ಸ್ವಾಮಿ ವಿವೇಕಾನಂದರ ಆದರ್ಶಗಳು ಪಠ್ಯಕ್ಕೆ ಮಾತ್ರ ಸೀಮಿತವಾಗದಿರಲಿ: ಗಣಪತಿ ಶಾಸ್ತ್ರಿ

ಸ್ವಾಮಿ ವಿವೇಕಾನಂದರ ಆದರ್ಶಗಳು ಪಠ್ಯಕ್ಕೆ ಮಾತ್ರ ಸೀಮಿತವಾಗದಿರಲಿ: ಗಣಪತಿ ಶಾಸ್ತ್ರಿ

Jan 14, 2020 02:06:52 PM (IST)
ಸ್ವಾಮಿ ವಿವೇಕಾನಂದರ ಆದರ್ಶಗಳು ಪಠ್ಯಕ್ಕೆ ಮಾತ್ರ ಸೀಮಿತವಾಗದಿರಲಿ: ಗಣಪತಿ ಶಾಸ್ತ್ರಿ

ಉಜಿರೆ: ಹುಟ್ಟಿನಿಂದಲೇ ಯಾರೂ ಮಹಾನ್ ವ್ಯಕ್ತಿಯಾಗುವುದಿಲ್ಲ. ನಾವು ಮಾಡುವ ಕೆಲಸಕಾರ್ಯಗಳು ನಮ್ಮ ಮಹತ್ತತೆಯನ್ನು ನಿರ್ಧರಿಸುತ್ತವೆ. ಸ್ವಾಮಿ ವಿವೇಕಾನಂದರು ಸಮಾಜಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಗಳಿಂದಾಗಿ ಮಹಾತ್ಮರಾದರು. ನಮ್ಮ ಚಿಕ್ಕ ನಡೆಗಳೂ ಸಮಾಜದಲ್ಲಿ ದೊಡ್ಡ ಮಟ್ಟಿನ ಬದಲಾವಣೆ ತರಬಹುದು ಎಂದು ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಗಣಪತಿ ಶಾಸ್ತ್ರೀ ನುಡಿದರು.

ಅವರು ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನ ಸಮ್ಯಗ್ದರ್ಶನ  ಸಭಾಂಗಣದಲ್ಲಿ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ. ಘಟಕದ ಸಹಯೋಗದಲ್ಲಿ ನಡೆದ ‘ರಾಷ್ಟ್ರೀಯ ಯುವ ದಿನ - ಸೇವೆ ಮತ್ತು ನಾಯಕತ್ವ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.       

ಸಮಾಜದ ಆಗುಹೋಗುಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದನ್ನು ಬಿಟ್ಟು, ನಾವು ಸೇವೆಯ ಹಾದಿಯಲ್ಲಿ ಮುನ್ನಡೆಯಬೇಕು. ಸ್ವಾಮಿ ವಿವೇಕಾನಂದರ ಆದರ್ಶ ಹಾಗೂ ತತ್ವಗಳು ಪಠ್ಯಕ್ಕೆ ಮಾತ್ರ ಸೀಮಿತವಾಗದೆ ನಿಜ ಜೀವನದಲ್ಲೂ ಆಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ  ಮಣಿಪಾಲ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ `ಸೇವೆ ಮತ್ತು ನಾಯಕತ್ವ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ``ತಂತ್ರಜ್ಞಾನ ಎಲ್ಲರನ್ನೂ ಸಮಾನರನ್ನಾಗಿಸಿದೆ. ಸೌಲಭ್ಯಗಳು ಹೆಚ್ಚಾಗುತ್ತಿರುವಂತೆ ಜನರ ಮನಸ್ಸುಗಳೂ ಕಲುಷಿತವಾಗುತ್ತಿದೆ.  ಆದ್ದರಿಂದ ಮಾನಸಿಕ ಮಾಲಿನ್ಯ ಆಗುವುದಕ್ಕಿಂತ ಮೊದಲು ಯುವಜನತೆ ಎಚ್ಚೆತ್ತುಕೊಳ್ಳಬೇಕು ಹಾಗೂ ನಮ್ಮ ಮಾಲಿಕತ್ವವವನ್ನು ನಾವೇ ವಹಿಸಿಕೊಳ್ಳಬೇಕು’’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ ಮಾತನಾಡಿ, ಸ್ವಾಮಿ

ವಿವೇಕಾನಂದರು ಕೇವಲ ಹೆಸರು ಮತ್ತು ವ್ಯಕ್ತಿಯಾಗಿ ಉಳಿದಿಲ್ಲ ಬದಲಾಗಿ ಪ್ರತಿಯೊಬ್ಬ ಭಾರತೀಯನ ಎದೆಯಾಳದಲ್ಲೂ ಭಾವನೆ ಮತ್ತು ಶಕ್ತಿಯಾಗಿ ಪ್ರಬಲವಾದ ಅಲೆಯನ್ನು ಸೃಷ್ಟಿ ಮಾಡಿದೆ ಎಂದರು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಯುವಚೇತನ ಎಂಬ ವಿಶೇಷ ಭಿತ್ತಿಪತ್ರಿಕೆ ಬಿಡುಗಡೆಗೊಳಿಸಲಾಯಿತು.

ವರದಿ: ರಶ್ಮಿ ಯಾದವ್ ಕೆ, ಎಸ್.ಡಿ.ಎಂ. ಕಾಲೇಜು ಉಜಿರೆ