ದೋಹಾ : ಕರ್ನಾಟಕ ಸಂಘ ಕತಾರ್ (ದೋಹಾ ಕತಾರ್‌ನ ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಂಸ್ಕೃತಿಕ ಸಂಸ್ಥೆ) ೦೮ ಮೇ ೨೦೨೨ ರಂದು ಭಾರತೀಯ ಸಾಂಸ್ಕೃತಿಕ ಸಂಸ್ಥೆಯ ಅಶೋಕ ಸಭಾಂಗಣದಲ್ಲಿ ಆಯೋಜಿಸಿದ್ದ ಸಮುದಾಯ ಸ್ವಾಗತ ಸಭೆಯಲ್ಲಿ ಭಾಗವಹಿಸಿದ್ದ ಭಾರತ ಸರ್ಕಾರದ ವಿದೇಶಾಂಗ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರು, ಗೌರವಾನ್ವಿತ ಶ್ರೀ. ವಿ. ಮುರಳೀಧರನ್ ಅವರನ್ನು ಸನ್ಮಾನಿಸಿತು.
ಸಭೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಮಹೇಶ್ ಗೌಡ, ಸಲಹಾ ಸಮಿತಿಯ ಸದಸ್ಯರಾದ ಶ್ರೀ ವಿ.ಎಸ್.ಮನ್ನಗಂಗಿ,
ಶ್ರೀ.ದೀಪಕ್ ಶೆಟ್ಟಿ, ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷರು ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರಸ್ತುತ
ಉಪಾಧ್ಯಕ್ಷರು ಶ್ರೀ ಸುಬ್ರಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘದ ಆಡಳಿತ ಸಮಿತಿ ಸದಸ್ಯರು ಹಾಗೂ ಹಲವಾರು ಗಣ್ಯರು
ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಗೌರವಾನ್ವಿತ ಸಚಿವರು, ಭಾರತ ಮತ್ತು ಕತಾರ್ ನಡುವಿನ ರಾಜತಾಂತ್ರಿಕ ಸಂಬಂಧದ
ಅಭಿವೃದ್ಧಿಯಲ್ಲಿ ಭಾರತೀಯ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಿದರು ಮತ್ತು ಈ ದಿಕ್ಕಿನಲ್ಲಿ ಭಾರತ ಸರ್ಕಾರದಿಂದ
ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.
ಸಚಿವರು ಭಾರತದ ರಾಜ್ಯಗಳನ್ನು ಪ್ರತಿನಿಧಿಸುವ ಸಮುದಾಯದ ಮುಖಂಡರೊಂದಿಗೆ ಕೂಡ ಸಂವಾದಾತ್ಮಕ ಸಭೆ ನಡೆಸಿದರು,ಈ ಸಭೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಮಹೇಶ್ ಗೌಡ ಅವರು ಕರ್ನಾಟಕ ರಾಜ್ಯದ ಜನರು ಕತಾರ್ನ ವೀಸಾ ಕಾರ್ಯಗಳಿಗೆ ಪ್ರಸ್ತುತವಾಗಿ ಇತರ ಮೆಟ್ರೋ ನಗರಗಳಿಗೆ ತೆರಳುತ್ತಿದ್ದು, ಬೆಂಗಳೂರಿನಲ್ಲಿ ವೀಸಾ ಕೇಂದ್ರ ತೆರೆದರೆ ಕರ್ನಾಟಕ ಹಾಗೂ ದಕ್ಷಿಣ ಭಾರತದ ಜನರಿಗೆ ಪ್ರಯೋಜನವಾಗಲಿದೆ ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದರು.