ಕೊಕ್ಕಡ ಗ್ರಾ.ಪಂ.ಅಧ್ಯಕ್ಷರ ವಿರುದ್ಧದ ಸರ್ಕಾರಿ ಆದೇಶ ರದ್ದು ಸತ್ಯಕ್ಕೆ ಸಂದ ಜಯ: ವಸಂತ ಬಂಗೇರ

ಕೊಕ್ಕಡ ಗ್ರಾ.ಪಂ.ಅಧ್ಯಕ್ಷರ ವಿರುದ್ಧದ ಸರ್ಕಾರಿ ಆದೇಶ ರದ್ದು ಸತ್ಯಕ್ಕೆ ಸಂದ ಜಯ: ವಸಂತ ಬಂಗೇರ

DA   ¦    Dec 02, 2019 08:10:05 PM (IST)
ಕೊಕ್ಕಡ ಗ್ರಾ.ಪಂ.ಅಧ್ಯಕ್ಷರ ವಿರುದ್ಧದ ಸರ್ಕಾರಿ ಆದೇಶ ರದ್ದು ಸತ್ಯಕ್ಕೆ ಸಂದ ಜಯ: ವಸಂತ ಬಂಗೇರ

ಬೆಳ್ತಂಗಡಿ: ಕೊಕ್ಕಡ ಗ್ರಾಮ ಪಂಚಾಯತು ಅಧ್ಯಕ್ಷ ವಿ.ಜೆ ಸೆಬಾಸ್ಟಿಯನ್ ಅವರ ಪಂಚಾಯತು ಸದಸ್ಯತ್ವ ಹಾಗೂ ಅಧ್ಯಕ್ಷ ಸ್ಥಾನವನ್ನು ರದ್ದು ಪಡಿಸಿ ಸರಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಉಚ್ಚನ್ಯಾಯಾಲಯವು ರದ್ದು ಪಡಿಸಿದ್ದು ಅವರು ಸೋಮವಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಈ ಮೂಲಕ ಸತ್ಯಕ್ಕೆ ಜಯ ಸಿಗುತ್ತೆ ಎಂಬುದು ಸಾಬೀತಾಗಿದೆ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ತಿಳಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಚಾರ ತಿಳಿಸಿದರು. ಕೊಕ್ಕಡದಲ್ಲಿ ಸಣ್ಣ ವೈಯುಕ್ತಿಕ ವಿಚಾರಕ್ಕೆ ರಾಜಕೀಯ ಸೇರಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಎಸಿಬಿಯ ಮೂಲಕವಾಗಿ 90 ಸಾವಿರ ರೂಪಾಯಿಯ ಕೆಲಸಕ್ಕೆ ಬಿಲ್ ನೀಡಲು 35 ಸಾವಿರ ಲಂಚ ಕೇಳಿದರೆಂಬ ಯಾರೂ ನಂಬದ ಆರೋಪ ಮಾಡಿ  ಪ್ರಕರಣ ದಾಖಲಿಸಲಾಗಿತ್ತು. ಹಾಗೂ ಅವರನ್ನು ಅಧಿಕಾರದಿಂದ ಇಳಿಸಲಾಗಿತ್ತು.  ಇದೀಗ ಉಚ್ಚನ್ಯಾಯಾಲಯವು ಪ್ರಕರಣದಲ್ಲಿ ತೀರ್ಪು ನೀಡಿದ್ದು ಅವರು ಮರಳಿ ಅಧಿಕಾರ ಪಡೆದುಕೊಂಡಿದ್ದಾರೆ ಎಂದರು.

