ಎಸ್ ಎಸ್ ಎಲ್ ಸಿ ಪರೀಕ್ಷೆ ಮಾದರಿಯಾಗುವಂತೆ ನಡೆಸಿ: ಶಾಸಕ ಹರೀಶ್ ಪೂಂಜ ಕರೆ

ಎಸ್ ಎಸ್ ಎಲ್ ಸಿ ಪರೀಕ್ಷೆ ಮಾದರಿಯಾಗುವಂತೆ ನಡೆಸಿ: ಶಾಸಕ ಹರೀಶ್ ಪೂಂಜ ಕರೆ

DA   ¦    Jun 16, 2020 05:43:34 PM (IST)
 ಎಸ್ ಎಸ್ ಎಲ್ ಸಿ ಪರೀಕ್ಷೆ ಮಾದರಿಯಾಗುವಂತೆ ನಡೆಸಿ: ಶಾಸಕ ಹರೀಶ್ ಪೂಂಜ ಕರೆ

ಬೆಳ್ತಂಗಡಿ: ಮಕ್ಕಳ ಭವಿಷ್ಯದ ದೃಷ್ಠಿಯಿಂದ ಕೊರೊನಾ ಕಾಯಿಲೆಯ ಮುಂಜಾಗೃತೆಯನ್ನು ಮಾಡಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಎಲ್ಲರೂ ಒಟ್ಟುಸೇರಿ ರಾಜ್ಯಕ್ಕೆ ಮಾದರಿಯಾಗುವಂತೆ ನಡೆಸಬೇಕು ಎಂದು ಶಾಸಕ ಹರೀಶ್ ಪೂಂಜ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಮಂಗಳವಾರ ಪ್ರವಾಸಿ ಬಂಗಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪೂರ್ವ ತಯಾರಿಯಾಗಿ ಅಧಿಕಾರಿಗಳ ಸಭೆ ನಡೆಸಿದರು.

ಮಕ್ಕಳಿಗೆ ಕೊರೊನಾ ಭಯವನ್ನು ಹೋಗಲಾಡಿಸಲು ಎಲ್ಲಾ ಶಿಕ್ಷಕರು ಮತ್ತು ಅಧಿಕಾರಿ ವರ್ಗದವರು ಸೂಕ್ತ ಮಾಹಿತಿಯನ್ನು ನೀಡಬೇಕು. ಎಲ್ಲಾ ಇಲಾಖೆಗಳು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಶಾಸಕರ ನೆಲೆಯಲ್ಲಿ ನಾನು ಸಂಪೂರ್ಣ ಸಹಕಾರ ನೀಡಲು ಬದ್ಧನಿದ್ದೇನೆ ಎಂದರು

ಮಕ್ಕಳಿಗೆ ಪರೀಕ್ಷೆ ಕೇಂದ್ರವನ್ನು ಪ್ರವೇಶ ಮಾಡುವಲ್ಲಿ ಸ್ಯಾನಿಟೈಸರ್ ಮಾಡಬೇಕು ಮತ್ತು ಅವರನ್ನು ಜ್ವರ ತಪಾಸಣೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ತುರ್ತು ಮುಂಜಾಗೃತಾ ಕ್ರಮವನ್ನು ಕೈಗೊಂಡು ಇದಕ್ಕೆ ಬೇಕಾದ ಸಿಬ್ಬಂದಿಗಳನ್ನು ನೇಮಿಸಬೇಕು, ಮಕ್ಕಳಿಗೆ ಮಾಸ್ಕ್ ನೀಡುವ ಕುರಿತು ಶಿಕ್ಷಣ ಇಲಾಖೆಯಿಂದ ಮಾಹಿತಿ ಪಡೆದರು. ಇದಕ್ಕೆ ಶಿಕ್ಷಣ ಸಂಯೋಜಕ ಸುಭಾಷ್ ಜಾದವ್ ಮಾಹಿತಿ ನೀಡಿ ಸುಮಾರು ಏಳು ಸಾವಿರ ಮಾಸ್ಕ್ ದಾನಿಗಳು ನೀಡುತ್ತಿದ್ದು ಒಂದು ಸಾವಿರ ಕೊರತೆಯಿದೆ ಎಂದರು. ಇದಕ್ಕೆ ಶಾಸಕರು ಹೆಚ್ಚುವರಿ ಮಾಸ್ಕ್ ಗಳನ್ನು ಒದಗಿಸುವ ಭರವಸೆ ನೀಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮೂರು ಸೆಟ್ ಪುನರ್ಬಳಕೆ ಮಾಡುವ ಮಾಸ್ಕ್ ನೀಡಬೇಕು, ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ ಮಾಸ್ಕ್ ಗಳನ್ನು ಇಡಬೇಕು. ವಿದ್ಯಾರ್ಥಿಗಳು ತಪ್ಪಿ ಮಾಸ್ಕ್ ಬಿಟ್ಟುಬಂದರೆ ಅದಕ್ಕಾಗಿ ವಿದ್ಯಾರ್ಥಿಗಳು ಆತಂಕಪಡದ ರೀತಿಯಲ್ಲಿ ನೋಡಿಕೊಳ್ಳಬೇಕು.

