ಬಂಟರ ಸಂಘ ಮುಂಬಯಿ ಯ ವಸಯಿ-ಡಹಾಣು ಪ್ರಾದೇಶಿಕ ಸಮಿತಿಯ 13ನೇವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಆ. 20ರಂದು ದಿ. ಕರ್ನಿರೆ ಶ್ರೀಧರ ಶೆಟ್ಟಿ ವೇದಿಕೆಯಲ್ಲಿ , ಪಾಲ್ಗರ್ ನ ಫೆರ್ನ್ ಶೆಳ್ಟರ್ ರೆಸೋರ್ಟ್ ಧೇಖಲೆ ಇಲ್ಲಿ ಜರಗಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಚಂದ್ರಹಾಸ. ಕೆ. ಶೆಟ್ಟಿ ಯವರು ಸಂಘದ ಪೋವಾಯಿಯ ಶಿಕ್ಷಣ ಸಂಸ್ಥೆ ಮೂರನೇ ಸ್ಥಾನದಲ್ಲಿದೆ , ಹೋಟೇಲ್ ಮೆನೇಜ್ ಮೆಂಟ್ ಇನ್ಸ್ಟಿಟ್ಯೂಷನ್ ಮುಂಬಯಿಯಲ್ಲೇ ಮೂರನೆ ಸ್ಥಾನದಲ್ಲಿದೆ ಎನ್ನಲು ಅಭಿಮಾನವಾಗುತ್ತಿದೆ. ಬೋರಿವಲಿ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು ಮೂರುವರೆ ಸಾವಿರ ಮಕ್ಕಳಿಗೆ ಕಲಿಯುವ ಅವಕಾಶವಿದೆ. ಈಗಾಗಲೇ ಮುಂದಿನ ವರ್ಷಕ್ಕೆ ಮಕ್ಕಳ ಪ್ರವೇಶವನ್ನು ಪ್ರಾರಂಭಿಸಲಾಗಿದೆ.
ಬಂಟ ಸಮಾಜ ಬಾಂಧವರು ಯಾವುದೇ ರೀತಿಯಲ್ಲಿ ಅಸಾಯಕರಾಗಬಾರದೆಂಬ ದೃಷ್ಟಿಯಿಂದ ವೃತ್ತಿಪರ ಸಾಲದಂತಹ ಹಲವಾರು ಯೋಜನೆಗಳನ್ನು ಬಂಟರ ಸಂಘ ವು ಹಮ್ಮಿಕೊಂಡಿದ್ದು ಸಹಾಯ ಪಡೆದ ನಮ್ಮವರು ಉನ್ನತ ಮಟ್ಟಕ್ಕೇರಿ ಬಂಟರ ಸಂಘ ಮುಂಬಯಿಗೆ ತಮ್ಮಿಂದಾದ ಸಹಾಯವನ್ನು ಮಾಡುತ್ತಿದ್ದಾರೆ. ಕಂಕಣ ಬಾಗ್ಯ, ಇದಲ್ಲದೆ ವೈದ್ಯಕೀಯ ನೆರವು, ವಿಧವಾ ಪಿಂಚಣಿ, ಶೈಕ್ಷಣಿಕ ಸಹಾಯ ಅಲ್ಲದೆ ಈ ಸಲ ಫ್ಯಾಮಿಲಿ ಅಡೋಪ್ಶನ್ ಮತ್ತು ಟೇಲೆಂಟ್ ಅಡೋಪ್ಶನ್ ಈ ಹೊಸ ಯೋಜನೆಯನ್ನು ಪ್ರಾರಂಭಿಸಿರುವೆವು. ನಮ್ಮ ಸಮಾಜದ ಗಣ್ಯರ, ದಾನಿಗಳ ಸಹಕಾರದಿಂದ ಸಂಘವು ಉನ್ನತ ಮಟ್ಟದ ಅಭಿವೃದ್ದಿಯನ್ನು ಕಾಣುತ್ತಿದ್ದು ಈ ಸಂಘದ ಅಧ್ಯಕ್ಷನಾಗಿರುವುದು ನನ್ನ ಸೌಭಾಗ್ಯ. ಬಂಟರ ಸಂಘ ಮುಂಬಯಿ ವಸಯಿ-ದಾಹಣು ಪ್ರಾದೇಶಿಕ ಸಮಿತಿಯು ಪರಿಸರದ ಸಮಾಜ ಬಾಂಧವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಇಂದಿನ ಕಾರ್ಯಕ್ರಮವನ್ನು ಬಹಳ ಅದ್ದೂರಿಯಿಂದ ನಡೆಸುತ್ತಿದ್ದು ಇಲ್ಲಿನ ಮಕ್ಕಳ ಪ್ರತಿಭೆ ಹಾಗೂ ಇಲ್ಲಿನ ಸಮಿತಿಯ ಎಲ್ಲಾ ಸದಸ್ಯರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತಿರುವೆನು ಎಂದರು.
ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ. ಕೆ. ಶೆಟ್ಟಿ, ಮುಖ್ಯ ಅತಿಥಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರೊಂದಿಗೆ ದೀಪ ಬೆಳಗಿಸಿ ಪಿಂಗಾರ ಅರಳಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ವಿಜಯ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆ ಮಾಡಿದರು. ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರಾದ ಹರೀಶ್ ಪಾಂಡು ಶೆಟ್ಟಿವರು ಉಪಸ್ಥಿತರಿದ್ದ ಎಲ್ಲರನ್ನು ಅತ್ಮೀಯವಾಗಿ ಸ್ವಾಗತಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ವಸಯಿ-ದಾಹಣು ಪ್ರಾದೇಶಿಕ ಸಮಿತಿಯ 13ನೇ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ದಿ. ಕರ್ನಿರೆ ಶ್ರೀಧರ ಶೆಟ್ಟಿ ವೇದಿಕೆಯಲ್ಲಿ ನಡೆಯುತ್ತಿದೆ. ಇವತ್ತಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಭೆಗಳನ್ನು ನೋಡಿದಾಗ ಬಹಳ ಸಂತೋಷವಾಗುತ್ತಿದೆ. ಪ್ರತಿಯೊಂದು ಕಾರ್ಯಕ್ರಮವು ತುಳು ನಾಡಿನ ಸಂಸ್ಕೃತಿಯನ್ನು ಅಧಾರವಾಗಿಟ್ಟುಕೊಂಡಿದೆ. ಈ ಪರಿಸರದಲ್ಲಿ ಬಹಳ ಸಂಖ್ಯೆಯಲ್ಲಿ ಜನ ಸೇರಿದ್ದು ಅಭಿನಂದನೀಯ. ಅಕ್ಟೋಬರ 28 ಮತ್ತು 29ಕ್ಕೆ ಉಡುಪಿ ಅಜ್ಜರಕಾಡಿನಲ್ಲಿ ಕ್ರೀಡಾ ಕೂಟ ಮತ್ತು ವಿಶ್ವ ಭಂಟರ ಸಮ್ಮಿಲನ ನಡೆಯಲಿದ್ದು ಎಲ್ಲರೂ ಆ ಸಮಾರಂಭದಲ್ಲಿ ಬಾಗವಹಿಸಬೇಕು. ನಮ್ಮ ಎಷ್ಟೇ ಸಂಘಟನೆ ಇರಲಿ ನಾವೆಲ್ಲರೂ ಬಂಟರು ಎಂಬ ಉದ್ದೇಶ ಮತ್ತು ಅಭಿಮಾನ ನಮ್ಮಲ್ಲಿರಲಿ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವತ್ತಿನ ವೇದಿಕೆಗೆ ನನ್ನ ಸಹೋದರನ ಹೆಸರಿಟ್ಟು ಅವರನ್ನು ನೆನಪಿಸಿಕೊಂಡಿದ್ದೀರಿ. ಕೃತಜ್ನತೆಗಳು. ಐಕಳ ಹರೀಶ್ ಶೆಟ್ಟಿಯವರೊಂದಿಗೆ ನಾವು ಈ ಪ್ರಾದೇಶಿಕ ಸಮಿತಿಯನ್ನು ಸ್ಥಾಪಿಸಿದಾಗ ವಸಯಿ ಪರಿಸರದ ಜನರು ಸಂತೋಷ ವ್ಯಕ್ತಿಪಡಿಸಿದ್ದು, ಈಗ ಬಹಳ ಪ್ರಗತಿಯಾಗಿದೆ. ಮಹಿಳಾ ವಿಭಾಗದವರನ್ನು ಈ ಸಂದರ್ಭದಲ್ಲಿ ಅಭಿನಂದಿಸಬೇಕಾಗಿದೆ. ಇಲ್ಲಿನ ನಮ್ಮ ಸಮಾಜದ ಬಡ ಮಕ್ಕಳಿಗೆ ಪ್ರಯೋಜನ ಕಾರಿಯಾಗಲು ವಸಯಿ – ಡಹಾಣು ಪರಿಸರದಲ್ಲಿ ನಮ್ಮ ಸಂಘದ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಲಿ ಎಂದರು.
