ಉಪ್ಪಿನಕುದ್ರುವಿನ ಶಾಲೆಗೆ ಉದ್ಯಮಿಯಿಂದ ಶೈಕ್ಷಣಿಕ ನೆರವು ವಿತರಣೆ

ಉಪ್ಪಿನಕುದ್ರುವಿನ ಶಾಲೆಗೆ ಉದ್ಯಮಿಯಿಂದ ಶೈಕ್ಷಣಿಕ ನೆರವು ವಿತರಣೆ

IK   ¦    Jun 01, 2019 02:25:50 PM (IST)
ಉಪ್ಪಿನಕುದ್ರುವಿನ ಶಾಲೆಗೆ ಉದ್ಯಮಿಯಿಂದ ಶೈಕ್ಷಣಿಕ ನೆರವು ವಿತರಣೆ

ಮುಂಬಯಿ: ನಗರದ ಕ್ಲಾಸಿಕ್‌ ಗ್ರೂಪ್ಸ್‌ ಆಫ್‌ ಹೊಟೇಲ್‌ನ ಮಾಲೀಕ, ಮೊಗವೀರ ಬ್ಯಾಂಕಿನ ನಿರ್ದೇಶಕ, ಸಮಾಜ ಸೇವಕ ಸುರೇಶ್‌ ಆರ್‌. ಕಾಂಚನ್‌ ಅವರ ವತಿಯಿಂದ ಹುಟ್ಟೂರು ಉಪ್ಪಿನಕುದ್ರುವಿನ ತಾನು ಕಲಿತ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವು ಈಚೆಗೆ ನಡೆಯಿತು.

