ನುಡಿಸಿರಿಯಲ್ಲಿ ಮೇಳೈಸಿದ ಯಕ್ಷಗಾನ

ನುಡಿಸಿರಿಯಲ್ಲಿ ಮೇಳೈಸಿದ ಯಕ್ಷಗಾನ

Yashodhara.V.Bangera   ¦    Nov 29, 2015 01:07:13 PM (IST)

ಮೂಡುಬಿದರೆ: ಆಳ್ವಾಸ್ ನುಡಿಸಿರಿ ಬರಿಯ ಸಾಹಿತ್ಯ ಸಮ್ಮೇಳನವಾಗದೆ, ಸಾಂಸ್ಕೃತಿಕ ಟ್ರೆಂಡ್ ಅನ್ನು ಕಳೆದ 11 ವರ್ಷಗಳಿಂದ ಸೃಷ್ಠಿಸಿದೆ. ಈ ಟ್ರೆಂಡ್ ನಲ್ಲಿ ಕರಾವಳಿ ಕರ್ನಾಟಕದ ಗಂಡುಕಲೆ ಯಕ್ಷಗಾನ ಮುಂಚೂಣಿಯಲ್ಲಿದೆ.

ನುಡಿಸಿರಿ, ವಿರಾಸತ್ ಸಮ್ಮೇಳನ ರೂವಾರಿ ಡಾ.ಎಂ ಮೋಹನ ಆಳ್ವ ತಮ್ಮದೇ ಶೈಲಿಯಲ್ಲಿ ಸಮ್ಮೇಳನ ಆಯೋಜಿಸುವುದಲ್ಲದೆ. ರಂಗಾಲಂಕಾರದಲ್ಲೂ ತನ್ನದೇ ಹೊಸತನವನ್ನು ಸೃಷ್ಠಿಸಿದವರು. ಡಾ. ಆಳ್ವ ಅವರ ರಂಗಸಜ್ಜಿಕೆಯ ಪರಿಕಲ್ಪನೆಯಲ್ಲಿ ಯಕ್ಷಗಾನಕ್ಕೆ ಮೊದಲ ಆಧ್ಯತೆ. ಆಳ್ವಾಸ್ ನುಡಿಸಿರಿಯ ರಂಗಾಲಂಕಾರದಲ್ಲಿ ಯಕ್ಷಗಾನದ ಛಾಯೆ ಕಂಡುಬರುತ್ತದೆ. ಈ ಸಲದ ನುಡಿಸಿರಿಯ 8 ವೇದಿಕೆಗಳಲ್ಲೂ ಯಕ್ಷಗಾನಕ್ಕೆ ಬಳಸುವ ಪರಿಕರಗಳ ಮಾದರಿಗಳನ್ನು ಬಳಸಲಾಗಿದೆ. ನುಡಿಸಿರಿ ಉದ್ಘಾಟನೆಗೊಂಡ ಶ್ರೀಮತಿ ವನಜಾಕ್ಷ್ಮಿ ಶ್ರೀಪತಿ ಭಟ್ ಬೃಹತ್ ವೇದಿಕೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ರಚಿಸಲಾಗಿದೆ. ವೇದಿಕೆ ವಿನ್ಯಾಸಕ್ಕೆ ಬಳಸಲಾದ ಬಿಳಿ ಬಟ್ಟೆಯ ಅಂಚುಗಳಲ್ಲಿ ಬಡಗುತಿಟ್ಟುವಿನ ಕೆಂಪು-ಹಳದಿ ವಸ್ತ್ರದ ಮಾದರಿಯನ್ನು ಬಳಸಲಾಗಿದೆ. ನುಡಿಸಿರಿ ಪ್ರದಾನ ವೇದಿಕೆ ರತ್ನಾಕರವರ್ಣಿ ವೇದಿಕೆ ತುಳುನಾಡಿನ ಗುತ್ತಿನ ಮನೆಯ ಮಾದರಿಯಲ್ಲಿ ರಚನೆಯಾಗಿದ್ದು, ಇಲ್ಲೂ ಯಕ್ಷಗಾನದ ವಸ್ತ್ರ ಹಾಗೂ ಕಿರೀಟ ಮಾದರಿಗಳನ್ನು ಬಳಸಲಾಗಿದೆ. ಈ ವೇದಿಕೆಯ ಸಭಾಂಗಣದ ಎದುರು ಪ್ರವೇಶ ಧ್ವಾರವನ್ನು ಬಡಗುತ್ತಿಟ್ಟಿನ ಯಕ್ಷಗಾನ ಕಿರೀಟದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.  ಉಳಿದ ವೇದಿಕೆಗಳಲ್ಲಿ ನೀಲಿ ಬಣ್ಣದ ಹಿನ್ನಲೆಯನ್ನು ಹಾಕಿ, ಅದಕ್ಕೆ ಯಕ್ಷಗಾನದ ಕಿರೀಟಗಳನ್ನು ಎರಡೂ ಬದಿಯಲ್ಲಿ ಬಳಸಲಾಗಿದೆ. ಅವುಗಳ ಅಂಚಿಗೆ ಬಡಗುತಿಟ್ಟಿನ ಯಕ್ಷಗಾನದ ವಸ್ತ್ರ ಮಾದರಿಯನ್ನು ಅಳವಡಿಸಿದ್ದಾರೆ. ಯಕ್ಷಗಾನ ಕಿರೀಟ ಮಾದರಿಯ ಸ್ಮರಣಿಕೆಯಗಳನ್ನು ಸಾಹಿತಿಗಳಿಗೆ, ಕಲಾವಿದರಿಗೆ, ಅತಿಥಿಗಳಿಗೆ ನೀಡಲಾಯಿತು.