ಇನ್ನು ಮೇಯರ್ ಸಿಲ್ವಸಾ ಮುನ್ಸಿ ಪಾಲ್ಟಿ ಕಾರ್ಪೋರೇಶನ್ ಇದರ ಶ್ರೀಮತಿ ರಜನಿ ಗೋವಿಂದ ಶೆಟ್ಟಿ ಮಾತನಾಡಿ, ಇಂದು ನನ್ನ ಪಾಲಿಗೆ ಶುಭ ದಿನ. ನಮ್ಮ ಸಮಾಜದ ಅನೇಕ ಬಾಂಧವರನ್ನು ಇಲ್ಲಿ ಕಂಡಿದ್ದು ಮಿನಿ ಮಂಗಳೂರಿನಂತೆ ಅನುಭವ ವಾಗುತ್ತಿದೆ. ಇಲ್ಲಿನ ಮಹಿಳೆಯರು ನನ್ನ ಮೇಲೆ ತೋರಿಸಿದ ಪ್ರೀತಿಗೆ ಅಭಾರಿಯಾಗಿದ್ದೇನೆ. ನಮ್ಮ ಜಾತಿ ಬಾಂಧವರು ಇಂದು ಎಲ್ಲಾ ಕ್ಷೇತ್ರದಲ್ಲಿದ್ದು ತುಳುವರು ಮುಖ್ಯವಾಗಿ ಬಂಟರು ಎಲ್ಲಿ ಹೋದರೂ ಸಕ್ಕರೆಯಂತೆ ಎಲ್ಲರೊಂದಿಗೆ ಬೆರೆಯುತ್ತಾರೆ. ಮಕ್ಕಳ ಪ್ರತಿಭೆಯನ್ನು ನೋಡಿದಾಗ ಅವರಲ್ಲಿ ನಮ್ಮ ನಾಡಿನ ಕಲೆಯನ್ನು ಉಳಿಸುವ ಎಲ್ಲಾ ಗುಣಗಳು ಎತ್ತಿ ತೋರುತ್ತದೆ. ನನ್ನ ರಾಜಕೀಯ ಬೆಳವಣಿಗೆಗೆ ನನ್ನ ಪತಿ ಕಾರಣ. ನನ್ನ ಪತಿ ಸಿಲ್ವಾಸ ಪರಿಸರದಲ್ಲಿ ನನ್ನ ಪತಿ ಜನಪ್ರಿಯರಾಗಿದ್ದು ಅವರಿಂದಾಗಿ ನಾನು ರಾಜಕೀಯದಲ್ಲಿ ಉನ್ನತ ಮಟ್ಟಕ್ಕೇರಿದ್ದೇನೆ ಎಂದರು.
ಬೋರಿವಲಿ ಎಜುಕೇಶನ್ ಸಮಿತಿ ಬಂಟ್ಸ್ ಸಂಘ ಇದರ ಕಾರ್ಯಧ್ಯಕ್ಷರಾದ ಡಾ. ಪಿ. ವಿ. ಶೆಟ್ಟಿ ಮಾತನಾಡಿ, ಬೋರಿವಲಿ ಶಿಕ್ಷಣ ಸಂಸ್ಥೆಯ ಕೆಲಸ ಮುಗಿದ ಕೂಡಲೇ ವಸಯಿ-ದಾಹಣು ಪರಿಸರದಲ್ಲಿ ಬಂಟರ ಸಂಘ ಮುಂಬಯಿ ಯ ನೂತನ ಶಿಕ್ಷಣ ಸಂಸ್ಥೆ ಸ್ಥಾಪನೆ ಬಗ್ಗೆ ಪ್ರಯತ್ನಿಸೋಣ. ಅದಕ್ಕಾಗಿ ಈಗಲೇ ಸೂಕ್ತ ಜಾಗವನ್ನು ಮೊದಲೇ ಪಡಕೊಳ್ಳ ಬೇಕಾಗಿದೆ ಎಂದರು.
ಮಾತ್ರ ಭೂಮಿ ಕ್ರೆಡಿಟ್ ಕೋ. ಓಪರ್ ಸೊಸೈಟಿ ಲಿಮಿಟೆಡ್ ಇದರ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಹಿರಿಯರು ಸ್ಥಾಪಿಸಿದ ಸಂಸ್ಥೆ ನೂರು ವರ್ಷಗಳನ್ನು ಸಮೀಪಿಸುತ್ತಿದ್ದು ಹಿರಿಯರ ಕೊಡುಗೆ ಯನ್ನು ಮರೆಯುವಂತಿಲ್ಲ. ನಮ್ಮ ಸಮಾಜದ ಮಕ್ಕಳು ಶಿಕ್ಷಣದಲ್ಲಿ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ನಮ್ಮ ಶಿಕ್ಷಣ ಸಂಸ್ಥೆಗಳು ಉತ್ತಮ ಕೆಲಸವನ್ನು ಮಾಡುತ್ತಿದೆ. ಹಲವಾರು ಯೋಜನೆಗಳನ್ನು ನಮ್ಮ ಸಂಘವು ಹಮ್ಮಿಕೊಂಡಿದ್ದು ಕೆಲವು ಕೋಟಿ ರೂಪಾಯನ್ನು ನಮ್ಮ ಸಮಾಜ ಬಾಂಧವರಿಗಾಗಿ ಸಂಘ ಪ್ರತೀ ವರ್ಷ ಖರ್ಚು ಮಾಡುತ್ತಿದ್ದು ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.