ದಿ.ಕರ್ನಿರೆ ಶ್ರೀಧರ ಶೆಟ್ಟಿ ಸ್ಮರಣಾರ್ಥ ಕ್ರಿಕೆಟ್ ಟೂರ್ನಮೆಂಟ್

ದಿ.ಕರ್ನಿರೆ ಶ್ರೀಧರ ಶೆಟ್ಟಿ ಸ್ಮರಣಾರ್ಥ ಕ್ರಿಕೆಟ್ ಟೂರ್ನಮೆಂಟ್

May 04, 2019 11:26:30 AM (IST)
ದಿ.ಕರ್ನಿರೆ ಶ್ರೀಧರ ಶೆಟ್ಟಿ ಸ್ಮರಣಾರ್ಥ ಕ್ರಿಕೆಟ್ ಟೂರ್ನಮೆಂಟ್

ಮುಂಬಯಿ: ದಿ.ಕರ್ನಿರೆ ಶ್ರೀಧರ ಶೆಟ್ಟಿ ಅವರನ್ನು ಸಂಸ್ಮರಣಿಸಿ ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಫಿ 2019ನ್ನು ಪ್ರವೀಣ್ ಶೆಟ್ಟಿ ಕಣಂಜಾರು ನೇತೃತ್ವದ ಫ್ರೆಂಡ್ಸ್ ಸರ್ಕಲ್ ಕಣಂಜಾರು ಮುಂಬಯಿ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಮಾಜ ಸೇವಕ ಶಶಿಧರ ಕೆ. ಶೆಟ್ಟಿ ಹೇಳಿದರು.

ಕಳೆದ ಕೆಲವಾರು ವರುಷಗಳಿಂದ ಸಾಂಸ್ಕೃತಿಕವಾಗಿ ಯುವ ಕಲಾವಿದರಿಗೆ ಅವಕಾಶವನ್ನು ನೀಡಿದ ಸಂಸ್ಥೆಯು ಪ್ರಪ್ರಥಮವಾಗಿ ತುಳು ಕನ್ನಡಿಗ ಕ್ರೀಡಾಳುಗಳಿಗೆ ಕ್ರಿಕೆಟ್ ಪಂದ್ಯಾಟವನ್ನು ಬಹಳಷ್ಟು ವ್ಯವಸ್ಥಿತವಾಗಿ ನಿರ್ವಹಿಸಿದ್ದು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ. ಈ ಸಂಘದ ಸರ್ವ ಕೆಲಸ ಕಾರ್ಯಗಳಿಗೆ ನನ್ನ ಸಹಕಾರ ಸದಾ ಕಾಲ ಇದೆ ಹಾಗೂ ದಿ.ಕರ್ನಿರೆ ಶ್ರೀಧರ ಶೆಟ್ಟಿ ಸಂಸ್ಮರಣಾರ್ಥ ನಡೆದ ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯ ಜವಾಬ್ಧಾರಿಯನ್ನು ನನಗೆ ನೀಡಿ ಗೌರವಿಸಿದ ಈ ಸಂಸ್ಥೆಗೆ ನಾನು ಸದಾ ಕಾಲ ಚಿರಋಣಿ ಎಂದು ಬಂಟರ ಸಂಘ ಮುಂಬಯಿ ಇದರ ವಸಯಿ ಡಹಾಣು ಪ್ರಾದೇಶಿಕ ಸಮಿತಿಯ ಸಮನ್ವಯಕ, ಉದ್ಯಮಿ, ಸಮಾಜ ಸೇವಕ ಶಶಿಧರ ಕೆ ಶೆಟ್ಟಿ ಅವರು ನುಡಿದರು.

ಮೇ 1ರಂದು ಸಿಟಿ ಮೈದಾನ ವಸಾಯಿ ಪಶ್ಚಿಮ ಇಲ್ಲಿ ಫ್ರೆಂಡ್ಸ್ ಸರ್ಕಲ್ ಕಣಂಜಾರು ಮುಂಬಯಿ ಇವರು ಆಯೋಜಿಸಿದ ದಿ.ಕರ್ನಿರೆ ಶ್ರೀಧರ ಶೆಟ್ಟಿ ಸಂಸ್ಮರಣಾರ್ಥ ತುಳು ಕನ್ನಡಿಗರಿಗಾಗಿ ಸೀಮಿತ ಓವರುಗಳ ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಫಿ 2019  ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣಾ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಅಭಿಪ್ರಾಯಪಟ್ಟರು.

