ಬೆಳ್ತಂಗಡಿ ಶಾಸಕರಿಂದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಬೆಳ್ತಂಗಡಿ ಶಾಸಕರಿಂದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

DA   ¦    Sep 15, 2020 05:12:26 PM (IST)
ಬೆಳ್ತಂಗಡಿ ಶಾಸಕರಿಂದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಬೆಳ್ತಂಗಡಿ: ಇಲ್ಲಿನ ಮಿನಿವಿಧಾನ ಸೌಧದಲ್ಲಿ ಸೆ.15 ರಂದು ಕೊಕ್ಕಡ ಹೋಬಳಿ ಮಟ್ಟದ ಕಂದಾಯ ಅದಾಲತ್ ಹಾಗೂ 94ಸಿ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಪಿಂಚಣಿದಾರರಿಗೆ ಮಂಜೂರಾತಿ ಪತ್ರಗಳನ್ನು ಶಾಸಕ ಹರೀಶ ಪೂಂಜ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಕೊಟ್ಟಿರುವ ಕೃಷಿಕರ ಭೂಮಿಯ ಹಕ್ಕು ಪತ್ರವನ್ನು ಶೀಘ್ರದಲ್ಲಿ ನೀಡುವಂತಹ ಕಾರ್ಯ ಮಾಡಲಾಗುವುದು. ತಾಲೂಕಿನ ಹಿತದೃಷ್ಟಿಯಿಂದ ಈಗಾಗಲೇ ಎರಡು ವರುಷಗಳಲ್ಲಿ 600ಕ್ಕಿಂತಲೂ ಅಧಿಕ ಅನುದಾನವು ಈ ಕ್ಷೇತ್ರದ ಅಭಿವೃದ್ಧಿಗಾಗಿ ಬಂದಿದ್ದು, ರಾಜ್ಯದ ಇತರೇ ತಾಲೂಕಿಗಿಂತ ಹೆಚ್ಚಿನ ಅಭಿವೃದ್ಧಿಕಾರ್ಯ ನಡೆದಿದೆ ಎಂದರು.

ನಿವೇಶನ ಅಥವಾ ಮನೆ ಇಲ್ಲದ ಕ್ಷೇತ್ರದ ಕೊಕ್ಕಡ, ಬೆಳ್ತಂಗಡಿ, ವೇಣೂರು ಹೋಬಳಿಯ 700 ಕ್ಕೂ ಅಧಿಕ ಮಂದಿಗೆ 94 ಸಿ ಹಕ್ಕುಪತ್ರ ನೀಡುವ ಮೂಲಕ ಹೊಸ ಬದುಕು ಕಟ್ಟಿಕೊಡುವ ಕೆಲಸವಾಗಲಿದೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಸುಮಾರು 2,500 ಕ್ಕೂ ಅಧಿಕ ಮಂದಿ ಫಲಾನುಭವಿಗಳಿಗೆ ಈಗಾಗಲೇ ಹಕ್ಕುಪತ್ರ ವಿತರಿಸಲಾಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಫಲಾನುಭವಿಗಳಿಗೆ ಹಕ್ಕುಪತ್ರವಿತರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದರು.

ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿ, ತಾ.ಪಂ. ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಲಕ್ಣ್ಮೀನಾರಾಯಣ, ತಹಶೀಲ್ದಾರ್ ಮಹೇಶ್ ಜೆ. ಉಪಸ್ಥಿತರಿದ್ದರು.

ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನಿ ಸ್ವಾಗತಿಸಿದರು. ಗ್ರಾಮಸಹಾಯಕ ನರೇಶ್ ಕೆ. ನಿರೂಪಿಸಿದರು.