ಬಸ್ ವ್ಯವಸ್ಥೆ

ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ತೆಯನ್ನು ಮಾಡಬೇಕು, ಇನ್ನು ಖಾಸಗಿ ಬಸ್‍ಗಳಲ್ಲಿ ಕೂಡ ಬರುವವರಿಗೆ ಅನುಕೂಲವಾಗುವಂತೆ ಸಹಕರಿಸಲು ಖಾಸಗಿ ಬಸ್ ಮಾಲಕರಲ್ಲಿ ವಿನಂತಿಸಲಾಗುವುದು, ಬಸ್‍ಗಳನ್ನು ಕೂಡ ಸ್ಯಾನಿಟೈಸರ್ ಮಾಡಿ ಸೂಕ್ತ ಮುಂಜಾಗೃತೆವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯುತ್ ವ್ಯಸ್ಥೆಗೊಳಿಸುವಂತೆ ಸೂಚನೆ

ಇಂದಿನಿಂದಲೇ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು, ಅದರಲ್ಲೂ ಸಂಜೆ ಹೊತ್ತಿಗೆ ಮಕ್ಕಳಿಗೆ ಓದಲು ಅನುಕೂಲವಾಗುವಂತೆ ವಿದ್ಯುತ್ ಸೌಲಭ್ಯ ನೀಡಬೇಕು, ಪರೀಕ್ಷಾ ಕೇಂದ್ರದ ಸುತ್ತಮುತ್ತ ವಿದ್ಯುತ್ ಕಂಬಗಳಲ್ಲಿ, ಟ್ರಾನ್ಸ್‍ಫಾರ್ಮರ್‍ ಗಳಲ್ಲಿ ಲೋಪದೋಷಗಳಿದ್ದರೆ ತಕ್ಷಣ ಸರಿಪಡಿಸಬೇಕು, ಮುಂಜಾಗೃತೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಜನರೇಟರ್ ವ್ಯವಸ್ಥೆಯನ್ನು ಮಾಡಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯತ್ ಹೆಚ್ಚಿನ ಜವಾಬ್ದಾರಿ ವಹಿಸಬೇಕು

ಗ್ರಾ,ಪಂ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರಗಳ ಬಗ್ಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಗ್ರಾಮಕರಣ ಕರು, ಕಂದಾಯ ನಿರೀಕ್ಷಕರು ಹೆಚ್ಚು ಜವಬ್ದಾರಿ ವಹಿಸಬೇಕು ಸ್ಥಳೀಯವಾಗಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಧೈರ್ಯ ತುಂಬುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ಪೋಲೀಸ್ ಬಂದೋಬಸ್ತ್

ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು. ತುರ್ತು ಸಂದರ್ಭಕ್ಕೆ ಅಂಬುಲೆನ್ಸ್ ವ್ಯವಸ್ಥೆ ಮಾಡಬೇಕು, ಮಕ್ಕಳಿಗೆ ಬಿಸಿನೀರಿನ ವ್ಯವಸ್ಥೆ, ಆಹಾರದ ವ್ಯವಸ್ಥೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲಾ ಇಲಾಖೆಗಳು ಮತ್ತು ಇಲಾಖಾಧಿಕಾರಿಗಳು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಜೂ.19 ಮತ್ತು ಜೂ.20ರಂದು ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ ನಡೆಸಲಾಗುವುದು ಆ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವಂತೆ ಮಾಡಲಾಗುತ್ತದೆ ಎಂದರು.

ಸಭೆಯಲ್ಲಿ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ತಾಲೂಕು ವಬೈಧ್ಯಾಧಿಕಾರಿ ಡಾ| ಕಲಾಮಧು, ಪ್ರಭಾರ ಶಿಕ್ಷಣಾಧಿಕಾರಿ ತಾರಕೇಸರಿ,ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ, ಸಮಾಜಕಲ್ಯಾಣ ಇಲಾಖಾಧಿಕಾರಿ ಹೇಮಲತಾ, ಶಿಕ್ಷಣ ಸಂಯೋಜಕ ಸುಭಾಶ್ ಜಾದವ್ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.