ಪೆರಿಂಜೆಯಲ್ಲಿ ಮಾ. 24ರಂದು ಬೆಳ್ತಂಗಡಿ ತಾಲೂಕು 17ನೆಯ ಕನ್ನಡ ಸಾಹಿತ್ಯ ಸಮ್ಮೇಳನ

ಪೆರಿಂಜೆಯಲ್ಲಿ ಮಾ. 24ರಂದು ಬೆಳ್ತಂಗಡಿ ತಾಲೂಕು 17ನೆಯ ಕನ್ನಡ ಸಾಹಿತ್ಯ ಸಮ್ಮೇಳನ

DA   ¦    Mar 11, 2020 07:09:45 PM (IST)
ಪೆರಿಂಜೆಯಲ್ಲಿ ಮಾ. 24ರಂದು ಬೆಳ್ತಂಗಡಿ ತಾಲೂಕು 17ನೆಯ ಕನ್ನಡ ಸಾಹಿತ್ಯ ಸಮ್ಮೇಳನ

ಬೆಳ್ತಂಗಡಿ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ  ವತಿಯಿಂದ 17ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಮಾ.24ದಂದು ಹೊಸಂಗಡಿಯ ಪರಿಂಜೆಯ ಪಡ್ಯಾರಬೆಟ್ಟ ಸಂತೃಪ್ತಿ ಸಭಾಭವನದಲ್ಲಿ ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಜಿ.ರಾಮನಾಥ್ ಭಟ್ ವಹಿಸಲಿದ್ದಾರೆ ಎಂದು ಬೆಳ್ತಂಗಡಿ ತಾಲೂಕು ಕಸಾಪ ಅಧ್ಯಕ್ಷ ಡಾ.ಬಿ.ಯಶೋವರ್ಮ ತಿಳಿಸಿದರು.

ಅವರು ಬುಧವಾರ ಬೆಳ್ತಂಗಡಿ ಎಸ್‍ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. 17ನೇ ಸಾಹಿತ್ಯ ಸಮ್ಮೇಳನದಲ್ಲಿ  ಹೊಸತನದ ಮೂಲಕ ಸಾಹಿತ್ಯ ಚಿಂತನೆಗೆ, ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕೆಲವೊಂದು ಬದಲಾವಣೆಯನ್ನು ಮಾಡಲಾಗಿದೆ. ಸಮ್ಮೇಳನಧ್ಯಕ್ಷರ ಮೆರವಣಿಗೆಗೆ ಸಾಕಷ್ಟು ಸಮಯ ವಿಳಂಬದಿಂದ ಸಮ್ಮೇಳನದಲ್ಲಿ ಸಾಹಿತ್ಯದ ಚಿಂತನೆಗಳಿಗೆ ಅವಕಾಶ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಮೆರವಣಿಗೆಯನ್ನು ಮಾಡಲಾಗುತ್ತಿಲ್ಲ. ಈ ಬಾರಿ ಅ.ಭಾ.ಕ.ಸಾಹಿತ್ಯ ಸಮ್ಮೇಳನಾಧ್ಯಕ್ಷರ ಪರಿಚಯ, ನಾ.ಮೊಗಸಾಲೆಯವರ ಕುರಿತು ಪುಸ್ತಕ ಬಿಡುಗಡೆ, ಶಿಕ್ಷಣ, ಜಲ ಸಂರಕ್ಷಣೆ ಕುರಿತು ಮೊದಲಾದವುಗಳು ತಾಲೂಕು ಸಾಹಿತ್ಯ ಸಮ್ಮೇಳನದ ಪ್ರಮುಖ ಅಂಶಗಳಾಗಿದೆ ಎಂದರು.