ನಾನು ಮಂಜೂರು ಮಾಡಿಸಿದ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ: ಶಾಸಕ ಹರೀಶ್ ಪೂಂಜ ಅವರು ಈ ವರೆಗೆ ತಾಲೂಕಿಗೆ ಸರಿಯಾಗಿ ಯಾವುದೇ ಅನುದಾನ ತಂದಿಲ್ಲ. ಹಿಂದಿನ ಸರಕಾರಗಳಿದ್ದಾಗ ಮಂಜೂರಾಗಿದ್ದ ಕಾಮಗಾರಿಗಳನ್ನು ಶಂಕುಸ್ಧಾಪನೆ ಮಾಡುತ್ತಿದ್ದಾರೆ ಹಾಗೂ ಉದ್ಘಾಟನೆಗಳನ್ನು ನಡೆಸುತ್ತಿದ್ದಾರೆ. ಇದನ್ನು ನಾನು ಎಲ್ಲಯಾದರೂ ಹೇಳುತ್ತೇನೆ, ಹಿಂದೆ ಪಟ್ರಮೆಯಲ್ಲಿ ಇದನ್ನೇ ಹೇಳಿದ್ದೇನೆ. ಈ ಬಗ್ಗೆ ಎಲ್ಲ ವಿಚಾರಗಳನ್ನೂ ನಾನು ದಾಖಲೆ ಸಮೇತವಾಗಿ ಮುಂದಿನ ದಿನಗಳಲ್ಲಿ ಜನರ ಮುಂದಿಡುತ್ತೇನೆ ಎಂದು ತಿಳಿಸಿದರು. ನಾನು ಮಾಡಿದ್ದನ್ನು ನಾನು ಮಾಡಿದ್ದು ಎಂದು ಹೇಳಲಿ ಅವರು ಮಾಡಿದ್ದನ್ನು ಅವರು ಮಾಡಿದ್ದು ಅಂತ ಹೇಳಲಿ ಅದಕ್ಕೆ ಯಾವುದೇ ಆಕ್ಷೇಪವಿಲ್ಲ ಆದರೆ ಎಲ್ಲವನ್ನೂ ತಾನೇ ಮಾಡಿದ್ದು ಎಂದು ಹೇಳುವುದು ಅರ್ಧವಿಲ್ಲದ ಮಾತು ಎಂದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಗೆಲುವು ನಿಶ್ಚಿತ: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ನಿಶ್ಚಿತ, ಬಿಜೆಪಿ ಹಣ ಬಲ ಬಳಸಿಕೊಂಡು ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದೆ ಆದರೆ ಜನ ಅದನ್ನು ತರಸ್ಕರಿಸಲಿದ್ದಾರೆ ಎಂದರು. ಹುಣಸೂರು ವಿಧಾನಸಭಾಕ್ಷೇತ್ರದಲ್ಲಿ ವೀಕ್ಷಕನಾಗಿ ಹೋಗಿದ್ದೆ ಅಲ್ಲಿ ಕಾಂಗ್ರೆಸ್ ಗೆಲುವು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೋರಾಟಕ್ಕೆ ಜಯ ದೊರೆತಿದೆ ಸೆಬಾಸ್ಟಿಯನ್: ಕೊಕ್ಕಡ ಗ್ರಾ. ಪಂ ನಲ್ಲಿ ಅನ್ಯಾಯವಾಗಿ ಎಸಿಬಿ ಮೂಲಕವಾಗಿ ಪ್ರಕರಣ ದಾಖಲಿಸಿ ಅಧಿಕಾರದಿಂದ ಇಳಿಸಲಾಗಿತ್ತು ಆದರೆ ಇದೀಗ ನ್ಯಾಯಾಲಯದಲ್ಲಿ ನಡೆಸಿದ ಹೋರಾಟಕ್ಕೆ ಗೆಲುವು ಸಿಕ್ಕಿದ್ದು ಇದು ನೈತಿಕ ಗೆಲುವಾಗಿದೆ. ಇದೀಗ ಗ್ರಾ. ಪಂ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ ಸದಸ್ಯರುಗಳಾದ ಸಾಹುಲ್ ಹಮೀದ್, ಶೇಖರ ಕುಕ್ಕೇಡಿ, ಕೆ.ಪಿ.ಸಿ.ಸಿ ಸದಸ್ಯ ಪೀತಾಂಬರ ಹೆರಾಜೆ ಇದ್ದರು.