ಜನರಲ್ಲಿ ಭೀತಿ ಮೂಡಿಸಿದ ನಾಗರಹಾವು ಹಿಡಿದ ವಿಪತ್ತು ನಿರ್ವಹಣೆ ಘಟಕ

ಜನರಲ್ಲಿ ಭೀತಿ ಮೂಡಿಸಿದ ನಾಗರಹಾವು ಹಿಡಿದ ವಿಪತ್ತು ನಿರ್ವಹಣೆ ಘಟಕ

DA   ¦    Jul 30, 2020 06:13:34 PM (IST)
ಜನರಲ್ಲಿ ಭೀತಿ ಮೂಡಿಸಿದ ನಾಗರಹಾವು ಹಿಡಿದ ವಿಪತ್ತು ನಿರ್ವಹಣೆ ಘಟಕ

ಬೆಳ್ತಂಗಡಿ: ಬೆಳಾಲು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಾಗರಹಾವಿನ ಭೀತಿ ಜನರಲ್ಲಿ ಕಾಡುತ್ತಿತ್ತು. ಹಾವನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಜನರ ಆತಂಕವನ್ನು ಕಡಿಮೆ ಮಾಡಿದ್ದಾರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಬೆಳಾಲು ವಿಪತ್ತು ನಿರ್ವಹಣೆ ಘಟಕ'ದ ಸ್ವಯಂಸೇವಕರು.

ದೇರೆಮಾರು ಮನೆಯ ಚಿದಾನಂದ ಗೌಡ ಅವರ ಮನೆಯ ಸುತ್ತ ಮುತ್ತ ನಾಗರ ಹಾವು ಓಡಾಡಿಕೊಂಡಿತ್ತು. ಆ ಪ್ರದೇಶದಲ್ಲಿ ಹದಿನೈದಕ್ಕೂ ಅಧಿಕ ಮನೆಗಳಿದ್ದು ಎಲ್ಲರಲ್ಲಿಯೂ ಭೀತಿ ಸೃಷ್ಟಿಸಿತ್ತು. ಅಲ್ಲದೇ ಎರಡು ದಿನದ ಹಿಂದೆ ಮಧ್ಯಾಹ್ನದ ವೇಳೆಗೆ ಕೇರೆ ಹಾವೊಂದನ್ನು ಕಚ್ಚಿ ಅರ್ಧಮರ್ಧ ತಿಂದು ಬೀಸಾಡಿತ್ತು. ತೋಟದ ಬದಿಯಲ್ಲಿ ಸತ್ತು ಬಿದ್ದಿರುವ ಕೇರೆ ಹಾವನ್ನು ನೋಡಿದ ಚಿದಾನಂದ ಅವರು ಅದನ್ನು ದಫನ ಮಾಡಿದ್ದರು.

ಸತ್ತಿರುವ ಹಾವನ್ನು ಮಣ್ಣು ಮಾಡಿದ ಕೆಲವೇ ಗಂಟೆಗಳಲ್ಲಿ ನಾಗರ ಹಾವೊಂದು ಚಿದಾನಂದ ಅವರ ಮನೆ ಬಾಗಿಲಲ್ಲಿ ಸುಳಿದಾಡತೊಡಗಿತ್ತು. ಅಪಾಯದ ಭೀತಿ ತಂದೊಡ್ಡಿತ್ತು. ಹಾವಿನ ಸಂಚಾರದ ಭೀತಿಯಿಂದ ಬೆದರಿದ ಗ್ರಾಮಸ್ಥರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆ ಘಟಕದ ಸಂಯೋಜಕರಾದ ಆಶಾ ಬೆಳಾಲು ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.

ಕೂಡಲೇ ಸ್ಪಂದಿಸಿದ ಸಂಯೋಜಕಿ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರಾದ ಹರೀಶ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಮ್ಮ ಕೆಲಸದಲ್ಲಿ ನಿರತರಾಗಿದ್ದ ಹರೀಶ್ ಅರ್ಧದಲ್ಲಿಯೇ ತಮ್ಮ ಕೆಲಸವನ್ನು ಬಿಟ್ಟು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಸಹ ಸ್ವಯಂಸೇವಕರನ್ನು ಜೊತೆಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.

ಸುಮಾರು ಮೂರು ಗಂಟೆಯ ಕಾರ್ಯಾಚರಣೆಯ ನಂತರ ಹಾವು ಸೆರೆಯಾಯಿತು. ಸಿಕ್ಕ ಹಾವನ್ನು ಅರಣ್ಯಕ್ಕೆ ಬಿಟ್ಟು ಬಂದಿರುತ್ತಾರೆ. ಸ್ವಯಂಸೇವಕರಾದ ಉರಗ ತಜ್ಞ ಹರೀಶ್ ಗೌಡ ಮತ್ತು ಅವರ ತಂಡದ ಸದಸ್ಯರಾದ ಯಶೋಧರ, ಸಂತೋಷ್, ಶ್ರೀ ಜಗದೀಶ್, ಸಂಜೀವ್ ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು. ವಿಪತ್ತು ನಿರ್ವಹಣೆ ಸ್ವಯಂಸೇವಕರ ಕಾರ್ಯವನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ. ಹಾವಿನ ಭೀತಿಯಲ್ಲಿದ್ದ ಕುಟುಂಬಗಳು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.