ಕಾರ್ಯಕ್ರಮಗಳ ವಿವರ: ಬೆಳಗ್ಗೆ 9-15ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಹೊಸಂಗಡಿ ಗ್ರಾ.ಪಂ.ಅಧ್ಯಕ್ಷೆ ಹೇಮಾವಸಂತ್ ರಾಷ್ಟ್ರಧ್ವಜಾರೋಹಣವನ್ನು, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ ಪರಿಷತ್ತು ಧ್ವಜ ಹಾಗೂ ಬೆಳ್ತಂಗಡಿ ಘಟಕ ಕ.ಸಾ.ಪ. ಅಧ್ಯಕ್ಷ ಡಾ.ಬಿ.ಯಶೋವರ್ಮ ಸಮ್ಮೇಳನ ಧ್ವಜಾರೋಹಣಗೈಯುವರು.  ಕಾರ್ಯಕ್ರಮವನ್ನು ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆ ಉದ್ಘಾಟಿಸಲಿದ್ದು, ಸಮ್ಮೇಳನಾಧ್ಯಕ್ಷತೆಯನ್ನು ಜಿ. ರಾಮನಾಥ ಭಟ್ ವಹಿಸಲಿದ್ದಾರೆ. ಶಾಸಕ ಹರೀಶ್ ಪೂಂಜ `ಚಾರುಮುಡಿ' ಸ್ಮರಣ  ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ, ಸಮ್ಮೇಳನ ಸಂಯೋಜನಾ ಸಮಿತಿಯ ಗೌರವಾಧ್ಯಕ್ಷ ಎ.ಜೀವಂಧರ ಕುಮಾರ್, ತಾಪಂ ಅಧ್ಯಕ್ಷೆ ಅಧ್ಯಕ್ಷೆ ದಿವ್ಯಜ್ಯೋತಿ , ಸದಸ್ಯ ಓಬಯ್ಯ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿರುವರು.

ಉಪನ್ಯಾಸಗಳು: 11 -30ರಿಂದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಎಚ್.ಎಸ್ ವೆಂಕಟೇಶ ಮೂರ್ತಿ ಅವರ ಕವಿಕಾವ್ಯ ಪರಿಚಯವನ್ನು ಸಾಹಿತಿ ಅರವಿಂದ ಚೊಕ್ಕಾಡಿ ನಡೆಸಿಕೊಡಲಿದ್ದಾರೆ. ನಂತರ ಎರ್ಮೋಡಿ ಗುಣಪಾಲ ಜೈನ್ ಸಂಸ್ಮರಣೆಯನ್ನು ಬಾಲ್ಯ ಶಂಕರ ಭಟ್ಟ ಮಾಡುವರು. ಬಳಿಕ ಬೆಳ್ತಂಗಡಿ ವಿಶ್ರಾಂತ ಪ್ರಿನ್ಸಿಪಾಲ್ ಎ.ಕೃಷ್ಣಪ್ಪ ಪೂಜಾರಿ ದೈವಾರಾಧನೆ:ನಂಬಿಕೆ ನಡವಳಿಕೆ ಕುರಿತು, ನಂತರ ಜಲ ಸಂಸ್ಕೃತಿ-ಜನಜೀವನದ ಕುರಿತು ಖ್ಯಾತ ಜಲತಜ್ಞ ಶ್ರೀಪಡ್ರೆ  ಉಪನ್ಯಾಸ ನೀಡಲಿದ್ದಾರೆ.  ಅವರೊಂದಿಗೆ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾನ ಗಂಟೆ 1 ರಿಂದ ಉಜಿರೆ ಎಸ್‍ಡಿಎಂ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕುವೆಂಪುರವರ "ನಾಗಿ" ಕಥನ ಕವನ ರೂಪಕ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 1.55ರಿಂದ ನಾವೂರು ಆರೋಗ್ಯ ಕ್ಲಿನಿಕ್ ಡಾ.ಪ್ರದೀಪ ಆಟಿಕುಕ್ಕೆ ಅವರು ಕಗ್ಗ-ಜೀವನ ಮೌಲ್ಯದ ಕುರಿತು, ಬಳಿಕ ಡಾ.ಶ್ರೀಧರ ಕಂಬಳಿ ಪರಿಂಜೆ ಗುತ್ತು ಸಂಸ್ಮರಣೆಯನ್ನು ಪತ್ರಕರ್ತ ಹರೀಶ್ ಕೆ. ಆದೂರು ಮಾಡುವರು. ನಂತರ ಶಿಕ್ಷಣದಲ್ಲಿ ಸಾಹಿತ್ಯ ಅಭಿರುಚಿ ಕುರಿತು ಡಾ.ಯೋಗಿಶ್ ಕೈರೋಡಿ ಉಪನ್ಯಾಸ ನೀಡಲಿದ್ದಾರೆ. ಗಂಟೆ 2.50ರಿಂದ ವೇಣೂರು ಸರಕಾರಿ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಹಳೆಗನ್ನಡ ಕಾವ್ಯ ವಿಶೇಷತೆ ಕುರಿತು ಗಾಯನ ಪ್ರಸ್ತುತಪಡಿಸಲಿದ್ದಾರೆ ಎಂದರು.