ಬೆಳಗ್ಗೆ 9ಕ್ಕೆ ಸರಿಯಾಗಿ ದೇವರಿಗೆ ದೀಪ ಬೆಳಗಿಸಿ, ದಿ.ಕರ್ನಿರೆ ಶ್ರೀಧರ ಶೆಟ್ಟಿಯವ ಭಾವಚಿತ್ರಕ್ಕೆ ಪುಷ್ಪ ಹಾರವನ್ನು ಹಾಕುವುದರ ಮೂಲಕವಾಗಿ ಶಶಿಧರ ಕೆ ಶೆಟ್ಟಿಯವರು ಕ್ರಿಕೆಟ್ ಪಂದ್ಯಾಟಕ್ಕೆ ಪರಿಸರದ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು. ಅಹ್ವಾನಿತ 16 ತುಳು ಕನ್ನಡಿಗ ತಂಡಗಳು ಭಾಗವಹಿಸಿದ ಈ ಕ್ರಿಕೆಟ್ ಪಂದ್ಯಾಟದಲ್ಲಿ ಶಾನ್ವಿ ಸ್ಟಾರ್ ತಂಡ ಮುಂಡ್ಕೂರು ಫ್ರೆಂಡ್ಸ್ ತಂಡವನ್ನು ಸೋಲಿಸಿ ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಫಿ 2109 ಹಾಗೂ ನಗದು ಬಹುಮಾನ ರೂಪಾಯಿ 55,555/- ನ್ನು ತನ್ನದಾಗಿಸಿಕೊಂಡರೆ, ಉತ್ತಮ ಸ್ಪರ್ಧಾತ್ಮಕ ತಂಡವಾದ ಮುಂಡ್ಕೂರು ಫ್ರೆಂಡ್ಸ್ ದ್ವಿತೀಯ ಬಹುಮಾನ ಹಾಗೂ ನಗದು ಬಹುಮಾನ ರೂಪಾಯಿ 33,333/- ರಲ್ಲಿ ತೃಪ್ತಿ ಹೊಂದಿತು.

ಕ್ರಿಕೆಟ್ ಪಂದ್ಯಾಟದ ನಂತರ ನಡೆದ ಬಹುಮಾನ ವಿತರಣಾ ಸಭಾ ಕಾರ್ಯಕ್ರಮಕ್ಕೆ ಬಹುಮಾನ ವಿತರಕರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಆಗಮಿಸಿದ್ದರು. ಉದ್ಘಾಟಕರಾಗಿ ಸೌತ್ ಇಂಡಿಯನ್ ಸೆಲ್ ಫೆಡರೇಶನ್ ವಸಯಿ ತಾಲೂಕ ಇದರ ಅಧ್ಯಕ್ಷ,ಸಮಾಜ ಸೇವಕ, ಛತ್ರಪತಿ ಶಿವಾಜಿ ಮಹಾರಾಜ್ ಪ್ರಶಸ್ತಿ ಪುರಸ್ಕೃತ ಡಾ.ವಿರಾರ್ ಶಂಕರ್.ಬಿ.ಶೆಟ್ಟಿ, ಮುಖ್ಯ ಅತಿಥಿಗಳಾಗಿ ವಸಯಿ ಕರ್ನಾಟಕ ಸಂಘದ ಅಧ್ಯಕ್ಷರಾದ ಪಾಂಡು ಎಲ್ ಶೆಟ್ಟಿಯವರು ಆಗಮಿಸಿದ್ದರು. ದೀಪ ಪ್ರಜ್ವಲನೆಯ ಮೂಲಕ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಕ್ರೀಡಾ ಪಟು ಕೈಲಾಶ್ ಘಾನೆಕರ್ ಹಾಗೂ ದಿ.ಕರ್ನಿರೆ ಶ್ರೀಧರ ಶೆಟ್ಟಿ ಅವರ ಧರ್ಮಪತ್ನಿ ಉಷಾ ಶ್ರೀಧರ ಶೆಟ್ಟಿ ಮತ್ತು ಸುಪುತ್ರ ಪೃಥ್ವಿರಾಜ್ ಶ್ರೀಧರ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ವರದಿ: ಈಶ್ವರ ಎಂ. ಐಲ್
ಚಿತ್ರ: ದಿನೇಶ್ ಕುಲಾಲ್