಸೂರು: ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ವೆಬಿನಾರ್ ಮೂಲಕ ನಡೆದ ವಚನೋತ್ಸವ ಈ ಬಾರಿ ವಿಭಿನ್ನವಾಗಿತ್ತು. ಕಾರಣ ಇಟಲಿ ಪ್ರಜೆ ಕನ್ನಡ ಕಲಿತು ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಇಟಲಿಯಲ್ಲಿರುವ ಕನ್ನಡಿಗರು ಹಾಗೂ ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ಇಟಲಿಯ ಪ್ರಜೆ ಟಿಜಿಯಾನ ರಿಪೇಪಿ ಮಾತನಾಡಿ ಎ.ಕೆ.ರಾಮಾನುಜನ್‍ರವರು ವಚನಗಳನ್ನು ಆಂಗ್ಲಭಾಷೆಗೆ ಅನುವಾದ ಮಾಡಿರುವ ದಿ ಸ್ಪೀಕಿಂಗ್ ಆಫ್ ಶಿವ ಪುಸ್ತಕ ಓದಿ ವಚನಗಳ ಬಗ್ಗೆ ಒಲವು ಉಂಟಾಗಿ ಕನ್ನಡ ಕಲಿಯಬೇಕೆಂದೆನಿಸಿತು. ಹೀಗಾಗಿ ಕರ್ನಾಟಕಕ್ಕೆ ಬಂದೆ. ಕನ್ನಡ ನಾಡನ್ನು ನೋಡಿ ನನಗೆ ಸ್ವರ್ಗದ ಅನುಭವವಾಯಿತು. ಯಾವುದೇ ದೇಶದ ಸಾಂಸ್ಕೃತಿಕ ಹಿನ್ನೆಲೆಯನ್ನು ಅರಿಯಬೇಕಾದರೆ ಅಲ್ಲಿನ ಜನರ ಭಾಷೆ ಕಲಿಯಬೇಕು ಎಂದೆನೆಸಿ ಭಾರತದಲ್ಲಿ ಹಿಂದಿ, ಸಂಸ್ಕೃತ ಹಾಗೂ ಕನ್ನಡವನ್ನು ಕಲಿತೆ. ಕನ್ನಡ ಭಾಷೆ ಮಾತನಾಡಲು ಹೋದರೆ ಪ್ರೀತಿ ಉಕ್ಕಿ ಬರುತ್ತದೆ. ಇಟಲಿಯಲ್ಲಿರುವ ಕನ್ನಡಿಗರನ್ನು ಹುಡುಕಿಕೊಂಡು ಹೋಗಿ ಅವರ ಜೊತೆ ಆಗಾಗ ಕನ್ನಡ ಮಾತನಾಡುತ್ತಿರುತ್ತೇನೆ ಎಂದು ಒಂದು ಗಂಟೆಯ ಚರ್ಚೆಯಲ್ಲಿ ನಿರರ್ಗಳವಾಗಿ ಕನ್ನಡ ಮಾತನಾಡಿ ಅನೇಕ ವಚನಗಳನ್ನು ಹೇಳುವುದರ ಮುಖಾಂತರ ಕನ್ನಡಾಭಿಮಾನವನ್ನು ವ್ಯಕ್ತಪಡಿಸಿದರು. 

ಮೈಸೂರಿನಿಂದ ಇಟಲಿಗೆ ಹೋಗಿ ನೆಲೆಸಿರುವ ಜಯಮೂರ್ತಿ ಮತ್ತು ಇಟಲಿ ಕನ್ನಡ ಸಂಘದ ಅಧ್ಯಕ್ಷ ಮಧು ಹೇಮೆಗೌಡ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ  ಸಂವಾದದಲ್ಲಿ ಭಾಗವಹಿಸಿದ್ದರು.