ಸನ್ಮಾನ ಮತ್ತು ಸಮಾರೋಪ ಸಮಾರಂಭ

ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ  ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಎಂಎಲ್ಸಿ ಕೆ.ಹರೀಶ್ ಕುಮಾರ್, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅತಿಥಿಗಳಾಗಿ ಭಾಗವಹಿಸುವರು. ಕಾಂತಾವರ ಕನ್ನಡ ಸಂಘ ಅಧ್ಯಕ್ಷ ಡಾ.ನಾ.ಮೊಗಸಾಲೆ ಸಮಾರೋಪ ಭಾಷಣ ಮಾಡಲಿದ್ದು, ಜಿ.ರಾಮನಾಥ ಭಟ್ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುವರು ಎಂದರು.

ಸನ್ಮಾನಿತರು : ಪತ್ರಿಕೋದ್ಯಮ- ದೇವಿಪ್ರಸಾದ್, ವೈದ್ಯಕೀಯ ಬೆದ್ರಡ್ಕ ಡಾ.ರಾಮಕೃಷ್ಣ ಭಟ್, ಸಮಾಜಸೇವೆ-ಬಿ.ರಾಮಚಂದ್ರ ಶೆಟ್ಟಿ, ಶಿಕ್ಷಣ-ಬಜಿರೆ ಮುಖ್ಯ ಶಿಕ್ಷಕಿ ಎಂ.ಕಮಲಾಜಿ ಎಸ್ ಜೈನ್, ಯಕ್ಷಗಾನ-ನಿಡ್ಲೆ ಗೋವಿಂದ ಭಟ್, ಸಾಮಾಜಿಕ ಜಾಗೃತಿ-ತೋಟತ್ತಾಡಿ ಡಿ.ಎ.ರಹಿಮಾನ್, ಕಂಬಳ-ಅಳದಂಗಡಿ ರವಿ, ಜಾನಪದ-ಮರೋಡಿ ದೇವು, ಉದ್ಯಮ-ಪೆರಿಂಜೆ ಮದಕುಡೆ ಕೊರಗಪ್ಪ ಶೆಟ್ಟಿ, ಹೈನುಗಾರಿಕೆ-ಪೆರಿಂಜೆ ಜೆರೋಮಿ ಎಸ್.ಮೊರಾಸ್, ಕೃಷಿ-ಬಳಂಜ ಅನಿಲ್, ಸೇವೆ-ಉಜಿರೆ ಬದುಕು ಕಟ್ಟೋಣ ಬನ್ನಿ ಸಂಘಟನೆ, ಪ್ರತಿಭಾ ಪುರಸ್ಕಾರ-ಪೆರಿಂಜೆ ಪ್ರವೀಣ್ ಜೈನ್ ಹಾಗೂ ಗುಂಡೂರಿ ದಿವ್ಯ ಅಂಚನ್.

 ಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಎಂ.ಪಿ.ಶ್ರೀನಾಥ್, ಸಮ್ಮೇಳನ ಸಂಯೋಜನ ಸಮಿತಿ ಕಾರ್ಯಾಧ್ಯಕ್ಷ ಪಿ.ದರಣೇಂದ್ರ ಕುಮಾರ್, ಅಧ್ಯಕ್ಷ ಪಿ.ಜಯರಾಜ್ ಕಂಬಳಿ, ಪ್ರ.ಕಾರ್ಯದರ್ಶಿ ವಿದ್ಯಾನಂದ ಜೈನ್, ಕೋಶಾಧಿಕಾರಿ ಎಚ್.ಆಲಿಯಬ್ಬ, ಪ್ರ.ಸಂಚಾಲಕ ಇಸ್ಮಾಯಿಲ್ ಕೆ., ಉಪಾಧ್ಯಕ್ಷೆ ಹೇಮಾವಸಂತ್, ಪ್ರಚಾರ ಸಮಿತಿಯ ಹರೀಶ್ ಆದೂರು, ಹೊಸಂಗಡಿ ಗ್ರಾಪಂ ಕಾರ್ಯದರ್ಶಿ ಜಯಲಕ್ಷ್ಮೀ, ಸೋಮಶೇಖರ ಶೆಟ್ಟಿ, ಜಿನೇಶ್ಚಂದ್ರ ಬಲ್ಲಾಳ್ ಇದ್ದರು