ಬಂಟ್ವಾಳದ ವ್ಯಕ್ತಿಗೆ ಕೊರೋನಾ ಸೋಂಕು ಇಲ್ಲ: ಪರೀಕ್ಷೆಯಿಂದ ದೃಢ

ಬಂಟ್ವಾಳದ ವ್ಯಕ್ತಿಗೆ ಕೊರೋನಾ ಸೋಂಕು ಇಲ್ಲ: ಪರೀಕ್ಷೆಯಿಂದ ದೃಢ

MV   ¦    Mar 11, 2020 06:04:18 PM (IST)
ಬಂಟ್ವಾಳದ ವ್ಯಕ್ತಿಗೆ ಕೊರೋನಾ ಸೋಂಕು ಇಲ್ಲ: ಪರೀಕ್ಷೆಯಿಂದ ದೃಢ

ಬಂಟ್ವಾಳ: ಭಾರೀ ಆತಂಕಕ್ಕೆ ಕಾರಣವಾಗಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ಕೊರೋನಾ ಶಂಕಿತ ವ್ಯಕ್ತಿಯ ಗಂಟಲು ದ್ರವದ ವೈರಾಣು ಪರೀಕ್ಷೆಯಲ್ಲಿ  "ನೆಗೆಟಿವ್"  ಎಂದು ರಿಪೋರ್ಟ್  ಬಂದಿದ್ದು, ಕರಾವಳಿಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.   ಪುಣೆಯ ಪ್ರಯೋಗಾಲಯದಿಂದ ಇಂದು ಪರೀಕ್ಷಾ ವರದಿ ಜಿಲ್ಲಾ ಆರೋಗ್ಯಾಧಿಕಾರಿಯ ಕೈ ಸೇರಿದ್ದು, ಕಳೆದ ನಾಲ್ಕು ದಿನಗಳಿಂದ ಕರಾವಳಿಯಲ್ಲೂ ಕೊರೋನಾ ಎಂಬ ಆತಂಕ ದೂರವಾಗಿದೆ.

ಕಳೆದ ಆದಿತ್ಯವಾರ ದುಬಾಯಿನಿಂದ ಮಂಗಳೂರಿಗೆ ಆಗಮಿಸಿದ್ದ ವ್ಯಕ್ತಿಗೆ ಜ್ವರ ಇದ್ದ ಕಾರಣ ಕೊರೊನಾ ಭೀತಿಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟು, ರಕ್ತಪರೀಕ್ಷೆ ನಡೆದು, ಕಫ ಪರೀಕ್ಷೆ ಸಂದರ್ಭ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಉಳ್ಳಾಲ ಮೂಲದ ವ್ಯಕ್ತಿ ಸೋಮವಾರ ಸಂಜೆ ವಿಟ್ಲದಲ್ಲಿ ಪತ್ತೆಯಾಗಿದ್ದರು.ಅವರ ಗಂಟಲು ದ್ರವದ ವೈರಾಣು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತೆರಳುವುದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು  48 ಗಂಟೆಗಳ ಕಾಲ ಬಂಟ್ವಾಳ ಸರಕಾರಿ  ಆಸ್ಪತ್ರೆಯ  ಐಸೊಲೇಶನ್ ವಾರ್ಡ್ ನಲ್ಲಿರಿಸಿ ತೀವ್ರ ನಿಗಾ ವಹಿಸಲಾಗಿತ್ತು. ಇದೀಗ ಪ್ರಯೋಗಾಲಯದಿಂದ ಕೊರೊನಾ ವೈರಸ್ ನೆಗೆಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.