ಉಡುಪಿ: ವಿಶ್ವಾದ್ಯಂತ ಶ್ರೀಕೃಷ್ಣ ಭಕ್ತಿ ಪ್ರಚಾರ ಮಾಡುತ್ತಿರುವ ಮತ್ತು ಅಲ್ಲಲ್ಲಿ ಶ್ರೀಕೃಷ್ಣ ಮಂದಿರವನ್ನು ಸ್ಥಾಪಿಸಿರುವ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ ಆಸ್ಟ್ರೇಲಿಯಾದ ಸಿಡ್ನಿ ಮಹಾನಗರದಲ್ಲಿ ಬೃಹತ್ ಶ್ರೀಕೃಷ್ಣಮುಖ್ಯಪ್ರಾಣ ಮತ್ತು ಗುರುರಾಯಯರ ಮಂದಿರವನ್ನು ನಿರ್ಮಿಸಲು ಸಂಕಲ್ಪಿಸಲಾಗಿದ್ದು, ಅದರ ಭೂಮಿಪೂಜೆಯನ್ನು ನಡೆಸಲಾಯಿತು.
ಶ್ರೀರಾಮಕೃಷ್ಣ ಅಂಕಿತವಾದ ಇಟ್ಟಿಗೆಗಳಿಗೆ ಭಕ್ತರು ಶ್ರೀರಾಘವೇಂದ್ರ ನಾಮ ಜಪ ಮಾಡುತ್ತ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಸ್ಥಳದಲ್ಲಿ ಭೂವರಾಹ ಹೋಮವನ್ನು ಶ್ರೀಮಠದ ನಿತೀಶಾಚಾರ್ಯ ಮತ್ತು ಶ್ರೀನಿವಾಸಾಚಾರ್ಯ ನೆರವೇರಿಸಿದರು.
ಬೆಂಗಳೂರು ಮಹಾನಗರದಲ್ಲಿ ತಮ್ಮ ಸುವರ್ಣ ಚಾತುರ್ಮಾಸ್ಯ ದೀಕ್ಷೆಯಲ್ಲಿರುವ ಪುತ್ತಿಗೆ ಶ್ರೀಪಾದರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕಳುಹಿಸಿದ ಪವಿತ್ರ ಪ್ರಸಾದವನ್ನು ಭೂಮಿಪೂಜೆಯಲ್ಲಿ ಇರಿಸಲಾಯಿತು.
ಮಠದ ಮುಖ್ಯಕಾರ್ಯದರ್ಶಿ ಪ್ರಸನ್ನಾಚಾರ್ಯ ಸ್ವಾಗತಿಸಿದರು. ಜಗನಮೋಹನ್ ಕೆ. ವಂದಿಸಿದರು. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.