ನುಡಿಸಿರಿಯಲ್ಲದೇ ನಾವು ಯಾವುದೇ ಸಂದರ್ಭ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ ಗೆ ಭೇಟಿ ನೀಡಿದಾಗ ನಮ್ಮನ್ನು ಇದಿರುಗೊಳ್ಳುವುದು, ಕ್ಯಾಂಪಸ್ ನ ಒಳಗಡೆಯ ಯಕ್ಷಗಾನದ 5 ಬೃಹತ್ ಪ್ರತಿಮೆಗಳು. ಕ್ಯಾಂಪಸ್ ನ ಪ್ರಮುಖ ಕಟ್ಟಡಕ್ಕೆ ಪ್ರವೇಶಿಸುವ ಮೊದಲು ನಮ್ಮ ಎಡಭಾಗದಲ್ಲಿ ಕಟ್ಟಡದತ್ತ ಕೈ ತೋರಿಸುವ ಯಕ್ಷಗಾನ ಶೈಲಿಯ ಗಣಪನ ವಿಗ್ರಹಗಳಿವೆ. ಬಲಭಾಗದಲ್ಲಿರುವ ಆಳ್ವಾಸ್ ಕೆಫೆಟೇರಿಯ ಪ್ರವೇಶ ದ್ವಾರದ ಎದುರು ಬಡಗುತ್ತಿಟ್ಟಿ ಎರಡು ಯಕ್ಷಗಾನ ಪ್ರತಿಮೆಗಳಿವೆ. ಕ್ಯಾಂಪಸ್ ಮುಖ್ಯ ಕಟ್ಟಡಕ್ಕೆ ಪ್ರವೇಶಿಸುವ ಮೊದಲು ತೆಂಕುತಿಟ್ಟುವಿನ ಬೃಹತ್ ಪ್ರತಿಮೆಗಳು ನಮ್ಮನ್ನು ಇದಿರುಗೊಳ್ಳುತ್ತಿದೆ. ಕ್ಯಾಂಪಸ್ನಲ್ಲಿರುವ ಏಳು ವಿಗ್ರಹಗಳಲ್ಲಿ ಈ ಎರಡು ವಿಗ್ರಹಗಳ ಅತ್ಯಂತ ಬೃಹತ್ ವಿಗ್ರಹಗಳೆಂಬ ಹೆಗ್ಗಳಿಕೆ ಪಡೆದಿದೆ.

ಯಕ್ಷಗಾನ ಸಾಂಸ್ಕೃತಿಕ ವೈಭವ
ನುಡಿಸಿರಿ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಯಕ್ಷಗಾನಕ್ಕೆ ಪ್ರಾಧನ್ಯತೆ ನೀಡಲಾಗಿದ್ದು, ಪ್ರಸಿದ್ಧ ಅರ್ಥಧಾರಿಗಳು ಹಾಗೂ ಹಿಮ್ಮೇಳ ಕಲಾವಿದರಿಂದ ಮೊದಲನೇ ದಿನ ಗುರುದಕ್ಷಿಣೆ ತಾಳಮದ್ದಳೆ ನಡೆಯಿತು. ಎರಡನೇ ದಿನ ಶ್ರೀರಾಮದರ್ಶನಂ ಪುರಾಣ ಪಾತ್ರಗಳು ಶ್ರೀರಾಮನನ್ನು ಕಂಡ ರೀತಿಯನ್ನು ಯಕ್ಷಗಾನದ ಹಾಡುಗಾರಿಕೆಯ ಮೂಲಕ ಪ್ರಸ್ತುತಪಡಿಸಲಾಯಿತು. ಸಂಜೆ ಮಂಟಪ ಪ್ರಭಾಕರ ಪ್ರಭಾಕರ ಉಪಾಧ್ಯ ತಂಡದಿಂದ ಮೋಹ ಮೇನಕೆ ಯಕ್ಷಪ್ರಯೋಗವಿತ್ತು. ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ವಿದ್ಯಾರ್ಥಿ ಕಲಾವಿದರಿಂದ ಸಮ್ಮೇಳನದ ಮೂರು ದಿನ ಯಕ್ಷವೈಭವ ಕಾರ್ಯಕ್ರಮ ನಡೆಯಿತು.