ಆಕ್ಸಿಜನ್ ಲಭ್ಯತೆ ಬಗ್ಗೆ ರಾಜ್ಯಸರ್ಕಾರ ಮತ್ತು ಜಿಲ್ಲಾಡಳಿತ ಶ್ವೇತಪತ್ರ ಹೊರಡಿಸಬೇಕು: ಯು. ಟಿ ಖಾದರ್

ಆಕ್ಸಿಜನ್ ಲಭ್ಯತೆ ಬಗ್ಗೆ ರಾಜ್ಯಸರ್ಕಾರ ಮತ್ತು ಜಿಲ್ಲಾಡಳಿತ ಶ್ವೇತಪತ್ರ ಹೊರಡಿಸಬೇಕು: ಯು. ಟಿ ಖಾದರ್

Jayashree Aryapu   ¦    May 04, 2021 04:18:26 PM (IST)
ಆಕ್ಸಿಜನ್ ಲಭ್ಯತೆ ಬಗ್ಗೆ ರಾಜ್ಯಸರ್ಕಾರ ಮತ್ತು ಜಿಲ್ಲಾಡಳಿತ ಶ್ವೇತಪತ್ರ ಹೊರಡಿಸಬೇಕು: ಯು. ಟಿ ಖಾದರ್

ಮಂಗಳೂರು: ರಾಜ್ಯದಲ್ಲಿರುವ ಆಕ್ಸಿಜನ್ ಲಭ್ಯತೆಯ ಬಗ್ಗೆ ರಾಜ್ಯ ಸರ್ಕಾರ ಮತ್ತು ಪ್ರತಿ ಜಿಲ್ಲಾಡಳಿತ ಶ್ವೇತಪತ್ರ ಬಿಡುಗಡೆಗೊಳಿಸಬೇಕು ಎಂದು ಮಾಜಿ ಆರೋಗ್ಯ ಸಚಿವ, ಕಾಂಗ್ರೆಸ್ ನಾಯಕ ಯು. ಟಿ. ಖಾದರ್ ಆಗ್ರಹಿಸಿದ್ದಾರೆ.

ಮಂಗಳವಾರ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಯು. ಟಿ. ಖಾದರ್ ಭೇಟಿ ನೀಡಿ ಸದ್ಯದ ಸ್ಥಿತಿಗತಿಯ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಂದ ಮಾಹಿತಿ ಪಡೆದರು.

ರಾಜ್ಯಕ್ಕೆ ಆಕ್ಸಿಜನ್ ಬೇಡಿಕೆ ಎಷ್ಟಿದೆ?, ಪೂರೈಕೆ ಎಷ್ಟಾಗುತ್ತಿದೆ? ಎಂಬ ಸ್ಪಷ್ಟವಾದ ಮಾಹಿತಿ ತಿಳಿಸಬೇಕು, ಈ ಹಿನ್ನಲೆಯಲ್ಲಿ ಸರ್ಕಾರ ಕೂಡಲೇ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ವೈದ್ಯಾಧಿಕಾರಿಗಳ ಜೊತೆ ಚರ್ಚೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ದಿನಗಳ ಪರಿಸ್ಥಿತಿ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಎಲ್ಲಾ ವ್ಯವಸ್ಥೆಗಳು ಇದೆ, ಏನು ಸಮಸ್ಯೆಯಿಲ್ಲ ಎಂದು ಸರ್ಕಾರ ಈ ಹಿಂದೆ ಹೇಳಿತ್ತು. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ವಾರಗಳ ಹಿಂದೆ ಆಕ್ಸಿಜನ್ ಕೊರತೆ ಬಗ್ಗೆ ಗಮನ ಸೆಳೆದಿದ್ದರು. ಏನು ಸಮಸ್ಯೆಯಿಲ್ಲ, ಆಕ್ಸಿಜನ್ ಕೊರತೆಯಿಲ್ಲ ಎಂದು ದಿನಕ್ಕೊಂದು ಸಚಿವರು ಹೇಳಿಕೆ ನೀಡಿದ್ದರು. ಹಾಗಾದರೆ ಚಾಮರಾಜನಗರದ ಆಸ್ಪತ್ರೆಯ ದುರಂತಕ್ಕೆ ಯಾರು ಹೊಣೆ? ಎಂದು ಯು. ಟಿ. ಖಾದರ್ ಪ್ರಶ್ನೆ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ಶೇ 80ರಷ್ಟು ಆಕ್ಸಿಜನ್ ಜಿಂದಾಲ್‌ನಿಂದ ಬರುತ್ತಿದೆ. ಶೇ 20% ಕೇರಳದ ಪಾಲ್ಗಾಟ್ ನಿಂದ ಬರುತ್ತಿದೆ. ಕೇರಳದಲ್ಲಿ ಕೊರೊನಾ ಕೇಸ್ ಹೆಚ್ಚಾದರೆ ಆಕ್ಸಿಜನ್ ಪೂರೈಕೆ ನಿಲ್ಲುವ ಸಾಧ್ಯತೆ ಇದೆ. ಇದಕ್ಕಾಗಿ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಯು. ಟಿ. ಖಾದರ್ ಹೇಳಿದರು.

ಜಿಂದಾಲ್‌ನಿಂದ ಮಹಾರಾಷ್ಟ್ರ, ಆಂಧ್ರ ಪ್ರದೇಶಕ್ಕೆ ಲಿಕ್ವಿಡ್ ಆಕ್ಸಿಜನ್ ಕಳುಹಿಸಲಾಗುತ್ತಿದೆ. ನಮ್ಮ ರಾಜ್ಯಕ್ಕೆ ಮೊದಲ ಆದ್ಯತೆ ಕೊಡಬೇಕು. ತಮಿಳುನಾಡಿನ ಸಂಸದರು ಕೇಂದ್ರಕ್ಕೆ ಒತ್ತಡ ಹಾಕಿ ಹೆಚ್ಚುವರಿ ಆಕ್ಸಿಜನ್ ಪಡೆಯುತ್ತಿದ್ದಾರೆ. ನಮ್ಮ ಸಂಸದರು, ಸರ್ಕಾರಕ್ಕೆ ಯಾಕೆ ಇದು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಸರ್ಕಾರ ಆರೋಗ್ಯ ತುರ್ತು ಪರಿಸ್ಥಿಗಿ ಘೋಷಣೆ ಮಾಡಬೇಕು. ರಾಜ್ಯಕ್ಕೆ ಬೇಕಾದ ಎಲ್ಲ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬೇಕು. ಮಂತ್ರಿಗಳು, ಮುಖ್ಯಮಂತ್ರಿಗಳ ನಡುವೆ ಸಮನ್ವಯತೆ ಇರಬೇಕು. ದಿನಕ್ಕೊಂದು ಹೇಳಿಕೆ ಕೊಟ್ಟರೆ ಜನ ಗೊಂದಲಕ್ಕೆ ಒಳಗಾಗುತ್ತಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.