ಪ್ರತಿ ವರ್ಷದಂತೆ ಯುವಕ ಮಂಡಲ ಉಪ್ಪಿನಕುದ್ರು ಇದರ ಸಹಕಾರದಲ್ಲಿ ನಡೆದ‌ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸುರೇಶ್‌ ಕಾಂಚನ್‌ ಅವರು, ಲಕ್ಷಾಂತರ ರೂ. ಗಳ ವೆಚ್ಚದಲ್ಲಿ ತನ್ನೂರಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಗ್ರಾಮದ ಅಭಿವೃದ್ದಿ ಯೋಜನೆಗಳಿಗೆ ನೆರವು ನೀಡುತ್ತಾ ಬಂದಿದ್ದೇನೆ.
13 ವರ್ಷಗಳ ನನ್ನ ವಿದ್ಯಾರ್ಥಿ ವೇತನ ಕಾರ್ಯಕ್ರಮದಿಂದಾಗಿ ಬಹಳಷ್ಟು ದಾನಿಗಳು ಬೆಳೆದು ಬಂದಿದ್ದಾರೆ. ಈ ಗ್ರಾಮದ ಮಕ್ಕಳ ಅಭಿವೃದ್ಧಿಗೆ ಎಲ್ಲರೂ ಸಹಾಯ ಹಸ್ತ ನೀಡಬೇಕು. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿ
ಗಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು.ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು. ಅವರು ಕೂಡ ತಮ್ಮ ಆದಾಯದ ಪಾಲನ್ನು ಮಕ್ಕಳಿಗೆ ಇಲ್ಲಿ ನೀಡಬೇಕು. ನಮ್ಮ ಮನಸ್ಸು ಶುದ್ಧವಾಗಿದ್ದಾಗ ಮಾತ್ರ ಮಾಡುವ ಕೆಲಸಗಳೂ ಶುದ್ಧವಾಗಿರುತ್ತದೆ. ನಾನು ಗ್ರಾಮದ ಅಭಿವೃದ್ಧಿಗೆ ನೀಡುವ ಸಹಾಯಹಸ್ತದಲ್ಲಿ ಯಾವುದೇ ರೀತಿಯ ರಾಜಕೀಯವಿಲ್ಲ ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬೈಂದೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ್‌ ಪೂಜಾರಿ, ಯಾರು ಶೈಕ್ಷಣಿಕವಾಗಿ ಸಮಾಜವನ್ನು ರೂಪಿಸುತ್ತಾರೋ, ಯಾರು ಸಮಾಜದ ಹಿಂದುಳಿದವರನ್ನು ಮೇಲೆತ್ತಲು ಪ್ರಯತ್ನಿಸುತ್ತಾರೋ ಅದಕ್ಕಿಂತ ದಾನ ಬೇರೊಂದಿಲ್ಲ. ಶೈಕ್ಷಣಿಕವಾಗಿ ಸುರೇಶ್‌ ಕಾಂಚನ್‌ ಅವರ ಕೊಡುಗೆ ಬಹಳಷ್ಟಿದೆ. ವಿದ್ಯಾವಂತರಾಗಿ ಬೆಳೆದ ಮಕ್ಕಳಿಂದ ಊರು ಅಭಿವೃದ್ಧಿಯಾಗುತ್ತದೆ. ಊರಿನ ಅಭಿವೃದ್ಧಿಗೆ ಸುರೇಶ್‌ ಕಾಂಚನ್‌ ಅವರು ಪಣತೊಟ್ಟಿದ್ದಾರೆ. ಹಣ ಎಲ್ಲರಲ್ಲೂ ಇದೆ, ಆದರೆ ಅದನ್ನು ಸಮಾಜಕ್ಕೆ ನೀಡಿ ಅರ್ಪಣಾ ಭಾವದಿಂದ ಸೇವೆ ಮಾಡುವವರು ಕಡಿಮೆ. ಸಮಾಜಕ್ಕೆ ಯಾರು ಹಣ ನೀಡುತ್ತಾರೋ ಅವರಲ್ಲಿ ಲಕ್ಷ್ಮೀ ಶಾಶ್ವತವಾಗಿ ಉಳಿಯತ್ತಾಳೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಬಸೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ. ರಾಧಾಕೃಷ್ಣ ಶೆಟ್ಟಿ ಅವರು ಮಾತನಾಡಿ ಶುಭ ಹಾರೈಸಿದರು. ಯುವಕ ಮಂಡಲ ಉಪ್ಪಿನಕುದ್ರು ಇದರ ಗೌರವಾಧ್ಯಕ್ಷ ಸದಾನಂದ ಶೇರುಗಾರ್‌, ಬೆಂಗಳೂರು ಉದ್ಯಮಿ ಶ್ರೀಧರ ಎಸ್‌. ಕುಂದರ್‌ ಅವರು ಮಾತನಾಡಿ ಶುಭ ಹಾರೈಸಿದರು.
ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಧರ್ಮದರ್ಶಿ ರಮೇಶ್‌ ಕಾರಂತ್‌, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ರಾಜೇಶ್‌ ಕಾರಂತ್‌, ತಲ್ಲೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಆನಂದ ಬಿಲ್ಲವ, ಉಪ್ಪಿನಕುದ್ರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಾಲತಿ, ಉಪ್ಪಿನಕುದ್ರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್‌. ಗೋಪಾಲಕೃಷ್ಣ, ಯಶೋಧಾ ಎಸ್‌. ಕಾಂಚನ್‌, ಮುಂಬಯಿ ಉದ್ಯಮಿ ಹೇಮಂತ್‌ ಶೆಟ್ಟಿ, ಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಗ್ರಾಮದ ಅಭಿವೃದ್ಧಿಗಾಗಿ ಸಹಕಾರ ನೀಡಿದ ಮಾಜಿ ಶಾಸಕ ಗೋಪಾಲ್‌ ಪೂಜಾರಿ ಇವರನ್ನು ಸುರೇಶ್‌ ಕಾಂಚನ್‌ ದಂಪತಿ ವತಿಯಿಂದ ಚಿನ್ನದ ಉಂಗುರವನ್ನಿತ್ತು ಸಮ್ಮಾನಿಸಲಾಯಿತು. ಯುವಕ ಮಂಡಲದ ವತಿಯಿಂದ ಸುರೇಶ್‌ ಕಾಂಚನ್‌ ಅವರ ಪುತ್ರಿ ನಿವೇದಿತಾ ಧೀರಜ್‌ ದಂಪತಿಯನ್ನು ಗೌರವಿಸಲಾಯಿತು. ಮಧುಸೂದನ್‌, ಅರುಣ್‌, ಸುನಿಲ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ, ದುರ್ಗಾ ಕಲಾ ತಂಡ ಹಾರಾಡಿ ಇವರಿಂದ ನಾಟಕ ಪ್ರದರ್ಶನಗೊಂಡಿತು.